ಬೆಂಗಳೂರು, ಡಿ.22 www.bengaluruwire.com : ರಾಜಧಾನಿಯ ಹೊರವರ್ತುಲ ರಸ್ತೆಯಲ್ಲಿ ಸಿಗ್ನಲ್ ಫ್ರೀ ಕಾರಿಡಾರ್ ನಿರ್ಮಿಸುವ ನಿಟ್ಟಿನಲ್ಲಿ ಹೊಸಕೆರೆ ಜಂಕ್ಷನ್ ಬಳಿಯ ಕೆರೆಕೋಡಿ ರಸ್ತೆಯಲ್ಲಿ ಬಿಬಿಎಂಪಿ ನಿರ್ಮಿಸುತ್ತಿರುವ ಮೇಲ್ಸೇತುವೆ ಯೋಜನೆ ರೂಪಿಸುವಾಗ ಕೈಗೊಂಡ ಯಡವಿಟ್ಟಿನಿಂದ ಇಲ್ಲಿನ ಮೇಲ್ಸೇತುವೆ ಪ್ರಾಜೆಕ್ಟ್ 15 ತಿಂಗಳ ಒಳಗೆ ಮುಗಿಯುವ ಬದಲು ಎರಡು ಮುಕ್ಕಾಲು ವರ್ಷವಾದರೂ ಇನ್ನು ಮುಗಿದಿಲ್ಲ.
ಎರಡು ಗಡುವುಗಳು ಪೂರ್ಣವಾದರೂ ಇನ್ನೂ ಕಾಮಗಾರಿ ಮುಗಿದಿಲ್ಲ. ಇದರಿಂದಾಗಿ ಬನಶಂಕರಿಯಿಂದ ಮೈಸೂರು ರಸ್ತೆ ನಾಯಂಡಹಳ್ಳಿ ಕಡೆ ಹೋಗಿ ಬರುವ ವಾಹನ ಸವಾರರು ರೋಸಿ ಹೋಗಿದ್ದಾರೆ. ಬೆಳಗ್ಗೆ ಮತ್ತು ರಾತ್ರಿಯ ಪೀಕ್ ಹವರ್ ನಲ್ಲಿ ಈ ರಸ್ತೆಯಲ್ಲಿ ವಾಹನಗಳು ತೆವಳಿಕೊಂಡು ಓಡಾಡುತ್ತವೆ. ಈ ರಸ್ತೆಯ ಟ್ರಾಫಿಕ್ ನಲ್ಲಿ ವಾಹನ ಓಡಾಡುವವರಿಗೆ ಇಲ್ಲಿನ ಸಿಗ್ನಲ್ ಫ್ರೀ ಕಾರಿಡಾರ್ ದುಸ್ವಪ್ನದಂತೆ ಭಾಸವಾಗುತ್ತಿದೆ.
ಆಮೆಯ ಜೊತೆಗೆ ಸ್ಪರ್ಧೆ ಏರ್ಪಡಿಸಿದರೆ ಬಹುಶ: ಈ ರಸ್ತೆಯಲ್ಲಿ ಪೀಕ್ ಹವರ್ ನಲ್ಲಿ ಓಡಾಡುವ ವಾಹನಗಳು ಸೋಲಬಹುದು. ಆ ಪಾಟಿಯಲ್ಲಿ ವಾಹನ ಸವಾರರು ಬಂಪರ್ ಟು ಬಂಪರ್ ಟ್ರಾಫಿಕ್ ನಲ್ಲಿ ಸಾಗುತ್ತಿದ್ದಾರೆ. ಪಿಜೆಬಿ ಇಂಜಿನಿಯರಿಂಗ್ ಎಂಬ ಸಂಸ್ಥೆಗೆ 20.17 ಕೋಟಿ ರೂ. ಮೊತ್ತದ ಮೇಲ್ಸೇತುವೆ ನಿರ್ಮಾಣದ ಕಾಮಗಾರಿಯನ್ನು ಗುತ್ತಿಗೆ ನೀಡಲಾಗಿತ್ತು. ಈ ಸಂಸ್ಥೆಯವರು 2021ರ ಇಸವಿಯ ಮೇ 14ರಂದು ಕಾಮಗಾರಿ ಆರಂಭಿಸಿದ್ದರು. ಈ ಕಾಮಗಾರಿ ಪೂರ್ಣಗೊಳಿಸಲು 15 ತಿಂಗಳು ಕಾಲಾವಕಾಶ ನೀಡಿ 14-08-2022ರ ಒಳಗೆ ಕಾಮಗಾರಿ ಪೂರ್ಣಗೊಳಿಸಬೇಕಿತ್ತು. ಆದರೆ ಈ ಸಂಸ್ಥೆಯವರಿಗೆ ಪುನಃ 15-10-2023ರ ಒಳಗಾಗಿ 16 ಮೀಟರ್ ಅಗಲದ 380 ಮೀಟರ್ ಉದ್ದದ ಮೇಲ್ಸೇತುವೆ ಕಾಮಗಾರಿಯನ್ನು ಪೂರ್ಣಗೊಳಿಸಲು ಎರಡನೇ ಅವಧಿಗೆ ಬಿಬಿಎಂಪಿ ರಸ್ತೆ ಮತ್ತು ಮೂಲಭೂತ ಸೌಕರ್ಯ ವಿಭಾಗ ಡೆಡ್ ಲೈನ್ ನೀಡಿತ್ತು.
ಆದರೆ ಡಿಸೆಂಬರ್ ತಿಂಗಳು ಮುಗಿಯುತ್ತಾ ಬಂದರೂ ಈವರೆಗೆ ಒಟ್ಟಾರೆ ಮೇಲ್ಸೇತುವೆ ಕಾಮಗಾರಿಯಲ್ಲಿ ಶೇ.72ರಷ್ಟು ಭೌತಿಕ ಪ್ರಗತಿ ಹಾಗೂ ಶೇ.63ರಷ್ಟು ಹಣಕಾಸು ಪ್ರಗತಿಯನ್ನಷ್ಟೇ ಸಾಧಿಸಲಾಗಿದೆ. ಹೀಗಾಗಿ ಬನಶಂಕರಿಯಿಂದ ನಾಯಂಡಹಳ್ಳಿ ಮಧ್ಯೆಯಿರುವ ಈ ರಸ್ತೆಯಲ್ಲಿ ಸಿಗ್ನಲ್ ಫ್ರೀ ಇರಲಿ, ಹೆಜ್ಜೆ ಹೆಜ್ಜೆಗೂ ಹೊಸಕೆರೆ ಹಳ್ಳಿ ಜಂಕ್ಷನ್ ದಾಟುವಷ್ಟರಲ್ಲಿ ವಾಹನ ಸವಾರರು ಹೈರಾಣಾಗಿರುತ್ತಾರೆ.
ಬಿಬಿಎಂಪಿ ಎಂಜಿನಿಯರ್ ಗಳ ಯಡವಟ್ಟು :
ಅಸಲಿಗೆ ಹೊಸಕೆರೆ ಹಳ್ಳಿ ಜಂಕ್ಷನ್ ನಾಲ್ಕು ರಸ್ತೆಗಳನ್ನು ಹೊಂದಿದ ಇಂಗ್ಲೀಷಿನ ಎಕ್ಸ್ ಆಕಾರವನ್ನು ಪ್ರತಿನಿಧಿಸುವಂತಿದೆ. ಈ ರಸ್ತೆಯಲ್ಲಿ ಸಿಗ್ನಲ್ ಫ್ರೀ ಕಾರಿಡಾರ್ ಹಿನ್ನಲೆಯಲ್ಲಿ ಮೇಲ್ಸೇತುವೆ ನಿರ್ಮಾಣಕ್ಕಾಗಿ ಯೋಜನೆ ರೂಪಿಸುವಾಗ ಬಿಬಿಎಂಪಿಯ ಎಂಜಿನಿಯರ್ ಗಳು ಹಾಗೂ ಹಿರಿಯ ಅಧಿಕಾರಿಗಳು ಮಾಡಿದ ಆ ಒಂದು ಯಡವಟ್ಟು ಈ ಯೋಜನೆ ಪೂರ್ಣಗೊಳ್ಳಲು ಮತ್ತೆ ಕನಿಷ್ಠ ಒಂದು ವರ್ಷ ಬೇಕಾಗಬಹುದು. ಏಕೆಂದರೆ ಸದ್ಯ ಹೊಸಕೆರೆಹಳ್ಳಿ ಕಡೆಯಿಂದ ಹಾಗೂ ಗಿರಿನಗರ ಕಡೆಯಿಂದ ಬಂದು ನಾಯಂಡಹಳ್ಳಿ ಕಡೆಗೆ ಹೋಗುವ ವಾಹನ ಸವಾರರ ಅನುಕೂಲಕ್ಕಾಗಿ ಪ್ರಸ್ತುತ ಮೇಲ್ಸೇತುವೆ ಜಾಗದ ಪಕ್ಕದಲ್ಲಿ ರಸ್ತೆ ವಿಸ್ತರಿಸಿ ಅಲ್ಲಿ 8 ಮೀಟರ್ ಅಗಲ ಹಾಗೂ 40 ಮೀಟರ್ ಉದ್ದದ ಏಕಮುಖ ಮಾರ್ಗದ ಮತ್ತೊಂದು ಪುಟ್ಟ ಮೇಲ್ಸೇತುವೆಯನ್ನು ನಿರ್ಮಿಸಬೇಕಿದೆ. ಈ ಕಿರು ಮೇಲ್ಸೇತುವೆ ಬರುವ ಜಾಗ ನೈಸ್ ರಸ್ತೆಯ ಆಸ್ತಿಯಾಗಿದ್ದು, ಆ ಸಂಸ್ಥೆಯ ಜೊತೆ ನಿರಂತರವಾಗಿ ಸಂಪರ್ಕ ಇಟ್ಟುಕೊಂಡು ಜಾಗವನ್ನು ಬಿಬಿಎಂಪಿಯ ಯೋಜಿತ ಕಾಮಗಾರಿಗೆ ಕೊಡಿಸಲು ವಿಳಂಬವಾಯಿತು.
ಸರ್ಕಾರದಲ್ಲೇ ಬಾಕಿ ಉಳಿದ ಫೈಲ್ :
ಸುಮಾರು 7 ಕೋಟಿ ರೂ. ಮೊತ್ತದ ಈ ಸಣ್ಣ ಮೇಲ್ಸೇತುವೆ ಕಾಮಗಾರಿ ಒಪ್ಪಿಗೆ ಪಡೆಯಲು ಬಿಬಿಎಂಪಿಯು ಇದರ ಕಡತವನ್ನು ಸರ್ಕಾರಕ್ಕೆ ಕಳುಹಿಸಿ ಐದಾರು ತಿಂಗಳಾದರೂ ಇನ್ನು ಅಲ್ಲಿಂದ ಕಡತ ಪಾಲಿಕೆಗೆ ಬಂದಿಲ್ಲ ಎಂದು ಉನ್ನತ ಮೂಲಗಳು ಬೆಂಗಳೂರು ವೈರ್ ಗೆ ಖಚಿತಪಡಿಸಿದೆ. ಈ ಪುಟ್ಟ ಮೇಲ್ಸೇತುವೆ ಕಾಮಗಾರಿ ಒಂದೊಮ್ಮೆ ಆರಂಭವಾದರೆ ಪೂರ್ಣಗೊಳ್ಳಲು ಕನಿಷ್ಠ 6 ತಿಂಗಳು ಸಮಯಾವಕಾಶ ಬೇಕಾಗುತ್ತದೆ. ಸದ್ಯ ಪ್ರಸ್ತಾವಿತ ಸಣ್ಣ ಮೇಲ್ಸೇತುವೆ ಜಾಗ ಪಕ್ಕದಲ್ಲೇ ಸರ್ವೀಸ್ ರಸ್ತೆಯಲ್ಲಿ ಬನಶಂಕರಿ ಕಡೆಯಿಂದ ನಾಯಂಡಹಳ್ಳಿ ಕಡೆಗೆ ಸಾಗುವ ವಾಹನಗಳು ಓಡಾಡುತ್ತಿವೆ. ಈ ಮೇಲ್ಸೇತುವೆ ಆರಂಭವಾಗಿ ಪೂರ್ಣಗೊಂಡ ಬಳಕವಷ್ಟೇ ಮುಖ್ಯ ಮೇಲ್ಸೇತುವೆ ಭಾಗದಿಂದ ನಾಯಂಡಹಳ್ಳಿ ಕಡೆಗೆ ಡೌನ್ ರಾಂಪ್ ಕಟ್ಟಲು ಪಿಜೆಬಿ ಇಂಜಿನಿಯರಿಂಗ್ ಸಂಸ್ಥೆಗೆ ಸಾಧ್ಯವಾಗಲಿದೆ. ಈ ಪುಟ್ಟ ಮೇಲ್ಸೇತುವೆ ತಡವಾದಷ್ಟು ಒಟ್ಟಾರೆ ಹೊಸಕೆರೆಹಳ್ಳಿ ಜಂಕ್ಷನ್ ಫ್ಲೈ ಓವರ್ ನಿರ್ಮಾಣ ಕಾರ್ಯ ಪೂರ್ಣವಾಗಲ್ಲ ಎಂದು ಹೇಳುತ್ತಾರೆ ಪಿಜೆಬಿ ಇಂಜಿನಿಯರಿಂಗ್ ಸಂಸ್ಥೆಯ ಎಂಜಿನಿಯರ್ ಒಬ್ಬರು.
ವಿಸ್ತರಿತ ಕಿರು ಮೇಲ್ಸೇತುವೆ ಮುಗಿದರಷ್ಟೆ ಮುಖ್ಯ ಮೇಲ್ಸೇತುವೆ ಪೂರ್ಣ :
ರಸ್ತೆ ವಿಸ್ತರಿಸಿ ಏಕಮುಖ ಮೇಲ್ಸೇತುವೆ ನಿರ್ಮಾಣ ಕಾರ್ಯ ಆರಂಭವಾದರೆ, ಅದಕ್ಕೆ ಪರ್ಯಾಯವಾಗಿ ನಾಯಂಡಳಹಳ್ಳಿಯಿಂದ ಬನಶಂಕರಿ ಕಡೆಗೆ ಸಾಗುವ ಒಂದು ಭಾಗದಲ್ಲಿ ಪ್ಯಾನಲ್ ನಿರ್ಮಿಸುವ ಕೆಲಸವನ್ನು ನಾವು ಪ್ರಾರಂಭಿಸುತ್ತೇವೆ. ಆಗ ಸಮಯಾವಧಿ ಹೆಚ್ಚು ಹಿಡಿಯುವುದಿಲ್ಲ. ವೈಡನಿಂಗ್ ರೋಡ್ ಫ್ಲೈಓವರ್ ನಿರ್ಮಾಣ ಮುಗಿದ ಬಳಿಕ ಆ ಮೇಲ್ಸೇತುವೆ ಮೇಲೆ ಸರ್ವೀಸ್ ರಸ್ತೆಯಲ್ಲಿ ಚಲಿಸುವ ವಾಹನವನ್ನು ಓಡಾಡಲು ಅವಕಾಶ ಮಾಡಿಕೊಟ್ಟು, ಬಳಿಕ ನಾಯಂಡಹಳ್ಳಿಯಿಂದ ಬನಶಂಕರಿ ಕಡೆಗೆ ಚಲಿಸುವ ಮಾರ್ಗದಲ್ಲಿನ ಮೇಲ್ಸೇತುವೆ ಭಾಗದಲ್ಲಿ ಪ್ಯಾನೆಲ್ ನಿರ್ಮಿಸಿ ರಾಂಪ್ ಮಾಡಲು ಸಾಧ್ಯವಾಗುತ್ತದೆ ಎಂದು ಅವರು ವಸ್ತುಸ್ಥಿತಿಯನ್ನು ವಿವರಿಸಿದ್ದಾರೆ.
ಒಟ್ಟಾರೆ ಹೊಸಕೆರೆಹಳ್ಳಿ ಜಂಕ್ಷನ್ ಕೆರೆ ಕೋಡಿ ರಸ್ತೆ ಬಳಿ ನಿರ್ಮಿಸುತ್ತಿರುವ ಫ್ಲೈಓವರ್ ಪೂರ್ಣವಾಗಲು ಡಿಸೆಂಬರ್ 2024ರ ತನಕ ಕಾಯಬೇಕಿದೆ ಎಂದು ಬಿಬಿಎಂಪಿ ಮುಖ್ಯ ಪ್ರಧಾನ ಎಂಜಿನಿಯರ್ ಹಾಗೂ ರಸ್ತೆ ಮತ್ತು ಮೂಲಭೂತ ಸೌಕರ್ಯ ವಿಭಾಗದ ಪ್ರಧಾನ ಎಂಜಿನಿಯರ್ ಪ್ರಹ್ಲಾದ್ ಬೆಂಗಳೂರು ವೈರ್ ಗೆ ತಿಳಿಸಿದ್ದಾರೆ.
ವಾಹನ ಸವಾರರು ಏನಂತಾರೆ? :
“ಬೆಳಗ್ಗೆ 8 ರಿಂದ 10 ಗಂಟೆ ಹಾಗೂ ಸಂಜೆ 5 ರಿಂದ 8 ಗಂಟೆಯವರೆಗೆ ವಾಹನ ದಟ್ಟಣೆ ಅವಧಿಯಲ್ಲಿ ಕಾರ್, ಟೂವೀಲರ್, ಬಸ್ ನವರು ಬ್ರೇಕ್ ಹಾಕಿ ಹಾಕಿ ಕೈಕಾಲು ನೋಯಿಸಿಕೊಳ್ಳುತ್ತಿದ್ದಾರೆ. ಇದರ ಜೊತೆಗೆ ವಾಹನಗಳು ಒಂದಕ್ಕೊಂದು ಹಿಂಬದಿಯಿಂದ ಡಿಕ್ಕಿ ಹೊಡೆಯುತ್ತಾ, ಜಗಳವಾಗುವ ಸನ್ನಿವೇಶಗಳು ಆಗಾಗ ನಡೆಯುತ್ತಿರುತ್ತದೆ. ಆದಷ್ಟು ಶೀಘ್ರದಲ್ಲೇ ಈ ಮೇಲ್ಸೇತುವೆ ಕಾಮಗಾರಿಯನ್ನು ಬಿಬಿಎಂಪಿಯವರು ಪೂರ್ಣಗೊಳಿಸಬೇಕು” ಎನ್ನುತ್ತಾರೆ ಈ ರಸ್ತೆಯಲ್ಲಿ ಪ್ರತಿದಿನ ಸಾಗುವ ವಾಹನ ಸವಾರ ಗಿರೀಶ್.
“ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ” :
“ಬೆಂಗಳೂರು ಹೊರವರ್ತುಲ ರಸ್ತೆಯಲ್ಲಿ ಬರುವ ಹೊಸಕೆರೆಹಳ್ಳಿ ಜಂಕ್ಷನ್ ಬಳಿಯ ಮೇಲ್ಸೇತುವೆ ನಿರ್ಮಾಣ ಕಾರ್ಯ ವಿಳಂಬವಾಗಿರುವುದು ಇದೀಗ ಗಮನಕ್ಕೆ ಬಂದಿದೆ. ಈ ಭಾಗದಲ್ಲಿ ಪ್ರಸ್ತುತ ನಡೆಯುತ್ತಿರುವ ಮೇಲ್ಸೇತುವೆ ಕಾಮಗಾರಿ ವಿಳಂಬಕ್ಕೆ ಪಕ್ಕದಲ್ಲೇ ಏಕಮುಖ ಮಾರ್ಗದ ಮತ್ತೊಂದು ಕಿರು ಗ್ರೇಡ್ ಸಪರೇಟರ್ ನಿರ್ಮಾಣ ಸಂಬಂಧ ಕಡತ ಒಪ್ಪಿಗೆಗಾಗಿ ಸರ್ಕಾರಕ್ಕೆ ಸಲ್ಲಿಸಿದ್ದು, ಯಾವ ಹಂತದಲ್ಲಿದೆ ಎಂಬುದರ ಬಗ್ಗೆ ಪರಿಶೀಲಿಸಿ ಮೇಲ್ಸೇತುವೆ ಯೋಜನೆ ಪೂರ್ಣಗೊಳ್ಳಲು ಅಗತ್ಯ ಕ್ರಮ ಕೈಗೊಳ್ಳುತ್ತೇವೆ.”
- ಹರೀಶ್ ಕುಮಾರ್, ವಿಶೇಷ ಆಯುಕ್ತರು (ಯೋಜನೆ), ಬಿಬಿಎಂಪಿ