ಬೆಂಗಳೂರು, ಜ.4 www.bengaluruwire.com : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP)ಗೆ ಸೇರ್ಪಡೆಯಾದ 110 ಹಳ್ಳಿಗಳ ಪ್ರದೇಶಗಳಿಗೆ 775 ದ.ಲ.ಲೀ ಹೆಚ್ಚುವರಿ ಕುಡಿಯುವ ನೀರನ್ನು ಪೂರೈಸುವ ಕಾವೇರಿ 5ನೇ ಹಂತ (Kaveri 5th Phase)ದ ಕಾಮಗಾರಿ ಇದೇ ಮಾರ್ಚ್ ನಲ್ಲಿ ಪೂರ್ಣಗೊಳ್ಳಲಿದೆ. ಏಪ್ರಿಲ್‌ನಲ್ಲಿ ಪ್ರಾಯೋಗಿಕವಾಗಿ ನೀರು ಪೂರೈಕೆ ಆರಂಭವಾಗಲಿದೆ. ಮೇ ತಿಂಗಳಿನಿಂದ ಪೂರ್ಣ ಪ್ರಮಾಣದ ಹೆಚ್ಚುವರಿ ಕುಡಿಯುವ ನೀರು ಪೂರೈಕೆಯಾಗಲಿದೆ.
ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಯೋಜನೆ (ಹಂತ-3) ಕಾವೇರಿ 5ನೇ ಹಂತದ ಕಾಮಗಾರಿಯನ್ನು ಜೈಕಾ (JICA) ಸಂಸ್ಥೆಯು ನೀಡಿದ 5,550 ಕೋಟಿ ರೂ. ಸಾಲದ ಅನುದಾನದಡಿಯಲ್ಲಿ ತೆಗೆದುಕೊಳ್ಳಲಾಗಿದೆ. ಯೋಜನೆಯಡಿಯಲ್ಲಿ ಬಿಬಿಎಂಪಿ ವ್ಯಾಪ್ತಿಯ 110 ಹಳ್ಳಿಗಳ 225 ಚ.ಕಿ.ಮೀ ವ್ಯಾಪ್ತಿಯಲ್ಲಿ ಬರುವ ಸುಮಾರು 50 ಲಕ್ಷಕ್ಕೂ ಹೆಚ್ಚಿನ ನಾಗರೀಕರಿಗೆ ಉತ್ತಮ ಗುಣಮಟ್ಟದ ಕುಡಿಯುವ ನೀರು ಮತ್ತು ಒಳಚರಂಡಿ ವ್ಯವಸ್ಥೆಯನ್ನು ಕಲ್ಪಿಸುವುದು ಸರ್ಕಾರದ ಯೋಜನೆಯ ಪೂರ್ಣ ಉದ್ದೇಶವಾಗಿದೆ.
ಈ ಯೋಜನೆಯಿಂದಾಗಿ 110 ಹಳ್ಳಿಗಳ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಾಸಿಸುತ್ತಿರುವ ಸಾರ್ವಜನಿಕರ ಸಾಮಾಜಿಕ, ಆರ್ಥಿಕ ಮತ್ತು ಆರೋಗ್ಯ ಸ್ಥಿತಿಯು ಸುಧಾರಿಸಲಿದೆ.
ಯೋಜನೆಯಡಿ ಯಾವೆಲ್ಲಾ ಕಾಮಗಾರಿ ಕೈಗೊಳ್ಳಲಾಗಿದೆ?:
ಯೋಜನೆಯಡಿಯಲ್ಲಿ ಕುಡಿಯುವ ನೀರಿನ ಅಂಶ (Water Component)ವನ್ನು 10 ಪ್ಯಾಕೇಜ್ ಗಳಾಗಿ ವಿಂಗಡಿಸಿ ಟಿ.ಕೆ.ಹಳ್ಳಿ 775 ದ.ಶ.ಲೀ ಜಲಶುದ್ದೀಕರಣ ಸಾಮರ್ಥ್ಯದ ವಿನ್ಯಾಸ, ನಿರ್ಮಾಣ ಮತ್ತು ನಿರ್ವಹಣೆ ಜಲಸಂಗ್ರಾಹಗಾರ ಕಾರ್ಯಗಳು ನಡೆದಿದೆ. ಹಾಗೆಯೇ ಜಲರೇಚಕ ಯಂತ್ರಾಗಾರ ವಿನ್ಯಾಸ, ನಿರ್ಮಾಣ ಮತ್ತು ನಿರ್ವಹಣೆ ಕಾಮಗಾರಿ ಹಾರೋಹಳ್ಳಿ ಮತ್ತು ತಾತಗುಣಿಯಲ್ಲಿಯೂ ನಡೆಯುತ್ತಿದೆ. ಟಿ.ಕೆ.ಹಳ್ಳಿಯಿಂದ ಹಾರೋಹಳ್ಳಿಯವರೆಗೆ ಹಾಗೂ ಹಾರೋಹಳ್ಳಿಯಿಂದ ವಾಜರಹಳ್ಳಿಯವರೆಗೆ ತಲಾ 3,000 ಮಿ.ಮೀ ವ್ಯಾಸದ ಕೊಳವೆ ಮಾರ್ಗದ ಕಾಮಗಾರಿ ಕೈಗೊಳ್ಳಲಾಗಿದೆ.
ಅದೇ ರೀತಿ ಸ್ಕಾಡಾ ಸೆಂಟ್ರಲ್ ಲ್ಯಾಜ್ ಸಿಸ್ಟಮ್ ಬೆಂಗಳೂರು ನಗರದ ಪೂರ್ವ ಮತ್ತು ಪಶ್ಚಿಮ ಭಾಗದಲ್ಲಿ ಕುಡಿಯುವ ನೀರಿನ ಕೊಳವೆ ಮಾರ್ಗ ಹಾಗೂ ಜಲಸಂಗ್ರಹಾಗಾರಗಳ ನಿರ್ಮಾಣ ಯೋಜನೆ ಕಾಮಗಾರಿಗಳನ್ನು ಜಲಮಂಡಳಿ ವತಿಯಿಂದ ಕೈಗೆತ್ತಿಕೊಳ್ಳಲಾಗಿದೆ. ಈ ಎಲ್ಲಾ ಕಾಮಗಾರಿಗಳು ಮಾರ್ಚ್ ನಲ್ಲಿ ಪೂರ್ಣಗೊಂಡು ಕಾರ್ಯಾರಂಭ ಮಾಡಲಿವೆ.
ಈ ಕಾಮಗಾರಿಗಳು ಕೋವಿಡ್-19 ಸಾಂಕ್ರಾಮಿಕ ರೋಗ ಹಾಗೂ ರಾಷ್ಟ್ರೀಯ ಹೆದ್ದಾರಿ ಮತ್ತು ಇತರೆ ಇಲಾಖೆಗಳ ಅನುಮತಿಯ ವಿಳಂಬದಿಂದ ಕಾಮಗಾರಿಗಳ ಪೂರ್ಣಗೊಳ್ಳುವಿಕೆಯಲ್ಲಿ ಸ್ವಲ್ಪ ಮಟ್ಟಿನ ವ್ಯತ್ಯಾಸವಾಗಿರುತ್ತದೆ ಎಂದು ಬಿಡಬ್ಲ್ಯುಎಸ್ ಎಸ್ ಬಿ ಅಧಿಕಾರಿಗಳು ತಿಳಿಸಿದ್ದಾರೆ.
“ಬೆಂಗಳೂರು ಜಲಮಂಡಳಿಯ ನಿರಂತರ ಮೇಲ್ವಿಚಾರಣೆಯಿಂದ ಬೆಂಗಳೂರು ನಗರದ ಸಾರ್ವಜನಿಕರಿಗೆ ಯಾವುದೇ ರೀತಿಯ ಸಮಸ್ಯೆ ಆಗದಂತೆ ಕಾಮಗಾರಿಗಳು ಮಾರ್ಚ್ ಅಂತ್ಯಕ್ಕೆ ಪೂರ್ಣಗೊಳ್ಳಲಿದೆ. ಎಲ್ಲವೂ ಅಂತಿಮ ಹಂತದಲ್ಲಿದೆ. ಏಪ್ರಿಲ್ ತಿಂಗಳಲ್ಲಿ ಪ್ರಾಯೋಗಿಕ ಚಾಲನೆ ನಡೆಸಿ ಮೇ ನಿಂದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಸೇರ್ಪಡೆಯಾದ 110 ಹಳ್ಳಿಗಳ ಪ್ರದೇಶಗಳಿಗೆ ಹೆಚ್ಚುವರಿ ಕುಡಿಯುವ ನೀರನ್ನು ಪೂರೈಸಲಾಗುವುದು” ಎಂದು ಬೆಂಗಳೂರು ಜಲಮಂಡಳಿ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ಬೆಂಗಳೂರು ವೈರ್ ಗೆ ತಿಳಿಸಿದ್ದಾರೆ.
“ನಗರದ ಜನಸಂಖ್ಯೆ ಹೆಚ್ಚಳ ಮತ್ತು ಪ್ರದೇಶಗಳ ಅಭಿವೃದ್ಧಿಯಿಂದ ನಗರಕ್ಕೆ ಹೆಚ್ಚುವರಿಯಾಗಿ 10 ಟಿಎಂಸಿ ಅಡಿ ನೀರು ಒದಗಿಸುವ ಜಲಮಂಡಳಿ ಪ್ರಸ್ತಾವಕ್ಕೆ ಸರ್ಕಾರ ಸಮ್ಮತಿಸಿದೆ. ಹೀಗಾಗಿ ಈ ಹೆಚ್ಚುವರಿ ನೀರಿನ ಸಂಗ್ರಹ ಹಾಗೂ ಪೂರೈಕೆಗೆ ಅಗತ್ಯ ಕಾಮಗಾರಿಯನ್ನು ಸದ್ಯದಲ್ಲೇ ಆರಂಭವಾಗಲಿದೆ” ಎಂದವರು ವಿವರಿಸಿದ್ದಾರೆ.
ಪ್ರಸ್ತುತ ನಗರಕ್ಕೆ ಪ್ರತಿನಿತ್ಯ 1,450 ದಶಲಕ್ಷ ಲೀಟರ್ ಕಾವೇರಿ ನೀರನ್ನು ಪೂರೈಸಲಾಗುತ್ತಿದೆ. ಅಂದರೆ ತಿಂಗಳಿಗೆ 1.6 ಟಿಎಂಸಿ ಅಡಿ ನೀರನ್ನು ಬೆಂಗಳೂರು ಜಲಮಂಡಳಿ ಪೂರೈಸುತ್ತಿದೆ. ಕಾವೇರಿ 5ನೇ ಹಂತದ ಯೋಜನೆ ಪೂರ್ಣಗೊಂಡ ಮೇಲೆ ಪ್ರತಿನಿತ್ಯ 750 ದಶಲಕ್ಷ ಲೀಟರ್ ನೀರು ಹೆಚ್ಚುವರಿಯಾಗಿ ಪೂರೈಕೆಯಾಗಲಿದೆ. ಈ ಯೋಜನೆಯು ಸೇರ್ಡೆಯಾದರೆ ಅಲ್ಲಿಗೆ ಮಾಸಿಕ ನಗರಕ್ಕೆ ಒಟ್ಟಾರೆ 2.4 ಟಿಎಂಸಿ ಅಡಿ ನೀರು ಪೂರೈಸಿದಂತಾಗುತ್ತದೆ.
ಹೆಚ್ಚವರಿ 10 ಟಿಎಂಸಿ ನೀರು ಪೂರೈಕೆಗೆ ಸರ್ಕಾರ ಒಪ್ಪಿಗೆ :
ಇದೀಗ ಸರ್ಕಾರ ತಾಂತ್ರಿಕ ತಜ್ಞರ ನೇತೃತ್ವದ ಸಮಿತಿ ವರದಿ ಆಧರಿಸಿ, ಕೃಷಿ ಬೆಳೆಗೆ ಅಗತ್ಯಕ್ಕಿಂತ ಹೆಚ್ಚು ನೀರು ಬಳಕೆಯಾಗುವುದನ್ನು ಕಡಿಮೆಗೊಳಿಗೆ ಬೆಂಗಳೂರಿಗೆ ಆ ಹೆಚ್ಚಿನ ನೀರನ್ನು ನೀಡಬಹುದು ಎಂದು ಅಭಿಪ್ರಾಯಪಟ್ಟಿತ್ತು. ಈ ಹಿನ್ನಲೆಯಲ್ಲಿ ಜಲಮಂಡಳಿಯು ಹೆಚ್ಚವರಿ 10 ಟಿಎಂಸಿ ಅಡಿ ನೀರು ಸಂಗ್ರಹ ಹಾಗೂ ಪೂರೈಕೆಗೆ ಅಗತ್ಯ ಸಾಮರ್ಥ್ಯ ವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಿದೆ.
ಬೆಂಗಳೂರಿಗೆ ವಾರ್ಷಿಕ 34 ಟಿಎಂಸಿ ನೀರು ಹಂಚಿಕೆ :
ಇದು ಕಾರ್ಯಗತವಾದರೆ ಒಟ್ಟಾರೆ ನಗರಕ್ಕೆ ಸುಪ್ರೀಂಕೋರ್ಟ್ ತೀರ್ಪಿನಂತೆ ವಾರ್ಷಿಕ 24 ಟಿಎಂಸಿ ಹಂಚಿಕೆಯಾಗಿದ್ದು, ಪ್ರಸ್ತುತ 19 ಅಡಿ ಟಿಎಂಸಿ ನಗರಕ್ಕೆ ಪೂರೈಕೆಯಾಗುತ್ತಿದೆ. ಅಲ್ಲದೆ ಕಾವೇರಿ 5ನೇ ಹಂತದ ಯೋಜನೆಯಿಂದ 5 ಟಿಎಂಸಿ ಹಾಗೂ ಸರ್ಕಾರ ಒಪ್ಪಿಗೆ ನೀಡಿದ ಹೆಚ್ಚುವರಿ 10 ಟಿಎಂಸಿ ಸೇರಿದರೆ ವಾರ್ಷಿಕ ಒಟ್ಟಾರೆ 34 ಟಿಎಂಸಿ ಅಡಿ ನೀರು ನಗರಕ್ಕೆ ಹಂಚಿಕೆಯಾದಂತಾಗುತ್ತದೆ. ಇಷ್ಟಾದರೂ ವೇಗವಾಗಿ ಬೆಳೆಯುತ್ತಿರುವ ಬೆಂಗಳೂರಿಗೆ ನೀರಿನ ಬೇಡಿಕೆ ಜಾಸ್ತಿಯಾಗಿ ಇದು ಸಾಲದೆಂಬಂತಾಗಿದೆ. ನಗರದಲ್ಲಿ ಖಾಸಗಿ ಬೋರ್ ವೆಲ್, ಟ್ಯಾಂಕರ್ ಗಳ ಬಳಕೆಯ ಕಾರಣಕ್ಕೆ 1.45 ಕೋಟಿ ಜನಸಂಖ್ಯೆ ಬೆಂಗಳೂರಿಗೆ ಹಾಗೂ ಹೀಗೂ ಕುಡಿಯುವ ನೀರು ಲಭ್ಯವಾಗುತ್ತಿದೆ. ಹೀಗಿದ್ದರೂ ಶುದ್ಧ ಕುಡಿಯುವ ನೀರಿನ ಕೊರತೆ ಬೆಂಗಳೂರನ್ನು ಬಿಟ್ಟು ಬಿಡದೆ ಕಾಡುತ್ತಿದೆ.