ಬೆಂಗಳೂರು, ಜ.31 www.bengaluruwire.com : ಬೊಮ್ಮನಹಳ್ಳಿ ವಲಯದಲ್ಲಿ ಆಸ್ತಿ ತೆರಿಗೆ ಸಂಬಂಧಿತ ಲೋಪಗಳ ಹಿನ್ನಲೆಯಲ್ಲಿ ಜಂಟಿ ಆಯುಕ್ತ ಅಜಿತ್ ಅವರಿಗೆ ಕಾರಣ ಕೇಳಿ ನೋಟಿಸ್ ಹಾಗೂ ಕಂದಾಯ ಉಪಆಯುಕ್ತ (Deputy Commissioner) ಡಿಕೆ ಬಾಬು ಅವರ ವಿರುದ್ಧ ಇಲಾಖೆ ವಿಚಾರಣೆ (Department Enquiry -DE) ನಡೆಸುವಂತೆ ಬಿಬಿಎಂಪಿ ವಿಶೇಷ ಆಯುಕ್ತ ಮುನೀಷ್ ಮುದ್ಗಿಲ್ ಸೂಕ್ತ ಕ್ರಮಕ್ಕೆ ಆದೇಶಿಸಿದ್ದಾರೆ.
6 ಮಂದಿ ಎಆರ್ ಒ (Assistant Revenue Officer – ARO)ಗಳನ್ನು ಸಸ್ಪೆಂಡ್ ಹಾಗೂ ಇಬ್ಬರು ಆರ್ ಒ (Revenue Officer) ಗಳ ವಿರುದ್ಧ ಇಲಾಖಾ ವಿಚಾರಣೆಗೆ ವಿಶೇಷ ಆಯುಕ್ತರು ಆದೇಶಿಸಿದ್ದಾರೆ.
ಜ.30 ರಂದು ಬೊಮ್ಮನಹಳ್ಳಿ ವಲಯದಲ್ಲಿ ಆಸ್ತಿ ತೆತಿಗೆ ಸಂಗ್ರಹ, ತೆರಿಗೆ ಬಾಕಿ, ಟಾಪ್ 50 ಅತಿ ಹೆಚ್ಚು ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡ ಗೃಹ ಹಾಗೂ ಗೃಹೇತರ ಕಟ್ಟಡಗಳ ಮಾಲೀಕರ ಆಸ್ತಿಗಳನ್ನು ಮುಟ್ಟುಗೋಲು ಹಾಗೂ ಬೀಗಮುದ್ರೆ ಹಾಕದ ಪ್ರಕರಣಗಳು ಪರಿಶೀಲನೆ ವೇಳೆ ಕಂಡು ಬಂದಿದ್ದವು. ಈ ಹಿನ್ನಲೆಯಲ್ಲಿ ಜಂಟಿ ಆಯುಕ್ತರಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಲು ಹಾಗೂ ಡಿಸಿ ಡಿಕೆ ಬಾಬು ಅವರ ವಿರುದ್ಧ ಇಲಾಖಾ ತನಿಖೆ ನಡೆಸುವಂತೆ ಸಂಬಂಧಿಸಿದವರಿಗೆ ಸೂಚನೆ ನೀಡಿದ್ದಾರೆ.
“ಡಿಸಿ ಡಿಕೆ ಬಾಬು ಕಳೆದ ಎರಡು ತಿಂಗಳಲ್ಲಿ ಟಾಪ್-50 ಗೃಹೇತರ ಕಟ್ಟಡಗಳಲ್ಲಿ ಒಂದು ಕಟ್ಟಡವನ್ನು ಸೀಲ್ ಮಾಡಿಲ್ಲ. ಅದೇ ರೀತಿ ಟಾಪ್ -50 ವಸತಿ ಕಟ್ಟಡಗಳಲ್ಲಿ ಒಂದು ಆಸ್ತಿಯನ್ನು ಅಟ್ಯಾಚ್ ಮೆಂಟ್ ಮಾಡಿಲ್ಲ. ಈ ಕುರಿತಂತೆ ಡಿಕೆ ಬಾಬು ವಿರುದ್ಧ ಇಲಾಖಾ ವಿಚಾರಣೆ ನಡೆಸಬೇಕಿದೆ” ಎಂದು ವಿಶೇಷ ಆಯುಕ್ತ ಮುನೀಷ್ ಮುದ್ಗಿಲ್ ತಮ್ಮ ಟಿಪ್ಪಣಿಯಲ್ಲಿ ವಿವರಿಸಿದ್ದಾರೆ.
ಅರಕೆರೆ ಉಪ ವಿಭಾಗದಲ್ಲಿ ಆರ್ ಒ ಶ್ರೀನಿವಾಸ್ , ಎಆರ್ ಒ ಸೋಮಶೇಖರ್ ಅವರ ವಿರುದ್ಧ ಡಿಇ ನಡೆಸುವಂತೆ ಹಾಗೂ ಶ್ರೀನಿವಾಸ್ ಅವರನ್ನು ಅಮಾನತು ಮಾಡಲು ವಿಶೇಷ ಆಯುಕ್ತರು ಶಿಫಾರಸ್ಸು ಮಾಡಿದ್ದಾರೆ. ಬೇಗೂರು ಎಆರ್ ಒ ಉಪವಿಭಾಗದಲ್ಲಿ ಎಆರ್ ಒ ಸಂತೋಷ ಅವರ ವಿರುದ್ಧ ಇಲಾಖಾ ತನಿಖೆ ಹಾಗೂ ಅವರನ್ನು ಅಮಾನತು ಮಾಡುವಂತೆ ವಿಶೇಷ ಆಯುಕ್ತರು ಆದೇಶಿಸಿದ್ದಾರೆ. ಅದೇ ರೀತಿ ಆರ್ ಒ ಚಂದ್ರಶೇಖರ್ ವಿರುದ್ಧ ಡಿಇ ನಡೆಸಲು ಫರ್ಮಾನು ಹೊರಡಿಸಿದ್ದಾರೆ.
ಎಆರ್ ಒ ಸಂತೋಷ್ ಅತಿ ಹೆಚ್ಚು ಆಸ್ತಿ ತೆರಿಗೆ ಪರಿಷ್ಕರಣೆ ಮಾಡಿದ ಮೊದಲ ಆಸ್ತಿಗೆ ಬೀಗಮುದ್ರೆ ಮಾಡಿರಲಿಲ್ಲ. ಹಾಗೂ ಕೆ.ಎನ್.ಲಲಿತ ಎಂಬ ಕಟ್ಟಡ ಮಾಲೀಕರ ಜೊತೆ ಕೈಜೋಡಿಸಿ, ಉದ್ದೇಶಪೂರ್ವಕವಾಗಿ ಅವರು ನೀಡಿದ 31 ಲಕ್ಷ ರೂ. ಚೆಕ್ ಅನ್ನು ಜ.1ರಿಂದ ಈತನಕ ಪಾಲಿಕೆಗೆ ಕಟ್ಟಿಲ್ಲ. ಎರಡನೇ ಅತಿ ದೊಡ್ಡ ಸುಸ್ತಿದಾರರಿಂದ ಆಸ್ತಿ ತೆರಿಗೆ ಸಂಗ್ರಹವಾಗಲಿ, ಟಾಪ್-2 ಕಟ್ಟಡದಿಂದ ತೆರಿಗೆ ಸಂಗ್ರಹ, ಸೀಲ್ ಮಾಡುವ ಕೆಲಸ ಮಾಡಿಲ್ಲ. ಟಾಪ್ -50ರಲ್ಲಿನ ಗೃಹೇತರ ಕಟ್ಟಡಗಳನ್ನು ಸೀಲ್ ಮಾಡುವುದಾಗಲಿ ಮಾಡಿಲ್ಲ. 20 ಲಕ್ಷಕ್ಕಿಂತ ಹೆಚ್ಚು ಬಾಕಿ ತೆರಿಗೆದಾರರ ವಿರುದ್ಧ ಯಾವ ಕ್ರಮ ಕೈಗೊಳ್ಳದೇ ಹಿರಿಯ ಅಧಿಕಾರಿಗಳು ನೀಡದ ಸೂಚನೆಗಳನ್ನು ಪಾಲಿಸದೆ ನಿರ್ಲಕ್ಷಿಸಿದ್ದಾರೆ ಎಂದು ಮುನೀಷ್ ತಮ್ಮ ದಾಖಲಾತಿಯಲ್ಲಿ ತಿಳಿಸಿದ್ದಾರೆ.
ಅದೇ ರೀತಿ ಬೊಮ್ಮನಹಳ್ಳಿ ಉಪ ವಿಭಾಗದಲ್ಲಿ ಎಆರ್ ಒ ರೇಣುಕಾ ಪ್ರಸಾದ್ ಅಮಾನತು, ಯಲಚೇನಹಳ್ಳಿಯಲ್ಲಿ ಎಆರ್ ಒ ಶಂಕರ್, ಉತ್ತರಹಳ್ಳಿಯ ಎಆರ್ ಒ ನಾಗವೇಣಿ ಅವರನ್ನು ಸಸ್ಪೆಂಡ್ ಮತ್ತು ಇಲಾಖಾ ವಿಚಾರಣೆಗೆ ಸೂಚಿಸಿದ್ದಾರೆ. ಆರ್ ಒ ಕಮಲಾ ವಿರುದ್ಧ ಡಿಇ ನಡೆಸಲು ಆದೇಶಿಸಿದ್ದಾರೆ.
ಇನ್ನು ಎಚ್ ಎಸ್ ಆರ್ ಲೇಔಟ್ ಉಪವಿಭಾಗದಲ್ಲಿ ಎಆರ್ ಒ ಮಂಜುನಾಥ್ ಅವರನ್ನು ಅಮಾನತು ಮಾಡಿ, ಅವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಸೂಚಿಸಿದ್ದಾರೆ. ವಿಶೇಷ ಆಯುಕ್ತ ಮುನೀಷ್ ಮುದ್ಗಿಲ್ ಅರಕೆರೆ ಉಪವಿಭಾಗಕ್ಕೆ ಭೇಟಿ ನೀಡಿದಾಗ ಅವರಿಗೆ ಶಾಕ್ ಕಾದಿತ್ತು. ಕೆಲವೊಂದು ಸುಸ್ತಿದಾರರ ಆಸ್ತಿಗಳನ್ನು ಅಟ್ಯಾಚ್ ಮೆಂಟ್ ಮಾಡಿಕೊಂಡಿರುವ ಬಗ್ಗೆ ಕೆಳ ಹಂತದ ಅಧಿಕಾರಿಗಳು ತಪ್ಪು ಮಾಹಿತಿ ನೀಡಿದ್ದರು. ಇದನ್ನು ಪತ್ತೆ ಹಚ್ಚಿದ ಮುನೀಷ್ ಅವರು ಆ ಅಧಿಕಾರಿಗಳ ವಿರುದ್ಧ ತಪ್ಪು ಮಾಹಿತಿ ನೀಡಿದ್ದರ ಬಗ್ಗೆ ಕೆಂಡಕಾರಿದರು.
ಆಸ್ತಿ ತೆರಿಗೆ ಸಂಗ್ರಹಿಸಿದ, ದೊಡ್ಡ ತೆರಿಗೆ ಸುಸ್ತಿದಾರರ ಮೇಲೆ ಕ್ರಮವಹಿಸದ, ದೊಡ್ಡ ಗೃಹೇತರ ಕಟ್ಟಡಗಳನ್ನು ಪರಿಶೀಲಿಸದ, ಆಸ್ತಿಗಳನ್ನು ಬೀಗಮುದ್ರೆ ಮಾಡದ ಹೀಗೆ ವಿವಿಧ ಲೋಪಗಳ ಹಿನ್ನಲೆಯಲ್ಲಿ ಕಂದಾಯ ಉಪ ಆಯುಕ್ತರು (DC), ಕಂದಾಯ ಅಧಿಕಾರಿ (RO), ಸಹಾಯಕ ಕಂದಾಯ ಅಧಿಕಾರಿ (ARO)ಗಳ ಮೇಲೆ ಬಿಬಿಎಂಪಿ ವಿಶೇಷ ಆಯುಕ್ತ ಮುನೀಷ್ ಮುದ್ಗಿಲ್ ಸೂಕ್ತ ಕ್ರಮಕ್ಕೆ ಆದೇಶಿಸಿದ್ದಾರೆ.