ಪಿರಿಯಾಪಟ್ಟಣ(ಮೈಸೂರು), ಜ.24 www.bengaluruwire.com : “ನಮ್ಮ ರೈತರ ರಕ್ಷಣೆಗೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲೇ ಮೇಕೆದಾಟು ಯೋಜನೆ ಪೂರ್ಣಗೊಳಿಸುತ್ತೇವೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ವಾಗ್ದಾನ ನೀಡಿದರು.
ಪಿರಿಯಾಪಟ್ಟಣ ತಾಲ್ಲೂಕಿನ 79 ಗ್ರಾಮಗಳ 150 ಕೆರೆಗಳಿಗೆ ಕಾವೇರಿ ನೀರು ತುಂಬಿಸುವ ಮುತ್ತಿನಮುಳುಸೋಗೆ ಯೋಜನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆ ಉದ್ಘಾಟನೆ ಮಾಡಿದ ಬಳಿಕ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, “ಮೇಕೆದಾಟು ಬಗ್ಗೆ ಕಾಂಗ್ರೆಸ್ ಸರ್ಕಾರ ಚಿಂತನೆ ಮಾಡುತ್ತಿಲ್ಲ ಎಂದು ಮಾಜಿ ಪ್ರಧಾನಿಗಳಾದ ದೇವೇಗೌಡರು ಹೇಳಿದ್ದಾರೆ. ದೇವೇಗೌಡರೇ ನೀವು ಮತ್ತು ಪ್ರಧಾನಿ ಮೋದಿ ಅವರು ಆತ್ಮೀಯರಿದ್ದೀರಿ, ಅವರ ಬಳಿ ಮಾತನಾಡಿ ಮೇಕೆದಾಟು ಯೋಜನೆಗೆ ಅನುಮತಿ ಕೊಡಿಸಿ.”
ಕಾವೇರಿ ನದಿ ನಮ್ಮ ತಾಯಿ, ಈ ತಾಯಿಯ ಕೃಪೆಯಿಂದ ನಾವೆಲ್ಲಾ ಬದುಕಿದ್ದೇವೆ. ಆದರೂ ಈ ರಾಜ್ಯದಿಂದ ಆಯ್ಕೆಯಾಗಿ ಹೋಗಿರುವ 26 ಜನ ಬಿಜೆಪಿ ಎಂಪಿಗಳು ರಾಜ್ಯದ ಪರವಾಗಿ ಮಾತನಾಡುತ್ತಿಲ್ಲ. ಪ್ರತಾಪ್ ಸಿಂಹ ಅವರು ಪ್ರಧಾನಿಗಳಿಗೆ ಹೇಳಿ ಅನುಮತಿ ಕೊಡಿಸಬಹುದಲ್ಲವೇ? ಆದರೂ ಯಾರೂ ದನಿ ಎತ್ತುತ್ತಿಲ್ಲ.
ಕಾಂಗ್ರೆಸ್ ಪಕ್ಷ ಏನೂ ಕೆಲಸ ಮಾಡುತ್ತಿಲ್ಲ ಎಂದು ದೇವೇಗೌಡರು ಸುಮ್ಮನೆ ಆರೋಪ ಮಾಡುತ್ತಿದ್ದಾರೆ. ಮೇಕೆದಾಟು ಪರವಾಗಿ ನಾವು ಕಾನೂನು ಹೋರಾಟ ಮಾಡುತ್ತಿದ್ದೇವೆ. ಸುಪ್ರೀಂ ಕೋರ್ಟ್ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದವರಿಗೆ ಅಣೆಕಟ್ಟು ನಿರ್ಮಾಣ ಮಾಡಲು ಅಡ್ಡಿಪಡಿಸಬಾರದು ಎಂದು ಹೇಳಿದೆ.
ಮೇಕೆದಾಟು ಯೋಜನೆಯಿಂದ ಮುಳುಗಡೆಯಾಗುವ ಅರಣ್ಯ ಪ್ರದೇಶಗಳ ಬದಲಾಗಿ ಕಂದಾಯ ಭೂಮಿಗಳನ್ನು ಅರಣ್ಯ ಇಲಾಖೆಗೆ ಹಸ್ತಾಂತರ ಮಾಡಲಾಗುವುದು. ಚಾಮರಾಜನಗರ, ಮಂಡ್ಯ, ಮೈಸೂರು, ಬೆಂಗಳೂರು ಗ್ರಾಮಾಂತರ ಭಾಗದ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ. ಮರಗಳ ಎಣಿಕೆ ಕಾರ್ಯಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಮೇಕೆದಾಟು ಯೋಜನೆಯಿಂದ ಸುಮಾರು 66 ಟಿಎಂಸಿ ನೀರು ಸಂಗ್ರಹಿಸಬಹುದು. ಹಾರಂಗಿ, ಕಬಿನಿ, ಕೆಆರ್ಎಸ್, ಹೇಮಾವತಿ ಜಲಾಶಯಗಳಲ್ಲಿ ನೀರು ಇಲ್ಲದಿದ್ದಾಗ ಮೇಕೆದಾಟುವಿನಲ್ಲಿ ಸಂಗ್ರಹವಾದ ನೀರನ್ನು ತಮಿಳುನಾಡಿಗೆ ನೀಡಿ, ನಮ್ಮ ರೈತರನ್ನು ಬದುಕಿಸಬಹುದು ಎಂದು ಕಾವೇರಿ ತಾಯಿಯನ್ನು ಪೂಜಿಸಿ ಮೇಕೆದಾಟು ಪಾದಯಾತ್ರೆ ಹೊರಟೆವು.
“ನಮ್ಮ ನೀರು, ನಮ್ಮ ಹಕ್ಕು” ಎಂದು ಸಂಗಮದಿಂದ, ಬೆಂಗಳೂರಿಗೆ ಹೆಜ್ಜೆ ಹಾಕಿದೆವು. ಪಾದಯಾತ್ರೆ ವೇಳೆ ನಮ್ಮ ಮೇಲೆ ಅನೇಕ ಪ್ರಕರಣಗಳನ್ನು ದಾಖಲಿಸಿದರು. ನಮ್ಮ ಹೋರಾಟ ನೋಡಿ ಬೊಮ್ಮಾಯಿ ಅವರು 1 ಸಾವಿರ ಕೋಟಿ ರೂ. ಮೀಸಲಿಟ್ಟರು. ಆದರೆ ಈ ಹಣ ಏನಾಯಿತು? ಈ ವಿಚಾರವಾಗಿ ಬಿಜೆಪಿಯವರನ್ನು ಜೆಡಿಎಸ್ ಏಕೆ ಪ್ರಶ್ನಿಸುತ್ತಿಲ್ಲ?
2018 ರಲ್ಲಿ ಸಿದ್ದರಾಮಯ್ಯ ಅವರ ಸರ್ಕಾರದ ಅವಧಿಯಲ್ಲೇ ಗುದ್ದಲಿಪೂಜೆಯಾದ ಮುತ್ತಿನಮುಳುಸೋಗೆ ಏತ ನೀರಾವರಿ ಯೋಜನೆ ನಮ್ಮಿಂದಲೇ ಉದ್ಘಾಟನೆಯಾಗುತ್ತಿದೆ. ಉಳುವವನೇ ಭೂಮಿಯ ಒಡೆಯ ಕಾನೂನು ಜಾರಿ ಮಾಡಿದ ಕಾಂಗ್ರೆಸ್ ಸದಾ ರೈತಪರವಾಗಿ ಕೆಲಸ ಮಾಡುತ್ತದೆ. ರೈತನಿಗೆ ಸಂಬಳ, ವರ್ಗಾವಣೆ, ಬಡ್ತಿ, ನಿವೃತ್ತಿ, ಪಿಂಚಣಿ ಸೇರಿದಂತೆ ಯಾವ ಸೌಲಭ್ಯವೂ ಇಲ್ಲ. ಆದ ಕಾರಣ ಎಲ್ಲಾ ಸರ್ಕಾರಗಳು ರೈತರ ಪರ ನಿಲ್ಲಬೇಕು ಎಂದು ಹೇಳಿದರು.
ರೇಷ್ಮೆ ಮತ್ತು ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್, ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ, ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು, ಶಾಸಕರುಗಳಾದ ಮರಿತಿಬ್ಬೇಗೌಡ, ಡಿ.ರವಿಶಂಕರ್, ಟಿ.ಎಸ್.ಶ್ರೀವತ್ಸ, ಮಂಥರ್ ಗೌಡ ಸಿ.ಅನಿಲ್ ಕುಮಾರ್, ಕೆ. ಹರೀಶ್ ಗೌಡ, ಡಾ.ಡಿ. ತಿಮ್ಮಯ್ಯ, ಯುವ ಮುಖಂಡ ನಿತಿನ್ ಮತ್ತಿತರರು ಉಪಸ್ಥಿತರಿದ್ದರು.