ಬೆಂಗಳೂರು, ಡಿ.15 www.bengaluruwire.com : ವಿಧಾನಸೌಧಕ್ಕೆ ಎರಡು ನವಿಲುಗಳು ಆಗಮಿಸಿವೆ. ಇವು ನೋಡಲು ಬಹಳ ಆಕರ್ಷಕವಾಗಿವೆ. ಈ ಶಕ್ತಿ ಕೇಂದ್ರದಲ್ಲಿ ಕೆಲಸ ಮಾಡುವ ನೌಕರರೂ ಈ ನವಿಲುಗಳನ್ನು ನೋಡಲು ಕುತೂಹಲ ತೋರುತ್ತಿದ್ದಾರೆ.
ಕೆಂಗಲ್ ಹನುಮಂತಯ್ಯ ಅವರು ನಿರ್ಮಿಸಿರುವ ಈ ವಿಧಾನಸೌಧ ತನ್ನ ಅಪೂರ್ವ ವಾಸ್ತುಶಿಲ್ಪದಿಂದಲೇ ಜಗದ್ವಿಖ್ಯಾತಿಯಾಗಿದೆ. ಪ್ರತಿದಿನ ಸಾವಿರಾರು ಮಂದಿ ಪ್ರವಾಸಿಗರು, ಸಿಲಿಕಾನ್ ಸಿಟಿಗೆ ಬರುವವರು ತಮ್ಮ ಸ್ನೇಹಿತರು, ಬಂಧುವರ್ಗದವರು ವಿಧಾನಸೌಧದ ಮುಂದೆ ನಿಂತು ಫೊಟೊ, ಸೆಲ್ಫಿ ತೆಗೆದುಕೊಂಡು ಹೋಗುತ್ತಾರೆ. ಇಂತಹ ಐತಿಹಾಸಿಕ ಕಟ್ಟಡದ ಮುಂಭಾಗ ಇದೀಗ ರಾಜ್ಯ ತೋಟಗಾರಿಕಾ ಇಲಾಖೆಯು ವಿನೂತನ ರೀತಿಯಲ್ಲಿ ರಾಜ್ಯ ಸರ್ಕಾರದ ಲಾಂಛನ ಗಂಡಭೇರುಂಡ ಹಾಗೂ ಎರಡು ನವಿಲುಗಳ ವಿನ್ಯಾಸದ ಮಾದರಿಯಲ್ಲಿ ವಿವಿಧ ಪ್ರಾಕಾರಗಳ ಸಸ್ಯಗಳನ್ನಿಟ್ಟು ಅಲಂಕಾರ ಮಾಡುವ ಕಾರ್ಯಕ್ಕೆ ಕೈಹಾಕಿದೆ.

ಡಾಟ್ ಆರ್ಟ್ ಸ್ಟುಡಿಯೋ ಎಂಬ ಬೆಂಗಳೂರಿನ ಸಂಸ್ಥೆಯು ಕಂಪ್ಯೂಟರ್ ನಲ್ಲಿ ಫೋಟೋ ಶಾಪ್ ನಲ್ಲಿ ಇದರ ವಿನ್ಯಾಸವನ್ನು ತಯಾರಿಸಿ, ಬಳಿಕ ಫೈಬರ್ ಮೆಟೀರಿಯಲ್ ಬಳಸಿಕೊಂಡು ವಿಧಾನ ಸೌಧದ ಮುಂಭಾಗದ ಎಡಬದಿಯಲ್ಲಿ ಗಂಡಭೇರುಂಡ ಹಾಗೂ ಬಲಬದಿಯಲ್ಲಿ ಎರಡು ನವಿಲುಗಳ ರಚನೆಯನ್ನು ಸಾಕಾರಗೊಳಿಸುತ್ತಿದೆ.

ಗಂಡಭೇರುಂಡ ವಿನ್ಯಾಸ ಮಾಡಿ ಅದರಲ್ಲಿ ವಿವಿಧ ಅಲಂಕಾತಿಕ ಬಣ್ಣ ಬಣ್ಣದ ಸಸ್ಯಗಳನ್ನಿಟ್ಟು ಪೋಷಿಸಲಾಗುತ್ತಿದೆ. ಇನ್ನೊಂದೆಡೆ ಎರಡು ನವಿಲುಗಳು ನೆಲಕ್ಕೆ ತಾಗುವಂತೆ ತಮ್ಮ ಗರಿಗಳನ್ನು ಹರಿಡುಕೊಂಡು ನಿಂತಿರುವ ಭಂಗಿಯಲ್ಲಿ ಹೂದೋಟವನ್ನು ಚೆಂದಗೊಳಿಸಲಾಗುತ್ತಿದೆ. ಒಂದೊಂದು ನವಿಲು 50 ಅಡಿ ಉದ್ದ, 9 ಅಡಿ ಎತ್ತರವಿದೆ. ಇವನ್ನು ಸಂಪೂರ್ಣವಾಗಿ ಫೈಬರ್ ವಸ್ತುವಿನಿಂದ ಮಾಡಿದ್ದು ಹಲವು ವರ್ಷಗಳ ಕಾಲ ಬಾಳಿಕೆ ಬರುತ್ತದೆ. ಇವುಗಳ ಮಧ್ಯೆ ಬಣ್ಣ ಬಣ್ಣದ ಗಿಡಗಳು ಹಾಗೂ ಹೂಕುಂಡಗಳನ್ನು ತೋಟಗಾರಿಕಾ ಇಲಾಖೆ ಬೆಳೆಸಲಿದೆ. ಇನ್ನು ಗಂಡಬೇರುಂಡ 1 ಅಡಿ ಎತ್ತರ, 35 ಉದ್ದ ಹಾಗೂ 45 ಅಡಿ ಅಗಲವಿದೆ.

“ಒಂದು ಗಂಡಭೇರುಂಡ ಹಾಗೂ ಎರಡು ನವಿಲುಗಳನ್ನು ವಿನ್ಯಾಸ ಮಾಡಿ, ಫೈಬರ್ ಮೆಟೀರಿಯಲ್ ನಲ್ಲಿ ನಿರ್ಮಿಸಲು ಮೂರು ತಿಂಗಳು ಹಿಡಿಯಿತು. ತೋಟಗಾರಿಕಾ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರು ಚೈನಾದ ಶಾಂಘೈ ವೃತ್ತದಲ್ಲಿ ನವಿಲುಗಳ ವಿನ್ಯಾಸವನ್ನು ಕಂಡು ಅದೇ ರೀತಿ ವಿಧಾನಸೌಧದ ಮುಂದಿನ ತೋಟದಲ್ಲಿ ಮಾಡುವಂತೆ ಸೂಚನೆ ನೀಡಿದ್ದರು. ಅದರಂತೆ ಇವುಗಳನ್ನು ನಿರ್ಮಿಸಲಾಗುತ್ತಿದೆ. ಫೈಬರ್ ವಸ್ತುಗಳಿಂದ ಮಾಡಿರುವುದರಿಂದ 25-30 ವರ್ಷಗಳ ಕಾಲ ಈ ರಚನೆಗಳು ಬಾಳಿಕೆ ಬರುತ್ತದೆ. ಕೇವಲ ಈ ಗಿಡಗಳಿಗೆ ಕಾಲ ಕಾಲಕ್ಕೆ ಗೊಬ್ಬರ, ಗಿಡಗಳ ಕಟಿಂಗ್ ಮಾಡಿದರೆ ನಿರ್ವಹಣೆ ಮಾಡಬಹುದು. ಈ ಎರಡು ಗಿಡಗಳ ಕಲಾಕೃತಿಯಿಂದ ವಿಧಾನಸೌಧಕ್ಕೆ ಮತ್ತಷ್ಟು ಕಳೆ ಬರಲಿದೆ” ಎಂದು ರಾಜ್ಯ ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಡಾ.ಎಂ.ಜಗದೀಶ್ ಬೆಂಗಳೂರು ವೈರ್ ಗೆ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಈ ರೀತಿ ಮೊದಲ ಬಾರಿಗೆ ತೋಟಗಾರಿಕಾ ಇಲಾಖೆಯು ಫೈಬರ್ ವಸ್ತುಗಳನ್ನು ಆಂಗಲ್ ರೀತಿ ಬಳಸಿ ಅಲಂಕೃತ ಗಿಡಗಳನ್ನು ಬೆಳೆಸಲಾಗುತ್ತಿದೆ.