ಉಡುಪಿ, ಡಿ.06 www.bengaluruwire.com : ಹದಿನಾರನೇ ವರ್ಷದ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವು ಕೋಟದ ವಿವೇಕ ವಿದ್ಯಾಲಯದಲ್ಲಿ ಡಿ.5 ಹಾಗೂ 6ನೇ ತಾರೀಖಿನಂದು ನಡೆಯುತ್ತಿದೆ.
ಡಿ.5ರ ಮಂಗಳವಾರದಂದು ಸಂಜೆ ಡಾ.ಶಿವರಾಮಕಾರಂತರ ಕಾದಂಬರಿ ಚೋಮನದುಡಿ ಆಧಾರಿತ ನಾಟಕವನ್ನು ಸುರಭಿ ಬೈಂದೂರು ಪ್ರಸ್ತುತಪಡಿಸಿದರು. ಇಂದು ಸಂಜೆ 6ಕ್ಕೆ ಕಲ್ಕಡ್ಕ ವಿಠ್ಠಲ್ ನಾಯಕ್ ಹಾಗೂ ಬಳಗದವರಿಂದ ಅರ್ಥಗರ್ಭಿತ ಹಾಸ್ಯ ಹಾಗೂ ಮಾತು ಕಾರ್ಯಕ್ರಮ ನಡೆಯಲಿದೆ. ಎರಡು ದಿನಗಳ ಕಾಲ ಕವಿಗೋಷ್ಠಿ, ವಿಚಾರಗೋಷ್ಠಿ, ವಿದ್ಯಾರ್ಥಿಗಳ ಬಹುವಿಧ ಗೋಷ್ಠಿ, ಯಕ್ಷಗಾನ ಪ್ರಸಂಗ ಸಾಹಿತ್ಯ, ಸಾಧ್ಯತೆ ಹಾಗೂ ಸವಾಲುಗಳು ಕಾರ್ಯಕ್ರಮ ಸೇರಿದಂತೆ ಸಾಹಿತ್ಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗರ ನೇತೃತ್ವದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ. ಡಿ.5ರಂದು ಮೊದಲ ದಿನ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ 12 ಗಣ್ಯ ವ್ಯಕ್ತಿಗಳು ಹಾಗೂ 5 ಸಂಸ್ಥೆಗಳಿಗೆ ಪ್ರಶಸ್ತಿ, ಪಾರಿತೋಷಕಗಳನ್ನು ನೀಡಿ ಗೌರವಿಸಲಾಯಿತು.
ಹರ್ಷವಾಣಿ ಪತ್ರಿಕೆಯ ಸಂಪಾದಕ ರವಿಶಂಕರ್ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸಲ್ಲಿಸಿದ ಗಣನೀಯ ಸೇವೆಯನ್ನು ಪರಿಗಣಿಸಿಲಾಗಿದ್ದರೆ, ಪಾರಂಪರಿಕ ವಾದಕರಾದ ವಸಂತ ಗುರಿಕಾರ ಬೆಳ್ಳೆ, ಸಾಮಾಜಿಕ ಸೇವೆ ಕ್ಷೇತ್ರದಿಂದ ಅಂಡಾರು ಮಹಾವೀರ ಹೆಗ್ಡೆ, ಸುರೇಂದ್ರ ಬೀಜಾಡಿ, ಅವಿನಾಶ್ ಕಾಮತ್, ವಾಸ್ತುತಜ್ಞರಾದ ಕೃಷ್ಣಾ ಮೈಲಿ, ವೈದ್ಯಕೀಯ ಡಾ.ಆರ್.ಶ್ರೀಪತಿ, ಸಾಹಿತ್ಯ ಸೌಮ್ಯ ಪುತ್ರನ್, ಕುಂದಾಪ್ರ ಕನ್ನಡ ಮನುಹಂದಾಡಿ, ರಂಗೋಲಿ ಕಲಾವಿದೆ ಡಾ.ಭಾರತಿ ಮರವಂತೆ, ಯಕ್ಷಗಾನ ಜಯನಂದ ಹೊಲೆಗೊಪ್ಪ, ಮಲ್ಲಿಗೆ ಕೃಷಿ ಪ್ರೇಮಾ ಪೂಜಾರಿ ಎಂಬುವರಿಗೆ ಉಡುಪಿ ಜಿಲ್ಲಾ ಸಾಹಿತ್ಯ ಪರಿಷತ್ತಿನಿಂದ ಸನ್ಮಾನಿಸಿ, ಪ್ರಶಸ್ತಿ ನೀಡಿ ಅಭಿನಂದನೆ ಸಲ್ಲಿಸಲಾಯಿತು.
ಇನ್ನು ಮಣೂರು-ಪಡುಕರೆಯ ವಾಹಿನಿ ಯುವಕ ಮಂಡಲ, ಉಡುಪಿಯ ರಾಗಧನ, ಬ್ರಹ್ಮಾವರದ ಮಂದಾರ, ಸಾಯ್ಬ್ರಕಟ್ಟೆ ವಿನಾಯಕ ಯುವಕ ಮಂಡಲ ಹಾಗೂ ಕಾರ್ತಟ್ಟು-ಚಿತ್ರಪಾಡಿಯ ಅಘೋರೇಶ್ವರ ಕಲಾರಂಗ ಸಂಸ್ಥೆಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.