ಬೆಂಗಳೂರು, ಜ.11 www.bengaluruwire.com : ರಾಜಧಾನಿ ಬೆಂಗಳೂರನ್ನು ಬ್ರಾಂಡ್ ಬೆಂಗಳೂರು ಮಾಡ್ತೀವಿ ಅಂತ ಈಗಿನ ಕಾಂಗ್ರೆಸ್ ಸರ್ಕಾರ ಬಡಾಯಿ ಕೊಚ್ಚಿದ್ದೇ ಬಂತು. ನಾವೀಗ 2024ನೇ ಸಾಲಿನ ಪ್ರಾರಂಭದಲ್ಲಿದ್ದೇವೆ. ಆದರೂ ಸಿಲಿಕಾನ್ ಸಿಟಿಯ ಕಟ್ಟಡ ನಿರ್ಮಾಣ ಕುರಿತಂತೆ ಬಿಬಿಎಂಪಿ ಅನುಸಿರಿಸ್ತಿರೋದು 1995ರ ಸಮಗ್ರ ಅಭಿವೃದ್ಧಿ ಯೋಜನೆ (CDP)ಯ ನಿಬಂಧನೆಗಳನ್ನು ಆಧರಿಸಿರುವ ಬಿಎಂಪಿ 2003ರ ಕಟ್ಟಡ ಉಪವಿಧಿ (BMP Building Bye-laws 2003) ಕಾನೂನು. 21 ವರ್ಷ ಹಳೆಯ ಬಿಲ್ಡಿಂಗ್ ಬೈಲಾಗಳನ್ನು ಇಟ್ಟುಕೊಂಡು ಪಾಲಿಕೆ ಆಡಳಿತ ನಡೆಸ್ತಿರೋ ವಿಷಯ ಹೆಚ್ಚಿನವರಿಗೆ ಗೊತ್ತೇ ಇಲ್ಲ. ಇದರಿಂದ ನಗರ ಜನತೆ ತೊಂದರೆ ಎದುರಿಸುತ್ತಿದ್ದಾರೆ.
ಕಾಲ ಕಾಲಕ್ಕೆ ಬೆಂಗಳೂರಿನ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ನಗರ ಯೋಜನಾ ಪ್ರಾಧಿಕಾರವಾಗಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಪರಿಷ್ಕೃತ ಮಹಾ ಯೋಜನೆಯನ್ನು ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ ಅಧಿನಿಯಮ 1961ರಂತೆ ತಯಾರಿಸಬೇಕು. ಆದರೆ 2007ರಲ್ಲಿ ಜಾರಿಗೆ ಬಂದ 2015ರ ಮಾಸ್ಟರ್ ಪ್ಲಾನ್ ಅವಧಿ ಮುಗಿದು ಎಂಟು ವರ್ಷ ಆಗಿ 9ನೇ ವರ್ಷಕ್ಕೆ ಕಾಲಿಟ್ಟರೂ ಇನ್ನೂ 2015ರ ಮಾಸ್ಟರ್ ಪ್ಲಾನ್ ಆಧಾರವಾಗಿಟ್ಟುಕೊಂಡು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಬಡಾವಣೆ ರಚನೆ, ಭೂ ಪರಿವರ್ತನೆಗೆ ತನ್ನ ನಿರಪೇಕ್ಷಣಾ ಪ್ರಮಾಣಪತ್ರ, ಭೂ ಉಪಯೋಗ ಬದಲಾವಣೆಗೆ ಒಪ್ಪಿಗೆ ಮತ್ತಿತರ ಕಾರ್ಯಗಳನ್ನು ಕೈಗೊಳ್ಳುತ್ತಿದೆ. ಇನ್ನೊಂದೆಡೆ ಬಿಬಿಎಂಪಿಯು ಒಬಿರಾಯನ ಕಾಲದ 2003ನೇ ಸಾಲಿನ ಕಟ್ಟಡ ಉಪವಿಧಿಗಳನ್ನು ಆಧಾರವಾಗಿಟ್ಟುಕೊಂಡು ಕಟ್ಟಡ ನಕ್ಷೆ ಮಂಜೂರಾತಿ, ಸಿಸಿ, ಒಸಿಗಳನ್ನು ನೀಡುತ್ತಿದೆ.
2007ರಲ್ಲಿ ಜಾರಿಗೆ ಬಂದ ಓಬಿರಾಯನ ಕಾಲದ 2015ರ ಮಾಸ್ಟರ್ ಪ್ಲಾನ್ 2024ನೇ ವರ್ಷ ಬಂದರೂ ಇನ್ನೂ ಚಾಲ್ತಿಯಲ್ಲಿದೆ. ಆ ಮಾಸ್ಟರ್ ಪ್ಲಾನ್ ಕೂಡ ವೈಜ್ಞಾನಿಕವಾಗಿ ತಯಾರಿಸದ ಕಾರಣ ಹಾಗೂ ನಾಗರೀಕರಿಗೆ ಅನಕೂವಾಗುವಂತೆ ಅನುಷ್ಠಾನ ಮಾಡಿಲ್ಲ ಹಾಗೂ ವಸತಿ ಪ್ರದೇಶದಲ್ಲಿ ವಾಣಿಜ್ಯ ಚಟುವಟಿಕೆಗಳಿಗೆ ಅವಕಾಶ ಕೊಟ್ಟ ಕಾರಣದಿಂದಾಗಿ ಬೆಂಗಳೂರಿನಲ್ಲಿ ಅಸಮತೋಲಿತ ಅಭಿವೃದ್ಧಿ, ವಾಹನ ದಟ್ಟಣೆ, ಕಸದ ಸಮಸ್ಯೆ, ಉಕ್ಕಿ ಹರಿಯುವ ಮತ್ತು ಆಗಾಗ ಕಟ್ಟಿಕೊಳ್ಳುವ ಒಳಚರಂಡಿ ಅವ್ಯವಸ್ಥೆ, ರಾಜಕಾಲುವೆ ಒತ್ತುವರಿ, ಮಳೆಗಾಲದಲ್ಲಿ ರಸ್ತೆಯಲ್ಲಿ ನೀರು ನಿಂತು ಪ್ರವಾಹ ಪರಿಸ್ಥಿತಿ, ಸಮರ್ಪಕವಾಗಿ ಕುಡಿಯುವ ನೀರು ಪೂರೈಕೆಯಲ್ಲಿ ವೈಫಲ್ಯತೆಗೆ ಕಾರಣವಾಗಿದೆ. ಇದು ಜನರ ಜೀವನ ಗುಣಮಟ್ಟ ದಿನೇ ದಿನೇ ಕುಸಿಯಲು ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಕಾರಣವಾಗಿದೆ.
ಆಟಕ್ಕುಂಟು ಲೆಕ್ಕಕ್ಕಿಲ್ಲದ ಒಸಿ- ಸಿಸಿ ಪ್ರಮಾಣಪತ್ರ :
ಬಿಬಿಎಂಪಿಯ ಕಾಯ್ದೆ 2020 ಜನವರಿ 2021ರಲ್ಲಿ ಜಾರಿಗೆ ಬಂದರೂ ಕಾಯ್ದೆಯ 238ನೇ ಪ್ರಕರಣದಲ್ಲಿ ಸರ್ಕಾರದ ಅನುಮೋದನೆಯಂತೆ ಬಿಲ್ಡಿಂಗ್ ಬೈಲಾ ರಚಿಸಲು ಯೋಜನಾ ವಿಭಾಗಕ್ಕೆ ಅವಕಾಶವಿದೆ. ಆದರೂ ಹೊಸ ಬಿಲ್ಡಿಂಗ್ ಬೈಲಾ ಜಾರಿಗೆ ಬಂದಿಲ್ಲ. ಹೊಸ ಬೈಲಾ ಜಾರಿಗೆ ತರುವ ತನಕ ಹಳೆಯ ಬೈಲಾ ನಿಯಮಾವಳಿ ಅನ್ವಯ (Saving Clause) ಮಾಡಬಹುದು ಎಂಬ ಕಾರಣಕ್ಕೆ ಹೊಸ ಬೈಲಾ ಜಾರಿಗೆ ತರಲು ಸರ್ಕಾರ ನಿರ್ಲಕ್ಷ್ಯ ತೋರಿದೆ. ಹೀಗಾಗಿ ಬಿಬಿಎಂಪಿಯು ನಗರದಲ್ಲಿ ಕಟ್ಟಡ ನಿರ್ಮಾಣಕ್ಕಾಗಿ ನಕ್ಷೆ ಮಂಜೂರಾತಿ (Plan Sanction), ಪ್ರಾರಂಭಿಕ ಪ್ರಮಾಣಪತ್ರ (Commencement Certificate -CC), ಸ್ವಾಧೀನ ಪ್ರಮಾಣ ಪತ್ರ (Occupancy Certificate – OC) ನೀಡಲು ಬಿಡಿಎನ ಪರಿಷ್ಕೃತ ಸಮಗ್ರ ಅಭಿವೃದ್ಧಿ ಯೋಜನೆಗೆ (RCDP) 05-01-1995 ಇಸವಿಯಲ್ಲಿ ಜಾರಿಗೆ ಬಂದ ವಲಯ ನಿಯಂತ್ರಣ ಆಧರಿಸಿ ಕೆಎಂಸಿ ಕಾಯ್ದೆ 1976ರ ಸೆಕ್ಷನ್ 428ರ ಅಡಿಯಲ್ಲಿ ಬಿಎಂಪಿ 2003ರ ಕಟ್ಟಡ ಉಪವಿಧಿಯನ್ನೇ ಪಾಲಿಸಿಕೊಂಡು ಬರಲಾಗುತ್ತಿದೆ. ಇದರ ಜೊತೆಗೆ ಸರ್ಕಾರ ದಿನಕ್ಕೊಂದು ಕಾನೂನು, ಆದೇಶ ಹೊರಡಿಸುತ್ತಾ ಬಂದು ಬಿಬಿಎಂಪಿ ವ್ಯಾಪ್ತಿಯಲ್ಲಿ ಕಟ್ಟಡ ಕಟ್ಟುವ ಮುನ್ನ ಪಡೆಯಬೇಕಾಗಿದ್ದ ಸಿಸಿ ಹಾಗೂ ಕಟ್ಟಡ ಕಟ್ಟಿದ ಮೇಲೆ ಸ್ವತ್ತಿನ ಮಾಲೀಕರು ಕಡ್ಡಾಯವಾಗಿ ಪಡೆಯಬೇಕಿದ್ದ ಸ್ವಾಧೀನ ಪ್ರಮಾಣಪತ್ರ ಆಟಕ್ಕುಂಟು ಆದರೆ ಲೆಕ್ಕಕ್ಕಿಲ್ಲ ಎನ್ನುಂತಾಗಿದೆ.
ನಾಲ್ಕು ವರ್ಷದಲ್ಲಿ 35 ಸಾವಿರ ನಕ್ಷೆ ಮಂಜೂರಾತಿ ಬೆರಳೆಣಿಕೆ ಸಿಸಿ- ಒಸಿ :
2020-21ನೇ ಸಾಲಿನಿಂದ 2023-24ನೇ ಸಾಲಿನ ನವೆಂಬರ್ ತನಕ 4 ವರ್ಷದ ಅವಧಿಯಲ್ಲಿ ನಗರದ 8 ಪಾಲಿಕೆ ವಲಯಗಳಲ್ಲಿ (ಬೊಮ್ಮನಹಳ್ಳಿ ವಲಯದ 2020-21ನೇ ಇಸವಿ ಹೊರತುಪಡಿಸಿ) ನೆಲಮಹಡಿ ಹಾಗೂ 4 ಅಂತಸ್ತಿನ ವರೆಗಿನ ಕಟ್ಟಡ ನಿರ್ಮಾಣಕ್ಕಾಗಿ ಬಂದ 35,156ರಷ್ಟು ನಕ್ಷೆ ಮಂಜೂರಾತಿಯನ್ನು ಪಾಲಿಕೆ ನಗರ ಯೋಜನಾ ವಿಭಾಗ ನೀಡಿದೆ. ಆದರೆ ಅಷ್ಟು ಕಟ್ಟಡಗಳಿಗೆ ನಕ್ಷೆ ಮಂಜೂರಾತಿ ನೀಡಿದ್ದರೂ, 2003 ಬಿಲ್ಡಿಂಗ್ ಬೈಲಾದಂತೆ ಕಟ್ಟಡ ಪ್ರಾರಂಭಿಸುವಾಗ ಕೇವಲ 641 ಮಂದಿ ಸಿಸಿ ಪ್ರಮಾಣಪತ್ರವನ್ನು ಹಾಗೂ ಕಟ್ಟಡ ಮುಗಿದ ಬಳಿಕ ಕೇವಲ 668 ಮಂದಿ ಒಸಿ ಪ್ರಮಾಣಪತ್ರವನ್ನು ಬಿಬಿಎಂಪಿಯಿಂದ ಪಡೆದಿದ್ದಾರೆ. ಈ ಮೂರು ಪ್ರಕ್ರಿಯೆಗಳಿಂದಾಗಿ ಪಾಲಿಕೆ ಯೋಜನಾ ವಿಭಾಗ 1030.26 ಕೋಟಿ ರೂ. ಹಣವನ್ನು ಶುಲ್ಕವಾಗಿ ಸಂಗ್ರಹಿಸಿದೆ. ಈ ಅಂಕಿ ಅಂಶವು, ಒಂದು ಕಡೆ ಸೂಕ್ತ ಬಿಡಿಎ ಮಾಸ್ಟರ್ ಪ್ಲಾನ್ ಹಾಗೂ ಮತ್ತೊಂದೆಡೆ ಪ್ರಸ್ತುತ ಪರಿಸ್ಥಿತಿಗೆ ಅನುಗುಣವಾಗಿ ಬಿಲ್ಡಿಂಗ್ ಬೈಲಾ ಇಲ್ಲದಿರುವುದನ್ನು ಬಿಬಿಎಂಪಿಯ ಈ ಅಧಿಕೃತ ಅಂಕಿ ಅಂಶವು ಪುಷ್ಠೀಕರಿಸುತ್ತದೆ. ಪ್ರಸ್ತುತ ಜಾರಿಯಲ್ಲಿರುವ ಬಿಲ್ಡಿಂಗ್ ಬೈಲಾ 2003 ಹಲ್ಲು ಕಿತ್ತ ಹಾವಿನಂತಾಗಿದೆ ಎಂಬುದನ್ನು ಸ್ಪಷ್ಟವಾಗಿ ತಿಳಿಸುತ್ತಿದೆ.
4 ವರ್ಷದಲ್ಲಿ 265 ಬೃಹತ್ ಕಟ್ಟಡಗಳ ನಿರ್ಮಾಣಕ್ಕೆ ನಕ್ಷೆ ಮಂಜೂರಾತಿ :
ನೆಲಮಹಡಿ ಮತ್ತು ನಾಲ್ಕು ಅಂತಸ್ತಿಗಿಂತ ಹೆಚ್ಚಿನ ಅಂತಸ್ತಿನ ಕಟ್ಟಡಗಳ ನಿರ್ಮಾಣಕ್ಕೆ ನಕ್ಷೆ ಮಂಜೂರಾತಿ, ಸಿಸಿ, ಒಸಿ ನೀಡುವ ಅಧಿಕಾರ ಬೆಂಗಳೂರು ಉತ್ತರ ಹಾಗೂ ದಕ್ಷಿಣ ಜಂಟಿ ನಗರ ಯೋಜನಾ ನಿರ್ದೇಶಕರ (Joint Director Town Planning – JDTP) ಕಚೇರಿಗಳ ವ್ಯಾಪ್ತಿಗೆ ಬರುತ್ತೆ. ಉತ್ತರ ಜೆಡಿಟಿಪಿ ಕಚೇರಿಯು 2020-21ನೇ ಸಾಲಿನಿಂದ 2023-24ರ ನವೆಂಬರ್ ತನಕ ಒಟ್ಟು 164 ಬೃಹತ್ ಕಟ್ಟಡಗಳ ನಿರ್ಮಾಣಕ್ಕೆ ನಕ್ಷೆ ಮಂಜೂರಾತಿ ನೀಡಿದೆ. 126 ಸಿಸಿ ಹಾಗೂ 264 ದೊಡ್ಡ ಮಟ್ಟದ ಕಟ್ಟಡಗಳಿಗಷ್ಟೇ ಒಸಿ ನೀಡಿದೆ. ಇದರಿಂದಾಗಿ ಒಟ್ಟಾರೆ 587.87 ಕೋಟಿ ರೂ. ನಷ್ಟು ಹಣವನ್ನು ಸಂಗ್ರಹಿಸಿದೆ. ಇನ್ನು ದಕ್ಷಿಣ ಜಂಟಿ ನಿರ್ದೇಶಕರ ಕಚೇರಿಯಲ್ಲಿ 101 ಕಟ್ಟಡಗಳಿಗೆ ನಕ್ಷೆ ಮಂಜೂರಾತಿ ಈ ಅವಧಿಯಲ್ಲಿ ಮಾಡಲಾಗಿದೆ. ಕೇವಲ 58 ಕಟ್ಟಡ ನಿರ್ಮಾಣಕ್ಕೆ ಪ್ರಾರಂಭಿಕ ಪ್ರಮಾಣಪತ್ರ ಹಾಗೂ 138 ಕಟ್ಟಡಗಳಿಗೆ ಸ್ವಾಧೀನ ಪ್ರಮಾಣಪತ್ರವನ್ನು ಈ ಕಚೇರಿಯು ವಿತರಿಸಿದೆ. ಇದರಿಂದ ನಗರ ಯೋಜನಾ ವಿಭಾಗದ ಈ ದಕ್ಷಿಣ ಜೆಡಿಟಿಪಿ ಕಚೇರಿಗೆ 140.55 ಕೋಟಿ ರೂ. ಶುಲ್ಕ ಸಂಗ್ರಹವಾಗಿದೆ.
ಹೊಸ ವಿದ್ಯುತ್ ಸಂಪರ್ಕ ಪಡೆಯಲು ಒಸಿ ಪಡೆಯಲು ಕಡ್ಡಾಯವಲ್ಲ :
ಇದರ ಜೊತೆಗೆ ಈ ಹಿಂದೆ ಬೆಸ್ಕಾಂನಲ್ಲಿ ಹೊಸದಾಗಿ ವಿದ್ಯುತ್ ಸಂಪರ್ಕ ಪಡೆಯುವ ಕಟ್ಟಡಗಳ ಮಾಲೀಕರು ಕಡ್ಡಾಯವಾಗಿ ಬಿಬಿಎಂಪಿಯಿಂದ ಸ್ವಾಧೀನ ಪ್ರಮಾಣಪತ್ರ ಪಡೆಯಬೇಕು ಎಂಬ ನಿಯಮವನ್ನು ಸರ್ಕಾರ ಹಿಂಪಡೆದಿದೆ. ಈ ನಡುವೆ ಪಾಲಿಕೆ ವ್ಯಾಪ್ತಿಯಲ್ಲಿ ಹೊಸ ಖಾತೆ, ಖಾತೆ ಬದಲಾವಣೆ, ಖಾತೆ ಒಂದುಗೂಡಿಸುವಿಕೆಗೆ ಒಸಿ ಕಡ್ಡಾಯವೆಂದು ಪಾಲಿಕೆ ಮುಖ್ಯ ಆಯುಕ್ತರು ಆದೇಶಿಸಿದ್ದರೂ ಅದು ಸರಿಯಾಗಿ ಪಾಲನೆಯಾಗುತ್ತಿಲ್ಲ ಎನ್ನಲಾಗಿದೆ. ಹೀಗೆ ವಿವಿಧ ಕಾರಣಗಳಿಂದ ಸಿಸಿ, ಒಸಿ ಪಡೆಯುವುದನ್ನು ಕಾನೂನಿನ ರೀತಿ ಕಡ್ಡಾಯವಾಗಿ ಅನುಷ್ಠಾನ ತರಲು ಪಾಲಿಕೆ ಯೋಜನಾ ವಿಭಾಗದವರು ವಿಫಲರಾಗಿದ್ದಾರೆ.
ಅವೈಜ್ಞಾನಿಕ ಮಾಸ್ಟರ್ ಪ್ಲಾನ್ 2015 :
ಪರಿಷ್ಕ್ರತ ಮಹಾ ಯೋಜನೆ ಯಾವಾಗಲೂ ಭವಿಷ್ಯದ 15 ರಿಂದ 30 ವರ್ಷಗಳ ವರೆಗೆ ಒಂದು ನಗರ ಹೇಗೆಲ್ಲಾ ಅಭಿವೃದ್ಧಿಯಾಗಲಿಗೆ, ಪ್ರಸ್ತುತ ಇರುವ ಮೂಲಭೂತ ಸೌಕರ್ಯ ಹಾಗೂ ಜನಸಂಖ್ಯೆ ಮತ್ತಿತರ ಅಂಶಗಳನ್ನು ಆಧರಿಸಿ ಭವಿಷ್ಯದ ಬೆಂಗಳೂರಿನ ಅಗತ್ಯತೆ, ಜನಸಂಖ್ಯೆ ಏರಿಕೆ, ಮೂಲಭೂತ ಸೌಕರ್ಯಗಳಾದ ರಸ್ತೆ, ನೀರು, ಒಳಚರಂಡಿ, ತ್ಯಾಜ್ಯ ವಿಲೇವಾರಿ, ವಿದ್ಯುತ್ ಪೂರೈಕೆ, ವಾಹನಗಳ ಸಂಖ್ಯೆಯಲ್ಲಿನ ಏರಿಕೆ, ಸಾರಿಗೆ ವ್ಯವಸ್ಥೆ, ಪರಿಸರ ಮತ್ತಿತರ ಅಂಶಗಳನ್ನೆಲ್ಲಾ ಅಧ್ಯಯನ ನಡೆಸಿ ಪರಿಷ್ಕೃತ ಮಹಾಯೋಜನೆಯನ್ನು ತಯಾರಿಸಬೇಕು. ಅಂದರೆ ಈಗಾಗಲೇ ಇರುವ ಮೂಲ ಸಮಗ್ರ ಅಭಿವೃದ್ಧಿ ಯೋಜನೆ (CDP)ಗೆ ಧಕ್ಕೆಯಾಗದಂತೆ ಪರಿಷ್ಕೃತ ಮಹಾಯೋಜನೆಯನ್ನು ರಚಿಸಬೇಕು. ಆದರೆ 2007ರಲ್ಲಿ ಜಾರಿಗೆ ತಂದ ಆರ್ ಎಂಪಿ 2015ರನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಗೊತ್ತು ಗುರಿಯಿಲ್ಲದೆ, ಅವೈಜ್ಞಾನಿಕವಾಗಿ ರೂಪಿಸಿದ್ದರು.
ಅಲ್ಲದೆ ಸ್ಥಳೀಯ ಪ್ರದೇಶದ ಬಗ್ಗೆ ಮಾಹಿತಿಯಿರುವ, ಇಲ್ಲಿನ ನೆಲದ ಸಂಸ್ಕೃತಿ, ಪರಿಸ್ಥಿತಿ ಬಗ್ಗೆ ತಿಳಿದಿರುವ ಕಂಪನಿಗಳು, ನಗರ ಯೋಜನಾ ತಜ್ಞರನ್ನು ಹೆಚ್ಚಾಗಿ ಬಳಸಿಕೊಳ್ಳದೆ, ಫ್ರೆಂಚ್ ದೇಶದ ಕಂಪನಿಯೊಂದಕ್ಕೆ ಆರ್ ಎಂಪಿ 2015 ತಯಾರಿಸಲು ಕೊಟ್ಟ ದುಷ್ಪರಿಣಾಮದಿಂದ, ನಗರದಲ್ಲಿ ಕ್ಷೇತ್ರಾಧ್ಯಯನ ನಡೆಸದೆ, ಕೇವಲ ಜಿಪಿಎಸ್ ನಕ್ಷೆಗಳು ಮತ್ತಿತರ ಮಾಹಿತಿಗಳಿಂದ ವಲಯ ನಿಯಂತ್ರಣ ಮಾಡಿ ರಿಪೋರ್ಟ್ ನೀಡಿದ್ದರಿಂದ ಅದರ ದುಷ್ಪರಿಣಾಮವನ್ನು ನಗರದದ ಜನತೆ ಅನುಭವಿಸುವಂತಾಗಿದೆ.
ವಲಯ ನಿಯಂತ್ರಣದ ಕಾನೂನಂತೆ ಭೂ ಉಪಯೋಗ
ವೈಜ್ಞಾನಿಕವಾಗಿ ಪಾಲನೆಯಾಗುತ್ತಿಲ್ಲ :
ಕೃಷಿ ವಲಯ, ವಸತಿ ವಲಯ, ವಾಣಿಜ್ಯ ವಲಯ, ಕೈಗಾರಿಕಾ ವಲಯ, ಸಾರ್ವಜನಿಕ ಉಪಯೋಗ ವಲಯ, ಸಾರ್ವಜನಿಕ ಮತ್ತು ಅರೆ ಸಾರ್ವಜನಿಕ, ನಿರ್ಬಂಧಿತ ಪ್ರದೇಶ ಹೀಗೆ ವಿವಿಧ ರೀತಿಯಲ್ಲಿ ಭೂ ಉಪಯೋಗ ನಿಯಂತ್ರಣವನ್ನು ಗುರುತಿಸಲಾಗಿದ್ದರೂ, ಬಿಡಿಎ ಮತ್ತು ನಗರಾಭಿವೃದ್ಧಿ ಇಲಾಖೆ ಭೂ ಉಪಯೋಗ ಬದಲಾವಣೆಯನ್ನು ಹೆಚ್ಚಾಗಿ ಮಾಡುತ್ತಿದೆ. ವಸತಿ ವಲಯ, ಕೃಷಿವಲಯದಲ್ಲೂ ವಾಣಿಜ್ಯ ಚಟುವಟಿಕೆಗಳ ಹೆಚ್ಚಳದಿಂದಾಗಿ, ನಗರದಲ್ಲಿ ಎಲ್ಲೆಡೆ ವಾಹನ ದಟ್ಟಣೆ, ಕಸದ ಸಮಸ್ಯೆ, ಪರಿಸರ ಮಾಲಿನ್ಯ, ಭೂಮಿ ಮೌಲ್ಯ ಅಸಾಧಾರಣ ಏರಿಕೆಯಾಗಿ ಭೂವ್ಯಾಜ್ಯಗಳು ಹೆಚ್ಚಲು, ಹಸಿರು ವಲಯ ಕುಸಿಯಲು ಕಾರಣವಾಗಿದೆ. ಬಿಬಿಎಂಪಿ ರಸ್ತೆ ನಿರ್ಮಾಣ, ಫ್ಲೈಓವರ್, ಬೃಹತ್ ನೀರುಗಾಲುವೆ ಅಭಿವೃದ್ಧಿ, ಘನತ್ಯಾಜ್ಯ ವಿಲೇವಾರಿಗೆ ವರ್ಷಂಪ್ರತಿ ಸಾವಿರಾರು ಕೋಟಿ ರೂಪಾಯಿ ಹಣ ಸುರಿದರೂ ಸಮಸ್ಯೆ ಮಾತ್ರ ಇತ್ಯರ್ಥವಾಗದಿರೋದಕ್ಕೆ ಇದೇ ಮೂಲ ಕಾರಣ ಅಂತಾರೆ ನಗರ ಯೋಜನಾ ತಜ್ಞರು.
ನಗರ ಯೋಜನಾ ತಜ್ಞರು ಈ ಬಗ್ಗೆ ಏನಂತಾರೆ? :
“2015ರ ಪರಿಷ್ಕೃತ ಮಹಾ ಯೋಜನೆಯನ್ನು ಸ್ಥಳೀಯ ನಗರ ಯೋಜನಾ ತಜ್ಞರನ್ನು ಪೂರ್ಣ ರೂಪದಲ್ಲಿ ಬಳಸಿಕೊಂಡಿಲ್ಲ. ಬದಲಿಗೆ ಫ್ರೆಂಚ್ ಸಲಹೆಗಾರರನ್ನು ಬಳಸಿಕೊಳ್ಳಲಾಗಿತ್ತು. ಆ ಫ್ರೆಂಚ್ ಸಲಹೆಗಾರರು ಕ್ಷೇತ್ರಾಧ್ಯಯನ ನಡೆಸದೆ ಕೇವಲ ಜಿಪಿಎಸ್ ನಕ್ಷೆಯನ್ನು ಆಧರಿಸಿ ಸ್ಥಳೀಯ ಪರಿಸ್ಥಿತಿಯನ್ನು ಕೂಲಂಕುಷವಾಗಿ ಅಧ್ಯಯನ ಮಾಡದೆ, ಅಲ್ಲಿನ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳದೆ ರಸ್ತೆ ವಿಸ್ತರಣೆಗೆ ಶಿಫಾರಸ್ಸು ಮಾಡಿದರು. 15 ಮೀಟರ್ ರಸ್ತೆಯನ್ನು 25 ಮೀಟರ್ ಗೆ, 24 ಮೀಟರ್ ರಸ್ತೆಯನ್ನು 30 ಮೀಟರ್ ಹಾಗೂ 30 ಮೀಟರ್ ರಸ್ತೆಯನ್ನು 45 ಮೀಟರ್ ಗೆ ವಿಸ್ತರಣೆ ಮಾಡಲು ತಾವು ತಯಾರಿಸಿದ ಮಹಾ ಯೋಜನೆಯಲ್ಲಿ ಅವಕಾಶ ಮಾಡಿಕೊಟ್ಟಿದ್ದರು. ನಾನು ಆಗ ಈ ಮಹಾ ಯೋಜನೆಯ ತಜ್ಞರ ಸಮಿತಿಯಲ್ಲಿ ಒಬ್ಬನಾಗಿದ್ದೆ” ಎಂದು ಹೇಳುತ್ತಾರೆ ನಗರ ಯೋಜನೆ ಮತ್ತು ಸಂಚಾರ ತಜ್ಞ ಪ್ರೊ.ಎಂ.ಎನ್.ಶ್ರೀಹರಿ.
“ಆ ಫ್ರೆಂಚ್ ಸಲಹೆಗಾರರಿಗೆ ಇಲ್ಲಿನ ಸ್ಥಳೀಯ ನಗರ ಯೋಜನಾ ತಜ್ಞರ ಜೊತೆ ಇಂಗ್ಲಿಷ್ ನಲ್ಲಿ ಸಂವಹನ ನಡೆಸಿ ಚರ್ಚಿಸಲು ಭಾಷೆ ತೊಡಕಾಗಿತ್ತು. ನಗರದಲ್ಲಿ ಒಟ್ಟಾರೆ 298 ರಸ್ತೆಗಳನ್ನು ವಿಸ್ತರಣೆ ಮಾಡಲು ಶಿಫಾರಸ್ಸು ಮಾಡಲಾಗಿತ್ತು. ಈ ಪೈಕಿ ಕೆಲವೊಂದು ರಸ್ತೆಗಳನ್ನು ಹೊರತುಪಡಿಸಿದರೆ, 10 ರಸ್ತೆಗಳನ್ನೂ ನಗರ ಸ್ಥಳೀಯ ಸಂಸ್ಥೆಗಳು ಈತನಕ ವಿಸ್ತರಣೆ ಮಾಡಿಲ್ಲ. ಅದೇ ರೀತಿ ಸೂಕ್ತ ರೀತಿಯಲ್ಲಿ ಕಟ್ಟಡದಲ್ಲಿ ಇಂತಿಷ್ಟು ಜಾಗ ಖಾಲಿ ಬಿಡುವ (Set Back), ಕಟ್ಟಡ ನಿರ್ಮಾಣ ವಿಚಾರದಲ್ಲಿ ಲೆಕ್ಕಾಚಾರಗಳನ್ನು ವೈಜ್ಞಾನಿಕವಾಗಿ ಮಾಡಿಲ್ಲ. ಹೀಗಾಗಿ ಹಲವಾರು ಅಂಶಗಳಿಂದ 2015ರ ಮಾಸ್ಟರ್ ಪ್ಲಾನ್ ಅವೈಜ್ಞಾನಿಕವಾಗಿತ್ತು” ಎಂದು 2015ರ ಮಾಸ್ಟರ್ ಪ್ಲಾನ್ ದುಸ್ಥಿತಿಯನ್ನು ಅವರು ಹೇಳುತ್ತಾರೆ.
ಪರಿಷ್ಕೃತ ಮಹಾಯೋಜನೆಗಳಲ್ಲಿ ವಲಯ ನಿಯಂತ್ರಣ :
1995 ಸಿಡಿಪಿಯಲ್ಲಿ ವಲಯ ನಿಯಂತ್ರಣ (Zonal Regulation)ದಲ್ಲಿ 597 ಚದರ ಕಿ.ಮೀ ನಗರೀಕರಣ ವಲಯ ಅಂದರೆ ಈ ಭಾಗದಲ್ಲಿ ನಿರ್ಮಾಣ ಕಾರ್ಯ ಕೈಗೊಳ್ಳಲು ಅವಕಾಶ ನೀಡುವ ಹಾಗೂ ಕೃಷಿ ಉದ್ದೇಶದ 682 ಚದರ ಕಿ.ಮೀ ಕೃಷಿ ವಲಯವನ್ನು ನಿಗದಿಪಡಿಸಲಾಗಿತ್ತು. ಹೀಗಾಗಿ ಸ್ಥಳೀಯ ಯೋಜನಾ ಪ್ರದೇಶ 1,279 ಚದರ ಕಿ.ಮೀನಷ್ಟು ವ್ಯಾಪಿಸಿತ್ತು. ಆದರೆ 25-06-2007ರಂದು ಸರ್ಕಾರ ಒಪ್ಪಿಗೆ ನೀಡಿದ 2015ರ ಪರಿಷ್ಕೃತ ಮಹಾ ಯೋಜನೆಯಲ್ಲಿ ನಗರೀಕರಣ ವ್ಯಾಪ್ತಿಯನ್ನು 597 ಚದರ ಕಿ.ಮೀನಿಂದ 800 ಚದರ ಕಿ.ಮೀನಷ್ಟು ಏರಿಕೆ ಮಾಡಲಾಗಿತ್ತು. ಅದೇ ರೀತಿ ಕೃಷಿ ವಲಯವನ್ನು 419.50 ಚ.ಕಿ.ಮೀಗೆ ಕಡಿತ ಮಾಡಲಾಯಿತು. ಇದರರ್ಥ ಅಷ್ಟರ ಮಟ್ಟಿಗೆ ಕೃಷಿ ವಲಯ ಬೆಂಗಳೂರಿನಲ್ಲಿ ಕಡಿಮೆಯಾಗುತ್ತದೆಂದು ಮಹಾ ಯೋಜನೆಯಲ್ಲಿ ಅಂದಾಜಿಸಲಾಗಿತ್ತು. ಅದಾದ ಬಳಿಕ 22-11-2017 ರಂದು ಸರ್ಕಾರ 2031ರ ಪರಿಷ್ಕೃತ ಮಹಾ ಯೋಜನೆಯ ಕರಡಿಗೆ ಅನುಮೋದನೆ ನೀಡಿತ್ತು. ಅದರಲ್ಲಿ ನಗರೀಕರಣ ವ್ಯಾಪ್ತಿಯು 884.31 ಚದರ ಕಿ.ಮೀಗೆ ವಿಸ್ತೀರ್ಣಕ್ಕೆ ಅಭಿವೃದ್ಧಿಯಾಗುತ್ತದೆಂದು ಲೆಕ್ಕ ಹಾಕಲಾಗಿತ್ತು. ಕೃಷಿ ವಲಯ 419.50 ಚದರ ಕಿ.ಮೀಗಿಂತ ಮತ್ತಷ್ಟು ಕಡಿಮೆಯಾಗಿ 322.66 ಚದರ ಕಿ.ಮೀ ನಷ್ಟಾಗಲಿದೆ ಎಂದು ಅಂದಾಜಿಸಲಾಗಿತ್ತು. ಕಾರಣಾಂತರಗಳಿಂದ ಅಂತಿಮ ಪರಿಷ್ಕೃತ ಮಹಾಯೋಜನೆ 2031ಕ್ಕೆ ಒಪ್ಪಿಗೆಗಾಗಿ 17-01-2019ರಂದು ಸರ್ಕಾರಕ್ಕೆ ಕಳುಹಿಸಲಾಗಿತ್ತು. ಆದರೆ ದುರದೃಷ್ಟವಶಾತ್ ತಾತ್ಕಾಲಿಕವಾಗಿ ಅನುಮೋದನೆಯಾಗಿದ್ದ ಆರ್ ಎಂಪಿ ಕರಡನ್ನು 22-06-2020ರಂದು ಸರ್ಕಾರ ಹಿಂಪಡೆಯಿತು. ಅಲ್ಲಿಗೆ ಪ್ರಸ್ತುತ ಚಾಲ್ತಿಯಲ್ಲಿರೋದು 2015ರ ಮಾಸ್ಟರ್ ಪ್ಲಾನ್.
ಅಪ್ರಸ್ತುತವಾಗಿದೆ 2003ರ ಬಿಲ್ಡಿಂಗ್ ಬೈಲಾ :
ಆದರೆ ಅಸಲಿ ವಿಷಯ ಏನಂದ್ರೆ ಬಿಎಂಪಿ (ಬೆಂಗಳೂರು ಮಹಾನಗರ ಪಾಲಿಕೆ)ಯಾಗಿದ್ದ ಪಾಲಿಕೆ ಬಿಬಿಎಂಪಿ (2007ರಲ್ಲಿ ಬಿಎಂಪಿಯಿಂದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ)ಯಾಗಿ 17 ವರ್ಷ ಆಗುತ್ತಾ ಬಂದರೂ ಇನ್ನು 2003ರ ಕಟ್ಟಡ ಉಪವಿಧಿಯನ್ನೇ ನಗರದಾದ್ಯಂತ ಕಟ್ಟಡ ಕಟ್ಟುವಾಗ ನಕ್ಷೆ ಮಂಜೂರಾತಿ, ಒಸಿ, ಸಿಸಿ ಹಾಗೂ ಕಟ್ಟಡ ಉಲ್ಲಂಘನೆಗೆ ದಂಡ ವಿಧಿಸುವುದು ಸೇರಿದಂತೆ ನಗರ ಯೋಜನೆ ವಿಚಾರದಲ್ಲಿ ಇದೇ ಉಪವಿಧಿಗಳನ್ನು ಅನುಸರಿಸುತ್ತಾ ಬಂದಿದೆ. ಈ 2003ರ ಬಿಲ್ಡಿಂಗ್ ಬೈಲಾ ಆಧರಿಸಿರುವುದು ಬಿಡಿಎ ನ 1995 ಇಸವಿಯ ಆರ್ ಸಿಡಿಪಿ ವಲಯ ನಿಯಂತ್ರಣ ಯೋಜನೆಯನ್ನು ಆಧಾರವಾಗಿಟ್ಟುಕೊಂಡಿದೆ.
ಆಗಿದ್ದ ಕಟ್ಟಡಗಳ ಸಂಖ್ಯೆಗೂ ಈಗಿನ ನಗರೀಕರಣ ಪ್ರಮಾಣಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಪಾಲಿಕೆಯ ಆಸ್ತಿ ತೆರಿಗೆ ದತ್ತಾಂಶದ ಪ್ರಕಾರವೇ ನಗರದಲ್ಲಿ 19 ಲಕ್ಷಕ್ಕೂ ಅಧಿಕ ಆಸ್ತಿಗಳಿವೆ. ಕೃಷಿ ವಲಯ ಆಗ 682 ಚ.ಕಿ.ಮೀನಷ್ಟಿತ್ತು. ಆದರೀಗ ಸಾಕಷ್ಟು ಕಡಿಮೆಯಾಗಿದೆ. ಹೀಗಿರುವಾಗ ಇಡೀ ಕಟ್ಟಡ ಉಪವಿಧಿಯೇ ಈಗಿನ ಪರಿಸ್ಥಿತಿಗೆ ಸೂಕ್ತವಾಗಿಲ್ಲ ಎಂಬುದು ಸ್ಪಷ್ಟವಾಗಿದೆ. ಹೀಗಿದ್ದರೂ ರಾಜ್ಯ ಸರ್ಕಾರ ಇನ್ನೂ ಕೂಡ ಬಿಬಿಎಂಪಿ ಕಾಯ್ದೆ 2020ರಲ್ಲಿ ಅವಕಾಶವಿದ್ದರೂ ಹೊಸ ಬಿಲ್ಡಿಂಗ್ ಬೈಲಾ ಕಾನೂನು ತಿದ್ದುಪಡಿಗೆ ಅನುಮೋದನೆ ನೀಡಿಲ್ಲ.
ಬಿಬಿಎಂಪಿ ಕಾಯ್ದೆ 2020ರಲ್ಲಿ ಹೊಸ ಉಪವಿಧಿ ರಚನೆಗಿದೆ ಅವಕಾಶ :
ಹೊಸ ಬಿಬಿಎಂಪಿ ಕಾಯ್ದೆ 2020ರ 238ನೇ ಪ್ರಕರಣದಿಂದ 253 ಪ್ರಕರಣದ ತನಕ ನಗರ ಯೋಜನೆ ಸೇರಿದಂತೆ ಕಟ್ಟಡಗಳ ನಿಯಂತ್ರಣ ಕುರಿತಂತೆ ತಿಳಿಸಿದೆ. ಅದರಲ್ಲಿ 2003 ಬಿಲ್ಡಿಂಗ್ ಬೈಲಾದಲ್ಲಿರುವಂತೆ ಪ್ರಾರಂಭಿಕ ಪ್ರಮಾಣಪತ್ರ ಹಾಗೂ ಸ್ವಾಧೀನ ಪ್ರಮಾಣ ಪತ್ರ (ಒಸಿ)ದ ಬಗ್ಗೆ ಈ ಕಾಯ್ದೆಯಲ್ಲಿ ಉಲ್ಲೇಖವೇ ಇಲ್ಲ. ಒಸಿಯ ಬದಲಾಗಿ ಮುಕ್ತಾಯ ಪ್ರಮಾಣ ಪತ್ರ ನೀಡಿಕೆ (Grant Of Completion Certificate – GCC) ಎಂದು ತಿಳಿಸಲಾಗಿದೆ. ಹಿಂದಿನ ಒಸಿ ಪದದ ಬಳಕೆಗೆ ತಿದ್ದುಪಡಿಯ ಅಗತ್ಯವಿದೆ.
ನಗರಕ್ಕೆ ಶಾಪಗ್ರಸ್ತ ಬಿಲ್ಡಿಂಗ್ ಬೈಲಾ :
ಬಿಎಂಪಿ 2003ರ ಕಟ್ಟಡ ಉಪವಿಧಿಗೆ 2007ರಲ್ಲಿ 2015ರ ಮಾಸ್ಟರ್ ಪ್ಲಾನ್ ತಯಾರಾಗಿ ಜಾರಿಗೆ ಬಂದಿದ್ದನ್ನು ಆಗಿನ ಬಿಬಿಎಂಪಿಯಲ್ಲಿ ಬಿಲ್ಡಿಂಗ್ ಬೈಲಾ ಅಳವಡಿಸಿಕೊಂಡು ಅನುಷ್ಠಾನಕ್ಕೆ ಮುಂದಾಗಿದ್ದರೂ ಸಾಧ್ಯವಾಗಿರಲಿಲ್ಲ. ಕೊನೆಗೆ 2010ರಲ್ಲೂ ಆಗಲಿಲ್ಲ. 2018ರಲ್ಲಿ ಆಗಿನ ಮೇಯರ್ ಆಗಿದ್ದ ಗಂಗಾಂಬಿಕೆ ಹಾಗೂ ನಂತರ ಬಂದ ಗೌತಮ್ ಕುಮಾರ್ ನೇತೃತ್ವದ ಕೌನ್ಸಿಲ್, ಬಿಲ್ಡಿಂಗ್ ಬೈಲಾ ಜಾರಿಗೆ ತರಲು ಪ್ರಯತ್ನ ನಡೆಸಿ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿತ್ತು. ಅದಕ್ಕೆ ಪಾಲಿಕೆ ಅಧಿಕಾರಿಗಳು ಸಮಜಾಯುಷಿ ಕೊಡುವಷ್ಟರಲ್ಲಿ ಕರೋನಾ ವಕ್ಕರಿಸಿತ್ತು. ಆಗ 2020 ಬಿಲ್ಡಿಂಗ್ ಬೈಲಾ ಎಂದು ಪರಿಷ್ಕರಿಸಿ ಪುನಃ ಸರ್ಕಾರಕ್ಕೆ ಬಿಬಿಎಂಪಿ ನಗರ ಯೋಜನೆ ವಿಭಾಗ ಒಪ್ಪಿಗೆಗಾಗಿ ಕಳುಹಿಸಿತ್ತು. ಆನಂತ್ರ ಕಡತ ಸರ್ಕಾರ- ಬಿಬಿಎಂಪಿ ನಡುವೆ ಕಣ್ಣಾಮುಚ್ಚಾಲೆಯ ಮಧ್ಯೆಯೇ ಉಳಿದು ಹೋಯಿತು.
ಸರ್ಕಾರದ ಕಡತದಲ್ಲೇ ಉಳಿಯಿತು ನೂತನ ಕರಡು ಬೈಲಾ :
ಬಳಿಕ ಆಡಳಿತಾಧಿಕಾರಿಯಾಗಿ ಬಂದ ನಗರಾಭಿವೃದ್ಧಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯೂ ಆಗಿರುವ ರಾಕೇಶ್ ಸಿಂಗ್ ಅವರ ಸೂಚನೆಯ ಮೇರೆಗೆ ಕಟ್ಟಡ ಉಪವಿಧಿ 2022 ಎಂದು ಪರಿಷ್ಕೃರಿಸಿ ನಗರಾಭಿವೃದ್ಧಿ ಇಲಾಖೆಗೆ ಕಡತವನ್ನು ಸಲ್ಲಿಸಲಾಗಿದೆ. ಪ್ರಸ್ತುತ ಈ ಬೈಲಾ ಕರಡಿನ ಬಗ್ಗೆ ಸೂಕ್ತ ಅಭಿಪ್ರಾಯ ಹಾಗೂ ಅಗತ್ಯ ಶಿಫಾರಸ್ಸು ನೀಡುವಂತೆ ಇಲಾಖೆಯು ರಾಜ್ಯ ನಗರ ಯೋಜನೆ ನಿರ್ದೇಶಕರ ಕಚೇರಿಗೆ ಕಳುಹಿಸಿ ಆರು ತಿಂಗಳಾಯಿತು. ಈ ಬಗ್ಗೆ ಬೆಂಗಳೂರು ಅಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್ ಕ್ರಮ ಕೈಗೊಂಡು ಆದಷ್ಟು ಶೀಘ್ರದಲ್ಲೇ ಕಟ್ಟಡ ಉಪವಿಧಿ 2022ರನ್ನು ಜಾರಿಗೆ ತಂದರೆ ಅಷ್ಟರ ಮಟ್ಟಿಗೆ ಬೆಂಗಳೂರಿನಲ್ಲಿ ಸಣ್ಣ ಪುಟ್ಟ ಕಟ್ಟಡಗಳಿಂದ ದೊಡ್ಡ ದೊಡ್ಡ ಕಟ್ಟಡಗಳನ್ನು ಕಟ್ಟುವ ಸಾರ್ವಜನಿಕರಿಗೆ ಸಹಾಯವಾದೀತು ಎಂಬುದು ನಾಗರೀಕ ಸಂಘ ಸಂಸ್ಥೆಗಳ ಅಭಿಪ್ರಾಯವಾಗಿದೆ.
ಬಿಬಿಎಂಪಿ ವಿರೋಧ ಪಕ್ಷದ ಮಾಜಿ ನಾಯಕರು ಏನಂತಾರೆ? :
“ಬೆಂಗಳೂರಿನಲ್ಲಿ ಮನೆ ಕಟ್ಟಿಕೊಳ್ಳುವ ಜನರಿಗೆ ಕೆಎಂಸಿ ಕಾಯ್ದೆ 1976 ಹೋಗಿ ಬಿಬಿಎಂಪಿ ಕಾಯ್ದೆ 2020 ಜಾರಿಗೆ ಬಂದರೂ ಈಗಲೂ ಸಹ 2003ರ ಇಸವಿಯ ಕಟ್ಟಡ ಉಪವಿಧಿ ಕಾನೂನನ್ನೇ ಹೊಸ ಕಟ್ಟಡ ಕಟ್ಟಲು ಪ್ರಾರಂಭಿಕ ಪ್ರಮಾಣ ಪತ್ರ ಹಾಗೂ ಸ್ವಾಧೀನ ಪ್ರಮಾಣ ಪತ್ರ ನೀಡಲು ಬಳಸಿಕೊಂಡರೆ, 2007ರಲ್ಲಿ ಬಿಡಿಎ ತಯಾರಿಸಿದ 2015ರ ಮಾಸ್ಟರ್ ಪ್ಲಾನ್ ಆಧರಿಸಿ ಕಟ್ಟಡ ನಿರ್ಮಾಣಕ್ಕೆ ನಕ್ಷೆ ಮಂಜೂರಾತಿ ನೀಡಲಾಗುತ್ತಿದೆ. ಹಳೆಯ ಬಿಲ್ಡಿಂಗ್ ಬೈಲಾ ಮತ್ತು ಹಳೆಯ ಮಾಸ್ಟರ್ ಪ್ಲಾನ್ ಬೆಳೆಯುತ್ತಿರುವ ಬೆಂಗಳೂರಿಗೆ ಅಪ್ರಸ್ತುತವಾಗಿದೆ. ಇದರಿಂದ ಸಾಮಾನ್ಯ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಕೆಎಂಸಿ ಕಾಯ್ದೆ, ಬಿಬಿಎಂಪಿ ಕಾಯ್ದೆಯಿಂದಾಗಿ ಧ್ವಂಧ್ವ ನೀತಿ ಅನುಸರಿಸಲಾಗುತ್ತಿದೆ. ಚುನಾಯಿತ ಪ್ರತಿನಿಧಿಗಳಿಲ್ಲದೆ ಅಧಿಕಾರಿಗಳ ಅಂಧಾ ದರ್ಬಾರ್ ಹೆಚ್ಚಾಗಿದೆ. ಕೂಡಲೇ ರಾಜ್ಯ ಸರ್ಕಾರ ಹೊಸ ಮಾಸ್ಟರ್ ಪ್ಲಾನ್ ಮತ್ತು ಕಡತದಲ್ಲಿರುವ ಹೊಸ ಬಿಲ್ಡಿಂಗ್ ಬೈಲಾ ಜಾರಿಗೆ ತರಲು ಆಗ್ರಹಿಸುತ್ತೇನೆ.”
- ಪದ್ಮನಾಭರೆಡ್ಡಿ, ಬಿಬಿಎಂಪಿ ವಿರೋಧ ಪಕ್ಷದ ಮಾಜಿ ನಾಯಕ
ಬ್ರಾಂಡ್ ಬೆಂಗಳೂರಿಗೆ ಸೂಕ್ತ ಮಾಸ್ಟರ್ ಪ್ಲಾನ್– ಕಟ್ಟಡ ಬೈಲಾ ಜಾರಿ ಅಗತ್ಯ :
ನಗರದಲ್ಲಿ ಕಟ್ಟಡ ನಕ್ಷೆ ಮಂಜೂರಾತಿಗೆ ಒಂದು ರೀತಿ ಪ್ಲಾನ್ ಹಾಗೂ ಮನೆ ಅಥವಾ ಕಟ್ಟಡ ಕಟ್ಟಲು ಒಂದು ರೀತಿಯ ಪ್ಲಾನ್ ಮಾಡಿಸಿಕೊಂಡಿರುತ್ತಾರೆ. ಇದು ಎಲ್ಲರಿಗೂ ಗೊತ್ತಿರುವ ವಿಷಯ. ಅಸಲಿಗೆ ನಗರದಲ್ಲಿನ ಕಡಿಮೆ ಭೂಮಿ ಲಭ್ಯತೆ, ಜನಸಂಖ್ಯೆ ಹೆಚ್ಚಳ, ನಗರ ಮೂಲಭೂತ ಸೌಲಭ್ಯ, ಸಾರಿಗೆ ವ್ಯವಸ್ಥೆ, ಪರಿಸರ ಹಾಗೂ ಸ್ವತ್ತಿನ ಮೌಲ್ಯ ಅಗಾಧವಾಗಿ ಏರಿರುವಾಗ ಅದಕ್ಕೆ ಸರಿಹೊಂದುವ ಹಾಗೂ ಬೆಂಗಳೂರಿನ ಸಮತೋಲನ ಬೆಳವಣಿಗೆಗೆ ಪೂರಕವಾದ ಮಾಸ್ಟರ್ ಪ್ಲಾನ್ ಹಾಗೂ ಕಟ್ಟಡ ಉಪವಿಧಿ ಕಾನೂನು ಜಾರಿಗೆ ತರುವುದು ಹಿಂದೆಂದಿಗಿಂತ ಈಗ ಅತ್ಯಾವಶ್ಯಕವಾಗಿದೆ. ಇದಕ್ಕೆ ಪರಿಹಾರ ಕಂಡು ಕೊಳ್ಳದೆ ಬ್ರಾಂಡ್ ಬೆಂಗಳೂರು ಎಂಬ ಕಾರ್ಯಕ್ರಮ ಜಾರಿಗೆ ತರಲು ಹೊರಟರೆ, ತೂತಾದ ಬಲೂನ್ ಗೆ ಗಾಳಿ ಊದಿದಂತಾಗುತ್ತದೆ ಎಂಬುದನ್ನು ಸರ್ಕಾರ ಅರ್ಥ ಮಾಡಿಕೊಳ್ಳಬೇಕಿದೆ.