ಮುಂಬೈ, ಜ.15 www.bengaluruwire.com : ದೇಶದಲ್ಲಿ 2024ರಲ್ಲಿ ಸಂಕ್ರಾಂತಿ ಹಬ್ಬದ ದಿನವಾದ ಸೋಮವಾರ ಷೇರು ಮಾರುಕಟ್ಟೆ ಹೊಸ ಇತಿಹಾಸ ಬರೆಯಿತು. ಸೋಮವಾರದ ಆರಂಭಿಕ ವಹಿವಾಟಿನಲ್ಲಿ ಹೊಸ ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿದ ಸೆನ್ಸೆಕ್ಸ್ (Sensex) ಮೊದಲ ಬಾರಿಗೆ 73,000 ಮಾರ್ಕ್ ಪಾಯಿಂಟ್ಸ್ ಅನ್ನು ದಾಟಿತು. ಮತ್ತೊಂದೆಡೆ, ನಿಫ್ಟಿ (Nifty) 22,000 ಮಟ್ಟವನ್ನು ದಾಟಿ ಮುಂದೆ ಸಾಗಿದೆ.
ಆರಂಭಿಕ ವಹಿವಾಟಿನಲ್ಲಿ 30 ಷೇರುಗಳ ಬಿಎಸ್‌ಇ ಸೆನ್ಸೆಕ್ಸ್ 720.33 ಪಾಯಿಂಟ್‌ಗಳ ಜಿಗಿದು ಸಾರ್ವಕಾಲಿಕ ಗರಿಷ್ಠ 73,288.78 ಅನ್ನು ತಲುಪಿತ್ತು. ನಿಫ್ಟಿ ಕೂಡ 22,000 ಮೈಲಿಗಲ್ಲನ್ನು ದಾಟಿ 187.4 ಪಾಯಿಂಟ್ ಗಳನ್ನು ಏರಿ ಜೀವಮಾನದ ಗರಿಷ್ಠ 22,081.95 ತಲುಪಿತು. ದಿನದ ಅಂತ್ಯದ ವೇಳೆಗೆ, ಸೆನ್ಸೆಕ್ಸ್ 759.48 ಪಾಯಿಂಟ್‌ಗಳ ಗಣನೀಯ ಏರಿಕೆಯನ್ನು ದಾಖಲಿಸಿದೆ. ಅಂದರೆ ಇದು ಶೇಕಡಾ 1.05 ಏರಿಕೆ ದಾಖಲಿಸಿ, 73,327.94 ಕ್ಕೆ ಮುಕ್ತಾಯವಾಯಿತು. ಅದೇ ಸಮಯದಲ್ಲಿ, ನಿಫ್ಟಿ 202.90 ಪಾಯಿಂಟ್‌ಗಳ ಏರಿಕೆಯನ್ನು ದಾಖಲಿಸಿತು.ಶೇಕಡಾವಾರು ಹೇಳುವುದಾದರೆ 0.93 ಶೇಕಡಾ ಹೆಚ್ಚಳ ಕಂಡು, 22,097.45 ನಲ್ಲಿ ಕೊನೆಗೊಂಡಿತು.
ಬಿಎಸ್‌ಇ ಲಿಸ್ಟೆಡ್ ಕಂಪನಿಗಳ ಮಾರುಕಟ್ಟೆ ಬಂಡವಾಳವು ಹಾಗೂ ಹೂಡಿಕೆದಾರರ ಷೇರು ಮೌಲ್ಯವು ಒಂದೇ ದಿನದ ಅವಧಿಯಲ್ಲಿ (Single Session) ಸುಮಾರು 3 ಲಕ್ಷ ಕೋಟಿ ರೂ.ಗಳಷ್ಟು ಏರಿಕೆಯಾಗಿದೆ. ಹಿಂದಿನ ಸೆಶನ್ ನಲ್ಲಿ ಸುಮಾರು 373 ಲಕ್ಷ ಕೋಟಿ ರೂ.ಗಳಿಂದ ಇಂದು ಸುಮಾರು 376 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ.
ತಾಂತ್ರಿಕ ದೃಷ್ಟಿಕೋನದಿಂದ, ನಿಫ್ಟಿ 22,500 ಮಟ್ಟವನ್ನು ತಲುಪಬಹುದು ಎಂದು ಷೇರುಪೇಟೆಯ ತಙ್ಞರು ನಿರೀಕ್ಷಿಸುತ್ತಿದ್ದಾರೆ. ಷೇರು ಮಾರುಕಟ್ಟೆಯಲ್ಲಿ ಪಾಲ್ಗೊಳ್ಳುವ ಹೂಡಿಕೆದಾರರು ಹೊಸ ದಾಖಲೆಯ ಗರಿಷ್ಠಗಳಿಗೆ ನಿಫ್ಟಿಯನ್ನು ತಮ್ಮ ಹೂಡಿಕೆಯ ಕಾರ್ಯತಂತ್ರವಾಗಿ ಇರಿಸಿಕೊಂಡಿದ್ದಾರೆ. ಡಿಸೆಂಬರ್ ತ್ರೈಮಾಸಿಕದಲ್ಲಿ ದೃಢವಾದ ಗಳಿಕೆಗಳ ಸುತ್ತಲಿನ ಆಶಾವಾದದ ನಿರೀಕ್ಷೆಗಳು ಮತ್ತು ಅಮೆರಿಕ ಫೆಡರಲ್ ರಿಸರ್ವ್‌ನಿಂದ ಬಡ್ಡಿದರ ಕಡಿತದ ಸಂಭಾವ್ಯತೆಯಿಂದ ಈ ಗೂಳಿಯಾಟದ ಪ್ರವೃತ್ತಿ ಕಂಡು ಬಂದಿದೆ ಎಂದು ಹೂಡಿಕೆ ತಙ್ಞರು ವಿಶ್ಲೇಷಿಸಿದ್ದಾರೆ.
ಟೆಕ್ ಮಹೀಂದ್ರಾ (Tech Mahindra), ಎಚ್‌ಸಿಎಲ್ ಟೆಕ್ನಾಲಜೀಸ್, ಇನ್ಫೋಸಿಸ್ (Infosys), ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (TCS), ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್ (HDFC Bank) ಇತರ ಕಂಪನಿಗಳು ಪ್ರಮುಖವಾಗಿ ಇಂದು ಲಾಭ ಗಳಿಸಿದವು.
ಎಚ್ ಸಿಎಲ್ ಟೆಕ್ನಾಲಜೀಸ್ (HCL Technologies) ಶುಕ್ರವಾರದಂದು ಸೇವೆಗಳು (Services) ಮತ್ತು ಸಾಫ್ಟ್‌ವೇರ್ ವ್ಯವಹಾರಗಳು (Software Transactions) ಬೆಳವಣಿಗೆ ಕಂಡ ಹಿನ್ನೆಲೆಯಲ್ಲಿ ಡಿಸೆಂಬರ್ 2023 ಕ್ಕೆ ಕೊನೆಗೊಂಡ ಮೂರು ತಿಂಗಳ ತ್ರೈಮಾಸಿಕ ಆಧಾರದ ಮೇಲೆ 4,350 ಕೋಟಿ ರೂ.ಗಳ ಏಕೀಕೃತ ನಿವ್ವಳ ಲಾಭದಲ್ಲಿ ಶೇಕಡಾ 6.2 ರಷ್ಟು ಹೆಚ್ಚಳವಾಗಿದೆ ಎಂದು ವರದಿ ಮಾಡಿದೆ.
“ಬೆಂಗಳೂರು ವೈರ್” ಡಿಜಿಟಲ್ ವೆಬ್ ನ್ಯೂಸ್ ಪೋರ್ಟೆಲ್ಲಿನ ಸೋಶಿಯಲ್ ಮೀಡಿಯಾ ಪೇಜ್ ಹಾಗೂ Google News ಗಳಿಗೆ ಉಚಿತವಾಗಿ Subscribe ಆಗಲು Facebook, Telegram, Twitter, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.