ಬೆಂಗಳೂರು, ಡಿ.07 www.bengaluruwire.com : ಭಿಕ್ಷಾಟನೆಯಲ್ಲಿ ತೊಡಗಿರುವವರ ಕಲ್ಯಾಣ ಕಾರ್ಯಕ್ರಮ ಹಾಗೂ ಪುನರ್ವಸತಿ ಮೂಲಕ ಅವರನ್ನು ಸಮಾಜದ ಮುಖ್ಯವಾಹಿನಿಗೆ ಕರೆತಂದು ಮೈಸೂರು ನಗರವನ್ನು ಭಿಕ್ಷಾಟನೆ ವೃತ್ತಿ ಮುಕ್ತ ನಗರವನ್ನಾಗಿಸಲು ರಾಜ್ಯ ಸರ್ಕಾರ ಸದ್ಯದಲ್ಲೇ ‘ಭಿಕ್ಷಾಟನೆಯಲ್ಲಿ ತೊಡಗಿರುವ ವ್ಯಕ್ತಿಗಳ ಸಮಗ್ರ ಪುನರ್ವಸತಿ’ (SMILE- Beggary Scheme) ಎಂಬ ಸ್ಮೈಲ್ ಭಿಕ್ಷುಕ ಯೋಜನೆಯನ್ನು ಜಾರಿಗೆ ತರಲು ಪೂರ್ವಸಿದ್ಧತೆ ಕೈಗೊಂಡಿದೆ.
ಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ “ಸ್ಮೈಲ್ ಉಪಯೋಜನೆಯಡಿಯಲ್ಲಿ ಭಿಕ್ಷಾಟನೆಯಲ್ಲಿ ತೊಡಗಿರುವ ವ್ಯಕ್ತಿಗಳ ಸಮಗ್ರ ಪುನರ್ವಸತಿ ಉಪಯೋಜನೆಯನ್ನು ಜಾರಿಗೆ ತಂದಿದೆ. ಇದಕ್ಕಾಗಿ ದೇಶಾದ್ಯಂತ 30 ನಗರಗಳನ್ನು ಆಯ್ಕೆ ಮಾಡಿದ್ದು, ಅದರಲ್ಲಿ ಮೈಸೂರು ನಗರವನ್ನು ಆಯ್ಕೆ ಮಾಡಲಾಗಿದೆ. 30 ನಗರಗಳ ಪೈಕಿ 10 ದೇವಸ್ಥಾನಗಳು ಹೆಚ್ಚಾಗಿರುವ ನಗರಗಳು, 10 ಪ್ರವಾಸೋದ್ಯಮ ಹೆಚ್ಚಾಗಿರುವ ನಗರಗಳು ಮತ್ತು 10 ಐತಿಹಾಸಿಕ ನಗರಗಳನ್ನು ವಿಭಾಗ ಮಾಡಿದೆ. ಅಂತಹ ನಗರಗಳಲ್ಲಿ ಪ್ರಾರಂಭವಾಗಿ ಈ ಯೋಜನೆಯನ್ನು ಜಾರಿಗೆ ತಂದು ನಂತರ ದೇಶಾದ್ಯಂತ ಈ ಸ್ಮೈಲ್ ಯೋಜನೆಯನ್ನು ಹಂತ ಹಂತವಾಗಿ ವಿಸ್ತರಿಸಿ ಭಾರತವನ್ನು “ಭಿಕ್ಷಾ ವೃತ್ತಿ ಮುಕ್ತ”ವನ್ನಾಗಿಸುವ ಗುರಿಯನ್ನು ಹೊಂದಿದೆ.
ಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ಸಮಾಜದ “ಅಂಚಿನಲ್ಲಿರುವ ವ್ಯಕ್ತಿಗಳಿಗೆ ಜೀವನೋಪಾಯ ಹಾಗೂ ಉದ್ಯಮ ಸ್ನೇಹಿ ಬೆಂಬಲ” (Support for Marginalized Individuals for Livelihood and Enterprise- SMILE) ಯೋಜನೆಯನ್ನು ರಚಿಸಿದ್ದು, ಅದರ ಅಡಿಯಲ್ಲಿ ‘ಭಿಕ್ಷಾಟನೆಯಲ್ಲಿ ತೊಡಗಿರುವ ವ್ಯಕ್ತಿಗಳ ಸಮಗ್ರ ಪುನರ್ವಸತಿ’ ಉಪಯೋಜನೆಯನ್ನು ರೂಪಿಸಿದ್ದು, ಆ ಮೂಲಕ ಭಿಕ್ಷುಕ ವೃತ್ತಿಯಲ್ಲಿ ತೊಡಗಿರುವವರ ರಕ್ಷಣೆ ಮತ್ತು ಪುನರ್ವಸತಿಯಲ್ಲಿ ಪ್ರಮುಖ ಗಮನವನ್ನು ಹೊಂದಿದೆ. ಇದರಿಂದಾಗಿ ಭಿಕ್ಷಾಟನೆಯಲ್ಲಿ ತೊಡಗಿರುವ ವ್ಯಕ್ತಿಗಳನ್ನು ಸಮಾಜದ ಮುಖ್ಯವಾಹಿನಿಗೆ ತರುವ ಉದ್ದೇಶ ಹೊಂದಿದೆ.
‘ಭಿಕ್ಷಾ ವೃತ್ತಿ ಮುಕ್ತ’ಗೊಳಿಸುವ ಯೋಜನೆಯನ್ನು ಕೇಂದ್ರ ಮತ್ತು ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶದ ಸರ್ಕಾರಗಳು, ಜಿಲ್ಲಾಡಳಿತಗಳು, ದೇವಾಲಯ ಟ್ರಸ್ಟ್‌ಗಳು, ನಗರ ಸ್ಥಳೀಯ ಸಂಸ್ಥೆ, ಮುನ್ಸಿಪಲ್ ಕಾರ್ಪೊರೇಶನ್‌ಗಳಂತಹ ವಿವಿಧ ಭಾಗಿದಾರರೊಂದಿಗೆ ಸಂಘಟಿತ ಕ್ರಮ ಮತ್ತು ಒಮ್ಮುಖದ ಪ್ರಯತ್ನದ ಮೂಲಕ ಭಿಕ್ಷಾಟನೆಯಲ್ಲಿ ತೊಡಗಿರುವ ವ್ಯಕ್ತಿಗಳಿಗೆ ಪುನರ್ವಸತಿ ಒದಗಿಸಿ ಭಿಕ್ಷಾಟನೆಯಲ್ಲಿ ತೊಡಗಿರುವವರನ್ನು ಸಮಾಜದ ಮುಖ್ಯವಾಹಿನಿಗೆ ಕರೆತರುವ ಕೆಲಸಕ್ಕೆ ಕೈಹಾಕಿದೆ. ಸ್ಮೈಲ್ ಯೋಜನೆಗೆ ಇನ್ನು ಕೆಲಸವೇ ದಿನಗಳಲ್ಲಿ ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ ಸದ್ಯದಲ್ಲೇ ಚಾಲನೆ ನೀಡಲಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.
ವಿವಿಧ ಇಲಾಖೆ- ಸಂಘ ಸಂಸ್ಥೆಗಳು, ಯೋಜನೆಗಳ ಸಮ್ಮಿಲನ :
ಯೋಜನೆಯ ವ್ಯಾಪ್ತಿಯನ್ನು ಹೆಚ್ಚಿಸುವ ದೃಷ್ಟಿಯಿಂದ, ಕೇಂದ್ರ ಸರ್ಕಾರ, ರಾಜ್ಯ ಸರ್ಕಾರದ ವಿವಿಧ ಇಲಾಖೆಗಳು ಹಾಗೂ ಇದೇ ರೀತಿಯ ಯೋಜನೆಗಳಾದ ನಗರ ಆಶ್ರಯ ಮನೆಗಳ ಯೋಜನೆ (DAY-NULM), ವಿವಿಧ ತರಬೇತಿ ಸಂಸ್ಥೆಗಳ ಮೂಲಕ ಕೌಶಲ್ಯ ಅಭಿವೃದ್ಧಿ ಸಂಸ್ಥೆಗಳನ್ನು, ಏಜನ್ಸಿಗಳನ್ನು ಈ ಯೋಜನೆಯಡಿ ಭಾಗಿಯಾಗುವಂತೆ ಕ್ರಮ ಕೈಗೊಳ್ಳಲಿದೆ. ಈ ಯೋಜನೆ ಅನುಷ್ಠಾನ ಮಾಡುವ ಮೊದಲಿಗೆ ಮೈಸೂರು ನಗರದಲ್ಲಿ ವೈಜ್ಞಾನಿಕವಾಗಿ ಭಿಕ್ಷುಕರ ಸಂಖ್ಯೆ, ಅವರ ಪರಿಸ್ಥಿತಿಗಳ ಬಗ್ಗೆ ಸಮೀಕ್ಷೆ ಕೈಗೊಳ್ಳಬೇಕಿದೆ. ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ ಅಧ್ಯಯನ ಸಂಸ್ಥೆ (ISEC) ಯೊಂದಿಗೆ ಸಮಾಜ ಕಲ್ಯಾಣ ಇಲಾಖೆ ಒಡಂಬಡಿಕೆ ಮಾಡಿಕೊಳ್ಳಲಿದೆ. ನಂತರ ಸರ್ಕಾರದ ಒಪ್ಪಿಗೆ ಬಳಿಕ ಐತಿಹಾಸಿಕ ನಗರಿ ಮೈಸೂರಿನಲ್ಲಿ ಐಸೆಕ್ ಸಂಸ್ಥೆ ಭಿಕ್ಷುಕರ ಬಗ್ಗೆ ಸಮೀಕ್ಷೆ ಕೈಗೊಂಡು ಅದರ ವರದಿ ಆಧಾರದ ಮೇಲೆ ಸರ್ಕಾರ ಕಾರ್ಯ ಯೋಜನೆಯನ್ನು ಸಿದ್ಧಪಡಿಸಿ ಬಳಕ ಆ ಯೋಜನೆಯನ್ನು ಜಾರಿ ಮಾಡಲಿದೆ.
ಸ್ಮೈಲ್ ಯೋಜನೆಯು ನಿರಂತರ ಪ್ರಕ್ರಿಯೆಯಾಗಿದ್ದು, ಈ ಯೋಜನೆಯಡಿ ಭಿಕ್ಷೆ ಬೇಡುತ್ತಿರುವವರನ್ನು ಗುರ್ತಿಸಿ ಅವರಿಗೆ ಪುರ್ವಸತಿ, ವೈದ್ಯಕೀಯ ನೆರವು, ಕೌಶಲ್ಯ ಅಭಿವೃದ್ಧಿ ತರಬೇತಿ ನೀಡಿ ಅವರನ್ನು ಸಶಕ್ತಗೊಳಿಸಿ ಭಿಕ್ಷಾ ವೃತ್ತಿಯಿಂದ ಹೊರಗೆತಂದು ಸಮಾಜದ ಮುಖ್ಯವಾಹಿಸಿಯಲ್ಲಿ ಸ್ವಾವಲಂಬಿಯಾಗಿ ಜೀವನ ನಡೆಸಲು ಸಜ್ಜುಗೊಳಿಸುವ ಉದ್ದೇಶವನ್ನು ಸ್ಮೈಲ್ ಯೋಜನೆ ಹೊಂದಿದೆ.
ಸ್ಮೈಲ್ ಯೋಜನೆ ಜಾರಿ ಹೇಗೆ? :
ಇದರ ಜೊತೆಗೆ ಪರಿಣಾಮಕಾರಿಯಾಗಿ ಜನರದಲ್ಲಿ ಮಾಹಿತಿ, ಶಿಕ್ಷಣ ಹಾಗೂ ಸಂಪರ್ಕ ವಿಧಾನ ಐಇಸಿ ಚಟುವಟಿಕೆಗಳ ಮೂಲಕ ಅರಿವು ಮೂಡಿಸುವುದು, ಮಾಧ್ಯಮ ಪ್ರಚಾರ ಕಾರ್ಯವನ್ನು ಕೈಗೊಳ್ಳಲು ಸಮಾಜ ಕಲ್ಯಾಣ ಇಲಾಖೆಯಲ್ಲಿನ ಕೇಂದ್ರ ಪರಿಹಾರ ಸಮಿತಿ (Central Relief Committee) ಚಿಂತನೆ ನಡೆಸಿದೆ. ಯೋಜನಾ ವೆಚ್ಚದ ಶೇ.30ರಷ್ಟು ಅನುದಾನವನ್ನು ತಾತ್ಕಾಲಿಕವಾಗಿ ಕೇಂದ್ರ ಸರ್ಕಾರ ಈ ಯೋಜನೆಗೆ ಬಿಡುಗಡೆ ಮಾಡಲಿದೆ. ವಿಶ್ವವಿಖ್ಯಾತ ದಸರಾದಿಂದ ಜಾಗತಿಕ ಮಟ್ಟದಲ್ಲಿ ಗುರ್ತಿಸಿಕೊಂಡಿರುವ ಮೈಸೂರು ರಾಜ್ಯದಲ್ಲೇ ಮೊದಲ ಬಾರಿಗೆ ಭಿಕ್ಷುಕರ ಮುಕ್ತ ನಗರವಾಗಿ ಬದಲಾಗಲು ಸ್ಥಳೀಯ ನಾಗರೀಕರು, ಸಂಘ ಸಂಸ್ಥೆಗಳ ಸಹಾಯ, ಸಹಕಾರವು ಅಗತ್ಯವಿದೆ.
ಭಿಕ್ಷುಕರಿಗೆ ಪುನರ್ವಸತಿ ಜೊತೆಗೆ ಹೈಟೆಕ್ ಟ್ರೈನಿಂಗ್ :
ಮೈಸೂರಿನಲ್ಲಿ ಅಂದಾಜು 500 ಭಿಕ್ಷುಕರಿರಬಹುದು. ಈ ಪ್ರವಾಸೋದ್ಯಮ ನಗರವನ್ನು “ಭಿಕ್ಷುಕ ವೃತ್ತಿ ಮುಕ್ತ ನಗರ” ವಾಗಿ ಮಾಡಲು ಕೇಂದ್ರ ಪರಿಹಾರ ಸಮಿತಿ ಕ್ರಮ ಕೈಗೊಳ್ಳಲಿದೆ. ಮೈಸೂರಿನ ಬೀದಿ ಬೀದಿಗಳಲ್ಲಿ ಕಂಡುಬರುವ ಭಿಕ್ಷುಕರು ಹಾಗೂ ನಿರ್ಗತಿಕರನ್ನು ಕರೆತಂದು ಅಲ್ಲಿನ ನಿರಾಶ್ರಿತರ ಪರಿಹಾರ ಕೇಂದ್ರಗಳಲ್ಲಿ ಅವರ ಸಾಮರ್ಥ್ಯಕ್ಕೆ ಅನುಗುಣವಾಗಿ ಮೆಕಾನಿಕ್, ದ್ರೋಣ್ ತರಬೇತಿ, ಫೊಟೊಗ್ರಫಿ, ಕಂಪ್ಯೂಟರ್ ಕಲಿಕೆ ಸೇರಿದಂತೆ ಆಧುನಿಕ ತಂತ್ರಜ್ಞಾನವನ್ನು ಹೊಂದಿದ ಕೌಶಲ್ಯಗಳ ತರಬೇತಿಗಾಗಿ ರಾಜ್ಯ ಕೌಶಲ್ಯಾಭಿವೃದ್ಧಿ ಇಲಾಖೆಯ ಸಹಯೋಗದಲ್ಲಿ ಆರು ತಿಂಗಳಲ್ಲಿ ತರಬೇತಿ ಒದಗಿಸಲು ಸಮಾಜ ಕಲ್ಯಾಣ ಇಲಾಖೆ ನಿರ್ಧರಿಸಿದೆ. ಆ ಮೂಲಕ ಭಿಕ್ಷೆ ಬೇಡುವ ವ್ಯಕ್ತಿಯು ಸ್ವಯಂ ಉದ್ಯೋಗ ಕೈಗೊಂಡು ಆರ್ಥಿಕ ಸಬಲವಾಗಿಸುವ ಉದ್ದೇಶ ಪರಿಣಾಮಕಾರಿಯಾಗಿ ಜಾರಿಗೆ ಬಂದಿದ್ದೇ ಆದಲ್ಲಿ ನಿರಾಶ್ರಿತ ಪರಿಹಾರ ಕೇಂದ್ರದ ಉದ್ದೇಶ ಸಫಲವಾದಂತೆ.
ಕೇಂದ್ರ ಸರ್ಕಾರದ ಸ್ಮೈಲ್ ಯೋಜನೆ ಅನುಷ್ಠಾನಕ್ಕೆ 5 ಕೋಟಿ ರೂ. ಹಣವನ್ನು ಹೆಚ್ಚುವರಿ ತರಬೇತಿ, ಮಾಹಿತಿ, ಶಿಕ್ಷಣ ಹಾಗೂ ಸಂಪರ್ಕಕ್ಕಾಗಿ ಬಳಸಿಕೊಳ್ಳಲು, ಯೋಜನೆ ಕುರಿತಂತೆ ಜನಜಾಗೃತಿ ಮೂಡಿಸಲು, ಭಿಕ್ಷುಕರನ್ನು ಕರೆತರಲು ಹೆಚ್ಚುವರಿ ವಾಹನಗಳ ಬಳಕೆ ಸೇರಿದಂತೆ ಮತ್ತಿತರ ಕಾರ್ಯಗಳಿಗೆ ಬಳಸಿಕೊಳ್ಳುವಂತೆ ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಮಣಿವಣ್ಣನ್ ಅಧಿಕಾರಿಗಳಿಗೆ ಇತ್ತೀಚೆಗೆ ಕೇಂದ್ರ ಪರಿಹಾರ ಸಮಿತಿ ಸಭೆಯೊಂದರಲ್ಲಿ ಸೂಚನೆ ನೀಡಿದ್ದರು ಎಂದು ಉನ್ನತ ಮೂಲಗಳು ತಿಳಿಸಿವೆ.