ಬೆಂಗಳೂರು, ಡಿ.05 www.bengaluruwire.com : ಬಿಬಿಎಂಪಿ ವ್ಯಾಪ್ತಿಯಲ್ಲಿ ನಿಯಬಾಹಿರವಾಗಿ ಅಧಿಕಾರಿಗಳು ಅರ್ಹತೆಯಿಲ್ಲದ ಸಂಸ್ಥೆಗಳಿಗೆ ಕಾಂಟ್ರಾಕ್ಟ್ ಕೊಟ್ಟು ನಿಯಮ ಉಲ್ಲಂಘಿಸುವ ಬಗ್ಗೆ ಆಗಾಗ ದೂರುಗಳು ಕೇಳಿ ಬರುತ್ತಲೇ ಇರುತ್ತವೆ. ಆ ಪಟ್ಟಿಗೆ ಈಗ ಪಾಲಿಕೆಯ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಕಂಪನಿ ಸೇರ್ಪಡೆಯಾಗಿದೆ.
ಕಪ್ಪು ಪಟ್ಟಿಗೆ ಸೇರಿಸಬೇಕಾದ ಎರಡು ಏಜನ್ಸಿಗಳಿಗೆ ಗುತ್ತಿಗೆ ಆಧಾರದಲ್ಲಿ 2023 ರ ಡಿಸೆಂಬರ್ ತಿಂಗಳಿನಲ್ಲಿ ಪಾಲಿಕೆಗೆ 215 ಮಂದಿ ಘನತ್ಯಾಜ್ಯ ಪರಿವೀಕ್ಷಕರ ಸೇವೆ ಒದಗಿಸುವ ಗುತ್ತಿಗೆಯನ್ನು ನೀಡಿರುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಘಟಕ ಅಧ್ಯಕ್ಷ ಎನ್.ಆರ್.ರಮೇಶ್ ದೂರು ನೀಡಿದ್ದಾರೆ.
“2017 ರಿಂದ 2021 ರವರೆಗೆ ಪಾಲಿಕೆ ವ್ಯಾಪ್ತಿಯ ವಾರ್ಡ್ ಗಳಲ್ಲಿ ಶಿವಸ್ವಾಮಿ ಮಾಲೀಕತ್ವದ ಆರ್ ಎಂಎಸ್ ಹಾಗೂ ವೆಂಕಟಪ್ಪ ಆನಂದ ಎಂಬುವವರ ಮಾಲೀಕತ್ವದ ಎರಡು ಸಂಸ್ಥೆಗಳಿಗೆ ಪಾಲಿಕೆಗೆ ಅಗತ್ಯವಿರುವ ಘನತ್ಯಾಜ್ಯ ಪರಿವೀಕ್ಷಕರನ್ನು ಗುತ್ತಿಗೆ ಆಧಾರದಲ್ಲಿ ಒದಗಿಸುವ ಗುತ್ತಿಗೆಯನ್ನು ನೀಡಲಾಗಿತ್ತು. ಆದರೆ ಏಜನ್ಸಿಯವರು 2020 ರ ಮಾರ್ಚ್ ತಿಂಗಳಿನಿಂದ 2021 ರ ಜುಲೈ ವರೆಗಿನ 17 ತಿಂಗಳ ಕಾಲ ತಮ್ಮ ಸಂಸ್ಥೆಯಡಿ ಪಾಲಿಕೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಘನತ್ಯಾಜ್ಯ ಪರಿವೀಕ್ಷಕರಿಗೆ ಇಎಸ್ ಐ (ESI) ಮತ್ತು ಭವಿಷ್ಯನಿಧಿ (PF) ಹಣವನ್ನು ಪಾವತಿಸದೇ ದೊಡ್ಡ ಮಟ್ಟದ ವಂಚನೆಯನ್ನು ಎಸಗಿರುತ್ತಾರೆ. ಇದಲ್ಲದೆ ಅವರ ಗುತ್ತಿಗೆಯ ಅವಧಿಯ ಕೊನೆಯ 7 ತಿಂಗಳ ಕಾಲ ಘನತ್ಯಾಜ್ಯ ಪರಿವೀಕ್ಷಕರಿಗೆ ವೇತನವನ್ನೇ ನೀಡದೆ ಲೋಪ ಎಸಗಿರುತ್ತಾರೆ” ಎಂದು ಸಿಎಂ ಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
“ಪಾಲಿಕೆ ವತಿಯಿಂದ ತಮಗೆ ಬರಬೇಕಾದ ಎಲ್ಲಾ ಹಣವನ್ನು ಶೇ.100ರಷ್ಟು ಸಂಪೂರ್ಣವಾಗಿ ಪಡೆದುಕೊಂಡು ಘನತ್ಯಾಜ್ಯ ಪರಿವೀಕ್ಷಕರಿಗೆ ನೀಡಬೇಕಿದ್ದ ವೇತನ. ಇಎಸ್ ಐ ಹಾಗೂ ಪಿಎಫ್ ಹಣ ಪಾವತಿಸಿರಲಿಲ್ಲ. ಈ ಬಗ್ಗೆ ಎರಡು ಏಜನ್ಸಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಹಾಗೂ ಈ ಎರಡೂ ಸಂಸ್ಥೆಗಳನ್ನು ಕಪ್ಪು ಪಟ್ಟಿಗೆ ಸೇರಿಸುವಂತೆ 07/09/2021 ರಂದೇ ದಾಖಲೆಗಳ ಸಹಿತ ದೂರನ್ನು (ಉಲ್ಲೇಖ: 211/BJP/BSDPO/2021-22) ನೀಡಲಾಗಿತ್ತು. ಆದರೆ ದುರಂತವೆಂದರೆ ಅದೇ ಎರಡು ವಂಚಕ ಸಂಸ್ಥೆಗಳಿಗೆ ಹೊಸದಾಗಿ ಇದೇ ಡಿಸೆಂಬರ್ ತಿಂಗಳಿನಲ್ಲಿ ಪಾಲಿಕೆಗೆ 215 ಮಂದಿ ಘನತ್ಯಾಜ್ಯ ಪರಿವೀಕ್ಷಕರನ್ನು ಗುತ್ತಿಗೆ ಆಧಾರದಲ್ಲಿ ಒದಗಿಸುವ ಗುತ್ತಿಗೆಯನ್ನು ನೀಡಿರುವುದು ನಿಜಕ್ಕೂ ವಿಪರ್ಯಾಸ” ಎಂದು ಎನ್.ಆರ್.ರಮೇಶ್ ಕಳವಳ ವ್ಯಕ್ತಪಡಿಸಿದ್ದಾರೆ.
“ಪಾಲಿಕೆ ವತಿಯಿಂದ ಆಗಿರುವ ತಪ್ಪನ್ನು ಈ ಕೂಡಲೇ ಸರಿ ಪಡಿಸಿಕೊಂಡು ಎರಡು ಸಂಸ್ಥೆಗಳಿಗೆ ನೀಡಿರುವ ಗುತ್ತಿಗೆಯನ್ನು ರದ್ದುಪಡಿಸಿ ಅರ್ಹತೆ ಇರುವ ಮತ್ತು ಸೂಕ್ತವಾದ ಹಾಗೂ ಹಣಕಾಸು ಮೂಲ (Financial background) ವನ್ನು ಹೊಂದಿರುವ ಸಂಸ್ಥೆಗೆ ಈ ಗುತ್ತಿಗೆಯನ್ನು ನೀಡಲು ಕ್ರಮ ಕೈಗೊಳ್ಳಬೇಕು ಸಂಬಂಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು” ಮುಖ್ಯಮಂತ್ರಿಗಳನ್ನು ಆಗ್ರಹಿಸಿದ್ದಾರೆ.
ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸದ ಘನತ್ಯಾಜ್ಯ ಇಲಾಖೆ :
ಬಿಬಿಎಂಪಿಯ ಘನತ್ಯಾಜ್ಯ ವಿಲೇವಾರಿಗೆ ವಾರ್ಷಿಕ 900 ಕೋಟಿ ರೂ. ಹೆಚ್ಚಿನ ಅನುದಾನವನ್ನು ಒದಗಿಸುತ್ತಿದ್ದರೂ ಸಹ ಈ ಇಲಾಖೆಯಲ್ಲಿ ಭ್ರಷ್ಟಾಚಾರ, ನಿಯಮ ಬಾಹಿರ ಗುತ್ತಿಗೆ ನೀಡುವಿಕೆ, ಅನರ್ಹ ಸಂಸ್ಥೆಗಳಿಗೆ ಮಣೆಹಾಕುವ ಕೆಲಸ ಭ್ರಷ್ಟ ಅಧಿಕಾರಿಗಳಿಂದ ಆಗುತ್ತಲೇ ಇದೆ. ಈ ಅಕ್ರಮಗಳನ್ನು ನಿಯಂತ್ರಿಸುವ ಕೆಲಸ ಎರಡು ವರ್ಷಗಳಿಗಿಂತಲೂ ಹೆಚ್ಚು ಅವಧಿಯಿಂದ ಘನತ್ಯಾಜ್ಯ ವಿಲೇವಾರಿ ಇಲಾಖೆ ಹೊಣೆಹೊತ್ತ ವಿಶೇಷ ಆಯುಕ್ತ ಹರೀಶ್ ಕುಮಾರ್ ಅವರಿಂದ ಪರಿಣಾಮಕಾರಿಯಾಗಿ ಈತನಕ ಆಗದಿರುವುದು ದುರ್ದೈವದ ಸಂಗತಿ ಎಂದು ನಾಗರೀಕ ಸಂಘಟನೆಗಳು ಆರೋಪಿಸುತ್ತಿವೆ.
ಅಸಮರ್ಪಕ ತ್ಯಾಜ್ಯ ಸಂಸ್ಕರಣಾ ಕಾರ್ಯ :
ನಗರದಲ್ಲಿ ಕಸ ಎಸೆಯುವ ಬ್ಲಾಕ್ ಸ್ಪಾಟ್ ಗಳನ್ನು ಸಂಪೂರ್ಣವಾಗಿ ಮೂಲೋತ್ಪಾಟನೆ ಮಾಡುವ ಕೆಲಸ ಘನತ್ಯಾಜ್ಯ ಇಲಾಖೆ ಅಧಿಕಕಾರಿ ಮತ್ತು ಸಿಬ್ಬಂದಿಯಿಂದ ಆಗಿಲ್ಲ. ಬೆಂಗಳೂರಿನ ವಾಣಿಜ್ಯ ಪ್ರದೇಶದಲ್ಲಿ ಏಕಬಳಕೆಯ ಪ್ಲಾಸ್ಟಿಕ್ ತ್ಯಾಜ್ಯ ಮೋರಿ, ರಸ್ತೆ ಬದಿ ಎಲ್ಲೆಂದರಲ್ಲಿ ರಾಡಿಯಾಗಿ ಬಿದ್ದಿದ್ದರೂ ಪಾಲಿಕೆ ಸಂಬಂಧಿಸಿದ ಅಧಿಕಾರಿಗಳು ಕಣ್ಣಮುಚ್ಚಿ ಕುಳಿತಿದ್ದಾರೆ. ನಗರದಲ್ಲಿ ಈತನ ನೂರಕ್ಕೆ ನೂರರಷ್ಟು ಹಸಿಕಸ, ಒಣಕಸ ಬೇರ್ಪಡಿಸುವಿಕೆ ಆಗುತ್ತಿಲ್ಲ. ಹಸಿತ್ಯಾಜ್ಯ ಸಂಸ್ಕರಣಾ ಘಟಕಗಳು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಕಸ ಸಂಸ್ಕರಣೆ ಮಾಡುತ್ತಿಲ್ಲ. ಸೂಕ್ತ ಜವಾಬ್ದಾರಿಯನ್ನು ನಿರ್ವಹಿಸದೆ ವಿಫಲವಾಗಿರುವ ಘನತ್ಯಾಜ್ಯ ಇಲಾಖೆಯ ಹೊಣೆಹೊತ್ತ ಹಿರಿಯ ಅಧಿಕಾರಿಗಳನ್ನು ಬೇರೆಡೆ ವರ್ಗಾವಣೆ ಮಾಡಿ, ದಕ್ಷ ಅಧಿಕಾರಿಗಳಿಗೆ ಇಲಾಖೆಯ ಹೊಣೆ ನೀಡುವಂತೆ ಸಾಮಾನ್ಯ ಜನರು ಮುಖ್ಯ ಆಯುಕ್ತರನ್ನು, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಒತ್ತಾಯಿಸಿದ್ದಾರೆ.