ಬೆಂಗಳೂರು, ಜ.3 www.bengaluruwire.com : ಕೆ.ಆರ್ ಪುರದ ಐಟಿಐ ಕ್ರೀಡಾಂಗಣದಲ್ಲಿ ಬುಧವಾರ ನಡೆದ “ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ” ಕಾರ್ಯಕ್ರಮಕ್ಕೆ ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವರಾದ ಡಿ.ಕೆ ಶಿವಕುಮಾರ್ ರವರು ಚಾಲನೆ ನೀಡಿದರು.
ನಂತರ ಕಾರ್ಯಕ್ರಮದಲ್ಲಿ ನಾಗರೀಕರನ್ನು ಉದ್ದೇಶಿಸಿ ಮಾತನಾಡಿದ ಅವರು, ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದಾಗಿ ಮಹಿಳೆಯರು ಉಚಿತವಾಗಿ ಬಸ್ ಪ್ರಯಾಣ ಮಾಡುತ್ತಿದ್ದಾರೆ. ಗೃಹಜ್ಯೋತಿ ಯೋಜನೆ ಮೂಲಕ ಫಲಾನುಭವಿಗಳಿಗೆ 200 ಯೂನಿಟ್ ವರೆಗೂ ಉಚಿತ ವಿದ್ಯುತ್ ಸಿಗುತ್ತಿವೆ. ಸುಮಾರು ಒಂದು ಕೋಟಿಗೂ ಹೆಚ್ಚು ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆ ಮೂಲಕ ಪ್ರತಿ ತಿಂಗಳು 2 ಸಾವಿರ ರೂಪಾಯಿ ಸಿಗುತ್ತಿದೆ. ಕೆಲವು ತಾಂತ್ರಿಕ ದೋಷಗಳಿಂದ ಕೆಲವರಿಗೆ ಹಣ ತಲುಪಿಲ್ಲ. ಆ ತಾಂತ್ರಿಕ ತೊಡಕುಗಳನ್ನು ನಿವಾರಿಸಿ ಶೀಘ್ರವಾಗಿ ಅವರಿಗೂ ಹಣ ನೀಡಲಾಗುವುದು. ಇಲ್ಲಿರುವ ಕೌಂಟರ್ ಗಳಲ್ಲಿ ಈ ಯೋಜನೆ ಸಿಗದವರು ಕೂಡ ತಾಂತ್ರಿಕ ಸಮಸ್ಯೆ ಬಗೆಹರಿಸಿಕೊಂಡು ಫಲಾನುಭವಿಯಾಗಬಹುದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ನಿಮ್ಮ ಮನೆ ಬಾಗಿಲಿಗೆ ಬಂದು ನಿಮ್ಮ ಅಹವಾಲು ಸ್ವೀಕಾರ ಮಾಡುತ್ತಿದ್ದೇವೆ. ನಿಮ್ಮ ಸಮಸ್ಯೆಗಳಿಗೆ ಪರಿಹಾರ ಕೊಡಬೇಕೆಂದು ಅಧಿಕಾರಿಗಳನ್ನು ಕರೆದುಕೊಂಡು ನಿಮ್ಮ ಮನೆ ಬಾಗಿಲಿಗೆ ಬಂದಿದ್ದೇನೆ. ಈ ಭಾಗದ ಶಾಸಕರಾದ ಭೈರತಿ ಬಸವರಾಜು ಹಾಗೂ ಮಹದೇವಪುರದ ಮಂಜುಳಾ ಅರವಿಂದ ಲಿಂಬಾವಳಿ ಅವರು ಕುಡಿಯುವ ನೀರು, ಸಂಚಾರ ದಟ್ಟಣೆ, ರಾಜಕಾಲುವೆ, ಮಳೆ ನೀರುಗಾಲುವೆ, ಕಸ ವಿಲೇವಾರಿ ವಿಚಾರವಾಗಿ ಗಮನ ಸೆಳೆದಿದ್ದಾರೆ. ಕಸ ವಿಲೇವಾರಿ ಸಮಸ್ಯೆಗೆ ಪರಿಹಾರ ಕಲ್ಪಿಸಲು ಬೆಂಗಳೂರಿನ ಹೊರವಲಯದಲ್ಲಿ ನಾಲ್ಕು ಕಡೆ ಜಾಗಗಳನ್ನು ಗುರುತಿಸಲು ತೀರ್ಮಾನಿಸಲಾಗಿದೆ. ಕಸವನ್ನು ಒಂದೆಡೆ ಗುಡ್ಡೆ ಹಾಕಿಕೊಂಡರೆ ಸಮಸ್ಯೆ ಬಗೆಹರಿಯುವುದಿಲ್ಲ. ಹೀಗಾಗಿ ಅವುಗಳನ್ನು ಸಂಪೂರ್ಣವಾಗಿ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ರಾಜಕಾಲುವೆ ಹೂಳೆತ್ತುವ ವಿಚಾರದಲ್ಲಿ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ (NGT) ಆದೇಶ ಪಾಲನೆ ಮಾಡಬೇಕಿದೆ. ಆ ಆದೇಶದ ಪ್ರಕಾರ ರಾಜಕಾಲುವೆ ಪಕ್ಕ 50 ಮೀಟರ್ ಜಾಗದಲ್ಲಿ ಯಾವುದೇ ಕಟ್ಟಡ ನಿರ್ಮಾಣ ಮಾಡುವಂತಿಲ್ಲ. ಹೀಗಾಗಿ ರಾಜಕಾಲುವೆ ಪಕ್ಕದ ಜಾಗವನ್ನು ಸರ್ಕಾರ ವಶಪಡಿಸಿಕೊಂಡು ಅಲ್ಲಿ ರಸ್ತೆ ನಿರ್ಮಾಣ ಮಾಡುವ ಯೋಜನೆ ಇದೆ. ಇದರಿಂದ ರಾಜಕಾಲುವೆ ಹೂಳೆತ್ತಲು ಸಹಕಾರಿ ಆಗುತ್ತದೆ. ಜತೆಗೆ ಸ್ಥಳೀಯ ನಾಗರೀಕರ ಸಂಚಾರಕ್ಕೆ ಹೊಸ ರಸ್ತೆ ಸಿಕ್ಕಂತಾಗುತ್ತದೆ.
ನಿಮ್ಮ ಮನೆ ಬಾಗಿಲಿಗೆ ಆಸ್ತಿ ದಾಖಲೆ ಪತ್ರ ವಿತರಣೆ :
ಇನ್ನು ಅನೇಕರು ಸ್ವಯಂ ಘೋಷಣೆ ಆಸ್ತಿ ತೆರಿಗೆ ಪದ್ಧತಿಯಲ್ಲಿ ಪೂರ್ಣ ಪ್ರಮಾಣದ ಆಸ್ತಿಯ ತೆರಿಗೆ ಪಾವತಿ ಮಾಡುತ್ತಿಲ್ಲ. ಹೀಗಾಗಿ ನಾವು ಎಲ್ಲಾ ಆಸ್ತಿಗಳ ಸಮೀಕ್ಷೆ ಮಾಡುತ್ತಿದ್ದೇವೆ. ನಮ್ಮ ಸ್ವತ್ತು ಯೋಜನೆ ಮೂಲಕ ಮುಂದಿನ ಒಂದು ವರ್ಷದ ಒಳಗಾಗಿ ನಿಮ್ಮ ಮನೆ ಬಾಗಿಲಿಗೆ ನಿಮ್ಮ ಆಸ್ತಿ ದಾಖಲೆಗಳನ್ನು ಉಚಿತವಾಗಿ ನೀಡುವ ಕೆಲಸ ಮಾಡುತ್ತೇವೆ. ಈ ವಿಚಾರವಾಗಿ ಯಾರೊಬ್ಬರೂ ಯಾರಿಗೂ ಒಂದು ರೂಪಾಯಿ ಲಂಚ ನೀಡುವ ಅಗತ್ಯವಿಲ್ಲ. ಯಾರಾದರೂ ಲಂಚ ಕೇಳಿದರೆ ದೂರು ನೀಡಿ.” ನಿಮ್ಮ ಮನೆ ಬಾಗಿಲಿಗೆ ಬಂದಿದ್ದೇನೆ. ನಿಮ್ಮ ಸಮಸ್ಯೆಗಳ ಬಗ್ಗೆ ಅಹವಾಲು ನೀಡಿ. ಅದನ್ನು ಬಗೆಹರಿಸಲು ಕ್ರಮ ಕೈಗೊಳ್ಳುತ್ತೇನೆ ಎಂದು ಸಭೆಯಲ್ಲಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಸ್ಥಳೀಯ ಶಾಸಕರಾದ ಮಂಜುಳಾ ಅರವಿಂದ್ ಲಿಂಬಾವಳಿ, ಬಿ.ಎ ಬಸವರಾಜು, ಮಾಜಿ ರಾಜ್ಯ ಸಭಾ ಸದಸ್ಯರಾದ ರಾಜೀವ್ ಗೌಡ, ಆಡಳಿತಗಾರರಾದ ರಾಕೇಶ್ ಸಿಂಗ್, ಮುಖ್ಯ ಆಯಯುಕ್ತರಾದ ತುಷಾರ್ ಗಿರಿ ನಾಥ್, ವಲಯ ವಿಶೇಷ ಆಯುಕ್ತರಾದ ಇಬ್ರಾಹಿಂ ಮೈಗೂರ್, ಜಂಟಿ ಆಯುಕ್ತರಾದ ಡಾ.ದಾಕ್ಷಾಯಿಣಿ, ಮುಖ್ಯ ಅಭಯಂತರರಾದ ಲೋಕೇಶ್ ಹಾಗೂ ವಿವಿಧ ಇಲಾಖೆಗಳ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.