ಬೆಂಗಳೂರು, ಜ.09 www.bengaluruwire.com : ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA)ದ ಆಯುಕ್ತರಾದ ಎನ್. ಜಯರಾಮ್ ರವರು ಇಂದು ನಾಡಪ್ರಭು ಕೆಂಪೇಗೌಡ ಬಡಾವಣೆ (NPKL)ಗೆ ದಿಢೀರ್ ಭೇಟಿ ನೀಡಿ ಪ್ರಗತಿಯಲ್ಲಿರುವ ಕಾಮಗಾರಿಗಳನ್ನು ಪರಿಶೀಲಿಸಿದರು.
ಇದೇ ಸಂದರ್ಭದಲ್ಲಿ ಕನ್ನಲ್ಲಿ ಗ್ರಾಮ ಹಾಗೂ ಕೆಂಚನಪುರ ಗ್ರಾಮದ ವಿವಿಧ ಸರ್ವೆ ನಂಬರ್ ಗಳಲ್ಲಿ ಮುಖ್ಯ ರಸ್ತೆ ಸಂಪರ್ಕ ರಸ್ತೆ ನಿರ್ಮಾಣಕ್ಕೆ ಸ್ಥಳೀಯ ಭೂಮಾಲೀಕರು ಅಡ್ಡಿಪಡಿಸಿ ರಸ್ತೆ ನಿರ್ಮಾಣಕ್ಕೆ ಅಡಚಣೆಯುಂಟು ಮಾಡುತ್ತಿದ್ದರು. ಈ ಬಗ್ಗೆ ಇಂದು ಭೂಮಾಲೀಕರೊಡನೆ ಸ್ಥಳದಲ್ಲಿಯೇ ಆಯುಕ್ತರು ಸಭೆ ನಡೆಸಿ, ಸಮಸ್ಯೆಯನ್ನು ಆಲಿಸಿ, ಶೀಘ್ರವಾಗಿ ಪರಿಹಾರವನ್ನು ನೀಡಲಾಗುವುದೆಂದು ಭರವಸೆಯನ್ನು ನೀಡಿ, ರಸ್ತೆ ನಿರ್ಮಾಣಕ್ಕೆ ಇದ್ದ ಅಡ್ಡಿ ಆತಂಕಗಳನ್ನು ನಿವಾರಿಸಿದರು.
ಕನ್ನಲ್ಲಿ ಗ್ರಾಮದ ಸರ್ವೆ ನಂ. 100/1, 64/2 ಹಾಗೂ 67/1 ಮತ್ತು ಕೆಂಚನಪುರ ಗ್ರಾಮದ ಸರ್ವೆ ನಂ. 17/1, 2, 3, 4 ಮತ್ತು 16/1ರ ಒಟ್ಟು 17 ಎಕರೆ ಜಮೀನು ರಸ್ತೆ ನಿರ್ಮಾಣಕ್ಕೆ ಸ್ಥಳೀಯ ಭೂಮಾಲೀಕರು ಅಡ್ಡಿಪಡಿಸುತ್ತಿದ್ದರು. ಇದಾದ ಬಳಿಕ ನಾಡಪ್ರಭು ಕೆಂಪೇಗೌಡ ಬಡಾವಣೆಯ 5, 6, 7 ಬ್ಲಾಕ್ ಗಳಲ್ಲಿ 9 ಮೀ., 12 ಮೀ., 15 ಮೀ. ಅಗಲದ ರಸ್ತೆಗಳ ಡಾಂಬರೀಕರಣ ಮಾಡಲು ಟೆಂಡರ್ ಅನ್ನು ಆಹ್ವಾನಿಸಲಾಗಿದ್ದು, ಟೆಂಡರ್ ಪ್ರಕ್ರಿಯೆಯನ್ನು ಶೀಘ್ರವಾಗಿ ಪೂರ್ಣಗೊಳಿಸಿ, ಕಾಮಗಾರಿಗಳನ್ನು ಪ್ರಾರಂಭಿಸಿ ನಿವೇಶನದಾರರಿಗೆ ಅನುಕೂಲವಾಗುವಂತೆ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಅಧಿಕಾರಿಗಳಿಗೆ ಸೂಚಿಸಿದರು.
8ನೇ ಬ್ಲಾಕ್ ಗಳಲ್ಲಿ ಪ್ರಗತಿಯಲ್ಲಿರುವ ಸಿವಿಲ್ ಕಾಮಗಾರಿಗಳ ಪರಿವೀಕ್ಷಣೆ ಹಾಗೂ ಎಂ.ಎ.ಆರ್. ಮುಖ್ಯರಸ್ತೆಯ ಸ್ಥಳ ಪರಿಶೀಲನೆ ಕೈಗೊಂಡರು. ಬಡಾವಣೆಯಲ್ಲಿ ಮನೆ ಕಟ್ಟುತ್ತಿರುವ ಹಂಚಿಕೆದಾರರಿಗೆ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಪ್ರಾಧಿಕಾರದಿಂದ ಒದಗಿಸಿರುವ ಬಗ್ಗೆ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಪ್ರಾಧಿಕಾರದ ಅಭಿಯಂತರ ಸದಸ್ಯರಾದ ಡಾ. ಶಾಂತರಾಜಣ್ಣ ಹೆಚ್.ಆರ್., ನಗರ ಯೋಜಕ ಸದಸ್ಯರಾದ ಎಲ್.ಶಶಿಕುಮಾರ್, ಉಪ ಆಯುಕ್ತರಾದ ಡಾ.ಸೌಜನ್ಯ.ಎ., ಆರಕ್ಷಕ ಅಧೀಕ್ಷಕರಾದ ನಂಜುಂಡೇಗೌಡ ಹಾಗೂ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.