ಬೆಂಗಳೂರು, ಜ.7 www.bengaluruwire.com : ರಾಜ್ಯದಲ್ಲಿ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ BESCOM) ಸೇರಿ ರಾಜ್ಯದ ಐದು ಎಸ್ಕಾಂಗಳು ವಿದ್ಯುತ್ ದರ ಏರಿಕೆ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗಕ್ಕೆ(ಕೆಇಆರ್‌ಸಿ KERC) ಪ್ರಸ್ತಾವನೆ ಸಲ್ಲಿಸಿವೆ.
ಬೆಸ್ಕಾಂ, ಪ್ರತಿ ಯೂನಿಟ್‌ಗೆ 49 ಪೈಸೆ ಹೆಚ್ಚಿಸುವಂತೆ ಮನವಿ ಮಾಡಿದೆ. ಇದೇ ರೀತಿ ಮೆಸ್ಕಾಂ (MESCOM), ಹೆಸ್ಕಾಂ (HESCOM), ಜೆಸ್ಕಾಂ (GESCOM), ಸೆಸ್ಕಾಂ (CESCOM)ಗಳು 40 ರಿಂದ 60 ಪೈಸೆ ದರ ಪರಿಷ್ಕರಿಸುವಂತೆ ಪ್ರಸ್ತಾವನೆ ಸಲ್ಲಿಸಿರುವುದಾಗಿ ಮೂಲಗಳು ತಿಳಿಸಿವೆ. ಏಪ್ರಿಲ್‌ನಿಂದ ದರ ಹೆಚ್ಚಿಸುವಂತೆ ಪ್ರಸ್ತಾವನೆಯಲ್ಲಿ ಮನವಿ ಮಾಡಲಾಗಿದೆ. ನಿಗದಿತ ಶುಲ್ಕದಲ್ಲಿ ಏರಿಕೆ ಇಲ್ಲ ಆದರೆ ಕೈಗಾರಿಕೆ ಬಳಕೆದಾರರಿಗೆ ಮಾತ್ರ ಬೇಡಿಕೆ ಶುಲ್ಕ ಹಾಗೂ ವಿದ್ಯುತ್ ಬಳಕೆ ಶುಲ್ಕ ಎರಡನ್ನೂ ಹೆಚ್ಚಿಸಲು ಮನವಿ ಮಾಡಲಾಗಿದೆ.
ಪ್ರತಿ ವರ್ಷ ಡಿಸೆಂಬರ್ ಅಥವಾ ಜನವರಿಯಲ್ಲಿ ಎಸ್ಕಾಂಗಳು ವಿದ್ಯುತ್ ದರ ಪರಿಷ್ಕರಣೆಗೆ ಪ್ರಸ್ತಾವನೆ ಸಲ್ಲಿಸುತ್ತವೆ. ಪ್ರಸ್ತಾವನೆ ಸಲ್ಲಿಸಿದ ನಂತರ, ಕೆಇಆರ್‌ಸಿ ಪ್ರತಿ ಕಂಪನಿಯ ಅರ್ಜಿ ಪರಿಶೀಲಿಸಿ ಸಾರ್ವಜನಿಕ ವಿಚಾರಣೆ ನಡೆಸಿ ದರ ಪರಿಷ್ಕರಣೆ ಮಾಡಲಿದ್ದು ಏಪ್ರಿಲ್‌ನಿಂದ ಹೊಸ ದರ ಜಾರಿಗೆ ಬರಲಿದೆ.
ಇಂಧನ ಹೊಂದಾಣಿಕೆ ವೆಚ್ಚ ಆಧರಿಸಿ ಇತ್ತೀಚೆಗಷ್ಟೇ ಪ್ರತಿ ಯೂನಿಟ್‌ಗೆ 37 ಪೈಸೆಯಿಂದ 51 ಪೈಸೆಯವರೆಗೆ ದರ ಕಡಿಮೆ ಮಾಡಿ ವಿದ್ಯುತ್ ಸರಬರಾಜು ಕಂಪನಿಗಳು ಆದೇಶ ಹೊರಡಿಸಿದ್ದವು.
ಎಲ್ಲ ವಿದ್ಯುತ್ ಸರಬರಾಜು ಕಂಪನಿಗಳು (ಎಸ್ಕಾಂಗಳು) 2023-24ನೇ ಸಾಲಿಗೆ ಯೂನಿಟ್‌ಗೆ ಸರಾಸರಿ 1.85 ರೂ. (ಶೇ 23.83ರಷ್ಟು) ಹೆಚ್ಚಿಸುವಂತೆ ಕೋರಿ ಪ್ರಸ್ತಾವ ಸಲ್ಲಿಸಿದ್ದವು. ಈ ಬೇಡಿಕೆ ಪರಿಗಣಿಸಿ ಕೆಇಆರ್‌ಸಿ ಕೇವಲ ಶೇ 4.33ರಷ್ಟು ದರ ಏರಿಸಲು ಒಪ್ಪಿಗೆ ಸೂಚಿಸಿತ್ತು. ಕಳೆದ ವರ್ಷ ಏಪ್ರಿಲ್ 1 ರಿಂದಲೇ ಈ ದರ ಅನ್ವಯವಾಗುವಂತೆ ಜಾರಿಗೆ ಬಂದಿತ್ತು. ಪ್ರತಿ ಯೂನಿಟ್‌ಗೆ ಸರಾಸರಿ 35 ಪೈಸೆ ಹೆಚ್ಚಿಸಲಾಗಿತ್ತು. ಇದು ಎಲ್ಲಾ ವಿದ್ಯುತ್ ಸರಬರಾಜು ಕಂಪನಿಗಳಿಗೂ (ಎಸ್ಕಾಂ) ಅನ್ವಯವಾಗಲಿದೆ. ಅದಕ್ಕೂ ಹಿಂದಿನ ವರ್ಷ (2022-23ನೇ ಸಾಲಿಗೆ) ಸರಾಸರಿ 30 ಪೈಸೆ ಹೆಚ್ಚಿಸಲಾಗಿತ್ತು.