ಬೆಂಗಳೂರು, ಜ.9 www.bengaluruwire.com : ರಾಜ್ಯದಲ್ಲಿ ಕಳೆದ ವರ್ಷದ ಅಂತ್ಯದಲ್ಲಿ 150 ಕೋಟಿ ರೂ. ಮೌಲ್ಯದ ಗೌಪ್ಯ ವಹಿವಾಟು ನಡೆಸಿರುವುದನ್ನು ವಾಣಿಜ್ಯ ತೆರಿಗೆ ಇಲಾಖೆಯ ಜಾರಿ ವಿಭಾಗ ಪತ್ತೆಹಚ್ಚಿದೆ.
ಕ್ರಿಸ್‌ಮಸ್ ಹಾಗೂ ವರ್ಷಾಂತ್ಯದ ದಿನಗಳಲ್ಲಿ ರಾಜ್ಯದ ವಿವಿಧೆಡೆ ಹೋಟೆಲ್‌ಗಳು, ರೆಸ್ಟೋ ರೆಂಟ್‌ಗಳು, ಬೇಕರಿಗಳು, ರೆಸಾರ್ಟ್ ಗಳಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವಂಚಿಸಲು ₹ 150 ಕೋಟಿ ಮೌಲ್ಯದ ರಹಸ್ಯ ವಹಿವಾಟು ನಡೆಸಿರುವುದನ್ನು ಇಲಾಖೆ ಬಹಿರಂಗಪಡಿಸಿದೆ.
ರಾಜ್ಯದ ವಿವಿಧೆಡೆ 242ಹೋಟೆಲ್, ರೆಸ್ಟೋರೆಂಟ್, ಬೇಕರಿ ಮತ್ತು ರೆಸಾರ್ಟ್ ಗಳಲ್ಲಿ ತಪಾಸಣೆ ನಡೆಸಲಾಗಿದೆ. ನೇತ್ರಾಣಿ ದ್ವೀಪದಲ್ಲಿ ಸ್ಕೂಬಾ ಡೈವಿಂಗ್ ಸೇವೆ ಒದಗಿಸುವ ಉದ್ಯಮಗಳಲ್ಲೂ ತಪಾಸಣೆ ನಡೆಸಲಾಗಿದೆ. ಈ ಅವಧಿಯಲ್ಲಿ ತೆರಿಗೆ ವಂಚನೆಯ ಹಲವು ಪ್ರಕರಣಗಳನ್ನು ಪತ್ತೆಮಾಡಲಾಗಿದೆ. ಕೆಲವು ವರ್ತಕರು ತೆರಿಗೆ ವಂಚಿಸಲು ಆಧುನಿಕ ತಂತ್ರಜ್ಞಾನಗಳನ್ನು ಬಳಸಿ- ಕೊಂಡಿರುವುದು ಕಂಡುಬಂದಿದೆ ಎಂದು ವಾಣಿಜ್ಯ ತೆರಿಗೆ ಇಲಾಖೆ ಆಯುಕ್ತ ಸಿ. ಶಿಖಾ ತಿಳಿಸಿದ್ದಾರೆ.
ತೆರಿಗೆ ವಂಚಿಸಿ ವಹಿವಾಟು ನಡೆಸಿರುವುದು, ಗ್ರಾಹಕರಿಂದ ಸಂಗ್ರಹಿಸಿದ ತೆರಿಗೆ ಮೊತ್ತವನ್ನು ಇಲಾಖೆಗೆ ಸಂದಾಯ ಮಾಡದಿರುವುದು, ಅಕ್ರಮವಾಗಿ ಹೂಡುವಳಿ ತೆರಿಗೆ ಪಡೆದಿರುವುದು, ತೆರಿಗೆ ದರದ ತಪ್ಪು ವರ್ಗೀಕರಣ, ಕ್ಲೌಡ್ ಸಂಗ್ರಹದಲ್ಲಿ ವಹಿವಾಟಿನ ಮಾಹಿತಿ ಮುಚ್ಚಿಟ್ಟಿರುವುದು, ನಿಗದಿತ ಮಿತಿಗಿಂತ ಹೆಚ್ಚಿನ ಮೊತ್ತದ ವಹಿವಾಟು ನಡೆ- ಸುತ್ತಿದ್ದರೂ ಜಿಎಸ್‌ಟಿ ನೋಂದಣಿ ಮಾಡಿಸದೇ ಇರುವುದು ಪತ್ತೆಯಾಗಿದೆ ಎಂದು ಅವರು ವಿವರಿಸಿದ್ದಾರೆ.
ಕೆಲವು ವರ್ತಕರು ಹಲವು ಕ್ಯೂಆರ್ ಕೋಡ್ ಗಳನ್ನು ಬಳಸಿಕೊಂಡು ಗ್ರಾಹಕರಿಂದ ಹಣ ಪಡೆಯುತ್ತಿದ್ದು, ಕೆಲವು ಕ್ಯೂಆರ್ ಕೋಡ್‌ಗಳ ಮೂಲಕ ಸಂಗ್ರಹ ವಾದ ಹಣದ ಮಾಹಿತಿಯನ್ನು ಮಾತ್ರ ಇಲಾಖೆಗೆ ಸಲ್ಲಿಸುತ್ತಿದ್ದಾರೆ ಎಂದಿದ್ದಾರೆ.
ಲ್ಯಾಪ್‌ಟಾಪ್, ಮೊಬೈಲ್, ದತ್ತಾಂಶ ಸಂಗ್ರಹ ಸಾಧನಗಳು ಹಾಗೂ ಡಿಜಿಟಲ್ ಸಾಕ್ಷ್ಯಗಳನ್ನು ಕಾರ್ಯಾಚರಣೆ ವೇಳೆ ವಶಪಡಿಸಿಕೊಳ್ಳಲಾಗಿದೆ. ತೆರಿಗೆ ವಂಚಿಸಿರುವ ಹೋಟೆಲ್, ರೆಸಾರ್ಟ್, ರೆಸ್ಟೋರೆಂಟ್ ಮತ್ತು ಬೇಕರಿ ಮಾಲೀಕರ ವಿರುದ್ಧ ಕಾನೂನು ಕ್ರಮದ ಪ್ರಕ್ರಿಯೆಯನ್ನೂ ಆರಂಭಿಸಲಾಗಿದೆ. ಕೆಲವರು ಸ್ವಯಂಪ್ರೇರಣೆಯಿಂದ ತೆರಿಗೆ ಬಾಕಿಯನ್ನು ಪಾವತಿಸಲು ಆರಂಭಿಸಿದ್ದಾರೆ ಎಂದು ಶಿಖಾ ತಿಳಿಸಿದ್ದಾರೆ.