ಬೆಂಗಳೂರು, ಡಿ.04 www.bengaluruwire.com : ಸಾಮಾನ್ಯವಾಗಿ ಜನರು ಹೂವಿನ ಮಾರುಕಟ್ಟೆಯಲ್ಲಿ ಬಿಡಿ ಹೂ, ಕಟ್ಟಿಡ ಹೂಗಳನ್ನು ದುಡ್ಡು ಕೊಟ್ಟು ಖರೀದಿಸುತ್ತಾರೆ. ಕಟ್ಟಿದ ಹೂಗಳನ್ನು ಕೈಯಲ್ಲಿ ಅಳೆದು ಮೊಳ ಹಾಗೂ ಮಾರಿನ ಲೆಕ್ಕದಲ್ಲಿ ಮಾರಾಟ ಮಾಡುತ್ತಾರೆ. ಆದರೆ ಎಷ್ಟೋ ಕಡೆಗಳಲ್ಲಿ ಹೂವಿನ ಅಳತೆಯಲ್ಲಿ ಮೋಸವಾಗುತ್ತಿದೆ ಎಂದು ದೂರು ಬಂದ ಹಿನ್ನಲೆಯಲ್ಲಿ ಕಾನೂನು ಮಾಪನಶಾಸ್ತ್ರ ಇಲಾಖೆಯು ನ.16ರಂದು ಹೊಸ ಆದೇಶ ಹೊರಡಿಸಿದೆ.
ಅದರಂತೆ ಕಾನೂನು ಮಾಪನಶಾಸ್ತ್ರ ಇಲಾಖೆಯು ಇನ್ನು ಮುಂದೆ ಹೂವನ್ನು ಮೀಟರ್ ಲೆಕ್ಕದಲ್ಲಿ ಮಾರಾಟ ಮಾಡಲು ಹೂವಿನ ವ್ಯಾಪಾರಸ್ಥರಿಗೆ ಸೂಚನೆ ನೀಡಬೇಕು ಹಾಗೂ ಮಾರುಕಟ್ಟೆಗಳಲ್ಲಿ ಈ ಸಂಬಂಧ ಗ್ರಾಹಕ ಜಾಗೃತಿ ಕಾರ್ಯಕ್ರಮಗಳನ್ನು ಕೈಗೊಂಡು ಗ್ರಾಹಕರದಲ್ಲಿ ಅರಿವು ಮೂಡಿಸುವಂತೆ ಇಲಾಖೆಯ ಹಿರಿಯ ಅಧಿಕಾರಿಗಳು ನ.16ರಂದು ಈ ಆದೇಶ ಹೊರಡಿಸಿದ್ದಾರೆ. ಈ ಹೊಸ ಆದೇಶ ಹೊರಡಿಸಿರುವ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ನಗರದ ಬಸವನಗುಡಿಯ ಸಾಮಾಜಿಕ ಕಾರ್ಯಕರ್ತ ಬಿ.ಎಸ್.ಮನೋಹರ್ ಎಂಬುವರು, ತೂಕ ಮತ್ತು ಅಳತೆಯಲ್ಲಿ ಮೆಟ್ರಿಕ್ ಪದ್ಧತಿ ಜಾರಿಗೆ ಬಂದರೂ ಸಹ ಕಟ್ಟಿದ ಹೂವಿನ ಮಾರಾಟದಲ್ಲಿ ಇನ್ನು ಮೊಳ ಮತ್ತು ಮಾರಿನ ಲೆಕ್ಕದಲ್ಲೇ ಮಾರಾಟ ಮಾಡಲಾಗುತ್ತಿದೆ. ಈ ರೀತಿ ಅಳತೆ ಪದ್ಧತಿಯಿಂದ ಮಾರಾಟಗಾರರ ದೇಹದಾರ್ಢ್ಯತೆಗೆ ತಕ್ಕಂತೆ ಹೂವಿನ ಅಳತೆಯಲ್ಲಿ ವ್ಯತ್ಯವಾಗುವುದರಿಂದ ಗ್ರಾಹಕರಿಗೆ ಅನ್ಯಾವಾಗುತ್ತಿದೆ. ಆದ್ದರಿಂದ ಇನ್ನು ಮುಂದೆ ಹೂವನ್ನು ಮೀಟರ್ ಲೆಕ್ಕದಲ್ಲೇ ಅಳೆಯುವುದನ್ನು ಕಡ್ಡಾಯಗೊಳಿಸಿ ಮೆಟ್ರಿಕ್ ಪದ್ಧತಿಯನ್ನು ಕಾರ್ಯಗತಗೊಳಿಸಬೇಕು ಎಂದು ಇಲಾಖೆಗೆ ಮನವಿ ಮಾಡಿದ್ದರು. ಈ ಹಿನ್ನಲೆಯಲ್ಲಿ ಕಾನೂನು ಮಾಪನಶಾಸ್ತ್ರ ಇಲಾಖೆಯು ರಾಜ್ಯದ ಎಲ್ಲಾ ಉಪನಿಯಂತ್ರಕರು, ಸಹಾಯಕ ನಿಯಂತ್ರಕರು ಹಾಗೂ ನಿರೀಕ್ಷಕರುಗಳಿಗೆ ಇನ್ನು ಮುಂದೆ ಹೂವನ್ನು ಮೀಟರ್ ಲೆಕ್ಕದಲ್ಲಿ ಮಾರಾಟ ಮಾಡಲು ಹೂವಿನ ವ್ಯಾಪಾರಸ್ಥರಿಗೆ ಸೂಚನೆ ನೀಡುವಂತೆ ಆದೇಶಿಸಿದೆ.
ಮೈಸೂರಿನಲ್ಲಿ 20 ವರ್ಷದಿಂದ ಮೀಟರ್ ಲೆಕ್ಕದಲ್ಲಿ ಕಟ್ಟಿದ ಹೂ ಮಾರಾಟ :
“ಗಾಂಧಿಬಜಾರ್, ಮಲ್ಲೇಶ್ವರಂ ಬೆಂಗಳೂರಿನ ಅತಿ ಹಳೆಯ ಪ್ರದೇಶ. ಇಲ್ಲಿಯೇ ನಗರದಲ್ಲಿ ಅತಿಹೆಚ್ಚು ಹೂವು ಮಾರಾಟ ಮಾಡುತ್ತಾರೆ. ಹಬ್ಬದ ದಿನಗಳಲ್ಲಿ ಹೂವಿನ ಬೆಲೆ ಅತಿಹೆಚ್ಚು ಇರುತ್ತದೆ. ಅಲ್ಲದೆ ಆಗಾಗ ಈ ಭಾಗದಲ್ಲಿ ಕಟ್ಟಿದ ಹೂವಿನ ಅಳತೆ ಬಗ್ಗೆ ಗ್ರಾಹಕರು ಹಾಗೂ ವ್ಯಾಪಾರಿಗಳ ಮಧ್ಯೆ ಜಗಳ ಆಗುತ್ತಿದೆ. ಹೆಚ್ಚಾಗಿ ಮಹಿಳೆಯರು ಹೂ ಮಾರಾಟ ಮಾಡುತ್ತಾರೆ. ಮಹಿಳೆಯರು ಎತ್ತರದಲ್ಲಿ ಕಡಿಮೆಯಿದ್ದು, ಮೊಳ ಹೂ ಖರೀದಿಸಿದರೆ ಗ್ರಾಹಕರಿಗೆ ನಷ್ಟವಾಗುತ್ತೆ. ನಮ್ಮಲ್ಲಿ ಮೆಟ್ರಿಕ್ ಪದ್ಧತಿ ಅಳವಡಿಸಿಕೊಂಡಿದ್ದೇವೆ. ಹಾಗಾಗಿ ಕಟ್ಟಿದ ಹೂ ಮಾರಾಟವನ್ನು ಮೀಟರ್ ಲೆಕ್ಕದಲ್ಲಿ ಮಾರಲು ಕಾನೂನು ಮಾಪನ ಶಾಸ್ತ್ರ ಇಲಾಖೆ ನಮ್ಮ ಮನವಿ ಮೇರೆಗೆ ಆದೇಶ ಮಾಡಿದೆ” ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ಬಿ.ಎಸ್.ಮನೋಹರ್.
“ದಕ್ಷಿಣ ಕನ್ನಡ, ಮಂಗಳೂರಿನಲ್ಲಿ ಹೂವನ್ನು ಕುಚ್ಚಿನ ಲೆಕ್ಕದಲ್ಲಿ ಮಾರುತ್ತಾರೆ, ಉತ್ತರ ಕರ್ನಾಟಕದಲ್ಲಿ ಹೂಮಾಲೆಯಲ್ಲಿ ಲೆಕ್ಕದಲ್ಲಿ ಮಾರುತ್ತಾರೆ. ಹೀಗೆ ಮಾರಾಟ ಮಾಡುವಾಗ ಸೂಕ್ತ ಅಳತೆ ಪದ್ಧತಿ ಅನುಸರಿಸುವುದಿಲ್ಲ. ಮೈಸೂರಿನಲ್ಲಿ 20 ವರ್ಷಗಳ ಹಿಂದೆಯೇ ಮಲ್ಲಿಗೆ ಮತ್ತಿತರ ಕಟ್ಟಿದ ಹೂವನ್ನು ಮೀಟರ್ ಲೆಕ್ಕದಲ್ಲಿ ಮಾರಾಟ ಮಾಡುತ್ತಿದ್ದಾರೆ. ಈ ಬಗ್ಗೆ ರಾಜ್ಯದಾದ್ಯಂತ ಆದೇಶ ಪಾಲನೆಯಾಗಲು ಅಧಿಕಾರಿಗಳು ಈ ಬಗ್ಗೆ ವ್ಯಾಪಾರಸ್ಥರು, ಗ್ರಾಹಕರಿಗೆ ಜಾಗೃತಿ ಮೂಡಿಸಬೇಕಿದೆ. ಸಣ್ಣ ಹೂವಿನ ಮಾರಾಟಗಾರರು, ಬೀದಿ ವ್ಯಾಪಾರಿಗಳು ಬಟ್ಟೆ ಅಂಗಡಿಯಲ್ಲಿ ಬಟ್ಟೆ ಸ್ಕೇಲ್ ನಂತೆ ಒಂದು ಮೀಟರ್ ಉದ್ದದ ಸ್ಕೇಲ್ ಇಟ್ಟುಕೊಂಡು ಹೂವಿನ ಮಾರಾಟ ಮಾಡಿದರೆ ಅದರಿಂದ ಗ್ರಾಹಕರಿಗೂ ಅನುಕೂಲವಾಗಲಿದೆ, ವ್ಯಾಪಾರಿಗಳಿಗೂ ಸೂಕ್ತ ಅಳತೆಯಲ್ಲಿ ಮಾರಾಟ ಮಾಡಿದ ಸಮಾಧಾನವಿರುತ್ತದೆ” ಎಂದು ಹೇಳುತ್ತಾರೆ ಮನೋಹರ್ ಅವರು.
ಸೂಕ್ತ ರೀತಿ ಜಾಗೃತಿ ಮೂಡಿಸದಿದ್ದರೆ ಗೊಂದಲ ಮೂಡುವ ಸಾಧ್ಯತೆ :
“ಕಾನೂನು ಮಾಪನಶಾಸ್ತ್ರ ಇಲಾಖೆ ಮಾರುಕಟ್ಟೆಯಲ್ಲಿ ಹೂ ವ್ಯಾಪಾರಿಗಳು, ಬೀದಿ ಬದಿಯ ವ್ಯಾಪಾರಿಗಳು ಕಟ್ಟಿದ ಹೂಗಳನ್ನು ಮೀಟರ್ ಲೆಕ್ಕದಲ್ಲಿ ಮಾರಾಟ ಮಾಡಬೇಕು ಎಂದು ಆದೇಶ ಹೊರಡಿಸುವ ಮುನ್ನ ಈ ಬಗ್ಗೆ ಮೊದಲು ಸಮೀಕ್ಷೆ ನಡೆಸಬೇಕಿತ್ತು. ಹೂವಿನ ವ್ಯಾಪಾರಿಗಳು ಬಟ್ಟೆ ಟೇಪು ಅಥವಾ ಸ್ಕೇಲ್ ಇಟ್ಟುಕೊಂಡು ಮೀಟರ್ ಲೆಕ್ಕದಲ್ಲಿ ಹೂವು ಮಾರಾಟ ಮಾಡಲು ಸಮಸ್ಯೆಯಿಲ್ಲ. ಮಾರುಕಟ್ಟೆಯಲ್ಲಿ ಹೂವನ್ನು ಮಾರುವ ದೊಡ್ಡ ವ್ಯಾಪರಸ್ಥರು ಪ್ರಸ್ತುತ ತೂಕ ಹಾಕಿ ಮಾರುತ್ತಿದ್ದಾರೆ. ಬೀದಿ ಬದಿ ವ್ಯಾಪಾರಸ್ಥರು ಮತ್ತಿತರರು ಮೀಟರ್ ಅಳತೆ ಹಿಡಿದು ಮಾರುವ ಬಗ್ಗೆ ಕಾನೂನು ಮಾಪನಶಾಸ್ತ್ರ ಇಲಾಖೆಯವರು ಸಾರ್ವಜನಿಕ ಜಾಗೃತಿ ಹೆಚ್ಚಾಗಿ ಮೂಡಿಸಬೇಕಿದೆಯಷ್ಟೆ. ಇಲ್ಲದಿದ್ದರೆ ಗೊಂದಲ ಮೂಡುವ ಸಾಧ್ಯತೆಯಿದೆ” ಎಂದು ನಗರದ ಕೆ.ಆರ್.ಮಾರುಕಟ್ಟೆ ಹೂವಿನ ವ್ಯಾಪಾರಿ ರಮೇಶ್ ಚಂದ್ರ ಅಭಿಪ್ರಾಯಪಟ್ಟಿದ್ದಾರೆ.