ಮೈಸೂರು, ಡಿ.04 www.bengaluruwire.com : ದಸರಾಹಬ್ಬದಲ್ಲಿ 22 ವರ್ಷಗಳ ಕಾಲ ಭಾಗವಹಿಸಿದ್ದ ಹಾಗೂ 8 ಬಾರಿ ಯಶಸ್ವಿಯಾಗಿ ಅಂಬಾರಿ ಹೊತ್ತಿದ್ದ ಅರ್ಜುನ (64) ಎಂಬ ಸಾಕಾನೆ ದಾರುಣವಾಗಿ ಸಾವನ್ನಪ್ಪಿದೆ.
ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನ ಎಸಳೂರು ಬಳಿ ಆನೆ ಸೆರೆ ಕಾರ್ಯಾಚರಣೆ ವೇಳೆ ಒಂಟಿಸಲಗ ದಾಳಿಯಿಂದ ಸಾಕಾನೆ ಅರ್ಜುನ ಮೃತಪಟ್ಟಿದೆ. ಜಂಬೂಸವಾರಿಯಲ್ಲಿ ಅರ್ಜುನ ನಿಶಾನೆಯಾಗಿ ದಸರಾ ಮೆರವಣಿಗೆಯಲ್ಲಿ ಗಾಂಭೀರ್ಯ ನಡಿಗೆಯಿಂದ ನೋಡುಗರ ಗಮನ ಸೆಳೆದಿದ್ದ. ಇಂತಹ ದೈತ್ಯ ಆನೆಯನ್ನು ಕಳೆದುಕೊಂಡಿದ್ದು, ಮೈಸೂರು ದಸರಾ ಪರಂಪರೆಗೆ ಭರಿಸಲಾಗದ ನಷ್ಟವಾಗಿದೆ.
ನಾಲ್ಕು ಸಾಕಾನೆಗಳೊಂದಿಗೆ ಸೋಮವಾರ ಬೆಳಗ್ಗೆ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ಕೈಗೊಂಡಿದ್ದರು. ಕಾರ್ಯಾಚರಣೆ ಸಂದರ್ಭದಲ್ಲಿ ಅರ್ಜುನನ ಮೇಲೆ ಒಂಟಿಸಲಗ ದಾಳಿ ನಡೆಸಿತ್ತು. ಒಂಟಿಸಲಗ ದಾಳಿ ಮಾಡುತ್ತಿದ್ದಂತೆಯೇ ಉಳಿದ ಮೂರು ಸಾಕಾನೆಗಳು ಓಡಿ ಹೋದವು. ಈ ವೇಳೆ ಅರ್ಜುನ ಮಾತ್ರ ಒಂಟಿಸಲಗದ ಜತೆ ಕಾದಾಟ ನಡೆಸಿ ಗಂಭೀರವಾಗಿ ಗಾಯಗೊಂಡು ಸಾವನ್ನಪ್ಪಿದೆ ಎಂದು ಮೂಲಗಳು ತಿಳಿಸಿವೆ.
64 ವರ್ಷದ ಅರ್ಜುನ ಎಂಬ ಆನೆಯನ್ನುಮೈಸೂರು ಜಿಲ್ಲೆಯ ನಾಗರಹೊಳೆ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ಬಳ್ಳೆ ಶಿಬಿರದಲ್ಲಿ ಸಾಕಲಾಗುತ್ತಿತ್ತು. ಅಂಬಾರಿ ಹೊರುವುದರಿಂಧ ನಾಲ್ಕು ವರ್ಷದ ಹಿಂದೆ ನಿವೃತ್ತಿ ನೀಡಲಾಗಿತ್ತು. ಆದರೆ ಅಂಬಾರಿ ಹೊರದಿದ್ದರೂ ದಸರೆಯಲ್ಲಿ ಭಾಗಿಯಾಗುತ್ತಿತ್ತು. ಈ ಬಾರಿಯೂ ನಿಶಾನೆ ಆನೆಯಾಗಿ ಕಾರ್ಯನಿರ್ವಹಿಸಿತ್ತು. ನಂತರ ಆನೆ, ಹುಲಿ ಸೆರೆ ಕಾರ್ಯಾಚರಣೆಯಲ್ಲಿ ಅರ್ಜುನನ್ನು ಬಳಸಿಕೊಳ್ಳಲಾಗುತ್ತಿತ್ತು. ಸೋಮವಾರ ಮಧ್ಯಾಹ್ನ ಆನೆ ಸೆರೆ ಕಾರ್ಯಾಚರಣೆ ವೇಳೆಯೇ ಹಾಸನ ಜಿಲ್ಲೆ ಎಸಳೂರು ಬಳಿ ಒಂಟಿಸಲಗ ದಾಳಿಯಿಂದ ಮೃತಪಟ್ಟಿದೆ.
ಹತ್ತು ದಿನದಿಂದ ಅರ್ಜುನ ಆನೆಯನ್ನೂ ಕಾರ್ಯಾಚರಣೆಗೆ ಕರೆದುಕೊಂಡು ಹೋಗಲಾಗಿತ್ತು. ಎಸಳೂರು ಬಳಿ ಜಮೀನಿಗೆ ನುಗ್ಗಿ ಬೆಳೆ ಹಾಳು ಮಾಡುತ್ತಿದ್ದ ಒಂಟಿ ಸಲಗದ ಕಾರ್ಯಾಚರಣೆ ಆರಂಭವಾಗಿತ್ತು. ಈ ವೇಳೆ ಸಲಗ ಆನೆಯ ಹತ್ತಿರ ತೆರಳಿದ ಸಾಕಾನೆ ಅರ್ಜುನ ಅದನ್ನು ನಿಯಂತ್ರಿಸಲು ಮುಂದಾಗಿದೆ. ಈ ವೇಳೆ ಆನೆ ಮಾವುತ ಮಹೇಶ ನೀಡಿದ ಸೂಚನೆಯಂತೆ ಒಂಟಿ ಸಲಗವನ್ನು ಹಿಮ್ಮೆಟ್ಟಿಸುವ ಕಾಳಗವೇ ನಡೆದಿದೆ. ಆಗ ಬಲಶಾಲಿಯಾಗಿದ್ದ ಒಂಟಿ ಸಲಗ ಅರ್ಜುನನ ಹೊಟ್ಟೆ, ಪಕ್ಕೆಯ ಭಾಗಕ್ಕೆ ತಿವಿದಿದ್ದರಿಂದ ರಕ್ತಸ್ರಾವವಾಗಿ ಹಿರಿಯಾನೆ ಕುಸಿದು ಬಿದ್ದು ಮೃತಪಟ್ಟಿದೆ ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ.
1968ರಲ್ಲಿ ಕರ್ನಾಟಕದ ಪಶ್ಚಿಮ ಘಟ್ಟಗಳ ಕಾಕನಕೋಟೆಯ ಕಾಡುಗಳಿಂದ ಖೆಡ್ಡಾ ಕಾರ್ಯಾಚರಣೆಯಲ್ಲಿ ಅರ್ಜುನನನ್ನು ಸೆರೆಹಿಡಿಯಲಾಯಿತು. ಆತನನ್ನು ಚೆನ್ನಾಗಿ ಪಳಸಿಗಿದ ನಂತರ 1990ರ ದಶಕದಲ್ಲಿ ಮೈಸೂರಿನಲ್ಲಿ ದಸರಾ ಉತ್ಸವದ ಶಿಬಿರಗಳಿಗೆ ಕರೆತರಲಾಗಿತ್ತು.