ಬೆಂಗಳೂರು, ಡಿ.29 www.bengaluruwire.com : ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಶ್ರೀ ಶಾರಾದ ಪೀಠದಲ್ಲಿ ಪಾಕ್ ಅಧಿಕಾರಿಗಳು ಮತ್ತು ಅದರ ಸೇನೆಯಿಂದ ಒತ್ತುವರಿ ಮಾಡಿ ನಿರ್ಮಾಣವಾಗಿರುವ ಕಾಫಿ ಹೋಮ್ ಅನ್ನು ಕೂಡಲೇ ತೆಗೆದುಹಾಕದಿದ್ದರೆ ಕಾಶ್ಮೀರದಲ್ಲಿನ ಗಡಿನಿಯಂತ್ರಣ ರೇಖೆ (LOC)ಯನ್ನು ದಾಟಿ ಮೆರವಣಿಗೆಯನ್ನು ನಡೆಸುತ್ತೇವೆ ಪಾಕ್ ಸರ್ಕಾರಕ್ಕೆ ಎಚ್ಚರಿಕೆಯನ್ನು ನೀಡಿದ್ದಾರೆ. ಒಂದೊಮ್ಮೆ ಈ ಒತ್ತುವರಿ ತೆರವು ಮಾಡದಿದ್ದರೆ, ಮುಂದಿನ ದಿನಗಳಲ್ಲಿ ಎಲ್ಲಾ ಶಾರದಾ ಬೆಂಬಲಿಗರು ಈ ಮೆರವಣಿಗೆಗೆ ಸಿದ್ಧರಾಗಿರಬೇಕು” ಎಂದು ಕಾಶ್ಮೀರದ ಶ್ರೀ ಶಾರದ ಸಂರಕ್ಷಣಾ ಸಮಿತಿಯ ಸಂಸ್ಥಾಪಕ ರವೀಂದರ್ ಪಂಡಿತ ಕರೆ ನೀಡಿದ್ದಾರೆ.
ಕಾಶ್ಮೀರದ ಶ್ರೀ ಶಾರದ ಸಂರಕ್ಷಣಾ ಸಮಿತಿಯು ನಗರದ ಪ್ರೆಸ್ ಕ್ಲಬ್ ನಲ್ಲಿ ಶುಕ್ರವಾರ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಕಾಶ್ಮೀರದ ಕುಪ್ವಾರ ಜಿಲ್ಲೆಯ ತೀತ್ವಾಲ್ ನಲ್ಲಿ ಈ ವರ್ಷದ ಮಾರ್ಚ್ ನಲ್ಲಿ ಪ್ರಾರಂಭಿಸಿರುವ ಶ್ರೀ ಶಾರದಾ ದೇವಸ್ಥಾನದ ಕುರಿತು ಶಾರದಾ ಅನುಯಾಯಿಗಳು ಮತ್ತು ಪ್ರವಾಸಿಗರಿಗಾಗಿ https://shardakashmir.com/yatra-to-sharda-peeth ವೆಬ್ ಸೈಟ್ ಚಾಲನೆ ನೀಡಿತು. ಬಳಕ ಮಾತನಾಡಿದ ರವೀಂದ್ರ ಪಂಡಿತ್ ಅವರು, ಶಾರದಾ ಸಂರಕ್ಷಣಾ ಸಮಿತಿಯು ಶಾರದಾ ಪೀಠದ ಆವರಣದಲ್ಲಿ ಇತ್ತೀಚೆಗೆ ನಿರ್ಮಿಸಲಾದ ಕಾಫಿ ಹೋಮ್‌ನ ಅತಿಕ್ರಮಣ ಮತ್ತು ತೆರವು ಕುರಿತು, ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಪಾಕಿಸ್ತಾನ ಅಧ್ಯಕ್ಷರಿಗೂ ಪತ್ರ ಬರೆದು ಒತ್ತಾಯಿಸಿದೆ.
ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಅತಿಕ್ರಮಣಗಳನ್ನು ನಿಲ್ಲಿಸಲು ಶಾರದಾ ಸಂರಕ್ಷಣಾ ಸಮಿತಿಯ ಪ್ರಾತಿನಿಧ್ಯದ ಆಧಾರದ ಮೇಲೆ ಇದೇ ವರ್ಷದ ಜ.3ರಂದು ಪಾಕಿಸ್ತಾನದ ಸುಪ್ರೀಂ ಕೋರ್ಟ್ (ಎಜೆಕೆ) ಐತಿಹಾಸಿಕ ತೀರ್ಪು ನೀಡಿದೆ. ಪಾಕ್ ಆಕ್ರಮಿತ ಕಾಶ್ಮೀರದ ನಾಗರೀಕ ಸಮಾಜವು ಶಾರದಾ ಪೀಠದ ಕಾಂಪೌಂಡ್ ಗೋಡಿಗಳಿಗೆ ಹಾನಿಯಾದ ಬಗ್ಗೆ ಹಾಗೂ ಇಲ್ಲಿನ ಅತಿಕ್ರಮಣವನ್ನು ತೆರವುಗೊಳಿಸುವ ವಿಚಾರದಲ್ಲಿ ಶಾರದಾ ಉಳಿಸಿ ಸಮಿತಿಯೊಂದಿಗೆ ತನ್ನ ಧ್ವನಿಯನ್ನು ಎತ್ತಿದೆ. ಶಾರದಾ ಪೀಠವನ್ನು ಯುನೆಸ್ಕೋ ಪಾರಂಪರಿಕ ತಾಣವೆಂದು ಘೋಷಿಸಬೇಕು ಎಂದು ಪಂಡಿತ್ ಅವರು ಇದೇ ವೇಳೆ ಆಗ್ರಹಿಸಿದರು.
ತೀತ್ವಾಲ್ ನಲ್ಲಿ ಶ್ರೀ ಶಾರದಾ ದೇವಸ್ಥಾನವನ್ನು ಇದೇ ವರ್ಷದ ಮಾರ್ಚ್ ನಲ್ಲಿ ಲೈವ್ ಸ್ಟ್ರೀಮಿಂಗ್ ನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಉದ್ಘಾಟಿಸಿದ್ದರು. ಇದೇ ಸಂದರ್ಭದಲ್ಲಿ ತಮ್ಮ ಉದ್ಘಾಟನಾ ಭಾಷಣದಲ್ಲಿ ಸಚಿವ ಅಮಿತ್ ಶಾ, ಕರ್ತಾರ್‌ಪುರ ಕಾರಿಡಾರ್ ಮಾದರಿಯಲ್ಲಿ ಶಾರದಾ ಪೀಠವನ್ನು ಪುನಃ ತೆರೆಯುವ ಬಗ್ಗೆ ನೀಡಿದ ವಾಗ್ದಾನವನ್ನು ನೀಡಿದ್ದು, ಅದರಂತೆ ಈ ನಮ್ಮ ಬೇಡಿಕೆಯನ್ನು ಈಡೇರಿಸುವಂತೆ ರವೀಂದ್ರ ಪಂಡಿತ್ ಅವರು ಪುನರುಚ್ಚರಿಸಿದರು.
ಶಾರದಾ ಸಮಿತಿ ಕಾಶ್ಮೀರವನ್ನು ಉಳಿಸಿ – ಕಳೆದ 20 ವರ್ಷಗಳಿಂದ ಪಿಒಕೆಯಲ್ಲಿ ಶಾರದಾ ಪೀಠವನ್ನು ಪುನಃ ತೆರೆಯಲು ಮತ್ತು ಪರಿಶೋಧನೆಗಾಗಿ ಹೋರಾಡುತ್ತಿರುವ ಮುಂಚೂಣಿಯಲ್ಲಿರುವ ಸಂಘಟನೆ. 1947 ರ ಮೊದಲು ಹೊಸದಾಗಿ ಸ್ಥಾಪಿಸಿರುವ ಶಾರದಾ ದೇವಸ್ಥಾನದ ಸ್ಥಳದಲ್ಲಿ ಶಾರಾದಾ ದೇವಾಲಯ ಹಾಗೂ ಸಿಖ್ ಗುರುದ್ವಾರವಿತ್ತು. ಆದರೆ ಆಗಿನ ಬುಡಕಟ್ಟು ದಾಳಿಗಳಲ್ಲಿ ಸುಟ್ಟು ಹೋಗಿತ್ತು. ಹಾಗಾಗಿ ಹೊಸದಾಗಿ ಇಲ್ಲಿ ದೇವಸ್ಥಾನ ಹಾಗೂ ಗುರುದ್ವಾರ ಪುನರ್ ನಿರ್ಮಿಸಲಾಗಿದೆ. ಇದರ ಸಂಪೂರ್ಣ ವಿವರವನ್ನು ಯಾತ್ರಿಕರು ಮತ್ತು ಪ್ರವಾಸಿಗರಿಗೆ ಒದಗಿಸುವ ಗುರಿಯನ್ನು ವೆಬ್‌ಸೈಟ್ ಹೊಂದಿದೆ. ಹೊಸದಾಗಿ ನಿರ್ಮಿಸಲಾದ ಶಾರದಾ ಯಾತ್ರಾ ದೇವಾಲಯದ ನಿರ್ಮಾಣಕ್ಕೆ ಶೃಂಗೇರಿ ಮಠ ನೆರವು ನೀಡಿತು. ಈ ವರ್ಷ ಮಾರ್ಚ್‌ನಲ್ಲಿ ಉದ್ಘಾಟನೆಯಾದಾಗಿನಿಂದ ಸುಮಾರು 10,000 ಯಾತ್ರಿಕರು ದೇವಸ್ಥಾನ ಮತ್ತು ಗುರುದ್ವಾರಕ್ಕೆ ಭೇಟಿ ನೀಡಿದ್ದಾರೆ ಎಂದು ರವೀಂದ್ರ ಪಂಡಿತ್ ಅವರು ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ಅಯೋಧ್ಯೆಯ ರಾಮಮಂದಿರದ ಪ್ರಾಣ ಪ್ರತಿಷ್ಠೆಗೆ ಕಳುಹಿಸಲು ಶಾರದಾ ಪೀಠದ ಪಿಒಕೆ ಕೊಳದಿಂದ ಪಡೆದ ಪವಿತ್ರ ಜಲವನ್ನು ಪ್ರದರ್ಶಿಸಿದರು.