ಬೆಂಗಳೂರು, ಡಿ.05 www.bengaluruwire.com : ಹಳೇ ಬೇರು – ಹೊಸ ಚಿಗುರು ಕೂಡಿರಲು ಮರ ಸೊಗಸು ಎನ್ನುವಂತೆ ಹಿರಿಯರ ಆಶಯ, ಪರಿಶ್ರಮ, ದೂರದೃಷ್ಟಿಯಿಂದ ಆರಂಭವಾಗಿದ್ದ ಕರ್ನಾಟಕ ಪತ್ರಕರ್ತರ ಸಹಕಾರ ಸಂಘ ನಿಯಮಿತಕ್ಕೆ ಇದೀಗ 75ರ ಹರೆಯದ ಅಮೃತ ಸಂಭ್ರಮ.
ಒoದು ಕಾಲದಲ್ಲಿ ಪತ್ರಕರ್ತರಿಗೆ ಸರಿಯಾದ ಸಂಬಳವೂ ಇರಲಿಲ್ಲ! ಆ ಹೊತ್ತಿನಲ್ಲಿ ಪತ್ರಕರ್ತರನ್ನು ಒಂದೆಡೆ ಸೇರಿಸುವುದೇ ದೊಡ್ಡ ಸವಾಲು. ಅಂಥಹ ಕಾಲ ಘಟ್ಟದಲ್ಲಿ ಕರ್ನಾಟಕದ ಅನೇಕ ಹಿರಿಯ ಪತ್ರಕರ್ತರು ಸೇರಿಸಿ ಕರ್ತವ್ಯನಿರತ ಪತ್ರಕರ್ತರಿಗೆ ಆರ್ಥಿಕ ಬಲ ನೀಡಬೇಕು ಎಂದು ನಿರ್ಧರಿಸಿದರು. ಸಮಾಜಕ್ಕಾಗಿ ದುಡಿಯುವ ಪತ್ರಕರ್ತರು ತಮ್ಮ ಕುಟುಂಬವನ್ನೇ ಮರೆತು ಸಮಾಜಕ್ಕಾಗಿ, ಸಮಾಜದ ಶ್ರೇಯಸ್ಸಿಗಾಗಿ ಕೆಲಸ ಮಾಡುವಾಗ ಅವರ ಶ್ರೇಯೋಭಿವೃದ್ಧಿಗಾಗಿ 1949ರ ಡಿಸೆಂಬರ್ 5ರಂದು ಹಿರಿಯರಾದ ಎನ್.ಎಸ್. ವೆಂಕೋಬರಾವ್ ಅವರ ಅಧ್ಯಕ್ಷತೆಯಲ್ಲಿ ಮೈಸೂರು ಪತ್ರಕರ್ತರ ಸಹಕಾರ ಸಂಘ ನಿಯಮಿತ ಹುಟ್ಟಿಕೊಂಡಿತು. ಅದು 1995ರಲ್ಲಿ ಕರ್ನಾಟಕ ಪತ್ರಕರ್ತರ ಸಹಕಾರ ಸಂಘ ನಿಯಮಿತ ಆಗಿ ಬದಲಾಯಿತು.
ಹಿರಿಯರಾದ ಟಿ.ನಾಗರಾಜು ಅವರ ಅಧ್ಯಕ್ಷರಾಗಿದ್ದ ಕಾಲದಲ್ಲಿ ಅಂದರೆ 2003ರಲ್ಲಿ ಅದಕ್ಕೊಂದು ಸ್ವಂತ ಕಟ್ಟಡವೂ ಕ್ವೀನ್ಸ್ ರಸ್ತೆಯಲ್ಲಿ ಸಿದ್ಧವಾಯಿತು. ಇಲ್ಲಿಯವರೆಗೆ ಸುಮಾರು 31 ಪತ್ರಕರ್ತರು ಈ ಸಂಸ್ಥೆಯ ಅಧ್ಯಕ್ಷರಾಗಿದ್ದಾರೆ. 24 ಪತ್ರಕರ್ತರು ಗೌರವ ಕಾರ್ಯದರ್ಶಿಗಳಾಗಿದ್ದಾರೆ. ಅನೇಕರು ಉಪಾಧ್ಯಕ್ಷರಾಗಿದ್ದಾರೆ, ಖಜಾಂಚಿಗಳಾಗಿದ್ದಾರೆ. ನೂರಾರು ಪತ್ರಕರ್ತರು ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ, ಸಂಸ್ಥೆಯ ಏಳಿಗೆಗೆ ಟೊಂಕ ಕಟ್ಟಿ ದುಡಿದಿದ್ದಾರೆ.
ಈ ಪರಿಶ್ರಮದ ಸಂಸ್ಥೆ ಈಗ 75ರ ಹೊಸ್ತಿಲಲ್ಲಿ ನಿಂತಿದೆ. ಕರ್ನಾಟಕ ಪತ್ರಕರ್ತರ ಸಹಕಾರ ಸಂಘ ನಿಯಮಿತ ಸಾವಿರಾರು ಪತ್ರಕರ್ತರ ಬದುಕಿಗೆ ಆಸರೆಯಾಗಿದೆ. ನೆಲೆ ಕಟ್ಟಿಕೊಳ್ಳಲು ಸಹಕಾರಿಯಾಗಿದೆ. ಅನೇಕರಿಗೆ ಬದುಕು ಕೂಡ ಕಟ್ಟಿಕೊಟ್ಟಿದೆ! ಇಂತಹ ಸಂಸ್ಥೆಗೆ ಈಗ ಅಮೃತ ಸಂಭ್ರಮ. ಪತ್ರಕರ್ತರಿಂದ ಕೇವಲ 353 ರೂ. ಠೇವಣಿ ಸಂಗ್ರಹಿಸಿ ಆರಂಭವಾದ ಸಂಸ್ಥೆ ಈಗ 3 ಲಕ್ಷ ರೂ. ಸಾಲ, 30 ಲಕ್ಷ ರೂ. ಭದ್ರತಾ ಸಾಲ ನೀಡುವ ಹಂತಕ್ಕೆ ಬಂದು ನಿಂತಿದೆ!
“2636 ಸದಸ್ಯರನ್ನು ಹೊಂದಿರುವ ಕರ್ನಾಟಕ ಪತ್ರಕರ್ತರ ಸಹಕಾರ ಸಂಘ ಈಗ ಒಟ್ಟು 14 ಕೋಟಿ ರೂ. ವಹಿವಾಟು ನಡೆಸಿದೆ. 9.26ಕೋಟಿ ರೂ. ದುಡಿಯುವ ಬಂಡವಾಳ ಹೊಂದಿದೆ. ಸರಿಸುಮಾರು 50 ಲಕ್ಷ ರೂ. ನಿವ್ವಳ ಲಾಭ ಗಳಿಸಿದೆ. 2022-23ನೇ ಸಾಲಿಗೆ ಪತ್ರಕರ್ತರಿಗೇ 2.32 ಕೋಟಿ ರೂ. ಸಾಲ ವಿತರಿಸಿದೆ. ಆ ಮೂಲಕ ಇಡೀ ಭಾರತದಲ್ಲಿನ ಪತ್ರಕರ್ತರ ಏಕೈಕ ಅತ್ಯಂತ ಹಳೆಯ ಹಣಕಾಸು ಸಂಸ್ಥೆ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ” ಎಂದು ಹೇಳುತ್ತಾರೆ ಸಂಸ್ಥೆಯ ಅಧ್ಯಕ್ಷ ರಮೇಶ್ ಪಾಳ್ಯ ಅವರು.
ಒಟ್ಟಿನಲ್ಲಿ ಇಂತಹ ಇತಿಹಾಸ ಹೊಂದಿರುವ ಪತ್ರಕರ್ತರ ಸಹಕಾರ ಸಂಘ ಪತ್ರಕರ್ತರ ಏಳ್ಗೆಗೆ ಸಹಾಯ ಮಾಡುತ್ತಾ ಈಗ ಅಮೃತ ಸಂಭ್ರಮದಲ್ಲಿದೆ ಎಂದು ಸಂಸ್ಥೆಯ ಆಡಳಿತ ಮಂಡಳಿ ತಿಳಿಸಿದೆ.
ಸಂಘದ ಪದಾಧಿಕಾರಿಗಳ ಸ್ಥಾನಗಳಿಗೆ ಇತ್ತೀಚೆಗಷ್ಟೇ ಚುನಾವಣೆ ನಡೆದಿತ್ತು. 2023-2028ನೇ ಸಾಲಿನ ವರೆಗೆ ಚುನಾಯಿತ ಸಮಿತಿ ಅಸ್ತಿತ್ವದಲ್ಲಿರುತ್ತದೆ. ಸಂಘದಲ್ಲಿ ಒಟ್ಟು 13 ನಿರ್ದೇಶಕರ ಸ್ಥಾನಗಳಿದ್ದು, ಈ ಪೈಕಿ 7 ಮಂದಿ ಇತ್ತೀಚಿಗೆ ನಡೆದ ಚುನಾವಣೆಯಲ್ಲಿ ಆಯ್ಕೆಯಾಗಿದ್ದರು. ಉಳಿದವರು ಅವಿರೋಧವಾಗಿ ಆಯ್ಕೆಗೊಂಡಿದ್ದರು.
ಸಂಘದ ಅಮೃತ ಸಂಭ್ರಮಕ್ಕೆ ರಾಜ್ಯಪಾಲರಿಂದ ಚಾಲನೆ :
ಕರ್ನಾಟಕ ಪತ್ರಕರ್ತರ ಸಹಕಾರ ಸಂಘದ 75 ನೇ ಸಂಸ್ಥಾಪನಾ ದಿನಾಚರಣೆಗೆ ಮಂಗಳವಾರ ರಾಜ್ಯಪಾಲರು ಚಾಲನೆ ನೀಡಿದರು.
ಸಂಘದ 75 ನೇ ವರ್ಷದ ಅಮೃತ ಸಂಭ್ರಮದ ಲಾಂಚನವನ್ನು ರಾಜಭವನದಲ್ಲಿ ಬಿಡುಗಡೆ ಮಾಡಿದ ರಾಜ್ಯಪಾಲ ಥಾವರ್ ಚಂದ್ ಗೆಲ್ಹೋಟ್ ಅವರು, ಕರ್ನಾಟಕ ಪತ್ರಕರ್ತರ ಸಹಕಾರ ಸಂಘವು ಪತ್ರಕರ್ತರ ಶ್ರೇಯೋಭಿವೃದ್ಧಿಗೆ ಇನ್ನಷ್ಟು ಶ್ರಮಿಸಲಿ ಎಂದು ಹಾರೈಸಿದರು.
ಪತ್ರಕರ್ತರು ಸಂವಿಧಾನದ 4ನೇ ಅಂಗ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಒದಗಿಸಿಕೊಡುವ ನಿಟ್ಟಿನಲ್ಲಿ ಪತ್ರಕರ್ತರ ಪಾತ್ರ ಶ್ಲಾಘನೀಯ. ಪತ್ರಕರ್ತರ ಆರ್ಥಿಕ ಅಭಿವೃದ್ಧಿಗೆ ದೇಶದಲ್ಲೇ ಈ ರೀತಿಯ ಸಂಸ್ಥೆ ಇರುವುದನ್ನು ಶ್ಲಾಘಿಸಿದ ರಾಜ್ಯಪಾಲರಾದ ಗೆಲ್ಹೋಟ್ ಅವರು ಪತ್ರಕರ್ತ ನೋವು ನಲಿವುಗಳಿಗೆ ಸ್ಪಂದಿಸುವ ಸಂಸ್ಥೆಗಳು ಹೆಚ್ಚಾಗಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಖ್ಯಾತ ವ್ಯಂಗ್ಯಚಿತ್ರ ಕಲಾವಿದರಾದ ಗುಜ್ಜಾರಪ್ಪ ಅವರು ರಚಿಸಿದ ಕಲಾಕೃತಿಯನ್ನು ಹಾಗೂ ಹಿರಿಯ ಛಾಯಾಗ್ರಾಹಕರಾದ ವಿಶ್ವನಾಥ್ ಸುವರ್ಣ ಅವರ ‘ಕನ್ನಡ ನಾಡಿನ ಬಣ್ಣದ ಬಾನಾಡಿಗಳು’ ಚಿತ್ರಕೃತಿಯನ್ನು ಸ್ಮರಣಿಕೆಯಾಗಿ ನೀಡಲಾಯಿತು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷರಾದ ದೊಡ್ಡ ಬೊಮ್ಮಯ್ಯ, ಖಜಾಂಚಿ ಮೋಹನ್ ಕುಮಾರ್, ನಿರ್ದೇಶಕರಾದ ಎಂ.ಎಸ್. ರಾಜೇಂದ್ರಕುಮಾರ್, ವಿನೋದ್ ಕುಮಾರ್ ಬಿ. ನಾಯ್ಕ್, ರಮೇಶ್ ಹಿರೇಜಂಬೂರು, ಧ್ಯಾನ್ ಪೂಣಚ್ಚ, ನಯನಾ ಎಸ್., ವನಿತಾ ಎನ್., ಕೃಷ್ಣಕುಮಾರ್ ಪಿ.ಎಸ್. ಹಾಗೂ ಕಾರ್ಯದರ್ಶಿ ಕೆಂಪರಾಜು, ಸಂಘದ ಸಿಬ್ಬಂದಿ ಹೇಮಂತ್ ಕುಮಾರ್, ಅನಿತಾ ಜೋಯಿಸ್, ಆನಂದ್ ಉಪಸ್ಥಿತರಿದ್ದರು.