ಬೆಂಗಳೂರು, ಜ.23 www.bengaluruwire.com : ಇಡೀ ಬಿಬಿಎಂಪಿಯ ಅಧಿಕಾರಿ, ಸಿಬ್ಬಂದಿ ಒಂದು ಕಡೆಯಾದ್ರೆ ಈ ಮಹಾಶಯನ ಖದರ್ರೇ ಬೇರೆ. ಪಾಲಿಕೆಯ ಅಧಿಕಾರಿ- ನೌಕರರ ವರ್ಗಾವಣೆ ಮಾರ್ಗಸೂಚಿ ಸಾವಿರಾರು ಸಂಖ್ಯೆ ಸಿಬ್ಬಂದಿಗೆ ಒಂದು ತರವಾದ್ರೆ ಈ ಪಾರ್ಟಿಗೆ ಇನ್ನೊಂದು ತರಃ.
ದ್ವೀತೀಯ ದರ್ಜೆ ಹುದ್ದೆಯಿಂದ ಹಿಡಿದು ಮೌಲ್ಯಮಾಪಕ ಹುದ್ದೆಯವರೆಗೆ ಸುದೀರ್ಘ 28 ವರ್ಷ 8 ತಿಂಗಳ ಅವಧಿಯಲ್ಲಿ ಈ ವ್ಯಕ್ತಿ 28 ವರ್ಷಗಳಿಗಿಂತ ಹೆಚ್ಚು ಕಾಲ ಪಾಲಿಕೆ ಕೇಂದ್ರ ಕಚೇರಿಯಲ್ಲಿ ಜಾಂಡಾ ಹೂಡಿದ್ದಾರೆ. ಆದರೆ ಈತನಕ ಈ ವ್ಯಕ್ತಿಯನ್ನು ಹಿಂದಿನ ಬಿಎಂಪಿಯಿಂದ ಹಿಡಿದು ಈಗಿನ ಬಿಬಿಎಂಪಿ ವರೆಗಿನ ಯಾವ ಚೀಫ್ ಕಮೀಷನರ್ ಆಗಲಿ, ವಿಶೇಷ ಆಯುಕ್ತರಾಗಲಿ ಬೇರೆಡೆ ವರ್ಗಾವಣೆ ಮಾಡಲು ಸಾಧ್ಯವಾಗಿಲ್ಲ.
1995ನೇ ಇಸವಿಯಿಂದ ಬಿಬಿಎಂಪಿ ಕೇಂದ್ರ ಕಚೇರಿ ಬಿಟ್ಟಿಲ್ಲ :
ಬಿಬಿಎಂಪಿ ಕೇಂದ್ರ ಕಚೇರಿಯ ಕಂದಾಯ ವಿಭಾಗ ಜಂಟಿ ಆಯುಕ್ತರ ಕಚೇರಿಯಲ್ಲಿ ಕೆಲಸ ಮಾಡುತ್ತಿರುವ ವಿ.ರಾಘವೇಂದ್ರ ಎಂಬ ಸಿ-ಗ್ರೂಪ್ ನೌಕರನೇ ವಿವಿಧ ಹುದ್ದೆಗಳಿಗೆ ಭಡ್ತಿ ಸಿಕ್ಕರೂ ಹೆಡ್ ಆಫೀಸ್ ಕಚೇರಿ ಬಿಟ್ಟು ಹೋಗಿಲ್ಲ. 1995ನೇ ಇಸವಿಯಲ್ಲಿ ಈಗಿನ ಕಂದಾಯ ಇಲಾಖೆ ಜಂಟಿ/ ಉಪ ಆಯುಕ್ತರು (ಕಂದಾಯ) ಕಚೇರಿ ಆಗ ಆಸ್ತಿ ಮತ್ತು ಸಂಪತ್ತು ವಿಭಾಗದ ಸಹಾಯಕ ಕಂದಾಯ ಅಧಿಕಾರಿ ಕಚೇರಿಯಾಗಿತ್ತು. ಈ ಕಚೇರಿ ಪಾಲಿಕೆಯ ಕೇಂದ್ರ ಕಚೇರಿಯಾಗಿತ್ತು. 14-08-1995ರಲ್ಲಿ ಈ ಆಫೀಸ್ ಗೆ ದ್ವಿತೀ ದರ್ಜೆ ಸಹಾಯಕನಾಗಿ ಬಂದ ವಿ.ರಾಘವೇಂದ್ರ 1-02-2008ರ ತನಕ ಅಂದರೆ ಬರೋಬ್ಬರಿ 13 ವರ್ಷಗಳ ಕಾಲ ಅಂದರೆ ಬೆಂಗಳೂರು ಮಹಾನಗರ ಪಾಲಿಕೆ 2007ರಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಬಂದ ಮೇಲೂ ಇಲ್ಲೇ ಮುಂದುವರೆದಿದ್ದರು.
ಬಳಿಕ 2008ರ ಫೆಬ್ರವರಿ ಒಂದರಂದು ದ್ವಿತೀಯ ದರ್ಜೆ ಸಹಾಯಕ (FDA) ಬಡ್ತಿ ಪಡೆದರೂ ಕೇಂದ್ರ ಕಚೇರಿಯನ್ನು ಬಿಟ್ಟು ಕದಲಲಿಲ್ಲ. ಬಡ್ತಿ ಪಡೆದ ಫೆ.1ರಂದು ಇವರನ್ನು ದಕ್ಷಿಣ ಕಂದಾಯಾಧಿಕಾರಿ ಕಚೇರಿಗೆ ನಾಮಕಾವಸ್ತಿಗೆ ನೇಮಿಸಿದ್ದರೂ, ಓಓಡಿ ಆಧಾರದ ಮೇಲೆ ಮತ್ತದೇ ಕೇಂದ್ರ ಕಚೇರಿಯ ಉಪ ಆಯುಕ್ತರ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಾ ಜಾಂಡಾ ಊರಿದ್ದಾರೆ. ಆನಂತರ ಯಾರದ್ದಾದ್ರೂ ಅಧಿಕಾರಿ, ಕೌನ್ಸಿಲರ್ ಕಣ್ಣು ಬೀಳುತ್ತೆ ಎಂಬ ಕಾರಣಕ್ಕೆ ಕಂದಾಯ ಅಧಿಕಾರಿ ದಕ್ಷಿಣ ಕಚೇರಿಯಿಂದ ಪದ್ಮನಾಭನಗರ ಕಂದಾಯ ಅಧಿಕಾರಿ ಕಚೇರಿಗೆ 2012ರ ಮೇ 24ರಂದು ವರ್ಗಾವಣೆಯಾದರೂ ಪುನಃ ಅಲ್ಲಿ ವೇತನ ಪಡೆದು 20023ರ ಸೆಪ್ಟೆಂಬರ್ 20ರವರೆಗೆ ಅದೇ ಕಚೇರಿಯಲ್ಲಿದ್ದರೂ ಹೆಡ್ ಆಫೀಸ್ ನಲ್ಲೇ ಓಓಡಿ ಮೇಲೆಯೇ ಕಂಟಿನ್ಯೂ ಆದ್ರು. ಆಮೇಲೆ ಮೌಲ್ಯ ಮಾಪಕ ಹುದ್ದೆಗೆ ಮುಂಭಡ್ತಿಗೆ ತೊಂದರೆಯಾಗುತ್ತೆ ಅಂತ ನಾಮಕಾವಸ್ತೆಗೆ 2016ರ ಸೆಪ್ಟೆಂಬರ್ ನಲ್ಲಿ ರಸ್ತೆ ಮೂಲಭೂತ ಸೌಕರ್ಯ ವಿಭಾಗದ ಇಇ ಕಚೇರಿಗೆ ವರ್ಗವಾದರೂ ನಾಲ್ಕು ತಿಂಗಳು 10 ದಿನ ಕೆಲಸ ಮಾಡಿ ಮೌಲ್ಯಮಾಪಕರಾಗಿ ಪ್ರಮೋಷನ್ ಪಡ್ಕೊಂಡ್ರು.
ಇಡೀ 28.08 ವರ್ಷದಲ್ಲಿ 9 ತಿಂಗಳಷ್ಟೇ ಕೇಂದ್ರ ಕಚೇರಿಯಿಂದ ದೂರ :
2017ರ ಫೆಬ್ರವರಿ 1ರಂದು ಎಫ್ ಡಿಎ ಹುದ್ದೆಯಿಂದ ಮೌಲ್ಯಮಾಪಕ ಹುದ್ದೆಗೆ ಮುಂಬಡ್ತಿ ಪಡೆದು ಸುಮಾರು 5 ತಿಂಗಳು ಕಾಲ ಹೂಡಿ ಸಹಾಯ ಕಂದಾಯ ಅಧಿಕಾರಿ ಕಚೇರಿಯಲ್ಲಿ ಕಾರ್ಯನಿರ್ವಹಿಸಿದ್ದಾರೆ. ಇಡೀ 28 ವರ್ಷ 8 ತಿಂಗಳ ಒಟ್ಟು ಸೇವಾವಧಿಯಲ್ಲಿ ಕೇವಲ 9 ತಿಂಗಳಷ್ಟೇ ಬಿಬಿಎಂಪಿಯ ಕಂದಾಯ ಕೇಂದ್ರ ಕಚೇರಿಯಿಂದ ಹೊರಗಿದ್ದಿದ್ದು. ಅದು ಬಿಟ್ರೆ ಮಿಕ್ಕೆಲ್ಲಾ ಸಮಯವೂ ಕೇಂದ್ರ ಕಚೇರಿಯಿಂದ ಕದಲಲಿಲ್ಲ. ಈಗಲೂ ಬಿಬಿಎಂಪಿ ಕೇಂದ್ರ ಕಚೇರಿಯ ಕಂದಾಯ ಜಂಟಿ ಆಯುಕ್ತರ ಕಚೇರಿಯಲ್ಲೇ ಪಾಲಿಕೆ ವರ್ಗಾವಣೆ ನೀತಿ ಉಲ್ಲಂಘಿಸಿ ಮುಂದುವರೆದಿರುವುದು ಆರ್ ಟಿಐ ದಾಖಲೆಗಳಿಂದ ತಿಳಿದು ಬಂದಿದೆ. ಇಷ್ಟು ವರ್ಷಗಳ ಕಾಲ ಬಿಬಿಎಂಪಿಯಲ್ಲಿ ವರ್ಗಾವಣೆ ಉಲ್ಲಂಘಿಸಿ ಮುಂದುವರೆದಿದ್ದಕ್ಕೆ ಪಾಲಿಕೆ ಗಮನಾರ್ಹ ಅನುಕೂಲ ಆಗಿದ್ಯಾ? ಇವರಿಗೆ ವರ್ಗಾವಣೆಯ ನಿಯಮಾವಳಿಗಳು ಅನ್ವಯವಾಗಲಿಲ್ಲ ಅನ್ನೋದಾದ್ರೆ ಪಾಲಿಕೆಯ ಉಳಿದ ಅಧಿಕಾರಿ ಮತ್ತು ಸಿಬ್ಬಂದಿಗೆ ಈ ಕಾನೂನು ಅನ್ವಯವಾಗಲ್ವಾ? ಕಾನೂನು, ನಿಯಮಗಳ ಮುಂದೆ ಎಲ್ಲಾ ಸಮಾನರು ಅನ್ನೋದಾದರೆ ಟ್ಯಾಕ್ಸ್ ಅಸೆಸರ್ ವಿ.ರಾಘವೇಂದ್ರರನ್ನು ವರ್ಗಾವಣೆ ನಿಯಮಗಳ ಅನ್ವಯ ಕೇಂದ್ರ ಕಚೇರಿಯಿಂದ ಪಾಲಿಕೆ ಇತರ ಕಚೇರಿಗಳಿಗೆ ವರ್ಗಾಯಿಸುವುದರಲ್ಲಿ ತಪ್ಪೇನಿಲ್ಲ ಎಂದು ಹೆಸರು ಬಹಿರಂಗಪಡಿಸಲು ಇಚ್ಚಿಸದ ಬಿಬಿಎಂಪಿ ಅಧಿಕಾರಿಯೊಬ್ಬರು ಬೆಂಗಳೂರು ವೈರ್ ಗೆ ತಿಳಿಸಿದ್ದಾರೆ.
ಬಿಬಿಎಂಪಿ ಅಧಿಕಾರಿ-ನೌಕರರ ವರ್ಗಾವಣೆ ಮಾರ್ಗಸೂಚಿಯಲ್ಲೇನಿದೆ? :
ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ವರ್ಗಾವಣೆಗಳ ಮಾರ್ಗಸೂಚಿ (ಸಂಖ್ಯೆ : ಬಿ12(5)ಪಿಆರ್/112/2019-20 ದಿನಾಂಕ 19-12-2020) ಯಂತೆ 8ನೇ ಅಂಶದಲ್ಲಿ ಒಂದು ಸ್ಥಳದಲ್ಲಿರಬಹುದಾದ ಕನಿಷ್ಠ ಅವಧಿಯನ್ನು ಉಲ್ಲೇಖಿಸಿ, ಒಂದು ಸ್ಥಳದಲ್ಲಿ ಒಂದು ಹುದ್ದೆಯಲ್ಲಿ ಎಲ್ಲಾ ಗ್ರೂಪ್-ಸಿ ಹುದ್ದೆಗಳ ಕನಿಷ್ಠ ಅವಧಿ ಮೂರು ವರ್ಷ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಈ ಹಿಂದಿನ ಪಾಲಿಕೆಯ ವರ್ಗಾವಣೆ ಮಾರ್ಗಸೂಚಿಯಲ್ಲೂ ಒಂದು ಹುದ್ದೆಯಲ್ಲಿ ಕನಿಷ್ಠ 3 ವರ್ಷ ಕಾರ್ಯನಿರ್ವಹಿಸಿರಬೇಕು. ಅದಕ್ಕಿಂತ ಕಡಿಮೆ ಅವಧಿಗೆ ಮುನ್ನ ವರ್ಗಾವಣೆ ಮಾಡುವಂತಿಲ್ಲ ಎಂದು ಹೇಳಿದೆ. ಆದರೆ ಎಸ್ ಡಿಎ ಹುದ್ದೆಯಲ್ಲಿದ್ದಾಗ ಇದೇ ವಿ.ರಾಘವೇಂದ್ರ ಕೇಂದ್ರ ಕಚೇರಿಯಲ್ಲಿ ಸತತ 13 ವರ್ಷ ಕಾರ್ಯನಿರ್ವಹಿಸಿದ್ದರು. ಆನಂತರ ಎಫ್ ಡಿಎ ಹುದ್ದೆಯಲ್ಲಿದ್ದಾಗ ಓಓಡಿ ಆಧಾರದ ಮೇಲೆ ಒಟ್ಟಾರೆ 8.7 ವರ್ಷ ಕೇಂದ್ರ ಕಚೇರಿಯಲ್ಲಿ ಕೆಲಸ ಮಾಡಿದ್ದಾರೆ. ಇನ್ನು ಕಂದಾಯ ಮೌಲ್ಯಮಾಪಕರಾಗಿ 6.6 ವರ್ಷ ಬಿಬಿಎಂಪಿಯ ಹಿಂದಿನ ಕಂದಾಯ ಉಪಆಯುಕ್ತರು ಹಾಗೂ ಈಗಿನ ಜಂಟಿ ಆಯುಕ್ತರ ಕಚೇರಿಯೆಂದು ಕರೆಯುವ ಸ್ಥಳದಲ್ಲಿ ವರ್ಗಾವಣೆ ನೀತಿ ಉಲ್ಲಂಘಿಸಿ ಕೆಲಸ ಮಾಡುತ್ತಿದ್ದರೂ, ಬಿಬಿಎಂಪಿ ಚೀಫ್ ಕಮಿಷನರ್, ಕಂದಾಯ ವಿಶೇಷ ಆಯುಕ್ತರಾಗಲೀ ಅಥವಾ ಜಂಟಿ ಆಯುಕ್ತರಾಗಲಿ ಕ್ರಮ ಕೈಗೊಳ್ಳುತ್ತಿಲ್ಲ.
ಇನ್ನೊಂದು ವಿಚಾರ ಇದೇ ವರ್ಗಾವಣೆ ಮಾರ್ಗಸೂಚಿ ಸುತ್ತೋಲೆಯಲ್ಲಿ ಅವಧಿ ಮೀರಿದ ವರ್ಗಾವಣೆಯಲ್ಲಿ “ಒಬ್ಬ ಅಧಿಕಾರಿ? ನೌಕರನು ವಿಶೇಷ ತಾಂತ್ರಿಕ ವಿದ್ಯಾರ್ಹತೆ ಅಥವಾ ಅನುಭವ ಹೊಂದಿದ್ದು, ಅಂತಹ ನಿರ್ದಿಷ್ಟವಾದ ಹುದ್ದೆಗೆ ತಕ್ಷಣಕ್ಕೆ ನೇಮಿಸಲು ಸೂಕ್ತವಾದ ಬದಲಿ ನೌಕರನು ಲಭ್ಯವಿಲ್ಲದಿದ್ದಲ್ಲಿ” ಎಂಬ ಅಂಶವನ್ನು ಗಣನೆಗೆ ತೆಗೆದುಕೊಂಡರೂ, ಪಾಲಿಕೆಯಲ್ಲಿ ಒಟ್ಟಾರೆ 139 ಕಂದಾಯ ಮೌಲ್ಯಮಾಪಕರ ಹುದ್ದೆ ಮಂಜೂರಾಗಿದ್ದು, ಪ್ರಸ್ತುತ 109 ಮಂದಿ ವಿವಿಧ ಕಚೇರಿಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಬಿಬಿಎಂಪಿ ಕಂದಾಯ ವಿಭಾಗದ ಉನ್ನತ ಮೌಲ್ಯಮಾಪನ ಕೋಶದಲ್ಲಿ 4 ಮೌಲ್ಯಮಾಪಕರ ಹುದ್ದೆ ಮಂಜೂರಾಗಿದೆ. ಆದರೆ ಆ ಎಲ್ಲಾ ಪೋಸ್ಟ್ ಗಳು ಭರ್ತಿಯಾಗಿಲ್ಲ. ಲೋಕಾಯುಕ್ತ ದಾಳಿ, ಇಲಾಖಾ ವಿಚಾರಣೆಯಲ್ಲಿ ಅಮಾನತ್ತಾದವರಿಗೆ ವೇತನ ಪಡೆಯಲಷ್ಟೇ ಇಲ್ಲಿನ ಮೌಲ್ಯಮಾಪನ ಹುದ್ದೆಯನ್ನು ಗಣನೆಗೆ ತೆಗೆದುಕೊಳ್ಳುತ್ತಿರುವುದು ಬಿಟ್ಟರೆ, ಪೂರ್ಣಾವಧಿ ಮೌಲ್ಯ ಮಾಪಕರ ಹುದ್ದೆಗೆ ಆಲ್ ಮೋಸ್ಟ್ ಇದೇ ರಾಘವೇಂದ್ರ ಒಬ್ಬರೇ ದಿಕ್ಕು. ಹೀಗಾಗಿ ರಾಘವೇಂದ್ರ ಅವರು ಕಾರ್ಯನಿರ್ವಹಿಸುತ್ತಿರುವ ಮೌಲ್ಯ ಮಾಪಕರ ಹುದ್ದೆಗೆ, ಪಾಲಿಕೆಯ ಹಿರಿಯ ಅಧಿಕಾರಿಗಳಿಗೆ ವಿಶೇಷ ತಾಂತ್ರಿಕ ವಿದ್ಯಾರ್ಹತೆ ಅಥವಾ ಅನುಭವ ಹೊಂದಿದ ಒಬ್ಬನೇ ಒಬ್ಬ ಮೌಲ್ಯ ಮಾಪಕ ಸಿಕ್ಕಿಲ್ಲ ಅನ್ನೋದಾದ್ರೆ ಪಾಲಿಕೆಯ ನೌಕರರ ಬಗ್ಗೆ ಇನ್ಯಾವ ಮಟ್ಟಿಗೆ ಹಿರಿಯ ಅಧಿಕಾರಿಗಳು ನಂಬಿಕೆ ಇಟ್ಟಿದ್ದಾರೆ, ಚೆನ್ನಾಗಿ ಕೆಲಸ ಮಾಡುವ ಅಧಿಕಾರಿ, ಸಿಬ್ಬಂದಿ ಬಗ್ಗೆ ಅದೆಷ್ಟು ಕಾಳಜಿ ಹೊಂದಿದ್ದಾರೆ ಎಂಬುದನ್ನು ಮನಗಾಣಬೇಕು.
ಕಾರ್ಯಕಾರಿ ಹುದ್ದೆಯಾದರೂ ಫೀಲ್ಡ್ ಕೆಲಸಕ್ಕೆ ಹೋಗಲ್ಲ :
ಬಿಬಿಎಂಪಿ ಡಿಸಿ ಕಂದಾಯ-2 ಉನ್ನತ ಮೌಲ್ಯಮಾಪನ ಕೋಶದ ಕಚೇರಿಗೆ 25 ವಿವಿಧ ವೃಂದದ ಸಿಬ್ಬಂದಿಯನ್ನು ಖಾಯಂ ಆಗಿ ನೇಮಿಸಲು 2008ರ ಆಗಸ್ಟ್ 13ರಂದು ಆಗಿನ ಆಡಳಿತಗಾರರು ಕಚೇರಿ ಆದೇಶ ಹೊರಡಿಸಿದ್ದರು. ಆ ಪೈಕಿ 4 ಮೌಲ್ಯಮಾಪಕರ ಹುದ್ದೆಯನ್ನು ಸೃಷ್ಟಿ ಮಾಡಲಾಗಿತ್ತು. ಇದೇ ಮೌಲ್ಯಮಾಪಕರ ಹುದ್ದೆ ಕಾರ್ಯಕಾರಿ ಹುದ್ದೆಯಾಗಿದ್ದು, ವಿವಿಧ ಕಟ್ಟಡಗಳ ಪರಿಶೀಲನೆ ನಡೆಸಿ ಆಸ್ತಿಗಳ ಮೌಲ್ಯಮಾಪನ ಕಾರ್ಯವನ್ನು ಮಾಡಬೇಕಾಗಿದೆ. ಆದರೆ ರಾಘವೇಂದ್ರ ಕೇಂದ್ರ ಕಚೇರಿಯಲ್ಲಿ ಬರೋ ಫೈಲ್ ಗಳನ್ನು ವಿಲೇವಾರಿ ಮಾಡೋದ್ರಲ್ಲೇ ಬ್ಯುಸಿಯಿದ್ದಾರೆಯೇ ಹೊರತು ತಮ್ಮ ಹುದ್ದೆಗೆ ತಕ್ಕ ಕಾರ್ಯವನ್ನು ಮಾಡ್ತಿಲ್ಲ ಎಂದು ಸ್ವತಃ ಕಂದಾಯ ವಿಭಾಗದ ಸಿಬ್ಬಂದಿಯೇ ಆರೋಪಿಸುತ್ತಾರೆ.
ವಿಶೇಷ ಕೆಲಸಗಳನ್ನು ಚಾಣಾಕ್ಷತನದಿಂದ ನಿಭಾಯಿಸುವ ಕಲೆ :
ಇಷ್ಟು ವರ್ಷ ಕೇಂದ್ರ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರೋದರಿಂದ ಯಾವ ಕಾನೂನನ್ನು ತನ್ನ ಲಾಭಕ್ಕೆ ಹೇಗೆ ಪರಿವರ್ತಿಸಿಕೊಳ್ಳಬಹುದೆಂಬ ಪಕ್ಕಾ ಲೆಕ್ಕಾಚಾರ ಇವರಿಗಿದೆ. ಒಂದೊಮ್ಮೆ ತಮ್ಮ “ವಿಶೇಷ ಕೆಲಸ”ಗಳಿಗೆ ತೊಂದರೆಯಾಗುತ್ತೆ ಎಂದು ಗೊತ್ತಾದರೆ, ಅದನ್ನು ಹೇಗೆ ನಿಭಾಯಿಸಬೇಕು ಎಂಬ ಚಾಣಾಕ್ಷತನವೇ ಇಷ್ಟು ವರ್ಷಗಳ ಕಾಲ ಅವರು ಒಂದೇ ಕಡೆ ಉಳಿಯುವಂತೆ ಮಾಡಿದೆ. 28 ವರ್ಷ ಹೆಡ್ ಆಫೀಸ್ ನಲ್ಲಿ ಕಾರ್ಯನಿರ್ವಹಿಸಿದ್ದರಿಂದ ಇವರ ವಿರುದ್ಧ ಒಬ್ಬೇ ಒಬ್ಬ ಕಂದಾಯ ಸಿಬ್ಬಂದಿ ದೂರು ನೀಡಲು ಹಿಂದೇಟು ಹಾಕುತ್ತಾರೆ. ಇಡೀ ಬೆಂಗಳೂರಿನಲ್ಲಿ ನಗರ ಯೋಜನೆ ವಿಭಾಗದಿಂದ ದೊಡ್ಡ ದೊಡ್ಡ ಕಟ್ಟಡಗಳಿಗೆ ಮಂಜೂರಾತಿ ನಕ್ಷೆ ಲೈಸೆನ್ಸ್ ನೀಡುವ ಮುನ್ನ ಕಂದಾಯ ದಾಖಲಾತಿಗಳ ಪರಿಶೀಲನೆಗೆ ಇದೇ ರಾಘವೇಂದ್ರ ಅವರ ಟೇಬಲ್ ಗೆ ಬಂದೇ ಮುಂದು ಹೋಗಬೇಕು. ಇಲ್ಲಿ “ಕೈ ಬೆಚ್ಚಗೆ” ಮಾಡದಿದ್ದರೆ ಕ್ಲಿಯರೆನ್ಸ್ ಸಿಕ್ಕದೆ, ಬಿಲ್ಡರ್ ಗಳಿಗೆ ಮಂಜೂರಾತಿ ನಕ್ಷೆ ಸಿಗಲ್ಲ. ಅಷ್ಟರ ಮಟ್ಟಿಗೆ ತಮ್ಮ ರಾಜ್ಯಭಾರವನ್ನು ಕಟ್ಟಿಕೊಂಡಿದ್ದಾರೆ. ಹೀಗಾಗಿ ಯಾವ ಕಡೆಯಿಂದಲೂ, ಯಾವ ಕಂದಾಯ ಸಿಬ್ಬಂದಿಯೂ ಇವರ ಎದುರು ಮರು ಮಾತನಾಡಲ್ಲ ಎನ್ನುತ್ತಾರೆ ಬಿಬಿಎಂಪಿ ಸಿಬ್ಬಂದಿಯೊಬ್ಬರು.
ಬಿಬಿಎಂಪಿಯಲ್ಲಿ ಶೇ.60ಕ್ಕಿಂತ ಹೆಚ್ಚು ನೌಕರರು ವರ್ಗಾವಣೆ ನೀತಿ ಉಲ್ಲಂಘಿಸಿದ್ದಾರೆ :
“ವಿ.ರಾಘವೇಂದ್ರ 28 ವರ್ಷಕ್ಕಿಂತ ಹೆಚ್ಚು ಕಾಲದಿಂದ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದಾರೆ, ಆದರೆ ಅವರ ಬಗ್ಗೆ ಭ್ರಷ್ಟಾಚಾರ ಅಥವಾ ಕೆಲಸ ಮಾಡುವ ಕುರಿತಂತೆ ದೂರುಗಳು ಬಂದರೆ ಖಂಡಿತ ಕ್ರಮ ಕೈಗೊಳ್ಳುತ್ತೇವೆ. ಬಿಬಿಎಂಪಿಯಲ್ಲಿ ಶೇ.60 ರಿಂದ ಶೇ.80ರಷ್ಟು ಸಿಬ್ಬಂದಿ ವರ್ಗಾವಣೆ ನೀತಿ ಉಲ್ಲಂಘಿಸಿ ಮುಂದುವರೆದವರೇ ಇದ್ದಾರೆ. ಸರ್ಕಾರದಲ್ಲಿ ಶೇ.5ಕ್ಕಿಂತ ಹೆಚ್ಚು ವರ್ಗಾವಣೆ ಮಾಡುವಂತಿಲ್ಲ. ಎಲ್ಲರನ್ನೂ ವರ್ಗಾವಣೆ ಮಾಡಲು 20 ವರ್ಷ ಬೇಕಾಗುತ್ತೆ. ಮೌಲ್ಯಮಾಪಕರಾದ ವಿ.ರಾಘವೇಂದ್ರ ಭ್ರಷ್ಟರಾ ಅಥವಾ ಅವರ ಮೇಲೆ ದೂರುಗಳಿವೆಯಾ? ಎಂಬುದರ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ದೀರ್ಘಾವಧಿ ಒಂದೇ ಕಡೆ ಕೆಲಸ ಮಾಡುತ್ತಿದ್ದಾರೆ ಅಂತ ಕ್ರಮ ಕೈಗೊಂಡರೆ ಸತ್ಯ ಹರಿಶ್ಚಂದ್ರರನ್ನ ಎಲ್ಲಿಂದ ಹುಡುಕಿ ಇಂತಹ ಕೆಲಸಕ್ಕೆ ತರೋದು?”
– ಮುನೀಶ್ ಮೌದ್ಗಿಲ್, ಕಂದಾಯ ವಿಶೇಷ ಆಯುಕ್ತರು, ಬಿಬಿಎಂಪಿ
ಒಂದಲ್ಲ ಎರಡಲ್ಲ ಅಕ್ಷರಶಃ ಏಕಚಕ್ರಾಧಿಪತಿಯಂತೆ 28 ವರ್ಷಕ್ಕೂ ಹೆಚ್ಚು ಕಾಲ ಬಿಬಿಎಂಪಿ ಕೇಂದ್ರ ಕಚೇರಿ ಒಂದೇ ಇಲಾಖೆಯಲ್ಲಿ ಈ ವ್ಯಕ್ತಿ ಕಾರ್ಯನಿರ್ವಹಿಸಿದ್ದಾರೆ. ಆದರೆ ಈತನಕ ಕಾನೂನು ಉಲ್ಲಂಘಿಸಿ ಮುಂದುವರೆಯುತ್ತಿದ್ದರೂ ಇವರನ್ನು ಯಾವ ಪಾಲಿಕೆ ಕಮಿಷನರ್ ವರ್ಗಾವಣೆ ಮಾಡಿಲ್ಲ. ಮಾಡ್ತಿಲ್ಲ. ಅದ್ಯಾಕೆ ಎಂಬುದು ಮಾತ್ರ ಇನ್ನೂ ನಿಗೂಢವಾಗಿ ಉಳಿದಿದೆ. ಈ ನಿಯಮಾವಳಿ ಉಲ್ಲಂಘನೆಯ ಬಗ್ಗೆ ಪಾಲಿಕೆ ಕಂದಾಯ ಇಲಾಖೆಯ ವಿಶೇಷ ಆಯುಕ್ತರ ಗಮನ ಸೆಳೆದ್ರೆ, ಆತನನ್ನೇ ಸಮರ್ಥಿಸಿಕೊಳ್ಳುವ ಮಾತನಾಡಿದ್ದಾರೆ. ಹಾಗಾದ್ರೆ ಆಡಳಿತಾಧಿಕಾರಿಗಳು ಜಾರಿಗೆ ತಂದ ಬಿಬಿಎಂಪಿ ವರ್ಗಾವಣೆ ಮಾರ್ಗಸೂಚಿಗೆ ಕಿಮ್ಮತ್ತಿಲ್ವಾ? ಇಡೀ ಬಿಬಿಎಂಪಿಗೆ ಒಂದು ಕಾನೂನು, ಈ ಸಿಬ್ಬಂದಿಗೆ ಒಂದು ಕಾನೂನಾ ಎಂಬುದನ್ನು ಬಿಬಿಎಂಪಿ ಹಿರಿಯ ಅಧಿಕಾರಿಗಳೇ ಸ್ಪಷ್ಟಪಡಿಸಬೇಕು.
ಜಯನಗರ ವಿಧಾನಸಭಾ ಕ್ಷೇತ್ರದ ಶಾಸಕರು ಈ ಬಗ್ಗೆ ಏನಂತಾರೆ? :
“ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ವರ್ಗಾವಣೆ ಮಾರ್ಗಸೂಚಿ ಉಲ್ಲಂಘಿಸಿ ಕಂದಾಯ ಮೌಲ್ಯಮಾಪಕ ವಿ.ರಾಘವೇಂದ್ರ ಎಂಬ ವ್ಯಕ್ತಿ ಕಳೆದ 28 ವರ್ಷಗಳಿಂದಲೂ ವಿವಿಧ ಹುದ್ದೆಗಳಿಗೆ ಮುಂಬಡ್ತಿ ಹೊಂದಿದರೂ ಕೇಂದ್ರ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವುದಕ್ಕೆ ಪಾಲಿಕೆ ಅವಕಾಶ ಮಾಡಿಕೊಟ್ಟಿರುವುದು ದುರ್ದೈವ. ಪಾಲಿಕೆಯಲ್ಲಿ ವೃಂದ ಮತ್ತು ನೇಮಕಾತಿ ನಿಯಮಾವಳಿ ಪ್ರಕಾರ 139 ಮೌಲ್ಯಮಾಪಕರ ಹುದ್ದೆಗಳು ಮಂಜೂರಾಗಿದೆ. ಆ ಪೈಕಿ 109 ಮೌಲ್ಯಮಾಪಕರು ವಿವಿಧ ಕಚೇರಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರೆಲ್ಲರನ್ನು ಬಿಟ್ಟು ಈ ವ್ಯಕ್ತಿಯೊಬ್ಬನನ್ನೇ ಇಷ್ಟು ದೀರ್ಘಾವಧಿ ಕೇಂದ್ರ ಕಚೇರಿಯಲ್ಲಿ ಮುಂದುವರೆಸುತ್ತಿರುವುದು ಅಧಿಕಾರ ದುರುಪಯೋಗಕ್ಕೆ ಕಾರಣವಾಗಿದೆ. ಕೂಡಲೇ ಪಾಲಿಕೆ ಮುಖ್ಯ ಆಯುಕ್ತರು ಇವರು ಇಷ್ಟು ವರ್ಷ ಕೇಂದ್ರ ಕಚೇರಿಯಲ್ಲಿ ಕಾರ್ಯನಿರ್ವಹಿಸಿದ ಬಗ್ಗೆ ತನಿಖೆ ನಡೆಸಿ ಕೂಡಲೇ ರಾಘವೇಂದ್ರ ಅವರನ್ನು ಬೇರೆಡೆ ವರ್ಗಾಯಿಬೇಕು. ಇಲ್ಲವಾದಲ್ಲಿ ಈ ಸಂಬಂಧ ಲೋಕಾಯುಕ್ತರಿಗೆ ತನಿಖೆ ನಡೆಸುವಂತೆ ಕೋರಿ ದೂರು ನೀಡುತ್ತೇನೆ.”
- ಸಿ.ಕೆ.ರಾಮಮೂರ್ತಿ, ಶಾಸಕರು, ಜಯನಗರ ವಿಧಾನಸಭಾ ಕ್ಷೇತ್ರ (ಬಿಬಿಎಂಪಿ ಮಾಜಿ ಕೌನ್ಸಿಲರ್)
“ಬೆಂಗಳೂರು ವೈರ್” ಡಿಜಿಟಲ್ ವೆಬ್ ನ್ಯೂಸ್ ಪೋರ್ಟೆಲ್ಲಿನ ಸೋಶಿಯಲ್ ಮೀಡಿಯಾ ಪೇಜ್ ಹಾಗೂ Google News ಗಳಿಗೆ ಉಚಿತವಾಗಿ Subscribe ಆಗಲು Facebook, Telegram, Twitter, Youtube, Whatsup Channel ಗೆ ಜಾಯಿನ್ ಆಗಲು ಇವುಗಳ ಲಿಂಕ್ ಮೇಲೆ ಕ್ಲಿಕ್ ಮಾಡಿ.