ಶ್ರೀಹರಿಕೋಟ, ಜ.6 wwww.bengaluruwire.com : ಇಸ್ರೊ ಆದಿತ್ಯ ಎಲ್-1 (Aditya L1) ಉಪಗ್ರಹ ಯಶಸ್ವಿಯಾಗಿ ಸೂರ್ಯ-ಭೂಮಿಯ ನಡುವಿನ ಲ್ಯಾಂಗ್ರೇಜ್ ಪಾಯಿಂಟ್ (Lagrage Point) ನಲ್ಲಿ ಲ್ಯಾಂಡ್ ಮಾಡುವ ಮೂಲಕ ಮತ್ತೊಂದು ಮಹತ್ವದ ಐತಿಹಾಸಿಕ ಸಾಧನೆ ಮಾಡಿದೆ. ಈ ಮೂಲಕ ಬಾಹ್ಯಾಕಾಶ ಸಂಸ್ಥೆಯ 5 ವರ್ಷಗಳ ಪ್ರಯತ್ನ ಸಾರ್ಥಕವಾದಂತಾಗಿದೆ.
ಭಾರತದ ಆದಿತ್ಯ ಉಪಗ್ರಹವನ್ನು ಎಲ್ 1 ಬಿಂದುವಿನ ಹ್ಯಾಲೋ ಕಕ್ಷೆಗೆ ಸೇರಿಸಲಾಗಿದೆ. ಭಾರತದ ಮೊದಲ ಸೌರ ವೀಕ್ಷಣಾಲಯದ ದೂರವು ಭೂಮಿಯಿಂದ 15 ಲಕ್ಷ ಕಿ.ಮೀ. ದೂರದಲ್ಲಿದ. ಕಳೆದ ವರ್ಷ ಸೆಪ್ಟೆಂಬರ್ 2 ರಂದು ಪ್ರಾರಂಭವಾದ ಆದಿತ್ಯ ಎಲ್-1 ಉಪಗ್ರಹದ ಪ್ರಯಾಣವು ಇಂದಿಗೆ ಮುಗಿದಂತಾಗಿದೆ. 400 ಕೋಟಿ ರೂ.ಗಳ ಈ ಮಹತ್ವದ ಯೋಜನೆ ಹಲವು ಖಗೋಳ ಕೌತುಕಗಳ ಅಧ್ಯಯನಕ್ಕೆ ನಾಂದಿ ಹಾಡಲಿದೆ. ಸೂರ್ಯನ ವೈಜ್ಞಾನಿಕ ಅಧ್ಯಯನದಿಂದ ವಿಶ್ವದ ಕುರಿತಂತೆ ಸಾಕಷ್ಟು ರಹಸ್ಯ ಮಾಹಿತಿಗಳು ತೆರೆದುಕೊಳ್ಳಲಿದೆ.
ಆದಿತ್ಯ ಎಲ್1 ಉಪಗ್ರಹ ಪ್ರಯಾಣ ಸೆ.2ರಿಂದ ಆರಂಭವಾಗಿ ಸುಧೀರ್ಘ ಐದು ತಿಂಗಳ ನಂತರ, ಇಂದು (ಜ.6) ಸಂಜೆ, ಈ ಉಪಗ್ರಹವು ಎಲ್ 1 ಬಿಂದುವನ್ನು ತಲುಪಿತು. ಈ ಬಿಂದುವಿನ ಸುತ್ತಲೂ ಸೌರ ಹ್ಯಾಲೋ ಕಕ್ಷೆಯನ್ನು ನಿಯೋಜಿಸಲಾಗಿದೆ. ಆದಿತ್ಯ-ಎಲ್ 1 ಉಪಗ್ರಹದ ಥ್ರಸ್ಟರ್ ಗಳನ್ನು ಹ್ಯಾಲೋ ಕಕ್ಷೆಯಲ್ಲಿ ಇರಿಸಲು ಸ್ವಲ್ಪ ಸಮಯದವರೆಗೆ ಚಾಲನೆ ಮಾಡಲಾಗಿತ್ತು. ಇದು ಒಟ್ಟು 12 ಥ್ರಸ್ಟರ್ ಗಳನ್ನು ಹೊಂದಿದೆ.
ಇಸ್ರೊ ವಿಜ್ಞಾನಿಗಳ ಈ ಸಾಧನೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಎಕ್ಸ್ ನಲ್ಲಿ ಕೊಂಡಾಡಿದ್ದಾರೆ, “ಭಾರತ ಮತ್ತೊಂದು ಹೆಗ್ಗುರುತನ್ನು ಸೃಷ್ಟಿಸಿದೆ. ಭಾರತದ ಮೊದಲ ಸೌರ ವೀಕ್ಷಣಾಲಯ ಆದಿತ್ಯ-ಎಲ್1 ತನ್ನ ಗಮ್ಯ ಸ್ಥಾನವನ್ನು ತಲುಪಿದೆ. ಇದು ಅತ್ಯಂತ ಸಂಕೀರ್ಣವಾದ ಬಾಹ್ಯಾಕಾಶ ಕಾರ್ಯಾಚರಣೆಯಾಗಿದ್ದು, ನಮ್ಮ ವಿಜ್ಞಾನಿಗಳ ನಿರಂತರ ಸಮರ್ಪಣೆಗೆ ಈ ಸಾಧನೆಯು ಸಾಕ್ಷಿಯಾಗಿದೆ. ಈ ಅಸಾಧಾರಣ ಸಾಧನೆಯನ್ನು ನಾನು ರಾಷ್ಟ್ರದ ಜನರೊಂದಿಗೆ ಸೇರಿ ಶ್ಲಾಘಿಸುತ್ತೇನೆ. ಮಾನವೀಯತೆಯ ಪ್ರಯೋಜನಕ್ಕಾಗಿ ನಾವು ವಿಜ್ಞಾನದ ಹೊಸ ಗಡಿಗಳನ್ನು ತಲುಪುವ ಪ್ರಯತ್ನವನ್ನು ಮುಂದುವರಿಸುತ್ತೇವೆ.” ಎಂದು ಪೋಸ್ಟ್ ಮಾಡಿದ್ದಾರೆ.
ಇಸ್ರೊ ಭೂಮಿಯ ಪ್ರಭಾವದ ಗೋಳದ ಹೊರಗೆ ಬಾಹ್ಯಾಕಾಶ ನೌಕೆಯನ್ನು ಯಶಸ್ವಿಯಾಗಿ ಕಳುಹಿಸುತ್ತಿರುವುದು ಇದು ಎರಡನೆಯ ಬಾರಿ. ಮೊದಲನೆ ಸಲ ಮಂಗಳಯಾನ ಯೋಜನೆಯಲ್ಲೂ ಭೂಮಿಯ ಪ್ರಭಾವ ಗೋಳದಿಂದ ಆಚೆಗೆ ಇರುವ ಮಂಗಳ ಗ್ರಹದತ್ತ ಇಸ್ರೊ ಮಾರ್ಸ್ ಆರ್ಬಿಟರ್ ಮಿಷನ್ (Mars Orbitor Mission) ಹಮ್ಮಿಕೊಂಡಿತ್ತು.
ಆದಿತ್ಯ-ಎಲ್1 ಮಿಷನ್ ಯೋಜನೆಯಲ್ಲಿ ಸೂರ್ಯನ ದ್ಯುತಿಗೋಳ, ವರ್ಣಗೋಳ ಮತ್ತು ಕರೋನಾವನ್ನು ಅಧ್ಯಯನ ಮಾಡುವ ಗುರಿಯನ್ನು ಹೊಂದಿದೆ. ಇದು ಬಾಹ್ಯಾಕಾಶ ಹವಾಮಾನದ ಡೈನಾಮಿಕ್ಸ್ ಮತ್ತು ಕಣಗಳು ಮತ್ತು ಕ್ಷೇತ್ರಗಳ ಪ್ರಸರಣವನ್ನು ಸಹ ಅಧ್ಯಯನ ನಡೆಸಲಿದೆ.