ಮುಂಬೈ, ಡಿ.9 www.bengaluruwire.com : ಆಸ್ಪತ್ರೆಗಳು ಮತ್ತು ಶಿಕ್ಷಣ ಸಂಸ್ಥೆಗಳಿಗೆ ಯುಪಿಐ ಮೂಲಕ ಹಣ ಪಾವತಿಸುವ ಮಿತಿಯನ್ನು ಈಗಿರುವ 1 ಲಕ್ಷ ರೂ.ನಿಂದ 5 ಲಕ್ಷಕ್ಕೆ ಹೆಚ್ಚಿಸಲು ಭಾರತೀಯ ರಿಸರ್ವ್ ಬ್ಯಾಂಕ್ (RBI) ನಿರ್ಧರಿಸಿದೆ.
ಯುಪಿಐ ಪಾವತಿ ಮಿತಿ ಏರಿಕೆ ಮಾಡಿರುವುದರಿಂದ ಗ್ರಾಹಕರಿಗೆ ಹೆಚ್ಚು ಅನುಕೂಲ ಆಗಲಿದೆ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಶುಕ್ರವಾರ ತಿಳಿಸಿದ್ದಾರೆ.
ಪುನರಾವರ್ತಿತ (Recurring Transactions) ಮಿತಿಯನ್ನು 1 ಲಕ್ಷ ರೂ.ಗೆ ಹೆಚ್ಚಿಸಲು ಆರ್‌ಬಿಐ ಉದ್ದೇಶಿಸಿದೆ. ಮ್ಯೂಚುವಲ್ ಫಂಡ್ ಚಂದಾದಾರಿಕೆ, ವಿಮೆ ಕಂತಿನ ಚಂದಾದಾರಿಕೆ ಮತ್ತು ಕ್ರೆಡಿಟ್ ಕಾರ್ಡ್ ಮರುಪಾವತಿ ಹಾಗೂ ಪಾವತಿಗಳಿಗೆ ವರ್ಗಾವಣೆಯ ಮಿತಿಯನ್ನು 15,000 ರೂ. ನಿಂದ 1 ಲಕ್ಷ ರೂ.ಗಳಿಗೆ ಹೆಚ್ಚಿಸಲು ಉದ್ದೇಶಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಪುನರಾವರ್ತಿತ ಪಾವತಿಗಳಿಗೆ ಇ-ಮ್ಯಾಂಡೇಟ್ ವ್ಯವಸ್ಥೆ ಜನಪ್ರಿಯವಾಗಿದೆ. ಈ ವ್ಯವಸ್ಥೆ ಅಡಿಯಲ್ಲಿ 15 ಸಾವಿರಕ್ಕಿಂತ ಅಧಿಕ ಮೊತ್ತದ ವರ್ಗಾವಣೆಗೆ ಹೆಚ್ಚುವರಿ ದೃಢಿಕರಣ (ಅಡಿಷನಲ್ ಫ್ಯಾಕ್ಟರ್ ಆಫ್ ಅಥೆಂಟಿಕೇಷನ್-ಎಎಫ್‌ಎ) ಅಗತ್ಯ ಇದೆ. ಒಂದು ನಿರ್ದಿಷ್ಟ ಬ್ಯಾಂಕ್ ಖಾತೆಯಿಂದ ನಿಗದಿತ ಮೊತ್ತವನ್ನು ಕಡಿತ ಮಾಡಲು ಬ್ಯಾಂಕ್‌ಗೆ ಅವಕಾಶ ನೀಡುವ ವ್ಯವಸ್ಥೆ ಇ-ಮ್ಯಾಂಡೇಟ್.
ಫಿನ್‌ಟೆಕ್ ಕಣಜ ಸ್ಥಾಪನೆ :
ಫಿನ್‌ಟೆಕ್ ವಲಯದಲ್ಲಿ ಆಗುತ್ತಿರುವ ಬೆಳವಣಿಗೆಗಳ ಬಗ್ಗೆ ಸ್ಥಾನಕ್ಕೆ ತಿಳಿದುಕೊಳ್ಳಲು ಮತ್ತು ವಲಯಕ್ಕೆ ಬೆಂಬಲ ನೀಡುವ ಉದ್ದೇಶದಿಂದ ಫಿನ್‌ಟೆಕ್ ಎತ್ತಿದ್ದು, ಕಣಜ ಸ್ಥಾಪಿಸುವುದಾಗಿ ದಾಸ್ ಹೇಳಿದ್ದಾರೆ.
ಆರ್‌ಬಿಐನ ಇನೊವೇಷನ್ ಹಬ್ ಇದನ್ನು ನೋಡಿಕೊಳ್ಳಲಿದೆ. 2024ರ ಏಪ್ರಿಲ್ ಅಥವಾ ಅದಕ್ಕೂ ಮುನ್ನವೇ ಫಿನ್‌ಟೆಕ್ ಕಣಜ ಕಾರ್ಯಾರಂಭ ಮಾಡಲಿದೆ. ಫಿನ್‌ಟೆಕ್ ಕಂಪನಿಗಳು ಸ್ವಯಂ ಪ್ರೇರಿತರಾಗಿ ಅಗತ್ಯವಾದ ಮಾಹಿತಿಗಳನ್ನು ಈ ಕಣಜಕ್ಕೆ ನೀಡುವಂತೆ ಉತ್ತೇಜಿಸಲಾಗುವುದು ಎಂದಿದ್ದಾರೆ.