ಬೆಂಗಳೂರು, ಜ.5 www.bengaluruwire.com : ರಾಜ್ಯದ ಕಾಂಗ್ರೆಸ್ ಸರ್ಕಾರದ ಶಕ್ತಿ ಯೋಜನೆ (Shakti Scheme)ಯಡಿ ವಿವಿಧ ಸಾರಿಗೆ ನಿಗಮಗಳ ಬಸ್ ಗಳಲ್ಲಿ ಉಚಿತ ಪ್ರಯಾಣ ಮಾಡುವ ಮಹಿಳೆಯರ ಸಂಖ್ಯೆ ಯೋಜನೆ ಆರಂಭದಲ್ಲಿ ಪ್ರತಿದಿನ ಸರಾಸರಿ 42 ಲಕ್ಷದಿಂದ ಸದ್ಯ 60 ಲಕ್ಷಕ್ಕೆ ಏರಿಕೆಯಾಗಿದೆ. ಇದಕ್ಕೆ ತಕ್ಕಂತೆ ಯೋಜನೆಗೆ ಹೆಚ್ಚುವರಿಯಾಗಿ 1,600 ಕೋಟಿ ರೂ. ಅಗತ್ಯತೆ ಕಂಡು ಬಂದಿದೆ. ಈ ಯೋಜನೆ ಸರ್ಕಾರಕ್ಕೆ ಹೊರೆಯಾದರೂ ಅಧಿಕಾರ ಉಳಿಸಿಕೊಳ್ಳುವಲ್ಲಿ ಅನಿವಾರ್ಯತೆಯವಾಗಿದೆ ಎಂಬ ಮಾತು ಕೇಳಿಬಂದಿದೆ.
ಕಾಂಗ್ರೆಸ್‌ನ ಗ್ಯಾರಂಟಿಗಳಲ್ಲಿ (Congress Guarantee) ಒಂದಾದ ಶಕ್ತಿ ಯೋಜನೆ ಜಾರಿಯಾಗಿ ಈಗಾಗಲೇ ಏಳು ತಿಂಗಳು ಕಳೆದಿವೆ. ಕಳೆದ ವರ್ಷದ ಜೂನ್ 11ರಿಂದ, ಈ ವರ್ಷದ ಜನವರಿ 4ನೇ ತಾರೀಖಿನ ವರೆಗೆ ಒಟ್ಟಾರೆ 225 ಜನರು ಸಾರಿಗೆ ನಿಗಮಗಳ ಬಸ್ ನಲ್ಲಿ ಪ್ರಯಾಣಿಸಿದ್ದಾರೆ. ಶಕ್ತಿ ಯೋಜನೆಯಡಿ ಒಟ್ಟಾರೆ 127.69 ಕೋಟಿ ಮಹಿಳೆಯರು ಉಚಿತವಾಗಿ ಬಸ್ ನಲ್ಲಿ ಪ್ರಯಾಣಿಸಿದ್ದಾರೆ. ಈ ಪ್ರಯಾಣದ ಟಿಕೆಟ್ ಮೌಲ್ಯವು 3,051 ಕೋಟಿ ರೂ. ನಷ್ಟಾಗಿದೆ. ಅಂದರೆ ಜೂನ್ ನಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾದ ಬಳಿಕ ನಡೆದ ಬಜೆಟ್ ನಲ್ಲಿ ಈ ನೂತನ ಯೋಜನೆಗೆ ಮೀಸಲಿಟ್ಟಿದ್ದು 2,800 ಕೋಟಿ ರೂ. ಆದರೆ ಯೋಜನೆಗೆ ನಿಗದಿಪಡಿಸಿದ ಮೊತ್ತಕ್ಕಿಂತ ವೇಗವಾಗಿ ಹಣ ವೆಚ್ಚವಾಗುತ್ತಿದೆ. ಆದರೆ ಅದೇ ವೇಗದಲ್ಲಿ ಸಾರಿಗೆ ನಿಗಮಗಳಿಗೆ ಸರ್ಕಾರದಿಂದ ಹಣ ಪಾವತಿಯಾಗುತ್ತಿಲ್ಲ. ಬಜೆಟ್ ನಲ್ಲಿ ಮೀಸಲಿಟ್ಟ ಪ್ರಮಾಣಕ್ಕಿಂತ 251 ಕೋಟಿ ರೂ. ಹೆಚ್ಚುವರಿಯಾಗಿ ಈಗಾಗಲೇ ಕರ್ಚಾಗಿದೆ.
ಸಿಎಂ ಸಿದ್ದರಾಮಯ್ಯನವರು (CM Siddaramaiah) ಶಕ್ತಿ ಯೋಜನೆಗೆ ಎಂದು ತಮ್ಮ ಬಜೆಟ್‌ನಲ್ಲಿ 9 ತಿಂಗಳಿಗೆ 2,800 ಕೋಟಿ ರೂ.ಗಳನ್ನು ಮೀಸಲಿಟ್ಟಿದ್ದರು. ಆದರೆ ಈ ಯೋಜನೆ ಜಾರಿಯಾಗಿ, ಈಗಾಗಲೇ ಈ ಹಣ ಖಾಲಿಯಾಗಿದೆ. ಹೆಚ್ಚುವರಿ ಹಣಕ್ಕೆ ಸಾರಿಗೆ ಇಲಾಖೆ ಕಾಯುತ್ತಾ ಕುಳಿತಿದೆ. ಸರ್ಕಾರ ಪ್ರತಿ ತಿಂಗಳಿಗೆ 311 ಕೋಟಿ ರೂ. ಕರ್ಚಾಗಬಹುದು ಎಂದು ಅಂದಾಜಿಸಿತ್ತು. ಆದರೆ ತಿಂಗಳಿಗೆ ಸರಾಸರಿಯಾಗಿ 435 ಕೋಟಿ ರೂ. ನಂತೆ (ಜ.4ರ ತನಕ) 3,051 ಕೋಟಿ ರೂ. ಖರ್ಚಾಗಿದೆ. ಜನವರಿಯೂ ಸೇರಿದಂತೆ ಉಳಿದ ಮೂರು ತಿಂಗಳಿಗೆ 1,305 ಕೋಟಿ ರೂ. ಬೇಕಾಗಬಹುದು. ನಿಗಮಗಳಿಗೆ ಬಾಕಿ ಮೊತ್ತವೂ ಸೇರಿದಂತೆ 1,600 ಕೋಟಿ ರೂ. ಹಣ ಸರ್ಕಾರದಿಂದ ನಿಗಮಗಳಿಗೆ ಬಂದಲ್ಲಿ ಈ ಯೋಜನೆಗೆ ಬಸ್ ಕಾರ್ಯಾಚರಣೆ ನಡೆಸಲು ಅನುಕೂಲವಾಗುತ್ತದೆ. ಇಲ್ಲವಾದಲ್ಲಿ ಶಕ್ತಿ ಯೋಜನೆ ಜಾರಿಗೆ ಮುಂಚೆ ನಷ್ಟದಲ್ಲಿದ್ದ ಕೆಎಸ್ ಆರ್ ಟಿಸಿ, ಬಿಎಂಟಿಸಿ, ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆ, ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯು ಪುನಃ ಅದೇ ದಾರಿಯತ್ತ ವಾಲಿದರೆ ಆಶ್ಚರ್ಯಪಡಬೇಕಿಲ್ಲ.
ಆದರೆ ಈ ಬಗ್ಗೆ ಸಾರಿಗೆ ಸಚಿವರನ್ನು ಬೆಂಗಳೂರು ವೈರ್ ಕೇಳಿದರೆ, “ಸರ್ಕಾರ ಸಾರಿಗೆ ನಿಗಮಗಳಿಗೆ 1,000 ಕೋಟಿ ರೂ.ಗಿಂತಲೂ ಹೆಚ್ಚು ಹಣವನ್ನು ನೀಡಿದೆ. ಉಳಿದ ಹಣ ಇಲಾಖೆಯಲ್ಲಿದೆ. ಹೆಚ್ಚುವರಿಯಾಗಿ 1,600 ಕೋಟಿ ರೂ. ಬೇಕಾಗುತ್ತದೆ. ಅದನ್ನು ಮುಂದಿನ ತಿಂಗಳ ಫೆಬ್ರವರಿಯಲ್ಲಿ ಬಜೆಟ್ ಮರು ಹೊಂದಾಣಿಕೆ ಮಾಡಿಕೊಂಡು ಸರ್ಕಾರ ಈ ಹಣ ನೀಡಲಿದೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ : BW SPECIAL | BWSSB | ಕಾವೇರಿ 5ನೇ ಹಂತ ಯೋಜನೆ : ಬೆಂಗಳೂರಿನ 110 ಹಳ್ಳಿಗಳಿಗೆ ಏಪ್ರಿಲ್ ನಿಂದ ನೀರು ಪೂರೈಕೆ
ಲೆಕ್ಕಾಚಾರದಲ್ಲಿ ಎಡವಿತಾ ಸರ್ಕಾರ? :
ಸ್ತ್ರೀಶಕ್ತಿ ಯೋಜನೆ ಜೂನ್ ತಿಂಗಳಿನಲ್ಲಿ ಹೊಸ ಸರ್ಕಾರದ ಬಜೆಟ್ ಆಗಿದ್ದು, ಇನ್ನು 9 ತಿಂಗಳು ಆರ್ಥಿಕ ವರ್ಷ ಮುಗಿಯಲು ಸಮಯ ಇದ್ದಿದ್ದು. ಆಗ ಪ್ರತಿದಿನ ಒಟ್ಟು ಪ್ರಯಾಣಿಕರ ಸಂಖ್ಯೆ ಆಗ 84 ಲಕ್ಷ ಜನ ಇದ್ದಿತ್ತು. ಅದರಲ್ಲಿ ಶೇ.50 ಮಹಿಳೆಯರು ಅಂತ ಲೆಕ್ಕ ಹಾಕಿ 42 ಲಕ್ಷ ಜನ ಮಹಿಳೆಯರು ಬಸ್ ನಲ್ಲಿ ಪ್ರಯಾಣಿಸಬಹುದು. ಆಗ 9 ತಿಂಗಳಿಗೆ 2800 ಕೋಟಿ ರೂ. ಬೇಕಾಗಬಹುದು ಎಂದು ಅಂದಾಜಿಸಲಾಯಿತು. ಅಷ್ಟು ಹಣವನ್ನು ಬಜೆಟ್ ನಲ್ಲಿ ಸ್ತ್ರೀಶಕ್ತಿ ಯೋಜನೆಗೆ ಮೀಸಲಿಡಲಾಗಿತ್ತು.
ಬಸ್ ಪ್ರಯಾಣಿಕರ ಸಂಖ್ಯೆ 84 ಲಕ್ಷದಿಂದ 1.10 ಕೋಟಿಗೆ ಹೆಚ್ಚಳ :
ಆಮೇಲೆ ಪ್ರತಿದಿನ ಒಟ್ಟಾರೆ ಸಾರಿಗೆ ನಿಗಮಗಳ ಬಸ್ ನಲ್ಲಿ ಪ್ರಯಾಣಿಸುವವರ ಸಂಖ್ಯೆ 84 ಲಕ್ಷದಿಂದ 1.10 ಕೋಟಿಗೆ ಏರಿಕಾಯಾಯಿತು. ಈ ಮೊದಲು ಸರಾಸರಿಯಾಗಿ ಪ್ರತಿದಿನ 42 ಲಕ್ಷ ಜನ ಮಹಿಳೆಯರು ಉಚಿತ ಬಸ್ ಪ್ರಯಾಣ ಮಾಡುತ್ತಿದ್ದರು. ಆ ಪ್ರಮಾಣ ಹೆಚ್ಚಾಗಿ ಪ್ರತಿದಿನ ಸರಾಸರಿಯಾಗಿ 60 ಲಕ್ಷ ಜನ ಮಹಿಳೆಯರು ಓಡಾಡುತ್ತಿದ್ದಾರೆ. ಅಲ್ಲಿಗೆ ಅಂದಾಜು ಮಾಡಿದ್ದಕ್ಕಿಂತ ಪ್ರತಿದಿನ 20 ರಿಂದ 25 ಲಕ್ಷ ಮಹಿಳೆಯರ ಓಡಾಟ ಜಾಸ್ತಿಯಾಗಿದೆ. ಅದಕ್ಕೆ ಈಗ ಈ ಹಿಂದೆ ಬಜೆಟ್ ನಲ್ಲಿ ತೆಗೆದಿರಿಸಿದ್ದ 2,800 ಕೋಟಿ ರೂ. ಗಿಂತ ಹೆಚ್ಚುವರಿಯಾಗಿ 1,600 ಕೋಟಿ ರೂ. ಬೇಕಾಗುತ್ತದೆ. ಅದಕ್ಕೆ ಈಗ ಫೆಬ್ರವರಿ ತಿಂಗಳಿನಲ್ಲಿ ಮರು ಹೊಂದಾಣಿಕೆ ಮಾಡಿಕೊಂಡು ರಾಜ್ಯ ಸರ್ಕಾರ ಶಕ್ತಿ ಯೋಜನೆಗೆ ಹಣ ನೀಡಲಿದೆ.
2024-25ನೇ ಆರ್ಥಿಕ ವರ್ಷಕ್ಕೆ 6,500 ಕೋಟಿ ರೂ. ಅನುದಾನ :
ಮುಂದಿನ ವರ್ಷದ 2024-25ನೇ ಸಾಲಿನ ಬಜೆಟ್ ನಲ್ಲಿ ಈ ಸಾಲಿನ ಆರ್ಥಿಕ ವರ್ಷದ ಲೆಕ್ಕವನ್ನು ಗಣನೆಗೆ ತೆಗೆದುಕೊಂಡು ನಿಖರವಾಗಿ ಶಕ್ತಿ ಯೋಜನೆಗೆ ಹಣ ಮೀಸಲಿಡಲಾಗುತ್ತದೆ. ಪ್ರತಿದಿನ ಈಗ ಸರಾಸರಿಯಾಗಿ 60 ಲಕ್ಷ ಜನ ಮಹಿಳೆಯರು ಓಡಾಡುತ್ತಿದ್ದಾರೆ ಅದನ್ನು 365 ದಿನಕ್ಕೆ ಲೆಕ್ಕ ಹಾಕಿಕೊಂಡು ಮುಂದಿನ ಬಜೆಟ್ ನಲ್ಲಿ ಅಂದಾಜು 6,500 ಕೋಟಿ ರೂ. ಹಣವನ್ನು ಈ ಯೋಜನೆಗೆ ಮೀಸಲಿಡಲಾಗುತ್ತದೆ. ನಂತರ ವಿವಿಧ ಸಾರಿಗೆ ನಿಗಮಗಳಿಗೆ ಸರಿಯಾಗಿ ಶಕ್ತಿ ಯೋಜನೆಗೆ ಬಳಕೆಯಾದ ಮೊತ್ತಕ್ಕೆ ಅನುಗುಣವಾಗಿ ಹಣ ಹಂಚಿಕೆ ಮಾಡಲಾಗುತ್ತದೆ ಎಂದು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ಶಕ್ತಿ ಯೋಜನೆ ಜಾರಿಯಾದ ಕೆಲ ತಿಂಗಳುಗಳ ನಂತರ ಪ್ರಯಾಣಿಕರ ಸಂಖ್ಯೆಯಲ್ಲಿ ಕಡಿಮೆಯಾಗಬಹುದೆಂಬ ನಿರೀಕ್ಷೆಯಿತ್ತು. ಆದರೆ ಅದು ಹುಸಿಯಾಗಿದ್ದು, ದಿನದಿಂದ ದಿನಕ್ಕೆ ಶಕ್ತಿ ಯೋಜನೆಗೆ ಭರ್ಜರಿ ಯಶಸ್ಸು ಕಂಡುಬರುತ್ತಿದೆ. ಹೀಗಾಗಿ ಸರ್ಕಾರದ ಲೆಕ್ಕಾಚಾರ ಮೀರಿ ಹಣ ವ್ಯಯವಾಗುತ್ತಿದೆ.