ಬೆಂಗಳೂರು, ಡಿ.09 www.bengaluruwire.com : ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ನಿರ್ಮಿಸುತ್ತಿರುವ ಡಾ.ಕೆ.ಶಿವರಾಮ ಕಾರಂತ ಬಡಾವಣೆ (Dr.K.Shivarama Karanth Layout)ಯ ಉಸ್ತುವಾರಿಗಾಗಿ ಸುಪ್ರೀಂಕೋರ್ಟ್ ನೇಮಿಸಿದ್ದ ನ್ಯಾಯಮೂರ್ತಿ ಚಂದ್ರಶೇಖರ್ ಅಧ್ಯಕ್ಷತೆಯ ಸಮಿತಿ (Justice A.V.Chandrashekar Committee –ಜೆಸಿಸಿ) ಅವಧಿ ಇದೇ ಡಿಸೆಂಬರ್ ನಲ್ಲಿ ಮುಕ್ತಾಯವಾಗಲಿದೆ. ರೈತರಿಗೆ ಭೂಪರಿಹಾರ ನೀಡುವ ತನಕ ಅಥವಾ ಮತ್ತೊಂದು ವರ್ಷ ಸಮಿತಿ ಕಾರ್ಯಾವಧಿಯನ್ನು ವಿಸ್ತರಣೆ ಮಾಡುವಂತೆ ಬಡಾವಣೆಗೆ ಜಮೀನು ಬಿಟ್ಟುಕೊಟ್ಟ ರೈತರು ಸರ್ವೋಚ್ಛ ನ್ಯಾಯಾಲಯಕ್ಕೆ ಪತ್ರ ಬರೆದು ಮನವಿ ಮಾಡಿದ್ದಾರೆ.
ಬಡಾವಣೆಗೆ ಸಂಬಂಧಿಸಿದ ಕೆಲಸಗಳು ಇನ್ನು ಅಪೂರ್ಣವಾಗಿರುವುದರಿಂದ ಸಮಿತಿಯ ಅವಧಿಯನ್ನು ವಿಸ್ತರಿಸುವಂತೆ ಡಾ.ಕೆ. ಶಿವರಾಮಕಾರಂತ ಬಡಾವಣೆಯ 17 ಗ್ರಾಮಗಳ ಗ್ರಾಮಸ್ಥರು ಸುಪ್ರೀಂಕೋರ್ಟಿಗೆ ಒಕ್ಕೊರಲ ಮನವಿ ಮಾಡಿದ್ದಾರೆ. ಸಮಿತಿ ಅವಧಿ ವಿಸ್ತರಿಸದಿದ್ದಲ್ಲಿ ಜೆಸಿಸಿ ಸಮಿತಿಯ ಮೇಲೆ ನಂಬಿಕೆ ಇಟ್ಟು ಬಿಡಿಎಗೆ ಜಮೀನು ಬಿಟ್ಟಕೊಟ್ಟ ರೈತರಿಗೆ ಭೂಪರಿಹಾರ ವಿಚಾರದಲ್ಲಿ ನ್ಯಾಯ ಸಿಗುವುದಿಲ್ಲ. ಹಾಗಾಗಿ ಸಮಿತಿ ಅವಧಿ ವಿಸ್ತರಿಸುವಂತೆ ಕೋರಿದ್ದಾರೆ.
ಸುಪ್ರೀಂಕೋರ್ಟ್ ಜೆಸಿಸಿ ಸಮಿತಿ ರಚನೆಯಿಂದಾಗಿ ಬಿಡಿಎ ಹಿಂದಿನ ಬಡಾವಣೆ ನಿರ್ಮಾಣದಲ್ಲಿ ಮಾಡಿದ ಯಡವಟ್ಟುಗಳು, ತಪ್ಪು ನಿರ್ಧಾರಗಳು ಶಿವರಾಮ ಕಾರಂತ ಬಡಾವಣೆ ರಚನೆಯಲ್ಲಿ ಮರುಕಳಿಸಿಲ್ಲ. ಈಗ ಸಮಿತಿ ಅವಧಿ ರೈತರಿಗೆ ಭೂ ಪರಿಹಾರ ಹಾಗೂ ಬಡಾವಣೆ ನಿರ್ಮಾಣ ಕಾರ್ಯ ಪೂರ್ಣಗೊಳ್ಳುವ ತನಕ ಮುಂದುವರೆಸಿದರೆ ಅನುಕೂಲವಾಗುತ್ತದೆ ಎಂಬುದು ಡಾ.ಶಿವರಾಮ ಕಾರಂತ ಬಡಾವಣೆಗೆ ಭೂಮಿ ನೀಡಿದ 17 ಗ್ರಾಮಸ್ಥರ ಅಭಿಪ್ರಾಯವಾಗಿದೆ.
ಗ್ರಾಮಸ್ಥರ ಮನವಿಗೆ ನ್ಯಾ.ಎ.ವಿ.ಚಂದ್ರಶೇಖರ್ ಹೇಳಿದ್ದೇನು? :
“ಜೆಸಿಸಿ ಸಮಿತಿ ಅವಧಿಯನ್ನು ವಿಸ್ತಿರಿಸುವಂತೆ ಸುಪ್ರೀಂಕೋರ್ಟಿಗೆ ಇಮೇಲ್ ಮುಖಾಂತರ ನಮ್ಮ ಮನವಿಯನ್ನು ಸಲ್ಲಿಸಿದ್ದೇವೆ. ಇದೇ ಮನವಿಪತ್ರವನ್ನು ಗ್ರಾಮಸ್ಥರೆಲ್ಲರೂ ಜೆಸಿಸಿ ಸಮಿತಿ ಅಧ್ಯಕ್ಷರಾದ ನ್ಯಾಯಮೂರ್ತಿ ಎ.ವಿ.ಚಂದ್ರಶೇಖರ್ ಅವರಿಗೂ ಖುದ್ದಾಗಿ ಹೋಗಿ ನೀಡಿದ್ದೇವೆ. ಆ ಸಂದರ್ಭದಲ್ಲಿ ಅವರು, ಈಗಾಗಲೇ ತಲಾ ಆರು ತಿಂಗಳಂತೆ ಎರಡು ಬಾರಿ ಸುಪ್ರೀಕೋರ್ಟ್ ಸಮಿತಿ ಅವಧಿ ವಿಸ್ತರಣೆ ಮಾಡಿದೆ. ಹೀಗಾಗಿ ನಾನಾಗಿಯೇ ಸರ್ವೋಚ್ಛ ನ್ಯಾಯಾಲಯದಲ್ಲಿ ಸಮಿತಿ ಅವಧಿ ವಿಸ್ತಿರಿಸುವಂತೆ ಕೋರುವುದಿಲ್ಲ. ಒಂದೊಮ್ಮೆ ಕೋರ್ಟ್ ಅವಧಿ ವಿಸ್ತರಿಸಿದರೆ ಮುಂದುವರೆಯಲು ಅಡ್ಡಿಯಿಲ್ಲ ಎಂದು ಗ್ರಾಮಸ್ಥರಿಗೆ ಪ್ರತಿಕ್ರಿಯೆ ಕೊಟ್ಟಿದ್ದರು”
–ಪಿ.ಮಧು, ಗಾಣಿಗರಹಳ್ಳಿ ಗ್ರಾಮಸ್ಥ
“ಡಿ.9ರಂದು ಸುಪ್ರೀಂಕೋರ್ಟ್ ನಲ್ಲಿ ಡಾ.ಶಿವರಾಮ ಕಾರಂತ ಬಡಾವಣೆ ವಿಚಾರ ಕುರಿತಂತೆ ವಿಚಾರಣೆಯಾಗಿದ್ದು, ಈ ಪ್ರಕರಣವನ್ನು ಕರ್ನಾಟಕದ ಹೈಕೋರ್ಟ್ ಗೆ ನಲ್ಲಿ ಸಂಪೂರ್ಣವಾಗಿ ಹಸ್ತಾಂತರಿಸಲು ನಿರ್ಧರಿಸಲಾಗಿದೆ. ಬಡಾವಣೆ ರಚನೆಗಾಗಿ ಭೂಮಿ ನೀಡಿರುವ ರೈತರ ಅಹವಾಲನ್ನು ಸುಪ್ರೀಂಕೋರ್ಟಿಗೆ ಮೊಕದ್ದಮೆ ದಾಖಲಿಸಿ ಬಂದು ಹೋಗಲು ಕಷ್ಟವಾಗುತ್ತದೆ. ಹಾಗೂ ಹೈಕೋರ್ಟ್ ಹಂತದಲ್ಲಿಯೇ ಬಡಾವಣೆ ನಿರ್ಮಾಣ, ಭೂಪರಿಹಾರ, ಸೈಟ್ ಹಂಚಿಕೆ, ಭೂ ವ್ಯಾಜ್ಯಗಳು ಮತ್ತಿತರ ವಿಚಾರಗಳ ಬಗ್ಗೆ ತೀರ್ಮಾನ ಕೈಗೊಳ್ಳುವ ಉದ್ದೇಶದಿಂದ ಪ್ರಕರಣವನ್ನು ಸಂಪೂರ್ಣವಾಗಿ ಸುಪ್ರೀಂಕೋರ್ಟ್ ಹೈಕೋರ್ಟಿಗೆ ವರ್ಗಾಯಿಸಲು ತೀರ್ಮಾನಿಸಿದೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಸರ್ವೋಚ್ಛ ನ್ಯಾಯಾಲಯದಿಂದ ಲಿಖಿತ ಸೂಚನೆ ಬಂದ ಮೇಲಷ್ಟೆ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ” ಎಂದು ಬಿಡಿಎ ಅಧಿಕಾರಿಯೊಬ್ಬರು ಬೆಂಗಳೂರು ವೈರ್ ಗೆ ತಿಳಿಸಿದ್ದಾರೆ.
ಇದನ್ನೂ ಓದಿ : BDA News | ಗೌರಿ ಗಣೇಶ ಹಬ್ಬದ ಬಳಿಕ ಬಿಡಿಎನಿಂದ ಶಿವರಾಮ ಕಾರಂತ ಬಡಾವಣೆಯಲ್ಲಿ ನಿವೇಶನ ಹಂಚಿಕೆಗೆ ನಿರ್ಧಾರ
ಜೆಸಿಸಿ ಮುಂದುವರಿಕೆ ನ್ಯಾಯಮೂರ್ತಿ ಎ.ವಿ.ಚಂದ್ರಶೇಖರ್ ಪ್ರತಿಕ್ರಿಯೆ :
ಇನ್ನು ಸುಪ್ರೀಂಕೋರ್ಟ್ ಹೈಕೋರ್ಟ್ ಗೆ ಪ್ರಕರಣವನ್ನು ಸಂಪೂರ್ಣವಾಗಿ ವರ್ಗಾಯಿಸಿದರೂ, ಸರ್ವೋಚ್ಛ ನ್ಯಾಯಾಲಯ ನೇಮಿಸಿದ ಜಸ್ಟೀಸ್ ಚಂದ್ರಶೇಖರ ಸಮಿತಿ ಮುಂದುವರಿಕೆ ಬಗ್ಗೆ ಹೈಕೋರ್ಟ್ ಗೆ ನಿರ್ದೇಶನ ನೀಡಿದೆಯಾ ಎಂಬುದರ ಬಗ್ಗೆ ಇನ್ನಷ್ಟೇ ಮಾಹಿತಿ ತಿಳಿದು ಬರಬೇಕಿದೆ. ಈ ಕುರಿತಂತೆ ಜಸ್ಟೀಸ್ ಎ.ವಿ.ಚಂದ್ರಶೇಖರ್ ಸಮಿತಿ ಅಧ್ಯಕ್ಷರಾದ ನ್ಯಾಯಮೂರ್ತಿ ಎ.ವಿ.ಚಂದ್ರಶೇಖರ್ ಅವರು ಬೆಂಗಳೂರು ವೈರ್ ಗೆ ಪ್ರತಿಕ್ರಿಯಿಸಿದ್ದು, “ಡಿ.9ರಂದು ಸುಪ್ರೀಂಕೋರ್ಟಿನಲ್ಲಿ ಬಿಡಿಎ ಡಾ.ಕೆ.ಶಿವರಾಮ ಕಾರಂತ ಬಡಾವಣೆ ಪ್ರಕರಣದ ವಿಚಾರಣೆ ನಡೆಯಿತು. ಜೆಸಿಸಿ ಸಮಿತಿ ಮುಂದುವರಿಕೆ ಬಗ್ಗೆ ಮುಂದಿನ ಸೋಮವಾರ ಅಥವಾ ಮಂಗಳವಾರ ತಿಳಿದು ಬರಲಿದೆ” ಎಂದು ಅವರು ಹೇಳಿದ್ದಾರೆ.
28,830 ಸೈಟ್ ನಿರ್ಮಾಣ ಪೂರ್ಣ :
ಡಾ.ಶಿವರಾಮಕಾರಂತ ಬಡಾವಣೆಯಲ್ಲಿ ಡಿ.7ನೇ ತಾರೀಖಿನ ಯೋಜನಾ ವರದಿಯ ಪ್ರಕಾರ ಯೋಜಿತ 9 ಬ್ಲಾಕ್ ಗಳಲ್ಲಿ ಬಡಾವಣೆ ರಚನೆಗಾಗಿ ಈತನಕ 3,599.87 ಎಕರೆಗಳ ಭೂಸ್ವಾಧೀನ ಅಧಿಸೂಚನೆ ಪೈಕಿ 3,118.24 ಎಕರೆಯಷ್ಟು ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಆ ಪೈಕಿ 2,920 ಎಂಜಿನಿಯರಿಂಗ್ ವಿಭಾಗಕ್ಕೆ ಹಸ್ತಾಂತರಿಸಲಾಗಿದೆ. ಇನ್ನು 481.63 ಎಕರೆ ಭೂಸ್ವಾಧೀನ ಪ್ರಕ್ರಿಯೆ ಬಾಕಿಯಿದೆ. ಕಾರಂತ ಬಡಾವಣೆಯಲ್ಲಿ ಒಟ್ಟು 33,785 ನಿವೇಶನಗಳನ್ನು ರಚಿಸಲು ಬಿಡಿಎ ಯೋಜಿಸಿದೆ. ಆ ಪೈಕಿ ಈತನಕ 28,830 ನಿವೇಶನಗಳಲ್ಲಿ ಸೈಟ್ ನಂಬರ್ ಹಾಗೂ ವಿಸ್ತೀರ್ಣ, ಗಡಿ ಗುರುತು ಹಾಕುವ ಕಾರ್ಯ ಪೂರ್ಣವಾಗಿದೆ. ಆ ಪೈಕಿ 17,611 ನಿವೇಶನಗಳಲ್ಲಿ ಪೈಂಟ್ ನಲ್ಲಿ ಸೈಟ್ ನಂಬರ್ ಹಾಕುವ ಕಾರ್ಯವು ನಡೆದಿದೆ. ರಸ್ತೆ ಬದಿಯಲ್ಲಿ ಒಟ್ಟಾರೆ 9 ಬ್ಲಾಕ್ ಗಳಲ್ಲಿ 603.42 ಕಿ.ಮೀ ಮಳೆ ನೀರು ಮೋರಿ ನಿರ್ಮಿಸುವ ಗುರಿಯ ಪೈಕಿ 423.79 ಕಿ.ಮೀ ಮೋರಿ ನಿರ್ಮಾಣ ಕಾರ್ಯ ಪೂರ್ಣವಾಗಿದೆ.
ನೀರು, ಒಳಚರಂಡಿ, ವಿದ್ಯುತ್ ಪೂರೈಕೆ ಕಾರ್ಯದಲ್ಲಿ ವಿಳಂಬ :
460.30 ಕಿ.ಮೀ ಕುಡಿಯುವ ನೀರು ಪೂರೈಕೆ ಮಾಡಲು ಮುಖ್ಯ ಪೈಪ್ ಅಳವಡಿಸುವ ಗುರಿಯಲ್ಲಿ ಈತನಕ ಕೇವಲ 2.80 ಕಿ.ಮೀನಷ್ಟು ಕೊಳವೆ ಹಾಕಲಾಗಿದೆ, ಒಟ್ಟಾರೆ 32,070 ನಿವೇಶನಗಳಿಗೆ ಮನೆ ಮನೆಗೆ ನೀರು ಒದಗಿಸುವ ಪೈಪ್ ಹಾಕುವ ಕಾರ್ಯದ ಪೈಕಿ ಕೇವಲ 190 ನಿವೇಶನಗಳಿಗಷ್ಟೆ ಸಂಪರ್ಕ ಕಲ್ಪಿಸಲಾಗಿದೆ. 9 ಬ್ಲಾಕ್ ಗಳಲ್ಲಿ ಒಟ್ಟು 275.64 ಕಿ.ಮೀ ಒಳಚರಂಡಿ ನಿರ್ಮಾಣದ ಪೈಕಿ ಕೇವಲ 40.04 ಕಿ.ಮೀ ಪೂರ್ಣವಾಗಿದ್ದು, 10.12 ಕಿ.ಮೀ ಒಳಚರಂಡಿ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಇನ್ನು ಒಟ್ಟಾರೆ 32,486 ನಿವೇಶನಗಳಿಗೆ ಒಳಚರಂಡಿ ಪೈಪ್ ಸಂಪರ್ಕ ಕಲ್ಪಿಸಬೇಕಿದ್ದು, 1,254 ನಿವೇಶನಗಳಿಗೆಷ್ಟೇ ಸಂಪರ್ಕಿಸುವ ಕಾರ್ಯವಾಗಿದೆ. ಇನ್ನು ಬಡಾವಣೆಯಲ್ಲಿ ಒಟ್ಟಾರೆ 444.40 ಕಿ.ಮೀ ಉದ್ದ ನೆಲದಡಿಯಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಬೇಕಿದ್ದು, ಕೇವಲ 0.80 ಕಿ.ಮೀಯಷ್ಟು ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ.
2024ರ ನವೆಂಬರ್ ನಲ್ಲಿ ರಸ್ತೆಗೆ ಡಾಂಬರ್ :
ನ್ಯಾಯಮೂರ್ತಿ ಎ.ವಿ.ಚಂದ್ರಶೇಖರ್ ಸಮಿತಿ ಸೂಚನೆಯಂತೆ ಬಿಡಿಎ ಎಂಜಿನಿಯರ್ ಗಳು ಮೊದಲಿಗೆ ಸೈಟ್ ರಚನೆ ಮಾಡಿ, ಬಳಿಕ ಕುಡಿಯುವ ನೀರು, ಒಳಚರಂಡಿ ಪೈಪ್, ನೆಲದಡಿ ವಿದ್ಯುತ್ ಪೈಪ್ ಅಳವಡಿಕೆ ಮಾಡಿದ ನಂತರ ರಸ್ತೆ ನಿರ್ಮಾಣ ಕೈಗೊಳ್ಳಲಿದೆ. ಇಲ್ಲವಾದಲ್ಲಿ ಪೈಪ್ ಅಳವಡಿಸಲು ನಿರ್ಮಾಣ ಮಾಡುವ ರಸ್ತೆ ಅನಾವಶ್ಯಕವಾಗಿ ಅಗೆಯ ಬೇಕಾಗುತ್ತದೆ. ಇದನ್ನು ತಪ್ಪಿಸಲು ಅಂತಿಮವಾಗಿ ಡಾಂಬರ್ ರಸ್ತೆ ನಿರ್ಮಿಸಲಿದೆ. ಸದ್ಯ ಬಡಾವಣೆಯಲ್ಲಿ ಲೇಔಟ್ ನಿರ್ಮಾಣಕ್ಕೆ ವಾಹನಗಳ ಓಡಾಟಕ್ಕೆ ಕಚ್ಚಾ ಮಣ್ಣಿನ ರಸ್ತೆಗಳಿವೆ. ಮುಂದಿನ ಜೂನ್ ವೇಳೆಗೆ ವಿವಿಧ ಪೈಪ್ ಗಳ ಅಳವಡಿಸುವ ಕಾರ್ಯ ಪೂರ್ಣಗೊಳ್ಳಲಿದ್ದು, ಮುಂದಿನ ನವೆಂಬರ್ ಅಥವಾ ಡಿಸೆಂಬರ್ ವೇಳೆಗೆ ರಸ್ತೆಗೆ ಟಾರ್ ಹಾಕಲಾಗುತ್ತದೆ ಎಂದು ಬಿಡಿಎ ಉನ್ನತ ಅಧಿಕಾರಿಯೊಬ್ಬರು ಬೆಂಗಳೂರು ವೈರ್ ಗೆ ಖಚಿತಪಡಿಸಿದ್ದಾರೆ.
ಈವರೆಗೆ ಶೇ.15ರಷ್ಟು ಭೂ/ನಗದು ಪರಿಹಾರ ಹಂಚಿಕೆ :
ಬಿಡಿಎ ಭೂಸ್ವಾಧೀನ ವಿಭಾಗವು ಈತನಕ 3,118.24 ಎಕರೆಯಷ್ಟು ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದೆ. ಆ ಪೈಕಿ 2,920 ಎಂಜಿನಿಯರಿಂಗ್ ವಿಭಾಗಕ್ಕೆ ಹಸ್ತಾಂತರಿಸಿದೆ. ಆದರೆ ಇಲ್ಲಿಯವರೆಗೆ ಭೂಮಿಯನ್ನು ಬಡಾವಣೆ ನಿರ್ಮಾಣಕ್ಕೆ ಬಿಟ್ಟುಕೊಟ್ಟ ಶೇ.15ರಷ್ಟು ರೈತರಿಗೆ ಭೂಮಿ ಮಾಲೀಕತ್ವ ನಿರೂಪಿಸುವ ದಾಖಲೆಗಳನ್ನು ಪರಿಶೀಲಿಸಿ ನಗದು ಪರಿಹಾರ ಅಥವಾ ಬಿಡಿಎ ಅಭಿವೃದ್ಧಿಪಡಿಸಿದ ಭೂಮಿಯಲ್ಲಿ 40:60 ಅನುಪಾತದಲ್ಲಿ ಭೂಪರಿಹಾರ ಅಥವಾ ಇಸಿ (ಎನ್‌ಟೈಟಲ್ ಮೆಂಟ್ ಸರ್ಟಿಫಿಕೇಟ್ ) ಹಂಚಿಕೆ ಮಾಡಿದೆ. ನ್ಯಾಯಮೂರ್ತಿ ಎ.ವಿ.ಚಂದ್ರಶೇಖರ್ ಸಮಿತಿ ಸೂಚನೆಯಂತೆ ಬಿಡಿಎ ಮೊದಲಿಗೆ ಲೇಔಟ್ ನಿರ್ಮಾಣಕ್ಕೆ ಬಿಟ್ಟುಕೊಟ್ಟ ರೈತರಿಗೆ ಆದ್ಯತೆ ಮೇರೆಗೆ ನಿವೇಶನ ಹಂಚಿಕೆ ಮಾಡಬೇಕು. ಬಳಿಕ ಭೂಸ್ವಾಧೀನವಾದ ಕಂದಾಯ ಭೂಮಿಯಲ್ಲಿ ತಮ್ಮ ಜಾಗ ಬಿಟ್ಟುಕೊಟ್ಟ ರೆವೆನ್ಯೂ ನಿವೇಶನದಾರರಿಗೆ ಆನಂತರ ಸಾರ್ವಜನಿಕರಿಗೆ ಸೈಟ್ ಹಂಚಿಕೆ ಮಾಡುವಂತೆ ಸೂಚಿಸಿದೆ. ಪ್ರಾಧಿಕಾರದ ಭೂಸ್ವಾಧೀನ ವಿಭಾಗ ವಿಳಂಬಗತಿಯಲ್ಲಿ ಭೂಪರಿಹಾರ ಅಥವಾ ನಗದು ಪರಿಹಾರ ನೀಡುವುದನ್ನು ಗಮನಿಸಿದರೆ ರೆವೆನ್ಯೂ ನಿವೇಶನದಾರರು ಹಾಗೂ ಸಾರ್ವಜನಿಕರಿಗೆ ಸದ್ಯಕ್ಕಂತೂ ನಿವೇಶನ ಹಂಚಿಕೆಯಾಗುವುದು ಕಷ್ಟವಿದೆ ಎನ್ನುತ್ತಾರೆ ಬಿಡಿಎ ಹಿರಿಯ ಅಧಿಕಾರಿಯೊಬ್ಬರು.
ಒಟ್ಟಿನಲ್ಲಿ ಅರ್ಕಾವತಿ, ಕೆಂಪೇಗೌಡ ಬಡಾವಣೆಯಂತೆ ನಿವೇಶನದಾರರು ಮೂಲಭೂತ ಸೌಕರ್ಯವಿಲ್ಲದೆ ಒದ್ದಾಡುವುದನ್ನು ತಪ್ಪಿಸಲು ಸುಪ್ರೀಂಕೋರ್ಟ್ ಉಸ್ತುವಾರಿಯ ನ್ಯೂಯಮೂರ್ತಿ ಎ.ವಿ.ಚಂದ್ರಶೇಖರ್ ಸಮಿತಿ ನೇತೃತ್ವದಲ್ಲಿ ಡಾ.ಕೆ.ಶಿವರಾಮಕಾರಂತ ಬಡಾವಣೆಯಲ್ಲಿ ರೈತರ ಮನವೊಲಿಸಿ ಭೂಸ್ವಾಧೀನ, ಬಡಾವಣೆ ಅಭಿವೃದ್ಧಿ ಕೆಲಸಗಳು ಸಾಂಗವಾಗಿ ನಡೆಯುತ್ತಿದೆ. ಡಿ.31 ರಂದು ಒಂದೊಮ್ಮೆ ಜೆಸಿಸಿ ಸಮಿತಿ ವಿಸ್ತರಣೆಯಾಗದ ಪಕ್ಷದಲ್ಲಿ, ಬಡಾವಣೆ ನಿರ್ಮಾಣದ ಬಾಕಿ ಕಾರ್ಯ, ರೈತರ ಭೂ ಪರಿಹಾರ ನೀಡಿಕೆ ಕಾರ್ಯಗಳಿಗೆ ತೊಡಕಾಗಿ ಪುನಃ ಈ ಲೇಔಟ್ ನಲ್ಲೂ ಬಿಡಿಎ ಇತರ ವಸತಿ ಯೋಜನೆಯಂತೆ ಕಾರಂತ ಬಡಾವಣೆಯಲ್ಲೂ ಭೂ ವ್ಯಾಜ್ಯಗಳು ಹೆಚ್ಚಾಗುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ.
“ಬೆಂಗಳೂರು ವೈರ್” ಡಿಜಿಟಲ್ ವೆಬ್ ನ್ಯೂಸ್ ಪೋರ್ಟೆಲ್ಲಿನ ಸೋಶಿಯಲ್ ಮೀಡಿಯಾ ಪೇಜ್ ಹಾಗೂ Google News ಗಳಿಗೆ ಉಚಿತವಾಗಿ Subscribe ಆಗಲು Facebook, Telegram, Twitter, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.