ಬೆಂಗಳೂರು, ಜ.9 www.bengaluruwire.com : ನಗರದ ಖಾಸಗಿ ಹೋಟೆಲ್‌ಗಳಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಅಡ್ಡದ ಮೇಲೆ ಹಲಸೂರು (Halasuru) ಹಾಗೂ ಬೈಯಪ್ಪನಹಳ್ಳಿ (Baippanahalli) ಠಾಣೆಯ ಪೊಲೀಸರು ದಾಳಿ ಓರ್ವ ವಿದೇಶಿ ಮಹಿಳೆ ಸೇರಿದಂತೆ ಎಂಟು ಮಂದಿಯನ್ನು ಬಂಧಿಸಿ, ಐವರು ವಿದೇಶಿ ಮಹಿಳೆಯರನ್ನು ರಕ್ಷಿಸಿದ್ದಾರೆ.
ರಕ್ಷಣೆ ಮಾಡಲ್ಪಟ್ಟ ಐವರು ವಿದೇಶಿ ಮಹಿಳೆಯರನ್ನು ವಿದೇಶಿ ಪ್ರಾದೇಶಿಕ ನೋಂದಣಿ ಕಚೇರಿಯ ಅಧಿಕಾರಿಗಳ (Forign Regional Registration Office -FRRO) ಮುಂದೆ ಹಾಜರುಪಡಿಸಿದ್ದಾರೆ. ವೇಶ್ಯಾವಾಟಿಕೆ ನಡೆಸುತ್ತಿದ್ದ ವಿದೇಶಿ ಮಹಿಳೆಯು ಕರ್ನಾಟಕದಲ್ಲಿ ಮದುವೆಯಾಗಿ ಕಳೆದ 15 ವರ್ಷದಿಂದ ಬೆಂಗಳೂರಿನಲ್ಲಿ ನೆಲೆಸಿದ್ದು, ವ್ಯಾಪಕ ವೇಶ್ಯಾವಾಟಿಕೆ ಜಾಲವನ್ನು ಹೊಂದಿದ್ದರು. ಆರೋಪಿಗಳು ಬೆಂಗಳೂರು, ಜೈಪುರ (Jaipur), ಚೆನ್ನೈ (Chennai), ಮೈಸೂರು (Mysore), ದೆಹಲಿ (Delhi), ಉದಯ್ ಪುರ (Udaypur), ಮುಂಬೈ (Mumbai) ಮುಂತಾದ ಕಡೆಗಳಲ್ಲಿ ಏಜೆಂಟ್ ಗಳನ್ನು ಇಟ್ಟುಕೊಂಡಿದ್ದರು. ಏಜೆಂಟ್ ಗಳ ಮೂಲಕ ವಿದೇಶಿ ಮಹಿಳೆಯರಿಗೆ ಗಾಳ ಹಾಕಿ, ಹೆಚ್ಚಿನ ಹಣದ ಆಮೀಷವನ್ನು ತೋರಿಸಿ ದಂಧೆಗೆ ಕರೆಸಿ ಬಳಸಿಕೊಳ್ಳುತ್ತಿದ್ದರು.
ತನಿಖೆಯ ಸಂದರ್ಭದಲ್ಲಿ ಆರೋಪಿಗಳು ಟೆಲಿಗ್ರಾಂ ಹಾಗೂ ವಾಟ್ಸಪ್ ಮೂಲಕ ಆನ್ ಲೈನ್ ನಲ್ಲಿ ಗಿರಾಕಿಗಳನ್ನು ಸೆಳೆಯುತ್ತಿದ್ದರು. ಇದೀಗ ಬಂಧಿಸಲಾದ ಎಂಟು ಮಂದಿಯನ್ನು ವಿಚಾರಣೆ ನಡೆಸಲಾಗುತ್ತಿದೆ. ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.