ಅಯೋಧ್ಯೆ, ಜ.22 www.bengaluruwire.com : ಕೋಟ್ಯಾಂತರ ಭಾರತೀಯರ ಕನಸು ನನಸಾಗಿದೆ. ಅಯೋಧ್ಯೆಯಲ್ಲಿ, ರಾಮಜನ್ಮಭೂಮಿಯಲ್ಲಿ ಪ್ರಭು ಶ್ರೀರಾಮ ವಿರಾಜಮಾನನಾಗಿದ್ದಾನೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಶ್ರೀ ಬಾಲರಾಮನ ಮೂರ್ತಿಯ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ.
ಇನ್ನೊಂದೆಡೆ ಬೆಂಗಳೂರ ಸೇರಿದಂತೆ ದೇಶ ವಿದೇಶಗಳಲ್ಲಿ ರಾಮನಾಮ ಜಪ, ಭಗವಾಧ್ವಜ ಹಾರಾಡುತ್ತಾ ಶ್ರಿರಾಮನ ಆದರ್ಶ ಎಲ್ಲೆಡೆ ಮತ್ತೊಮ್ಮೆ ಪಸರಿಸಿತು. ದೇಶಾದ್ಯಂತ ಅಯೋಧ್ಯೆಗೆ ಬಂದಿದ್ದ ನೂರಾರು ಸಂತರು, ಮಠಾಧೀಶರು, ಗಣ್ಯರ ಸಮಕ್ಷಮ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ಇಂದು ಮಧ್ಯಾಹ್ನ 12.15 ರಿಂದ 12.45 ರ ನಡುವೆ ರಾಮ್ ಲಲ್ಲಾ ದೇವಾಲಯದ ಪ್ರತಿಷ್ಠಾಪನೆಯ ಧಾರ್ಮಿಕ ವಿಧಿ ವಿಧಾನಗಳನ್ನು ಪೂರೈಸಿದರು. ಹಿಂದೂ ಪುರಾಣಗಳ ಪ್ರಕಾರ, ಭಗವಾನ್ ರಾಮನು ಅಭಿಜಿತ್ ಮುಹೂರ್ತ, ಮೃಗಶಿರ್ಷ ನಕ್ಷತ್ರ, ಅಮೃತ ಸಿದ್ಧಿ ಯೋಗ ಮತ್ತು ಸರ್ವಾರ್ಥ ಸಿದ್ಧಿ ಯೋಗದ ಸಂಗಮದಲ್ಲಿ ಜನಿಸಿದನೆಂದು ಪ್ರತೀತಿಯಿದೆ.
ದೇವಾಲಯದಲ್ಲಿ ಭಕ್ತರಿಗೆ ಬೆಳಿಗ್ಗೆ 7 ರಿಂದ 11.30 ರವರೆಗೆ ಹಾಗೂ ಮಧ್ಯಾಹ್ನ 2 ರಿಂದ ಸಂಜೆ 7 ರವರೆಗೆ ಶ್ರೀ ರಾಮದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ.
ರಾಜಧಾನಿ ಬೆಂಗಳೂರಿನಲ್ಲಿ ರಸ್ತೆ, ರಸ್ತೆ, ಬೀದಿ ಬೀದಿಗಳಲ್ಲಿ ಕೇಸರಿ ಬಾವುಟ, ಭಗವಾಧ್ವಜ ಎಲ್ಲೆಡೆ ಕಂಡುಬಂದಿತ್ತು. ರಾಮಭಕ್ತರು ಶ್ರೀರಾಮ ಫೊಟೊ ಇಟ್ಟು ಪೂಜೆ ಸಲ್ಲಿಸುವ ದೃಶ್ಯ ಸಾಮಾನ್ಯವಾಗಿತ್ತು. ಪ್ರಾಣ ಪ್ರತಿಷ್ಠೆ ಸಂದರ್ಭದಲ್ಲಿ ನಗರದೆಲ್ಲಡೆ ವಾಹನ ಮತ್ತು ಜನಸಂಚಾರ ವಿರಳವಾಗಿತ್ತು. ಎಲ್ಲರೂ ಟಿವಿಯಲ್ಲಿ ಅಯೋಧ್ಯೆಯ ನೇರ ಪ್ರಸಾರ ಕಾರ್ಯಕ್ರಮವನ್ನು ವೀಕ್ಷಿಸುತ್ತಿದ್ದರು. ಶ್ರೀ ರಾಮ್ ಜೈ ರಾಮ್, ಜೈ ಶ್ರೀ ರಾಮ್ ಘೋಷಣೆ ಎಲ್ಲಡೆ ಮೊಳಗುತ್ತಿತ್ತು.