ಬೆಂಗಳೂರು ಜ.16 www.bengaluruwire.com : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯ ಪೊಲೀಸ್ ಮಹಾನಿರ್ದೇಶಕರ ಕಚೇರಿಯಲ್ಲಿ ಮಂಗಳವಾರ ನಡೆದ ಹಿರಿಯ ಪೊಲೀಸ್ ಅಧಿಕಾರಿಗಳ ವಾರ್ಷಿಕ ಸಮಾವೇಶದಲ್ಲಿ ಭಾಗವಹಿಸಿ ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳದ ಮೊಬೈಲ್ ಲ್ಯಾಬ್, ವಿಧಿ ವಿಜ್ಞಾನ ಮೊಬೈಲ್ ಲ್ಯಾಬ್ ವಾಹನ, ಮೊಬೈಲ್ ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್ ವಾಹನದ ಉನ್ನತೀಕರಣದ ಕಾರ್ಯಕ್ಷಮತೆಯನ್ನು ಪರಿಶೀಲಿಸಿದರು.
ಬಳಿಕ ಪೊಲೀಸ್ ಐಟಿ-V2, ಐಟಿಪಿ (ITPA) ಸರಳ ಆಪ್ , ಪೊಲೀಸ್ ಮಿತ್ರ ಚಾಟ್ ಬಾಟ್, ಸಿಜಿ ನೋಂದಣಿ ಪೋರ್ಟಲ್ (CG Register Portal), ರಾಜ್ಯ ಪೊಲೀಸ್ ಕೃತಕ ಬುದ್ದಿ ಮತ್ತೆ ತಂತ್ರಾಂಶ (Karnataka Police AI Software), ಆರ್ಥಿಕ ಇಂಟೆಲಿಜೆನ್ಸ್ ತಂತ್ರಾಂಶ (Economic Intelligence Software)ಗಳನ್ನು ಬಿಡುಗಡೆ ಮಾಡಿದರು. ಇದೇ ಹೊತ್ತಿನಲ್ಲಿ ಸಂಕ್ಷಿಪ್ತ ಸೈಬರ್ ಅಪರಾಧ ಕೈಪಿಡಿಯನ್ನು ಲೋಕಾರ್ಪಣೆಗೊಳಿಸಿದರು.
ವರ್ಗಾವಣೆಗಳಿಗೆ ಪೊಲೀಸ್ ಅಧಿಕಾರಿಗಳು ಹಾತೊರೆಯುವುದು, ಜಾತಿ ಬಳಸುವುದು ಅತ್ಯಂತ ಕೆಟ್ಟದ್ದು. ಹಾಗೆ ಮಾಡಬೇಡಿ. ನಮ್ಮದು ಜಾತ್ಯತೀತ ರಾಷ್ಟ್ರ. ನಾವುಗಳೇ ನಮ್ಮ ಸಂವಿಧಾನದ ಆಶಯಗಳನ್ನು ಬಲಪಡಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ತಿಳಿ ಹೇಳಿದರು.
ಕರ್ನಾಟಕ ನಾಮಕರಣಗೊಂಡು, ಏಕೀಕರಣದ 50 ವರ್ಷದ ನೆನಪಿಗಾಗಿ ಸುವರ್ಣ ಪೊಲೀಸ್ ಭವನ ಕಟ್ಟಡ ನಿರ್ಮಾಣಕ್ಕೆ ಬಜೆಟ್ ನಲ್ಲಿ ಹಣ ನೀಡಲಾಗುವುದು. ಖಾಲಿ ಇರುವ ಪೊಲೀಸ್ ಹುದ್ದೆಗಳನ್ನೂ ಭರ್ತಿ ಮಾಡಲಾಗುವುದು ಎಂದು ಇದೇ ಸಂದರ್ಭದಲ್ಲಿ ಭರವಸೆ ನೀಡಿದರು.
ಕಳ್ಳತನ ಹೆಚ್ಚಾಗುತ್ತಿದೆ ಎಂದರೆ ಗಸ್ತು ವ್ಯವಸ್ಥೆ, ಹೋಯ್ಸಳ ಸಿಬ್ಬಂದಿ ಮತ್ತು ಠಾಣಾಧಿಕಾರಿಗಳು ವೈಫಲ್ಯರಾಗಿದ್ದಾರೆ ಎಂದೇ ಅರ್ಥ. ಇದೇ ಸ್ಥಿತಿ ಮುಂದುವರೆದರೆ ಡಿಸಿಪಿಗಳನ್ನು ಕರ್ತವ್ಯಲೋಪಕ್ಕೆ ಹೊಣೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ ನೀಡಿದರು.
ಗೃಹ ಸಚಿವರಾದ ಜಿ.ಪರಮೇಶ್ವರ್, ಗೃಹ ಕಾರ್ಯದರ್ಶಿ ಉಮಾಶಂಕರ್, ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಅಲೋಕ್ ಮೋಹನ್, ಮುಖ್ಯಮಂತ್ರಿಗಳ ಕಾರ್ಯದರ್ಶಿ ತ್ರಿಲೋಕ್ ಚಂದ್ರ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ಗೋವಿಂದರಾಜು ಮತ್ತು ನಸೀರ್ ಅಹಮದ್ ಅವರು ಉಪಸ್ಥಿತರಿದ್ದರು.
ಕರ್ನಾಟಕ ಏಕೀಕರಣದ ಸುವರ್ಣ ಮಹೋತ್ಸವದ ಅಂಗವಾಗಿ ಪೊಲೀಸ್ ಇಲಾಖೆಗೆ ಮುಖ್ಯಮಂತ್ರಿಗಳ ಮಹತ್ವದ ಘೋಷಣೆ :
*ರಾಜ್ಯದ ಎಲ್ಲಾ ಪೊಲೀಸ್ ಸಿಬ್ಬಂದಿಗೆ ಬೆಳ್ಳಿ ಪದಕ
*ರಾಜ್ಯದ ಎಲ್ಲಾ ಪೊಲೀಸರ ವೈದ್ಯಕೀಯ ವೆಚ್ಚ 1000 ದಿಂದ 1500 ಕ್ಕೆ ಹೆಚ್ಚಿಸಲಾಗುವುದು.
* ಸಿಇಎನ್ (Cyber Economic and Narcotics Crime Police Station -CEN) ಠಾಣಾಧಿಕಾರಿಗಳ ಹುದ್ದೆಯನ್ನು ಎಸಿಪಿ (ACP) ಮತ್ತು ಡಿಸಿಪಿ (DCP) ಮಟ್ಟಕ್ಕೆ ಉನ್ನತೀಕರಣ.
*ಬೆಂಗಳೂರು ನಗರದಲ್ಲಿ 8 ಅಡಿಷನಲ್ ಡಿಸಿಪಿ ಹುದ್ದೆಗಳನ್ನು ಹೆಚ್ಚುವರಿಯಾಗಿ ಸೃಜಿಸಲಾಗುವುದು.
*ರಾಜ್ಯವನ್ನು ಡ್ರಗ್ ಮುಕ್ತ ಗೊಳಿಸುವ ದಿಕ್ಕಿನಲ್ಲಿ ಪರಿಣಾಮಕಾರಿ ಕ್ರಮ.