ಅಯೋಧ್ಯೆ(ಉತ್ತರ ಪ್ರದೇಶ), ಜ.16 www.bengaluruwire.com : ಮೈದೂರಿನ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತನೆಯ ಬಾಲರಾಮನ ವಿಗ್ರಹ ಅಯೋಧ್ಯೆಯ ರಾಮ ಮಂದಿರದ ಗರ್ಭಗುಡಿಯಲ್ಲಿ ಜ.22 ರಂದು ಪ್ರಾಣ ಪ್ರತಿಷ್ಠಾಪನೆಯಾಗಲಿದೆ. ಅದಕ್ಕಾಗಿ ಇಂದಿನಿಂದ ಅಯೋಧ್ಯೆಯ ಭವ್ಯ ರಾಮಮಂದಿರದಲ್ಲಿ ರಾಮ ಲಲ್ಲಾನ ವಿಗ್ರಹ ಪ್ರತಿಷ್ಠಾಪನೆಗೆ ಸಂಬಂಧಿಸಿದ ಪೂರ್ವಭಾವಿ ಧಾರ್ಮಿಕ ವಿಧಿ ವಿಧಾನಗಳು ಆರಂಭವಾಗುತ್ತಿದೆ.
ಮೂವರು ಶಿಲ್ಪಿಗಳು ಸಿದ್ಧಪಡಿಸಿರುವ ವಿಗ್ರಹಗಳ ಪೈಕಿ ಅರುಣ್ ಯೋಗಿರಾಜ್ ಕೆತ್ತನೆಯ ಶ್ರೀರಾಮನ ವಿಗ್ರಹವೇ ಅಂತಿಮವಾಗಿ ಆಯ್ಕೆಯಾಗಿದೆ ಎಂದು ಬಿಜೆಪಿಯ ಕೆಲವು ಹಿರಿಯ ನಾಯಕರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿದ್ದರು. ಆದರೆ ಈ ತನಕ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಅಧಿಕೃತವಾಗಿ ಘೋಷಣೆ ಮಾಡಿಲ್ಲ.
ಜ.16ರಿಂದ 21ರ ತನಕ ವಿವಿಧ ಧಾರ್ಮಿಕ ಕಾರ್ಯಕ್ರಮಗಳು :
ಜ.16ರಿಂದ 21ನೇ ತಾರೀಖಿನವೆರೆಗೆ ನಡೆಯುವ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮಕ್ಕೆ ಪೂರ್ವಭಾವಿಯಾಗಿ ವಿವಿಧ ರೀತಿಯ ಆಚರಣೆಗಳನ್ನು ಹಿಂದೂ ಸಂಪ್ರದಾಯ, ಪದ್ಧತಿಗಳ ಪ್ರಕಾರ ಕೈಗೊಳ್ಳಲಾಗುತ್ತದೆ. ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಉಸ್ತುವಾರಿಯಲ್ಲಿ ಈ ಎಲ್ಲ ಕಾರ್ಯಕ್ರಮಗಳು ಹಮ್ಮಿಕೊಳ್ಳಲಾಗಿದೆ.
ಸರಯೂ ನದಿ ದಡದಲ್ಲಿ ದಶವಿಧ ಸ್ನಾನ, ವಿಷ್ಣು ಪೂಜೆ, ಗೋವು ಅರ್ಪಣಾ ಕಾರ್ಯಗಳು ಶಾಸ್ರೋಕ್ತವಾಗಿ ನಡೆಯಲಿವೆ. ಜನವರಿ 18ರಂದು ಗರ್ಭಗುಡಿಯಲ್ಲಿ ರಾಮ ಲಲ್ಲಾ ವಿಗ್ರಹವನ್ನು ಇರಿಸಲಾಗುತ್ತದೆ. ಜ.22ರಂದು ಮಧ್ಯಾಹ್ನ 12.20ಕ್ಕೆ ಅಭಿಜಿನ್ ಮುಹೂರ್ತದಲ್ಲಿ ವಿಗ್ರಹದ ಪ್ರತಿಷ್ಠಾಪನಾ ಕಾರ್ಯ ನೆರವೇರಲಿದೆ. ವಾರಣಾಸಿಯ ಗಣೇಶ್ವರ ಶಾಸ್ತ್ರಿ ದ್ರಾವಿಡ್ ಅವರು ಈ ಸಂಬಂಧ ಶುಭಮುಹೂರ್ತ ನಿಗದಿ ಮಾಡಿದ್ದಾರೆ.
ಜ.23ರಿಂದಲೇ ಭಕ್ತರಿಗೆ ಸಾರ್ವಜನಿಕರಿಗೆ ದರ್ಶನ :
ಶ್ರೀರಾಮನ ವಿಗ್ರಹದ ತೂಕ ಅಂದಾಜು 150ರಿಂದ 200 ಕೆ.ಜಿ ತೂಕ ಹೊಂದಿದೆ. ಪ್ರತಿಷ್ಠಾಪನಾ ವಿಧಿ ವಿಧಾನಗಳನ್ನು 121 ಆಚಾರ್ಯರು ನೆರವೇರಿಸುವರು. ಕಾಶಿಯ ಲಕ್ಷ್ಮೀಕಾಂತ್ ದೀಕ್ಷಿತ್ ಮುಖ್ಯ ಗುರುಗಳಾಗಿ ಉಪಸ್ಥಿತರಿರಲಿದ್ದಾರೆ ಎಂದು ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ರಾಯ್ ತಿಳಿಸಿದ್ದಾರೆ. ಜನವರಿ 23ರಿಂದ ಭಕ್ತರು ಹಾಗು ಸಾರ್ವಜನಿಕರಿಗೆ ದೇಗುಲದಲ್ಲಿ ಶ್ರೀರಾಮನ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಭಗವಾನ್ ಶ್ರೀ ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆ ಮಾಡುವ ಗರ್ಭಗುಡಿಯಲ್ಲಿ ಚಿನ್ನದ ಬಾಗಿಲುಗಳ ಸ್ಥಾಪನೆಯೊಂದಿಗೆ ನೆಲ ಮಹಡಿಯಲ್ಲಿ ಎಲ್ಲಾ ಚಿನ್ನದ ಬಾಗಿಲುಗಳ ಸ್ಥಾಪನೆ ಕಾರ್ಯ ಪೂರ್ಣಗೊಂಡಿದೆ ಎಂದು ಟ್ರಸ್ಟ್ ಅಧಿಕೃತ ಎಕ್ಸ್ ಖಾತೆಯಲ್ಲಿ ಪ್ರಕಟಿಸಿದೆ.
ವಿವಿಧ ಧಾರ್ಮಿಕ ಕಾರ್ಯಕ್ರಗಳ ವಿವರ ಈ ಕೆಳಕಂಡಂತಿದೆ :
ಜನವರಿ 16: ಪ್ರಾಯಶ್ಚಿತ್ತ, ಕರ್ಮಕುಟಿ ಪೂಜೆ
ಜನವರಿ 17: ದೇವಾಲಯದ ಆವರಣಕ್ಕೆ ಪ್ರತಿಮೆ ಪ್ರವೇಶ
ಜನವರಿ 18 (ಸಂಜೆ): ತೀರ್ಥಪೂಜೆ, ಜಲಯಾತ್ರೆ, ಜಲ ದಿವಸ್, ಗಂಧದಿವಸ್
ಜನವರಿ 19 (ಬೆಳಿಗ್ಗೆ): ಕೇಶರದಿವಸ್, ಧೃತದಿವಸ್
ಜನವರಿ 19 (ಸಂಜೆ): ಧಾನ್ಯದಿವಸ್
ಜನವರಿ 20 (ಬೆಳಿಗ್ಗೆ): ಶಕ್ರದಿವಸ್, ಫಾಲಾದಿವಸ್
ಜನವರಿ 20 (ಸಂಜೆ): ಪುಷ್ಪಾ ದಿವಸ್
ಜನವರಿ 21 (ಬೆಳಿಗ್ಗೆ): ಮಧ್ಯಾದಿವಸ್
ಜನವರಿ 21 (ಸಂಜೆ): ಶಯ್ಯಾದಿವಸ್
ಪ್ರಮುಖ ಗಣ್ಯರು ಭಾಗಿ :
ಪ್ರಧಾನಮಂತ್ರಿ ನರೇಂದ್ರ ಮೋದಿ, ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್, ಉತ್ತರ ಪ್ರದೇಶದ ರಾಜ್ಯಪಾಲರಾದ ಆನಂದಿಬೆನ್ ಪಟೇಲ್, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದಂತೆ ಹಲವು ಗಣ್ಯರು ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಪ್ರಾಣಪ್ರತಿಷ್ಠಾಪನಾ ಕಾರ್ಯಕ್ರಮಕ್ಕೆ ವೈವಿಧ್ಯಮಯ ಪ್ರಾತಿನಿಧ್ಯ:
ಭಾರತೀಯ ಆಧ್ಯಾತ್ಮಿಕ ಪರಂಪರೆಯ 150 ಕ್ಕೂ ಹೆಚ್ಚು ಎಲ್ಲಾ ಆಚಾರ್ಯರು, ಧರ್ಮ, ಪಂಥ, ಆರಾಧನಾ ವ್ಯವಸ್ಥೆ, ಸಂಪ್ರದಾಯ, ಸಂಪ್ರದಾಯಗಳ ಸಂತರು, ಮಹಾಮಂಡಲೇಶ್ವರರು, ಮಂಡಲೇಶ್ವರರು, ಶ್ರೀಮಹಾಂತರು, ಮಹಾಂತರು, ನಾಗಗಳು, ಹಾಗೆಯೇ 50 ಕ್ಕೂ ಹೆಚ್ಚು ಆದಿವಾಸಿಗಳು, ಗಿರಿವಾಸಿಗಳ ಪ್ರಮುಖರು, ತತವಾಸಿ, ದ್ವಿಪವಾಸಿ ಬುಡಕಟ್ಟು ಸಂಪ್ರದಾಯಗಳು ಭವ್ಯ ಶ್ರೀ ರಾಮ ಜನ್ಮಭೂಮಿ ಮಂದಿರದ ಆವರಣದಲ್ಲಿ ಪ್ರಾಣ ಪ್ರತಿಷ್ಠಾ ಸಮಾರಂಭವನ್ನು ವೀಕ್ಷಿಸಲಿದ್ದಾರೆ.
ಒಂದು ದೇವಸ್ಥಾನ ನಾನಾ ಸಂಪ್ರದಾಯಗಳು: ಸಂಪ್ರದಾಯಗಳಲ್ಲಿ ಶೈವ, ವೈಷ್ಣವ, ಶಾಕ್ತ, ಗಣಪತ್ಯ, ಪತ್ಯ, ಸಿಖ್, ಬೌದ್ಧ, ಜೈನ, ದಶನಂ, ಶಂಕರ್, ರಾಮಾನಂದ್, ರಾಮಾನುಜ್, ನಿಂಬಾರ್ಕ, ಮಾಧ್ವ, ವಿಷ್ಣು ನಾಮಿ, ರಾಮಸನೇಹಿ, ಘೀಸಾಪಂಥ್, ಗರೀಬ್ದಾಸಿ, ಗೌಡಿಯ, ಕಬೀರಪಂಥಿ, ವಾಲ್ಮೀಕಿ, ವಾಲ್ಮೀಕಿ (ಅಸ್ಸಾಂ), ಮಾಧವ್ ದೇವ್, ಇಸ್ಕಾನ್, ರಾಮಕೃಷ್ಣ ಮಿಷನ್, ಚಿನ್ಮಯ ಮಿಷನ್, ಭಾರತ ಸೇವಾಶ್ರಮ ಸಂಘ, ಗಾಯತ್ರಿ ಪರಿವಾರ, ಅನುಕೂಲ್ ಚಂದ್ರ, ಠಾಕೂರ್ ಪರಂಪರಾ, ಒಡಿಶಾದ ಮಹಿಮಾ ಸಮಾಜ, ಅಕಾಲಿ, ನಿರಂಕಾರಿ, ಪಂಜಾಬ್‌ನ ನಾಮಧಾರಿ, ರಾಧಾಸೋಮಿ, ಮತ್ತು ಸ್ವಾಮಿನಾರಾಯಣ, ವಾರಕರಿ, ವೀರ್ ಶಾ ಇತ್ಯಾದಿ ಸಂಪ್ರದಾಯಗಳ ಪ್ರಮುಖರಿಗೆ ಆಹ್ವಾನ ನೀಡಲಾಗಿದೆ.
ಐತಿಹಾಸಿಕ ಬುಡಕಟ್ಟು ಪ್ರಾತಿನಿಧ್ಯ:
ಬೆಟ್ಟಗಳು, ಕಾಡುಗಳು, ಕರಾವಳಿ ಪ್ರದೇಶಗಳು, ದ್ವೀಪಗಳು ಇತ್ಯಾದಿಗಳ ಜನರು ಪ್ರತಿನಿಧಿಸುವ ಬುಡಕಟ್ಟು ಸಂಪ್ರದಾಯಗಳ ಉಪಸ್ಥಿತಿಯಲ್ಲಿ ಶ್ರೀರಾಮಲಲ್ಲಾನ ಪ್ರತಿಷ್ಠಾಪನೆಯಾಗಲಿದೆ. ಇದು ಭಾರತದ ಇತ್ತೀಚಿನ ಇತಿಹಾಸದಲ್ಲಿ ಮೊದಲ ಬಾರಿಗೆ ನಡೆಯುತ್ತಿದೆ.
ಕಳೆದ 70 ವರ್ಷಗಳಿಂದ ಪೂಜಿಸಲಾಗುತ್ತಿರುವ ರಾಮಲಲ್ಲಾನ ವಿಗ್ರಹವನ್ನು ನೂತನ ದೇವಾಲಯದ ಗರ್ಭಗುಡಿಯಲ್ಲಿ ಇಟ್ಟು ಪೂಜಿಸಲಾಗುತ್ತದೆ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ತಿಳಿಸಿದೆ.