ಬೆಂಗಳೂರು, ಜ.18 www.bengaluruwire.com : ಅಂತರ್ ರಾಜ್ಯಗಳಲ್ಲಿ 100ಕ್ಕೂ ಅಧಿಕ ಬೋಗಸ್ ಜಿಎಸ್ ಟಿ (GST) ನೋಂದಣಿ ಪ್ರಕರಣಗಳನ್ನು ಪತ್ತೆಹಚ್ಚಿರುವ ಕರ್ನಾಟಕ ಕರ್ನಾಟಕ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು (Karnataka Commercial Tax Officers), 1008 ಕೋಟಿ ರೂ. ನಕಲಿ ಬಿಲ್ಲುಗಳನ್ನು ಸೃಷ್ಟಿಸಿ ಸರ್ಕಾರಕ್ಕೆ ತೆರಿಗೆ ವಂಚನೆ ಮಾಡುತ್ತಿದ್ದ ಪ್ರಕರಣವನ್ನು ಬೇಧಿಸಿದ್ದಾರೆ.
ಈ ದೊಡ್ಡ ವಂಚನೆ ಜಾಲದಿಂದ ಸುಮಾರು 180 ಕೋಟಿ ರೂ.ಗಳಷ್ಟು, ಕಾನೂನು ಬಾಹಿರ ಹೂಡುವಳಿ ತೆರಿಗೆ (Input Tax Credit) ಪಡೆದುಕೊಂಡು ಸರ್ಕಾರಕ್ಕೆ ತೆರಿಗೆ ನಷ್ಟ ಉಂಟು ಮಾಡಿರುವ ಅಂಶವನ್ನು ಅಧಿಕಾರಿಗಳು ಬಯಲಿಗೆಳೆದಿದ್ದಾರೆ.
ಈ ಸಂಬಂಧ ಜಿಎಸ್ ಟಿ ತೆರಿಗೆ ತಪ್ಪಿಸಿ ಮೋಸ ಮಾಡುತ್ತಿದ್ದ ಪ್ರಮುಖ ಸೂತ್ರದಾರ ಮೊಹಮ್ಮದ್ ಸಿದ್ದಿಕ್ ಎಂಬಾತನನ್ನು ಹಿಡಿಯುವಲ್ಲಿ ಯಶಸ್ವಿಯಾಗಿದೆ. ಈ ವ್ಯಕ್ತಿಯು ನಕಲಿ ದಾಖಲೆಗಳನ್ನು ಸೃಷ್ಟಿಸಿ ಬೋಗಸ್ ಜಿಎಸ್‌ಟಿ ನೋಂದಣಿಗಳನ್ನು ಪಡೆದುಕೊಂಡು ಕೇರಳ, ತಮಿಳುನಾಡು ಹಾಗೂ ಕರ್ನಾಟಕ ರಾಜ್ಯಗಳಲ್ಲಿ ಸ್ಟ್ಯಾಪ್ ವ್ಯವಹಾರವನ್ನು ನಡೆಸುತ್ತಿದ್ದ.
ಅಲ್ಲದೆ ಮೊಹಮ್ಮದ್ ಸಿದ್ದಿಕ್ ಬೋಗಸ್ ಜಿಎಸ್ ಟಿ ನೋಂದಣಿ ಸಂಖ್ಯೆಗಳನ್ನು ಆಧರಿಸಿ ನಕಲಿ ತೆರಿಗೆ ಬಿಲ್ಲುಗಳನ್ನು ಸೃಷ್ಟಿಸಿ ಸರ್ಕಾರಕ್ಕೆ ತೆರಿಗೆ ಪಾವತಿಸುತ್ತಿರಲಿಲ್ಲ. ಆದರೂ ವಂಚನೆಯಿಂದ ಹೂಡುವಳಿ ತೆರಿಗೆ ಪಡೆದು ಸರ್ಕಾರಕ್ಕೆ ತೆರಿಗೆ ನಷ್ಟ ಉಂಟು ಮಾಡುವುದನ್ನು ರಾಜ್ಯದ ವಾಣಿಜ್ಯ ತೆರಿಗೆ ಅಧಿಕಾರಿಗಳು ಸಫಲರಾಗಿದ್ದಾರೆ.
ಬೆಂಗಳೂರಿನ ವಾಣಿಜ್ಯ ತೆರಿಗೆಗಳ ಜಾಗೃತ ವಿಭಾಗದ ಜಂಟಿ ಆಯುಕ್ತರ ನೇತೃತ್ವದಲ್ಲಿ, ಕೇರಳ ರಾಜ್ಯದ ಜಿಎಸ್‌ಟಿ ಅಧಿಕಾರಿಗಳ ಸಹಯೋಗದಿಂದ ಕೈಗೊಂಡ ಈ ಕಾರ್ಯಾಚರಣೆಯು ಸತತ ಎರಡು ದಿನಗಳ ಕಾಲ ನಡೆಯಿತು. ಈ ಸಂಬಂಧ ಜ.17 ಬುಧವಾರ ಅಂತರ್ ರಾಜ್ಯ ತೆರಿಗೆ ವಂಚನೆ ಜಾಲದ ಪ್ರಮುಖ ವ್ಯಕ್ತಿಯಾದ ಮೊಹಮ್ಮದ್ ಸಿದ್ದಿಕ್ ಬಂಧಿಸಲಾಗಿದೆ.
ಹೇಗೆ ತೆರಿಗೆ ವಂಚನೆ ಮಾಡಲಾಗುತ್ತಿತ್ತು? :
ತೆರಿಗೆ ವಂಚನೆ ಚಾಲವು ತನ್ನ ಕಾರ್ಯಾಚರಣೆಯನ್ನು ಕೇರಳ ಮತ್ತು ತಮಿಳುನಾಡು ರಾಜ್ಯಗಳಿಗೆ ವಿಸ್ತರಿಸಿ ಬೋಗಸ್ ಜಿಎಸ್‌ಟಿ ನೋಂದಣಿ ಪಡೆದು, ನಕಲಿ ಜಿಲ್ಲುಗಳನ್ನು ಸೃಷ್ಟಿಸುತ್ತಿತ್ತು. ಕರ್ನಾಟಕದಲ್ಲಿ ನೋಂದಾಯಿತಗೊಂಡಿರುವ ಬೋಗಸ್ ತೆರಿಗೆ ಪಾವತಿದಾರರಿಗೆ ನಕಲಿ ಹೂಡುವಳಿ ತೆರಿಗೆ (Bogus Input Tax Credit) ನ್ನು ಕಾನೂನು ಬಾಹಿರವಾಗಿ ವರ್ಗಾಯಿಸಲು ಅನುವು ಮಾಡಿಕೊಡುತ್ತಿತ್ತು.
ಈ ಹುಟ್ಟುವಳಿ ತೆರಿಗೆ ಪಾವತಿಸುವುದನ್ನು ತಪ್ಪಿಸಿ, ಸರ್ಕಾರದ ರಾಜ್ಯಸ್ವಕ್ಕೆ ಗಣನೀಯ ಪ್ರಮಾಣದಲ್ಲಿ ನಷ್ಟವನ್ನು ಉಂಟು ಮಾಡಿದ್ದು ಕಂಡುಬಂದಿರುತ್ತದೆ. ಈ ಕಾರ್ಯಾಚರಣೆಯಲ್ಲಿ ನೆರೆ ರಾಜ್ಯಗಳೆರಡೂ ಎಲ್ಲ ರೀತಿಯ ಬೆಂಬಲವನ್ನು ನೀಡಿ ಕಾರ್ಯಾಚರಣೆಯನ್ನು ಯಶಸ್ವಿಗೊಳಿಸಲು ಸಹಕಾರಿಯಾಗಿರುತ್ತವೆ ಎಂದು ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ಬೆಂಗಳೂರು ವೈರ್ ಗೆ ತಿಳಿಸಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಒಟ್ಟು 60 ಅಧಿಕಾರಿಗಳು ಭಾಗಿಯಾಗಿದ್ದರು. ಆ ಮೂಲಕ ತೆರಿಗೆ ವಂಚನಾ ಜಾಲದ ವ್ಯವಸ್ಥಿತವಾದ ಕಾರ್ಯ ನಿರ್ವಹಣಾ ವ್ಯವಸ್ಥೆಯನ್ನು ಆಚೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೋಸದ ಚಟುವಟಿಕೆಗಳಲ್ಲಿ ಕೆಲ ಜಿಎಸ್‌ಟಿ ತೆರಿಗೆ ಸಲಹೆಗಾರರು ಹಾಗೂ ಲೆಕ್ಕ ಪರಿಶೋಧಕರು (Charted Accountants – CA) ಭಾಗಿಯಾಗಿರುವುದು ಕಂಡು ಬಂದಿರುತ್ತದೆ ಎಂದು ವಾಣಿಜ್ಯ ತೆರಿಗೆ ಅಧಿಕಾರಿಗಳು ಹೇಳಿದ್ದಾರೆ.
ಇಲಾಖೆಯು ಮುಂಬರುವ ದಿನಗಳಲ್ಲಿ ಇಂತಹ ವಂಚನೆ ಪ್ರಕರಣಗಳನ್ನು ಪತ್ತೆ ಹಚ್ಚಿ, ಎಲ್ಲ ರೀತಿಯ ಕಟ್ಟುನಿಟ್ಟಿನ ಕ್ರಮಗಳನ್ನು ಜರುಗಿಸಲು ಸನ್ನದ್ಧವಾಗಿರುತ್ತದೆ ಎಂದು ತಿಳಿಸಿದೆ.