ಬೆಂಗಳೂರು, ಫೆ.08 www.bengaluruwire.ocm : ದಾಸರಹಳ್ಳಿ ವಲಯದಲ್ಲಿ ಜಂಟಿ ಆಯುಕ್ತರ ಹುದ್ದೆಯನ್ನು ಗಿಟ್ಟಿಸಿಕೊಳ್ಳಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವೃಂದ ಮತ್ತು ನೇಮಕಾತಿ ನಿಯಮಾವಳಿ (BBMP Cadre And Recruitment Of Officers And Employee Rules 2020)ಗಳನ್ನು ಉಲ್ಲಂಘಿಸಿ ಕೆಎಎಸ್ ಯೇತರ ಅಧಿಕಾರಿಯೊಬ್ಬರು ನೇಮಕವಾಗಿರುವ ವಿಷಯ ಬಹಿರಂಗವಾಗಿದೆ.
ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ 2023ರ ಡಿಸೆಂಬರ್ 28ರಂದು ಹೊರಡಿಸಿದ ಅಧಿಸೂಚನೆಯ ಬಗ್ಗೆ ಖುದ್ದು ಪಾಲಿಕೆ ಮುಖ್ಯ ಆಯುಕ್ತರು ಆಕ್ಷೇಪ ವ್ಯಕ್ತಪಡಿಸಿದ್ದರೂ, ಆ ಅಧಿಕಾರಿ 2023ರ ಡಿ.30ರಿಂದ ಬಿಂದಾಸ್ ಆಗಿ ದಾಸರಹಳ್ಳಿ ವಲಯದ ಅಪರ ಆಯುಕ್ತರ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಹಕಾರ ಇಲಾಖೆಯ ಸಹಕಾರ ಸಂಘಗಳ ಅಪರ ನಿಬಂಧಕರ ಹುದ್ದೆಯಲ್ಲಿರುವ ಬಾಲಶೇಖರಯ್ಯ ಅವರೇ, ಬಿಬಿಎಂಪಿಯಲ್ಲಿನ ಜಂಟಿ ಆಯುಕ್ತರ ಹುದ್ದೆಯನ್ನು ಅಪರ ಆಯುಕ್ತರ ಹುದ್ದೆಗೆ ಉನ್ನತೀಕರಿಸಿಕೊಂಡು ಆ ಜಾಗಕ್ಕೆ ವರ್ಗಾವಣೆಯಾಗಿದ್ದಾರೆ. ಬಿಬಿಎಂಪಿ ಕಾಯ್ದೆ 2020ರಂತೆ ಪಾಲಿಕೆಯಲ್ಲಿನ ಸಮಸ್ತ ಆಡಳಿತ ನಿರ್ವಹಣೆಗೆ ಮುಖ್ಯ ಆಯುಕ್ತರ ಸಹಿ, ಒಪ್ಪಿಗೆ ಅವಶ್ಯಕವಾಗಿದೆ. ಹೀಗಿದ್ದೂ ಅವರ ಆಕ್ಷೇಪದ ಹೊರತಾಗಿಯೂ ಈ ಬಾಲಶೇಖರ್ ಸರ್ಕಾರದ ಮಟ್ಟದಲ್ಲಿ ಇನ್ಯಾವ ಪರಿ ಪ್ರಭಾವ ಬೀರಿ, ಕಮಿಷನರ್ ವಿರೋಧವನ್ನೇ ಮೀರಿ ಕರ್ತವ್ಯಕ್ಕೆ ಹಾಜರಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಅಸಲಿಗೆ ಬಿಬಿಎಂಪಿಯಲ್ಲಿರುವ 8 ವಲಯಗಳಲ್ಲಿರುವ ಜಂಟಿ ಆಯುಕ್ತರ ಹುದ್ದೆಯನ್ನು ಬಿಬಿಎಂಪಿ ಸಿಎಂಡ್ ಆರ್ ರೂಲ್ಸ್ 2020 ಪ್ರಕಾರ {ಶೆಡ್ಯೂಲ್-1 (ರೂಲ್ 2,7,10ನ್ನು ಓದಿ)} ಶೇ.90ರಷ್ಟು ಹುದ್ದೆಗಳನ್ನು ಐಎಎಸ್, ಕೆಎಎಸ್ (ಆಯ್ಕೆ ಗ್ರೇಡ್ ಅಥವಾ ಸೀನಿಯರ್ ಸ್ಕೇಲ್) ಅಥವಾ ಶೇ.10ರಷ್ಟು ಹುದ್ದೆಗಳನ್ನು ಕರ್ನಾಟಕ ಪೌರಾಡಳಿತ ಸೇವೆಯ ತತ್ಸಮಾನ ಅಧಿಕಾರಿಗಳನ್ನು ನಿಯೋಜಿಸಬೇಕೆಂದು ಸ್ಪಷ್ಟವಾಗಿ ಸೂಚಿಸಿದೆ. ಆದರೆ ಎಲ್ಲೂ ಕೂಡ ಸಹಕಾರ ಇಲಾಖೆಯ ಅಧಿಕಾರಿಯನ್ನು ನಿಯೋಜಿಸಬಹುದೆಂದು ತಿಳಿಸಿಲ್ಲ. ಆದರೂ ಸಹಕಾರ ಸಂಘಗಳ ಅಪರ ನಿಬಂಧಕರರಾದ ಎಚ್.ಬಾಲಶೇಖರ್ ಸರ್ಕಾರದ ಮಟ್ಟದಲ್ಲಿ ತನ್ನ ಪ್ರಭಾವವನ್ನು ಬೀರಿ ದಾಸರಹಳ್ಳಿ ವಲಯದಲ್ಲಿ ಈ ಹಿಂದೆ ಕೆಲಸ ಮಾಡುತ್ತಿದ್ದ ಸೂಪರ್ ಟೈಮ್ ಶ್ರೇಣಿಯ ದಕ್ಷ ಕೆಎಎಸ್ ಅಧಿಕಾರಿ ಕೆ.ಎಚ್.ಜಗದೀಶ್ ಅವರಿಗೆ ಯಾವುದೇ ಹುದ್ದೆ ತೋರಿಸದೆ ವರ್ಗಾಯಿಸಲಾಗಿದೆ.
ಎಚ್.ಬಾಲಶೇಖರ್ ಬಿಬಿಎಂಪಿಗೆ ಬರುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ 2018ರ ಸೆ.25ರಂದು ರಾಜರಾಜೇಶ್ವರಿನ ನಗರ ವಲಯದಲ್ಲಿ ಜಂಟಿ ಆಯುಕ್ತರ ಹುದ್ದೆಯನ್ನು 2020ರ ಮಾರ್ಚ್ ತನಕ ಸುಮಾರು ಒಂದೂವರೆ ವರ್ಷ ನಿಭಾಯಿಸಿ ಇಲ್ಲಿಂದ ಮಾತೃ ಇಲಾಖೆಗೆ ತೆರೆಳಿದ್ದರು. ಆದರೆ ಇದೀಗ ಅದಾಗಿ ಕೇವಲ ಮೂರು ವರ್ಷದಲ್ಲಿ ಪುನಃ ಪಾಲಿಕೆಗೆ ಕರ್ತವ್ಯ ನಿರ್ವಹಿಸಲು ಉತ್ಸುಕರಾಗಿದ್ದಾರೆ. ಸಹಕಾರ ಇಲಾಖೆಯಲ್ಲೇ ಮಾಡಲು ಬ್ರಹ್ಮಾಂಡ ಕಾರ್ಯಗಳು ಬಾಕಿಯಿರುವಾಗ ರಾಜಧಾನಿ ಬೆಂಗಳೂರಿನ ಸ್ಥಳೀಯಾಡಳಿತ ಸಂಸ್ಥೆಯಲ್ಲಿನ ಜಂಟಿ ಆಯುಕ್ತರ ಹುದ್ದೆಯ ಮೇಲೆ ಅದ್ಯಾವ ಪರಿ ಮಮಕಾರವೋ ತಿಳಿಯದು.
ಆಕ್ಷೇಪ ವ್ಯಕ್ತಪಡಿಸಿದ ಚೀಫ್ ಕಮೀಷನರ್ ಮೇಲೆ ಒತ್ತಡ ತರಲಾಗಿತ್ತಾ?:
ಪಾಲಿಕೆ ಜಂಟಿ ಆಯುಕ್ತರ ಸ್ಥಾನವನ್ನು ತಾನು ಪ್ರಸ್ತುತ ಇರುವ ಸಹಕಾರ ಸಂಘಗಳ ಅಪರ ನಿಬಂಧಕರ ಹುದ್ದೆಗೆ ಸಮಾನಾಂತರವಾಗಿ ಉನ್ನತೀಕರಿಸಿಕೊಂಡು ಡಿ.30ರಂದು ಕರ್ತವ್ಯಕ್ಕೆ ಹಾಜರಾಗಿರುವುದಕ್ಕೆ ಕೆಎಎಸ್ ಅಧಿಕಾರಿಗಳ ವಲಯದಲ್ಲಿ ಹಾಗೂ ಪಾಲಿಕೆ ಮಟ್ಟದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ರಾಜ್ಯ ಸರ್ಕಾರದ ಡಿ.28ರ ಆಧಿಸೂಚನೆಯ ಮೇಲೆ ಡಿ.29ರಂದು ತಮ್ಮ ಟೇಬಲ್ ಗೆ ಬಂದ ಅಧಿಸೂಚನೆಯ ದಾಖಲೆಯ ಮೇಲೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, “This is Against Cadre Recruitment Rule. Write Back to The Govt., We Cant take other then KAS” (ಇದು ವೃಂದ ಮತ್ತು ನೇಮಕಾತಿ ನಿಯಮಾವಳಿಗಳಿಗೆ ವಿರುದ್ಧವಾಗಿದೆ. ಈ ಬಗ್ಗೆ ಸರ್ಕಾರಕ್ಕೆ ಪತ್ರ ಬರೆಯಿರಿ. ಕೆಎಎಸ್ ಹೊರತುಪಡಿಸಿ ಇತರರನ್ನು ಪರಿಗಣಿಸಲಾಗದು)” ಎಂದು ಆಕ್ಷೇಪ ವ್ಯಕ್ತಪಡಿಸಿದ್ದರು.
ಆದರೆ ಈ ಬಗ್ಗೆ ಆದ್ಯಾವಾಗ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಈ ವರ್ಗಾವಣೆಗೆ ತಮ್ಮ ತಗಾದೆ ತೆಗೆದದ್ದು ತಿಳಿಯಿತೋ, ದಾಸರಹಳ್ಳಿ ವಲಯದಲ್ಲಿನ ಜಂಟಿ ಆಯುಕ್ತರ ಹುದ್ದೆಯನ್ನು, ಹೆಚ್ಚುವರಿ ಆಯುಕ್ತರ ಹುದ್ದೆಗೆ ಉನ್ನತೀಕರಿಸಿಕೊಂಡು ಆಗಮಿಸಿದ್ದ ಎಚ್.ಬಾಲಶೇಖರ್ ತಡಮಾಡದೆ, ತಮ್ಮ ಪ್ರಭಾವ ಬೀರಿ, ಬಿಬಿಎಂಪಿ ಆಡಳಿತ ವಿಭಾಗದಲ್ಲಿನ ಡಿ.30ರ ಟಿಪ್ಪಣಿಯಲ್ಲಿ ಮುಖ್ಯ ಆಯುಕ್ತರ ಮೌಖಿಕ ಸೂಚನೆಯಂತೆ, ಎಚ್.ಬಾಲಶೇಖರ್ ಅಪರ ಆಯುಕ್ತರ ಹುದ್ದೆಯಲ್ಲಿ ಮುಂದುವರೆಯಲು ಅದೇ ದಿನ ಮುಖ್ಯ ಆಯುಕ್ತರ ಕಚೇರಿಯಿಂದ ಆದೇಶ ಹೊರಬೀಳುವಂತೆ ಮಾಡುವಲ್ಲಿ ಯಶಸ್ವಿಯಾದರು ಎನ್ನುತ್ತವೆ ಮೂಲಗಳು. ಹೀಗಾಗಿ ಬಾಲಶೇಖರ್ ತಡ ಮಾಡದೆ ಆತುರಾತುರವಾಗಿ ಜ.1ರ ಹೊಸವರ್ಷದಂದೇ ಕರ್ತವ್ಯಕ್ಕೆ ಹಾಜರಾದರು.
7 ವಲಯಗಳಲ್ಲಿ ಒಂದು ರೂಲ್ಸ್, ಈ ವಲಯಕ್ಕೆ ಒಂದು ರೂಲ್ಸಾ? :
ಉಳಿದ 7 ವಲಯಗಳಲ್ಲಿ ಎಲ್ಲೂ ಜಂಟಿ ಆಯುಕ್ತರ ಹುದ್ದೆಯನ್ನು ಉನ್ನತೀಕರಿಸದೆ ಆಯಾ ಜಂಟಿ ಆಯುಕ್ತರ ಹುದ್ದೆಗೆ ಕೆಎಎಸ್ ಹಾಗೂ ಕೆಎಂಎಸ್ ಅಧಿಕಾರಿಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಬಿಬಿಎಂಪಿ ಪಶ್ಚಿಮ ವಲಯದಲ್ಲಿ ಕೆಎಎಸ್ ಅಧಿಕಾರಿ ಯೋಗೇಶ್, ದಕ್ಷಿಣ ವಲಯದಲ್ಲಿ ಜಗದೀಶ್ ನಾಯಕ್, ಬೊಮ್ಮನಹಳ್ಳಿ ವಲಯದಲ್ಲಿ ಅಜಿತ್ ರೈ, ಮಹದೇವಪುರ ವಲಯದಲ್ಲಿ ಡಾ.ದಾಕ್ಷಾಯಣಿ, ರಾಜರಾಜೇಶ್ವರಿ ನಗರದಲ್ಲಿ ಅಜಯ್, ಯಲಹಂಕ ವಲಯದಲ್ಲಿ ಮೊಹಮ್ಮದ್ ನಯೀಮ್ ಮೊಮಿನ್ ಹಾಗೂ ಪೂರ್ವ ವಲಯದಲ್ಲಿ ಕೆಎಂಎಎಸ್ ಅಧಿಕಾರಿ ಪಲ್ಲವಿಯವರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಬೆಂಗಳೂರು ವೈರ್ ದಾಸರಹಳ್ಳಿ ವಲಯದ ಹೆಚ್ಚುವರಿ ಆಯುಕ್ತ ಎಚ್.ಬಾಲಶೇಖರ್ ಅವರ ಬಳಿ ಪ್ರಯತ್ನಿಸಿದರೂ ಅವರಿಂದ ಈ ಬಗ್ಗೆ ಸೂಕ್ತ ಸ್ಪಂದನೆ ದೊರೆಯಲಿಲ್ಲ.
ಹೊಸ ಪದ್ಧತಿಗೆ ನಾಂದಿ ಹಾಡಲಿದೆಯಾ ಈ ವರ್ಗಾವಣೆ? :
ಈ ಹಿಂದೆ ಪಾಲಿಕೆಯಲ್ಲಿ ಬಿಬಿಎಂಪಿ ಕಾಯ್ದೆ 2020 ಜಾರಿಗೆ ಬರುವ ಮುನ್ನ ಜಂಟಿ ಆಯುಕ್ತರ ಹುದ್ದೆಗೆ ಕೆಎಎಸ್ ಯೇತರ ಅಧಿಕಾರಿಗಳು ವಿವಿಧ ಇಲಾಖೆಗಳಿಂದ ಪಾಲಿಕೆಯಲ್ಲಿನ ಈ ಹುದ್ದೆಗೆ ಭಾರೀ ಒತ್ತಡ ತಂದು ವರ್ಗಾವಣೆಯಾಗಿ ಬರುತ್ತಿದ್ದರು. ಈ ಬಗ್ಗೆ ಪಾಲಿಕೆ ಅಧಿಕಾರಿ ಮತ್ತು ನೌಕರರ ಸಂಘವು ನ್ಯಾಯಾಲಯಗಳಲ್ಲಿ ಹೋರಾಟ ನಡೆಸಿ ಜಂಟಿ ಆಯುಕ್ತರ ಹುದ್ದೆಗೆ ಕೆಎಎಸ್ ಮತ್ತು ಕಎಮ್ಎಎಸ್ ಹೊರತುಪಡಿಸಿ ಇತರ ದರ್ಜೆಯ ಅಧಿಕಾರಿಗಳು ಬರುವುದನ್ನು ತಡೆಯಲು ಸಫಲವಾಗಿತ್ತು. ಆದರೀಗ ಮತ್ತೆ ಕೆಎಎಸ್ ಯೇತರ ಅಧಿಕಾರಿಯೊಬ್ಬರು ದಾಸರಹಳ್ಳಿ ಜಂಟಿ ಆಯುಕ್ತರ ಹುದ್ದೆಯನ್ನೇ ತಮ್ಮ ಹುದ್ದೆಗೆ ಸಮನಾದಂತೆ ಉನ್ನತೀಕರಿಸಿಕೊಂಡು ಕರ್ತವ್ಯ ನಿಭಾಯಿಸುತ್ತಿರುವ ಬಗ್ಗೆ ಪಾಲಿಕೆ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘ ತೀವ್ರ ವಿರೋಧ ವ್ಯಕ್ತಪಡಿಸಿದೆ.
“ಬಿಬಿಎಂಪಿ ಅಧಿಕಾರಿಗಳು ಮತ್ತು ನೌಕರರ ಸಾಮನ್ಯ ವೃಂದ ಮತ್ತು ನೇಮಕಾತಿ ನಿಯಮಾವಳಿ 2020ಕ್ಕೆ ವಿರುದ್ಧವಾಗಿ ದಾಸರಹಳ್ಳಿ ವಲಯದಲ್ಲಿನ ಜಂಟಿ ಆಯುಕ್ತರ ಹುದ್ದೆಯನ್ನು ಸಹಕಾರ ಇಲಾಖೆ, ಸಹಕಾರ ಸಂಘಗಳ ಅಪರ ನಿಬಂಧಕರ ಹುದ್ದೆಗೆ ತತ್ಸಮಾನವಾಗಿ ಅಪರ ಆಯುಕ್ತರ ಹುದ್ದೆಗೆ ಉನ್ನತೀಕರಿಸಿ ಎಚ್.ಬಾಲಶೇಖರ್ ಅವರನ್ನು ವರ್ಗಾವಣೆ ಮಾಡಿರುವುದು ಸರಿಯಲ್ಲ. ಇದಕ್ಕೆ ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಸಂಘದ ವಿರೋಧವಿದೆ. ಕೂಡಲೇ ನಿಯಮಬಾಹಿರವಾಗಿ ನಿಯೋಜನೆ ಮೇಲೆ ಬಂದಿರುವ ಈ ಅಧಿಕಾರಿಯನ್ನು ರಾಜ್ಯ ಸರ್ಕಾರ ವಾಪಸ್ ಕರೆಸಿಕೊಳ್ಳಬೇಕು ಎಂದು ಈ ಮೂಲಕ ಒತ್ತಾಯಿಸುತ್ತಿದ್ದೇವೆ.”
- ಅಮೃತ್ ರಾಜ್, ಅಧ್ಯಕ್ಷರು, ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘ
ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಈ ವಿವಾದಿತ ವರ್ಗಾವಣೆಯ ಬಗ್ಗೆ ರಾಜ್ಯ ಕೆಎಎಸ್ ಅಧಿಕಾರಿಗಳ ಸಂಘವು ಕೂಡ ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದೆ.
“ದಾಸರಹಳ್ಳಿ ವಲಯದಲ್ಲಿ ಈ ಹಿಂದೆ ಜಂಟಿ ಆಯುಕ್ತರಾಗಿ ಕೆಲಸ ಮಾಡುತ್ತಿದ್ದ ಕೆ.ಎಚ್.ಜಗದೀಶ್ ಎಂಬ ಕೆಎಎಸ್ ಅಧಿಕಾರಿಗೆ ಯಾವುದೇ ಹುದ್ದೆ ತೋರಿಸದೆ ವರ್ಗಾವಣೆ ಮಾಡಿ, ಆ ಹುದ್ದೆಯನ್ನು ಅಪರ ಆಯುಕ್ತರ ಹುದ್ದೆಗೆ ಉನ್ನತೀಕರಿಸಿ, ಸಹಕಾರ ಇಲಾಖೆಯ ಸಹಕಾರ ಸಂಘಗಳ ಅಪರ ನಿಬಂಧಕರಾದ ಎಚ್.ಬಾಲಶೇಖರ್ ಅವರನ್ನು ಆ ಸ್ಥಾನಕ್ಕೆ ವರ್ಗಾವಣೆ ಮಾಡಿರುವುದು ಸಂಘದ ಗಮನಕ್ಕೆ ಬಂದಿದೆ. ಈ ಬಗ್ಗೆ ಆಗಿರುವ ತಪ್ಪುಗಳನ್ನು ಸಂಬಂಧಿಸಿದವರ ಗಮನಕ್ಕೆ ತಂದು ಅನ್ಯಾಯವನ್ನು ಸರಿಪಡಿಸುವ ಪ್ರಯತ್ನ ಮಾಡಲಾಗುವುದು.”
- ಸಿ.ಎಲ್.ಶಿವಕುಮಾರ್, ಕಾರ್ಯದರ್ಶಿ, ಕೆಎಎಸ್ ಅಧಿಕಾರಿಗಳ ಸಂಘ