ಬೆಂಗಳೂರು, ಡಿ.15 www.bengaluruwire.com : ಅಯೋಧ್ಯೆಯ ಶ್ರಿರಾಮ ಮಂದಿರವನ್ನು ರಾಮಮಂದಿರವಾಗಿ ಉಳಿಸಿಕೊಳ್ಳಬೇಕು. ಹಿಂದೂಗಳಾಗಿ ನಾವು ಇದನ್ನು ಉಳಿಸಿಕೊಳ್ಳಬೇಕಿದೆ. ಘಂಟಾನಾದನ ಪರಿಕ್ರಮ ಬೆಂಗಳೂರಿನಿಂದ ಹೊರಡುತ್ತಿದೆ. ರಾಮಮಂದಿರ ದೇವಸ್ಥಾನ ಸಹಸ್ರ ವರ್ಷಗಳವರೆಗೆ ಉಳಿಯಬೇಕಿದೆ ಎಂದು ಅಯೋಧ್ಯೆ ಶ್ರೀ ರಾಮ ಜನ್ಮಭೂಮಿ ವಿಶ್ವಸ್ಥ ಮಂಡಳಿ ಸದಸ್ಯರಾಗಿರುವ ವಿಶ್ವ ಪ್ರಸನ್ನ ತೀರ್ಥ ಶ್ರೀಗಳು ತಿಳಿಸಿದ್ದಾರೆ.
ಬೆಂಗಳೂರಿನ ಬನಶಂಕರಿ ಒಂದನೇ ಹಂತದಲ್ಲಿ ಅಯೋಧ್ಯೆಯ ಪುರುಷೋತ್ತಮ ಶ್ರೀರಾಮ ಮಂದಿರದ ದೇಗುಲಕ್ಕೆ ಘಂಟೆಗಳು ಹಾಗೂ ಪೂಜಾ ಸಾಮಗ್ರಿಗಳನ್ನು ಅರ್ಪಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.
ಊರು ಊರು, ಗ್ರಾಮ ಗ್ರಾಮಗಳಲ್ಲಿ ಮಂದಿರ ಉದ್ಘಾಟನೆಗೆ ಮುಂಚೆ ಕಾರ್ಯಕ್ರಮ ನಡೆಯುತ್ತಿದೆ. ಶ್ರೀರಾಮ ಘಂಟಾನಾದನ ಎಲ್ಲೆಡೆ ಕೇಳಿಬರುತ್ತಿದೆ. ಮಂದಿರದ ಕನಸು ನನಸಾಗಿದೆ. ಹಿಂದು ಹಿಂದೂಗಳಾಗಿ ಉಳಿದರೆ, ಶ್ರೀರಾಮಚಂದ್ರನ ದೇವಸ್ಥಾನ ಉಳಿಯುತ್ತದೆ. ರಾಮ ರಾಜ್ಯದ ಕನಸು ನನಸಾಗಬೇಕಿದೆ. ದೇಶಸೇವೆಗೆ ಎಲ್ಲರೂ ಕಟಿಬದ್ಧರಾಗಿರಬೇಕು. ಆಗ ಮಾತ್ರ ರಾಮರಾಜ್ಯದ ಕನಸು ನನಸಾಗಲಿದೆ. ಹಿಂದು ಸಂಸ್ಕೃತಿ ಉಳಿಯಲು ಶ್ರೀರಾಮ ಮಂದಿರವನ್ನು ಮಂದಿರವಾಗಿಯೇ ಉಳಿಸಿಕೊಳ್ಳಬೇಕಿದೆ ಎಂದು ಅವರು ಪುನರುಚ್ಚಿಸಿದರು.
ಶ್ರೀರಾಮ ದೇವಸ್ಥಾನಕ್ಕೆ ಬೆಳ್ಳಿ ಪೂಜಾ ಸಾಮಗ್ರಿ- ಘಂಟೆ ಸಮರ್ಪಣೆ :
ಒಟ್ಟು 2.5 ಟನ್ ತೂಕದ ಘಂಟೆಗಳನ್ನು ಅಯೋಧ್ಯೆಯ ಶ್ರೀರಾಮನ ದೇವಸ್ಥಾನದ ಒಳಗೆ ಬಳಸಲಾಗುತ್ತದೆ. 30 ಸಣ್ಣ ಪೂಜಾ ಘಂಟೆಗಳನ್ನು ಸಮರ್ಪಿಸಲಾಗುತ್ತಿದೆ. ಶ್ರೀರಾಮ ಮಂದಿರ ಗರ್ಭಗೃಹದಲ್ಲಿ ಬಳಸಲು 38 ಕೆಜಿ ತೂಕದ ಬೆಳ್ಳಿಯ ಅಭಿಷೇಕದ ಸಾಮಾನು, ದೀಪಗಳು ಹಾಗೂ ಪೂಜಾ ಸಾಮಾನುಗಳನ್ನು ಅಯೋಧ್ಯೆಗೆ ವಿಶೇಷ ವಾಹನದಲ್ಲಿ ಇಂದು ಕೊಂಡೊಯ್ಯಲಾಗುತ್ತದೆ. ನಾಲ್ಕು ದಿನಗಳ ನಂತರ ಅಯೋಧ್ಯೆಯ ಟ್ರಸ್ಟ್ ಹಸ್ತಾಂತರ ಮಾಡಲಾಗುತ್ತದೆ ಎಂದು ಈ ಸಾಮಗ್ರಿಗಳನ್ನು ಸೇವಾ ರೂಪದಲ್ಲಿ ನೀಡುತ್ತಿರುವ ರಾಜೇಂದ್ರ ನಾಯ್ಡು ತಿಳಿಸಿದ್ದಾರೆ.
ತಮಿಳುನಾಡಿನ ನಾಮಕ್ಕಲ್ ಎಂಬಲ್ಲಿನ ಲೋಹಶಿಲ್ಪಿ ರಾಜೇಂದ್ರನ್ ಈ ಲೋಹದ ಬೃಹತ್ ಗಂಟೆಗಳನ್ನು ತಯಾರಿಸಿದ್ದಾರೆ. ಈ ಗಂಟೆಯಲ್ಲಿ ಶೇ.4 ನಿಕ್ಕಿಲ್, ಶೇ.23ರಷ್ಟು ಜಿಂಕ್, ತಾಮ್ರ ಶೇ. 73ರಷ್ಟು ಹಾಕಿ ನಿರ್ಮಾಣ ಮಾಡಲಾಗಿದೆ. ಅಯೋಧ್ಯೆಯ ಶ್ರೀ ರಾಮಮಂದಿರ ಮಂಗಳ ಘಂಟೆ ಪರಿಕ್ರಮ ಯಾತ್ರೆ ಪ್ರಯುಕ್ತ ಧಾರ್ಮಿಕ ಹೋಮ ಹವನ, ಶ್ರೀ ರಾಮ ಭಜನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಬಿಜೆಪಿಯ ಮುಖಂಡರಾದ ಸುಬ್ಬಣ್ಣ, ಮಾಜಿ ಕಾರ್ಪೊರೇಟರ್ ಸಂಗಾತಿ ವೆಂಕಟೇಶ್, ಆರ್ ಎಸ್ ಎಸ್ ಕಾರ್ಯಕರ್ತರು, ವಿವಿಧ ಹಿಂದೂಪರ ಸಂಘಟನೆಗಳ ಮುಖಂಡರು, ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.