ಬೆಂಗಳೂರು, ಜ.7 www.bengaluruwire.com : ಅಯೋಧ್ಯೆ ಶ್ರೀರಾಮ ಮಂದಿರದಲ್ಲಿ ಇದೇ ಜನವರಿ 22ರಂದು ಶ್ರೀ ರಾಮನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆಯಲಿರುವ ಹಿನ್ನಲೆಯಲ್ಲಿ ರಾಜ್ಯದ ಎಲ್ಲಾ ಮುಜರಾಯಿ ಇಲಾಖೆ ಅಡಿ ಬರುವ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನಡೆಸಲು ನಿರ್ದೇಶಿಸಲಾಗಿದೆ.
ಅಯೋಧ್ಯೆಯ ರಾಮಲಲ್ಲಾ ದೇವರ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಸಮಯವಾದ 12 ಗಂಟೆ 29 ನಿಮಿಷ 8 ಸೆಕೆಂಡ್ ಇಂದ 12 ಗಂಟೆ 30 ನಿಮಿಷ 32 ಸೆಕೆಂಡ್ ಸಮಯದಲ್ಲಿ (12.29.8 ರಿಂದ 12.30.32* ) ಏಕಕಾಲದಲ್ಲಿ ರಾಜ್ಯದ ಎಲ್ಲಾ ಮುಜರಾಯಿ ದೇವಸ್ಥಾನಗಳಲ್ಲಿ ಮಹಾಮಂಗಳರತಿ ಮತ್ತು ವಿಶೇಷ ಪೂಜೆ ನಡೆಸಿ ದೇಶಕ್ಕೆ ರಾಜ್ಯಕ್ಕೆ ಎಲ್ಲರಿಗೂ ಶ್ರೀ ರಾಮನ ರಕ್ಷಣೆ ಇರಲಿ ಎಂದು ವಿಶೇಷ ಪ್ರಾರ್ಥನೆ ನಡೆಸಲು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಸೂಚಿಸಿದ್ದಾರೆ.
ರಾಜ್ಯದಲ್ಲಿ ಒಟ್ಟು 34,563 ಮುಜರಾಯಿ ಇಲಾಖೆಗೆ ಸೇರಿದ ದೇವಾಲಯಗಳಲ್ಲಿ ಜ.22ರಂದು ವಿಶೇಷ ಪೂಜೆ ಘಂಟಾನಾದ ಹೊರಹೊಮ್ಮಲಿದೆ.
ಪ್ರತಿ ರಾಮನವಮಿಯಂದು ರಾಮನ ಮೂರ್ತಿ ಮೇಲೆ ಸೂರ್ಯ ಕಿರಣದ ಸ್ಪರ್ಶ!! :
ಭಾರತದ ಪ್ರಖ್ಯಾತ ಬಾಹ್ಯಾಕಾಶ ವಿಜ್ಞಾನಿಗಳ ಸಲಹೆಯ ಮೇರೆಗೆ ಭಗವಾನ್ ಶ್ರೀರಾಮನ ವಿಗ್ರಹದ ಉದ್ದ ಮತ್ತು ಅದರ ಪ್ರತಿಷ್ಠಾಪನೆಯ ಎತ್ತರವನ್ನು ವಿನ್ಯಾಸಗೊಳಿಸಲಾಗಿದೆ. ಶ್ರೀರಾಮನ ವಿಗ್ರಹವು ಪ್ರಸ್ತುತ 51 ಇಂಚು ಎತ್ತರವಿದೆ. ಪ್ರತಿ ವರ್ಷ ಚೈತ್ರ ಮಾಸದ ಶುಕ್ಲ ಪಕ್ಷದ ಒಂಬತ್ತನೇ ದಿನ ರಾಮ ನವಮಿಯಂದು ಸ್ವತಃ ಸೂರ್ಯನ ಕಿರಣಗಳು ಮಧ್ಯಾಹ್ನ 12 ಗಂಟೆಗೆ ನೇರವಾಗಿ ಶ್ರೀರಾಮನ ಹಣೆಯ ಮೇಲೆ ಬೀಳುವುದರಿಂದ ಅದನ್ನು ಹೊಳೆಯುವಂತೆ ಮಾಡುತ್ತದೆ. ಈ ರೀತಿ ಶ್ರೀ ರಾಮಮಂದಿರವನ್ನು ವಿನ್ಯಾಸಗೊಳಿಸಿ ರೂಪಿಸಲಾಗಿದೆ.