ಬೆಂಗಳೂರು, ಜ.24 www.bengaluruwire.com : ನಿವೃತ್ತಿಯಾಗಿ ಪಿಂಚಣಿ ಪಡೆಯುತ್ತಿದ್ದರೂ, ಅಧಿಕಾರದ ಲಾಲಾಸೆಯಿಂದ ರಾಜ್ಯ ಸರ್ಕಾರದ ವಿವಿಧ ಇಲಾಖೆ, ನಿಗಮ- ಮಂಡಳಿ, ಪ್ರಾಧಿಕಾರಗಳಲ್ಲಿ ಗಂಜಿಕೇಂದ್ರ ಮಾಡಿಕೊಂಡಿರುವ ನಿವೃತ್ತ ಸರ್ಕಾರಿ ನೌರಕರರನ್ನು ಮುಲಾಜಿಲ್ಲದೆ ಎತ್ತಂಗಡಿ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮುಖ್ಯ ಕಾರ್ಯದರ್ಶಿಗಳಿಗೆ ಸೂಚಿಸಿದ್ದಾರೆ.
ಗುತ್ತಿಗೆ ಆಧಾರದ ಮೇಲೆ ನೇಮಕವಾದ ಈ ನಿವೃತ್ತ ಸರ್ಕಾರಿ ನೌಕರರಿಗೆ ವೇತನ, ವಾಹನ ಸೌಲಭ್ಯ ಇನ್ನಿತರೆ ಸೌಲಭ್ಯಗಳನ್ನು ನೀಡಲಾಗುತ್ತಿರುವುದರಿಂದ ಸರ್ಕಾರದ ಬೊಕ್ಕಸಕ್ಕೆ ಹೆಚ್ಚುವರಿ ಆರ್ಥಿಕ ಹೊರೆಯಾಗುವುದಲ್ಲದೆ, ಕಾರ್ಯಕ್ಷಮತೆಯ ಗುಣಮಟ್ಟ ಹಾಗೂ ಉತ್ತರದಾಯಿತ್ವದ ಕೊರತೆಯೂ ಎದ್ದು ಕಾಣುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಜ.9ರಂದು ಮುಖ್ಯ ಕಾರ್ಯದರ್ಶಿ ಡಾ.ರಜನೀಶ್ ಗೋಯಲ್ ಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ರಾಜ್ಯ ಸರ್ಕಾರದ ಕೆಲವು ಇಲಾಖೆಗಳಲ್ಲಿ, ಸಚಿವಾಲಯದಲ್ಲಿ ಸರ್ಕಾರಿ ಸೇವೆಯಿಂದ ನಿವೃತ್ತಿ ಹೊಂದಿದ ಅಧಿಕಾರಿ, ನೌಕರರನ್ನು ಅನಗತ್ಯವಾಗಿ ಹುದ್ದೆಗಳನ್ನು ಅವರಿಗೆ ಅನುಕೂಲವಾಗಲೆಂದು ಸೃಷ್ಟಿಸಿ, ಸಮಾಲೋಚಕರು, ವಿಶೇಷ ಸಂಪನ್ಮೂಲ ವ್ಯಕ್ತಿಗಳನ್ನಾಗಿ ಹಾಗೂ ಕೆಲವು ಗ್ರೂಪ್-ಎ ವೃಂದದ ಹುದ್ದೆಗಳಿಗೂ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಲಾಗಿದೆ. ಇದರಿಂದ ಸರ್ಕಾರದ ಖಜಾನೆ ಮೇಲೆ ಅನಗತ್ಯ ಹೊರೆಯಾಗುತ್ತಿದೆ. ಹೀಗಾಗಿ ಇವರನ್ನು ಕೂಡಲೇ ಸೇವೆಯಿಂದ ಬಿಡುಗಡೆಗೊಳಿಸುವಂತೆ ಸಿಎಂ, ಟಿಪ್ಪಣಿಯಲ್ಲಿ ತಿಳಿಸಿದ್ದಾರೆ.
ಅಲ್ಲದೆ ಈ ಹುದ್ದೆಗಳಿಗೆ ಹಾಲಿ ಸರ್ಕಾರಿ ಸೇವೆಯಲ್ಲಿರುವ ಅಧಿಕಾರಿ/ನೌಕರರುಗಳನ್ನು ನಿಯೋಜನೆ ಮಾಡಲು ಅಗತ್ಯ ಕ್ರಮವಹಿಸುವಂತೆ ಮುಖ್ಯಮಂತ್ರಿಗಳು ಸೂಚಿಸಿದ್ದಾರೆ. ಈ ಟಿಪ್ಪಣಿ ಆಧಾರದ ಮೇಲೆ ಮುಖ್ಯ ಕಾರ್ಯದರ್ಶಿ ಡಾ.ರಜನೀಶ್ ಗೋಯಲ್ ಜ.23ರಂದು ಎಲ್ಲಾ ಇಲಾಖೆಗಳ ಮುಖ್ಯ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ ಹಾಗೂ ಕಾರ್ಯದರ್ಶಿಗಳಿಗೆ ಪತ್ರ ಬರೆದು ಕೂಡಲೇ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.
ಪ್ರಸ್ತುತ ರಾಜ್ಯದಲ್ಲಿ 30ಕ್ಕೂ ಹೆಚ್ಚು ಸರ್ಕಾರಿ ಇಲಾಖೆಗಳು, 112 ನಿಮಗ, ಮಂಡಳಿ ಹಾಗೂ ಪ್ರಾಧಿಕಾರಗಳಿವೆ. ಈ ಇಲಾಖೆ, ನಿಗಮ, ಮಂಡಳಿಗಳಲ್ಲಿ ನಿವೃತ್ತ ಅಧಿಕಾರಿ, ನೌಕರರು ಬೇಡಿಕೆ, ಒತ್ತಡ ತಂದು ಅನಗತ್ಯವಾಗಿ ಹುದ್ದೆಗಳನ್ನು ಸೃಷ್ಟಿಸಿ ಅಲ್ಲಿ ಅಧಿಕಾರ ಚಲಾಯಿಸುತ್ತಿದ್ದಾರೆ. ಇವರು ಉತ್ತರದಾಯಿತ್ವ, ಕಾರ್ಯಕ್ಷತೆಯೂ ಇಲ್ಲದ ಕಾರಣ ನೇಮಿಸಿಕೊಂಡರೂ ಸರ್ಕಾರಕ್ಕೆ ಯಾವುದೇ ಪ್ರಯೋಜನವಾಗುತ್ತಿಲ್ಲ. ಇವೆಲ್ಲ ಪೋಸ್ಟ್ ಗಳು ನಿವೃತ್ತರ ಗಂಜಿಕೇಂದ್ರಗಳಂತಾಗಿವೆ.
ಈಗಲೇ ಉಚಿತ ಪಂಚ ಗ್ಯಾರಂಟಿಗೆ ಸಾವಿರಾರು ಕೋಟಿ ರೂ. ಹಣ ಹೊಂದಿಸಲು ತಿಣುಕಾಡುತ್ತಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕಲು ದಾರಿಗಳನ್ನು ಹುಡುಕುತ್ತಿದೆ. ಅದರಲ್ಲಿ ಈ ಕ್ರಮವೂ ಒಂದು ಎಂದು ಹೇಳಲಾಗುತ್ತಿದೆ.
ಕರ್ನಾಟಕ ಆಡಳಿತ ಸುಧಾರಣಾ ಆಯೋಗ- 2 ಅಧ್ಯಕ್ಷರು ಈ ಬಗ್ಗೆ ಏನಂತಾರೆ? :
” ಮುಖ್ಯಮಂತ್ರಿಗಳ ಸೂಚನೆ ಮೇರೆಗೆ ಮುಖ್ಯ ಕಾರ್ಯದರ್ಶಿ ಡಾ.ರಜನೀಶ್ ಗೋಯಲ್, ವಿವಿಧ ಇಲಾಖೆ, ನಿಗಮ ಮಂಡಳಿಗಳಲ್ಲಿ ಅನಗತ್ಯವಾಗಿ ನಿವೃತ್ತ ಸರ್ಕಾರಿ ಅಧಿಕಾರಿ, ನೌಕರರನ್ನು ನೇಮಿಸಿಕೊಂಡಿರುವುದರಿಂದ ಸರ್ಕಾರ ಬೊಕ್ಕಸಕ್ಕೆ ಸುಖಾಸುಮ್ಮನೆ ವೆಚ್ಚವಾಗುತ್ತಿದೆ. ಅವರನ್ನು ಸೇವೆಯಿಂದ ಬಿಡುಗಡೆ ಮಾಡಿ, ಆ ಜಾಗದಲ್ಲಿ ಸೂಕ್ತ ಸರ್ಕಾರಿ ಅಧಿಕಾರಿ, ನೌಕರರನ್ನು ನಿಯೋಜಿಸಲು ಕ್ರಮವಹಿಸಲು ಹೊರಟಿರುವುದು ಸೂಕ್ತವಾಗಿದೆ.”
– ಟಿ.ಎಂ.ವಿಜಯಭಾಸ್ಕರ್, ಅಧ್ಯಕ್ಷರು, ಕರ್ನಾಟಕ ಆಡಳಿತ ಸುಧಾರಣಾ ಆಯೋಗ- 2
“ಬೆಂಗಳೂರು ವೈರ್” ಡಿಜಿಟಲ್ ವೆಬ್ ನ್ಯೂಸ್ ಪೋರ್ಟೆಲ್ಲಿನ ಸೋಶಿಯಲ್ ಮೀಡಿಯಾ ಪೇಜ್ ಹಾಗೂ Google News ಗಳಿಗೆ ಉಚಿತವಾಗಿ Subscribe ಆಗಲು Facebook, Telegram, Twitter, Youtube, Whatsup Channel ಗೆ ಜಾಯಿನ್ ಆಗಲು ಇವುಗಳ ಲಿಂಕ್ ಮೇಲೆ ಕ್ಲಿಕ್ ಮಾಡಿ.