ಚೆನ್ನೈ, ಡಿ.28 www.bengaluruwire.com : ದೇಸಿಯ ಮುರ್ಪೊಕ್ಕು ದ್ರಾವಿಡ ಕಳಗಂ (ಡಿಎಂಡಿಕೆ – DMDK) ಸಂಸ್ಥಾಪಕ ಕ್ಯಾಪ್ಟನ್ ವಿಜಯಕಾಂತ್(Vijayakanth Passes Away) ಅವರು ಅನಾರೋಗ್ಯದ ಹಿನ್ನೆಲೆಯಲ್ಲಿ ಚೆನ್ನೈನಲ್ಲಿ ಗುರುವಾರ (ಡಿ.28) ನಿಧನರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಗುರುವಾರ ಮುಂಜಾನೆ ಅವರ ಪಕ್ಷ ಡಿಎಂಡಿಕೆ ಈ ಬಗ್ಗೆ ಅಧಿಕೃತ ಮಾಹಿತಿಯನ್ನು ಹಂಚಿಕೊಂಡಿದೆ.
ವಿಜಯಕಾಂತ್ ಅವರಿಗೆ 71 ವರ್ಷ ವಯಸಾಗಿತ್ತು. ಇತ್ತೀಚೆಗಷ್ಟೇ ಅವರಿಗೆ ಕೋವಿಡ್ ಪಾಸಿಟಿವ್ (Covid positive) ಆಗಿದ್ದು, ಅವರನ್ನು ತುರ್ತು ನಿಗಾ ಘಟಕದಲ್ಲಿ (ICU) ಇರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಕೆಲವು ದಿನಗಳಿಂದ ಅವರು ಅಸ್ವಸ್ಥರಾಗಿದ್ದರು. ಅವರ ಪತ್ನಿ ಪ್ರೇಮಲತಾ ಅವರು ಕೆಲವು ದಿನಗಳ ಹಿಂದೆ ಪಕ್ಷದ ಅಧಿಕಾರವನ್ನು ವಹಿಸಿಕೊಂಡಿದ್ದರು.
ನಟ ವಿಜಯಕಾಂತ್ ಆರೋಗ್ಯದ ಬಗ್ಗೆ ಈ ಹಿಂದೆ ಗೊಂದಲ ಏರ್ಪಟ್ಟಿತ್ತು. ತಮಿಳುನಾಡು ಆರೋಗ್ಯ ಸಚಿವರು ನೀಡಿದ ಮತ್ತೊಂದು ಹೇಳಿಕೆ ಅಭಿಮಾನಿಗಳನ್ನು ಆತಂಕಕ್ಕೆ ದೂಡಿತ್ತು. ಖಾಸಗಿ ಆಸ್ಪತ್ರೆಯ ಆಡಳಿತ ಮಂಡಳಿಯೊಂದಿಗೆ ಮಾತನಾಡಿದ್ದು, ಐಸಿಯುನಲ್ಲಿ (ICU) ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಆರೋಗ್ಯ ಸ್ಥಿರವಾಗಿದೆ ಎಂದು ಆಸ್ಪತ್ರೆ ಸಿಬ್ಬಂದಿ ತಿಳಿಸಿದ್ದಾರೆ ಎಂದು ಸಚಿವರು ಹೇಳಿಕೆ ನೀಡಿದ್ದರು. ಹಾಗಾಗಿ ಸಹಜವಾಗಿಯೇ ವಿಜಯಕಾಂತ್ ಆರೋಗ್ಯದ ಬಗ್ಗೆ ಗೊಂದಲ ಮೂಡಿತ್ತು. ಈಗ ಎಲ್ಲದಕ್ಕೂ ತೆರೆ ಬಿದ್ದಂತಾಗಿದೆ
ಕಾಜಾ ನಿರ್ದೇಶಿಸಿದ ಇನಿಕ್ಕುಮ್ ಇಳಮೈ (1979) ಸಿನಿಮಾ ರಂಗ ಪ್ರವೇಶಿಸಿದ್ದರು. ಹಲವು ವರ್ಷಗಳ ಕಾಲ ಚಿತ್ರರಂಗದಲ್ಲಿ ಸೇವೆ ಸಲ್ಲಿಸಿದ ವಿಜಯಕಾಂತ್, ತಮ್ಮ ವೃತ್ತಿಜೀವನದಲ್ಲಿ, ಅಮ್ಮನ್ ಕೋಯಿಲ್ ಕಿಜಕ್ಕಲೆ, ಚಿನ್ನ ಗೌಂಡರ್, ವೈದೇಗಿ ಕತಿರುಂಡಾಲ್, ವಲ್ಲರಸು, ವನತೈ ಪೋಲಾ, ಕ್ಯಾಪ್ಟನ್ ಪ್ರಭಾಕರನ್, ಉಳವು ತುರೈ, ಕಣ್ಣುಪಾದ ಪೋಕುತಯ್ಯ, ರಮಣ, ಹೀಗೆ ಅನೇಕ ಪ್ರಮುಕ ಸಿನಿಮಾಗಳಲ್ಲಿ ನಟಿಸಿದ್ದರು. 2015ರ ತಮಿಳು ಚಲನಚಿತ್ರ ‘ಸಗಪ್ತಂ’ನಲ್ಲಿ ಅವರ ಕೊನೆಯ ಚಲನಚಿತ್ರವಾಗಿತ್ತು. ವಿಜಯಕಾಂತ್ ನಿಧನದಿಂದಾಗಿ ತಮಿಳುನಾಡು ಹಿರಿಯ ನಟನನ್ನು ಕಳೆದುಕೊಂಡಂತಾಗಿದೆ.