ಬೆಂಗಳೂರು, ಡಿ.27 www.bengaluruwire.com : ನಗರದ ಹಳೆಯ ಮಾಲ್ ಗಳಲ್ಲಿ ಒಂದಾದ ಮಲ್ಲೇಶ್ವರದ ಮಂತ್ರಿ ಮಾಲ್ ಗೆ 51 ಕೋಟಿ ರೂ. ತೆರಿಗೆ ಬಾಕಿ ಉಳಿಸಿಕೊಂಡ ಹಿನ್ನೆಲೆ ಮಾಲ್ನ ಪ್ರಮುಖ ದ್ವಾರಕ್ಕೆ ಬಿಬಿಎಂಪಿ ಜಂಟಿ ಆಯುಕ್ತ ಯೋಗೇಶ್ರಿಂದ ಬೀಗಮುದ್ರೆ ಹಾಕಿದ್ದಾರೆ.
2019-20ರವರೆಗಿನ ತೆರಿಗೆ ಬಾಕಿಯಿದ್ದ ಹಿನ್ನೆಲೆಯಲ್ಲಿ ಬೀಗ ಹಾಕಲಾಗಿದೆ. 2020ರ ಆಗಸ್ಟ್ನಲ್ಲೇ ಬಿಬಿಎಂಪಿಗೆ 10 ಕೋಟಿ ರೂ. ಮೊತ್ತದ ಚೆಕ್ ನೀಡಿತ್ತು. ಆದರೆ ಆ ಚೆಕ್ ಬೌನ್ಸ್ ಆಗಿತ್ತು. ಮತ್ತೆ ಮತ್ತೆ ನೋಟಿಸ್ ನೀಡಿದ್ದರು ಕೂಡ ಮಾಲ್ನ ಆಡಳಿತ ಮಂಡಳಿ ತೆರಿಗೆ ಪಾವತಿಸಲು ಕ್ರಮ ಕೈಗೊಂಡಿರಲಿಲ್ಲ.
ಈ ಹಿಂದೆ ಮಂತ್ರಿ ಮಾಲ್ ಸುಮಾರು 42,63,40,874 ರೂ. ತೆರಿಗೆ ಬಾಕಿ ಉಳಿಸಿಕೊಂಡಿತ್ತು. ಆ ವೇಳೆ ಮಾಲ್ ಕಚೇರಿಯ ಕುರ್ಚಿ, ಟೇಬಲ್, ಕಂಪ್ಯೂಟರ್ ಹಾಗೂ ಇತರೆ ವಸ್ತುಗಳನ್ನು ಬಿಬಿಎಂಪಿ ಸಿಬ್ಬಂದಿ ವಶಕ್ಕೆ ಪಡೆದುಕೊಂಡಿದ್ದರು. ತೆರಿಗೆ ಪಾವತಿಸದ ವಿಚಾರವಾಗಿ ಮಂತ್ರಿ ಸ್ಕ್ವೇರ್ ಮಾಲ್ಗೆ ಬಿಬಿಎಂಪಿ ಬೀಗ ಜಡಿಯುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಕೂಡ ಮೂರ್ನಾಲ್ಕು ಬಾರಿ ಬೀಗ ಹಾಕಲಾಗಿತ್ತು. ಈ ಹಿಂದೆ 2021ರಲ್ಲಿಯೂ ಬಿಬಿಎಂಪಿ ಅಧಿಕಾರಿಗಳು ಮಾಲ್ಗೆ ಬೀಗ ಹಾಕಿದ್ದರು. ಬಳಿಕ ಮಂತ್ರಿ ಮಾಲ್ ಬೀಗ ಮುದ್ರೆ ತೆರೆಯಲು ಬಿಬಿಎಂಪಿಗೆ ಹೈಕೋರ್ಟ್ ಆದೇಶ ನೀಡಿತ್ತು.
ಬಿಬಿಎಂಪಿ ವ್ಯಾಪ್ತಿಯಲ್ಲಿ ಒಟ್ಟು 6 ಲಕ್ಷಕ್ಕೂ ಹೆಚ್ಚು ಆಸ್ತಿ ಮಾಲೀಕರು ಆಸ್ತಿ ತೆರಿಗೆಯನ್ನು ಪಾವತಿಸಿಲ್ಲ ಮತ್ತು ಈ ರೀತಿ ಪಾವತಿಸಬೇಕಾದ ಮೊತ್ತ ಸುಮಾರು 450 ಕೋಟಿ ರೂ. ಗಳಾಗಿದೆ. ಸುಮಾರು 3 ಲಕ್ಷ ಮಂದಿ ಹಲವು ವರ್ಷಗಳಿಂದ ಆಸ್ತಿ ತೆರಿಗೆ ಪಾವತಿಸದಿದ್ದರೆ, ಇನ್ನು 3 ಲಕ್ಷ ಮಂದಿ ಪ್ರಸಕ್ತ ವರ್ಷ ತೆರಿಗೆ ಬಾಕಿ ಉಳಿಸಿಕೊಂಡವರಾಗಿದ್ದಾರೆ ಎಂದು ಬಿಬಿಎಂಪಿ ಕಂದಾಯ ವಿಶೇಷ ಆಯುಕ್ತ ಮುನೀಶ್ ಮುದ್ಗಿಲ್ ಬೆಂಗಳೂರು ವೈರ್ ಗೆ ತಿಳಿಸಿದ್ದಾರೆ.
ಇದರ ಜೊತೆಗೆ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡ ಎಲ್ಲರಿಗೂ ಬಿಬಿಎಂಪಿ ವತಿಯಿಂದ ಎಸ್ ಎಂಎಸ್ ಕಳುಹಿಸಲಾಗಿದೆ. ಅತಿದೊಡ್ಡ ಸುಸ್ತಿದಾರರಿಂದ ಪ್ರಾರಂಭಿಸಿ, ಕೆಳಗಿನ ಅನುಕ್ರಮದ ತನಕ ಬಾಕಿ ಆಸ್ತಿ ತೆರಿಗೆ ಪಾವತಿಯ ಬೇಡಿಕೆ ಸೂಚನೆಯನ್ನು ಕಳುಹಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಹೆಚ್ಚುವರಿಯಾಗಿ ಪಾಲಿಕೆ ವ್ಯಾಪ್ತಿಯಲ್ಲಿ ಸುಮಾರು 9,000 ಆಸ್ತಿಗಳ ಬೇಡಿಕೆಯ ಪರಿಷ್ಕರಣೆಯನ್ನು ಮಾಡಲಾಗಿದ್ದು, ಅವರು ಹೆಚ್ಚುವರಿ ಆಸ್ತಿ ತೆರಿಗೆಯಾಗಿ 300 ಕೋಟಿ ರೂ. ಪಾವತಿಸಲು ಸೂಚಿಸಲಾಗಿದೆ ಎಂದು ಮುದ್ಗಿಲ್ ತಿಳಿಸಿದ್ದಾರೆ.