ಬೆಂಗಳೂರು, ಡಿ.2 www.bengaluruwire.com : ಆಸ್ತಿಗಳ ವಿಚಾರದಲ್ಲಿ ಖಾತಾ ವರ್ಗಾವಣೆ, ಹೊಸ ಖಾತಾ ರಚನೆ ಮತ್ತಿತರ ವಿಚಾರಗಳಲ್ಲಿ ಬಿಬಿಎಂಪಿಯಲ್ಲಿ ಲಂಚ ಕೊಟ್ಟರಷ್ಟೆ ಕೆಲಸ, ಇಲ್ಲದಿದ್ದರೆ ವಿಳಂಬ ಧೋರಣೆ ಅನುಸರಿಸುತ್ತಿದ್ದ ಭ್ರಷ್ಟ ಕಂದಾಯ ಸಿಬ್ಬಂದಿಗೆ ಪಾಲಿಕೆ ಕಂದಾಯ ವಿಶೇಷ ಆಯುಕ್ತ ಮುನೀಷ್ ಮೌದ್ಗಿಲ್ ಚುರುಕು ಮುಟ್ಟಿಸುವ ಕೆಲಸ ಮಾಡಿದ್ದಾರೆ.
ಸಕಾಲ ಯೋಜನೆಯಡಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಮೊದಲು ಖಾತಾ ಸೇವೆಗೆ ಅರ್ಜಿ ಸಲ್ಲಿಸಿದವರ ಅರ್ಜಿಯನ್ನು ಮೊದಲಿಗೆ ವಿಲೇವಾರಿ, ಬಳಿಕ ಆನಂತರ ಬಂದ ಅರ್ಜಿಗಳನ್ನು ಆಯಾ ದಿನಾಂಕ ಮತ್ತು ಸಮಯಕ್ಕೆ ಸರಿಯಾಗಿ ಹಿರಿತನದ ಮೇಲೆ ಕಡತ ವಿಲೇವಾರಿ ಮಾಡುವ ಫಿಫೊ (First In First Out -FIFO) ಎಂಬ ಕಾರ್ಯ ವಿಧಾನವನ್ನು ಕಳೆದ ವಾರದಿಂದ ಪಾಲಿಕೆ ವ್ಯಾಪ್ತಿಯ ಎಲ್ಲಾ ಆಸ್ತಿ ಸೇವೆಗಳಲ್ಲಿ ಜಾರಿಗೆ ತರಲಾಗಿದೆ.
ಲಂಚ ನೀಡಿ ಸಕಾಲದಲ್ಲಿ ಖಾತಾಗೆ ಸಂಬಂಧಿಸಿದ ಅರ್ಜಿ ಸಲ್ಲಿಸಿದವರಿಗೆ ಮೊದಲಿಗೆ ಅವರ ಕೆಲಸ ಮಾಡಿಕೊಟ್ಟು, ಅವರಿಗಿಂತ ಮುಂಚೆ ಅರ್ಜಿ ಸಲ್ಲಿಸಿದವರ ಅರ್ಜಿಯನ್ನು ಸ್ವೀಕರಿಸದೆ ಸಕಾಲ ಅರ್ಜಿ ವಿಲೇವಾರಿ ಮಾಡುವ 30ನೇ ದಿನದಂದು ಪೂರ್ಣ ರೂಪದ ದಾಖಲೆ ಸಲ್ಲಿಸಿದಲ್ಲಿ ಅಂತಿಮವಾಗಿ ಅರ್ಜಿಯನ್ನು ವಿಲೇವಾರಿ ಮಾಡುವ ಕೆಲಸ ಪ್ರಸ್ತುತ ಆಗುತ್ತಿದೆ. ಪೂರ್ಣ ದಾಖಲೆ ಸಲ್ಲಿಸದ ಪಕ್ಷದಲ್ಲಿ ಆ ಅರ್ಜಿಗಳನ್ನು ಅಂತಿಮವಾಗಿ ತಿರಸ್ಕರಿಸುವ ಮೂಲಕ ಪರೋಕ್ಷವಾಗಿ ಅರ್ಜಿ ವಿಲೇವಾರಿ ವಿಳಂಬ ಮಾಡಲಾಗುತ್ತಿತ್ತು.
ಪ್ರತಿ ಪ್ರಕರಣವನ್ನು ಅದರ ರಶೀದಿಯ ದಿನಾಂಕ ಮತ್ತು ಸಮಯಕ್ಕೆ ಅನುಗುಣವಾಗಿ ವಿಲೇವಾರಿ ಮಾಡಬೇಕು. ಅದನ್ನು ಪಕ್ಕಕ್ಕೆ ಸರಿಸಿ ಸಾಲಿನಲ್ಲಿ ಹಿಂದಿರುವವರ ಅರ್ಜಿಗಳನ್ನು ಮೊದಲಿಗೆ ತೆಗೆದುಕೊಂಡು ಖಾತಾ ವರ್ಗಾವಣೆ ಅಥವಾ ಖಾತಾ ರಚನೆ ಇತ್ಯಾದಿಗಳನ್ನು ಯಾರೂ ತೆಗೆದುಕೊಳ್ಳಲು ಅಥವಾ ವಿಲೇವಾರಿ ಮಾಡಲು ಸಾಧ್ಯವಿಲ್ಲ. ಇದರಿಂದ ಒಂದೊಮ್ಮೆ ಖಾತಾ ಕುರಿತಂತೆ ಮೊದಲಿಗೆ ಅರ್ಜಿ ಸಲ್ಲಿದವರು ಅರ್ಜಿ ಸ್ವೀಕೃತವಾಗಿ ನಿಗದಿತ ಶುಲ್ಕ ಕಟ್ಟಲು ವಿಳಂಬ ಮಾಡಿದಲ್ಲಿ, ಆಗ ಅರ್ಜಿ ವಿಲೇವಾರಿ ತಡವಾಗಿ, ಆ ಸಾಲಿನ ಹಿಂದಿನ ಅರ್ಜಿದಾರರ ಪ್ರಕರಣ ವಿಲೇವಾರಿಗೂ ತೊಡಕಾಗುತ್ತದೆ. ಫಿಫೊ ವಿಧಾನದಲ್ಲಿ ತ್ವರಿತ ಅರ್ಜಿ ವಿಲೇವಾರಿಗೆ ಇದರಿಂದ ಸಾಮಾನ್ಯ ಅರ್ಜಿದಾರರಿಗೆ ತೊಂದರೆಯಾಗುವ ಸಾಧ್ಯತೆಯಿದೆ. ಈ ಬಗ್ಗೆ ಪಾಲಿಕೆ ಕಂದಾಯ ವಿಭಾಗ ಗಮನ ಹರಿಸಬೇಕಿದೆ.
ಮುನೀಶ್ ಮುದ್ಗಿಲ್ ಈ ಹಿಂದೆ ರಾಜ್ಯ ಕಂದಾಯ ಇಲಾಖೆಯ ಭೂಮಾಪನ, ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಗಳಲ್ಲಿ ಸಾಕಷ್ಟು ಸುಧಾರಣೆಗಳಿಗೆ ಕಾರಣರಾಗಿದ್ದರು. ಇತ್ತೀಚೆಗಷ್ಟೇ ಬಿಬಿಎಂಪಿಗೆ ಆಗಮಿಸಿರುವ ಅವರು, ಪಾಲಿಕೆ ಕಂದಾಯ ಇಲಾಖೆಯಲ್ಲಿನ ಬೋಗಸ್ ಖಾತೆಗಳಿಗೆ ಬ್ರೇಕ್ ಹಾಕಲು, ಹಲವು ದಿನಗಳಿಂದ ಹಳ್ಳ ಹಿಡಿದು ನಿಂತಿದ್ದ ಆಸ್ತಿ ಖಾತಾ ರಿಜಿಸ್ಟರ್ ಸ್ಕ್ಯಾನಿಂಗ್ ಹಾಗೂ ಡಿಜಿಟಲೀಕರಣ ಮಾಡುವ ಕಾರ್ಯಕ್ಕೆ ಚಾಲನೆ ನೀಡಿ ಆ ಕಾರ್ಯವು ಭರದಿಂದ ಸಾಗಿದೆ. ಇನ್ನೊಂದೆಡೆ ಪೂರ್ವ ವಲಯದಲ್ಲಿ ಜಾರಿಗೆ ತಂದ ಇ-ಆಸ್ತಿ ಸೌಕರ್ಯವನ್ನು ಎಲ್ಲಾ ವಲಯಗಳಲ್ಲೂ ಜಾರಿಗೆ ತಂದು ಖಾತಾ ಸೇವೆಗಳು, ಆಸ್ತಿ ದಾಖಲೆಗಳನ್ನು ಎಲೆಕ್ಟ್ರಾನಿಕ್ ದತ್ತಾಂಶದಲ್ಲಿ ಶೇಖರಿಸಿಡುವ ಕಾರ್ಯವನ್ನು ಡಿಜಿಟಲಿಕರಣ ಮೂಲಕ ಸಾಧಿಸುವ ಗುರಿ ಹೊಂದಲಾಗಿದೆ.
ಬೆಂಗಳೂರು ವೈರ್ ಜೊತೆ ಮಾತನಾಡಿದ ಬಿಬಿಎಂಪಿ ವಿಶೇಷ ಆಯುಕ್ತ (ಕಂದಾಯ) ಮುನೀಶ್ ಮೌದ್ಗಿಲ್, ‘ಖಾತಾ ಅರ್ಜಿಗಳನ್ನು ಸ್ವೀಕರಿಸಲಾಗುತ್ತದೆ ಮತ್ತು ಸಕಾಲ ಮೂಲಕ ಸಂಬಂಧಪಟ್ಟ ಕಂದಾಯ ಅಧಿಕಾರಿಗಳಿಗೆ ಕಳುಹಿಸಲಾಗುತ್ತದೆ. ಇದರ ಅಡಿಯಲ್ಲಿ, ಈಗ ಹಿರಿತನದ ಮೇಲಿನ ಅರ್ಜಿಯನ್ನು ವಿಲೇವಾರಿ ಮಾಡುವುದು ಕಡ್ಡಾಯವಾಗಿದೆ. ಕಳೆದ ವಾರದಿಂದ ಪಾಲಿಕೆಯಲ್ಲಿ ಈ ವಿಧನಾವನ್ನು ಅನುಷ್ಠಾನಗೊಳಿಸಲಾಗಿದೆ’ ಎಂದು ಅವರು ಹೇಳಿದ್ದಾರೆ.
ಈ ವಿಧಾನಗಳಿಂದಾಗಿ ಕಂದಾಯ ಇಲಾಖೆಗೆ ನಿಗದಿತ ಕಾರ್ಯಾಚರಣೆ ವಿಧಾನ (ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ -SOP) ಒದಗಿಸುತ್ತದೆ. ಇದರಿಂದಾಗಿ ಪಾಲಿಕೆಗೆ ಸರಿಯಾದ ಆದಾಯವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ. ಇ-ಅಸ್ತಿಗಾಗಿ ಡೇಟಾವನ್ನು ರಚಿಸಲು ಮತ್ತು ಹೊರತೆಗೆಯಲು ಸಹ ಇದು ಸೂಕ್ತವಾಗಿರುತ್ತದೆ ಎಂದು ಅವರು ಹೇಳಿದ್ದಾರೆ.
ಫಿಫೊ ವ್ಯವಸ್ಥೆಯು ಪಾರದರ್ಶಕತೆಯನ್ನು ತರುವುದರ ಜೊತೆಗೆ, ಕಂದಾಯ ಅಧಿಕಾರಿಗಳ ಕರ್ತವ್ಯಗಳು ಮತ್ತು ಅಧಿಕಾರ ವ್ಯಾಪ್ತಿಯನ್ನು ಸೂಚಿಸುತ್ತದೆ. ಖಾತೆ ಅಥವಾ ಆಸ್ತಿ ವಿವಾದಿತ ಪ್ರಕರಣಗಳಿಗೆ ಪ್ರತ್ಯೇಕ ಫಿಫೊ ವಿಧಾನವನ್ನು ಅನುಸರಿಸಲಾಗುತ್ತದೆ ಎಂದು ಮುನೀಷ್ ತಿಳಿಸಿದ್ದಾರೆ.
ಗ್ರಾಮೀಣಾಭಿವೃದ್ಧಿ ಇಲಾಖೆಯಡಿ ಬರುವ ಗ್ರಾಮ ಪಂಚಾಯ್ತಿಗಳಲ್ಲಿ ಇ-ಸ್ವತ್ತು (E-Swathu) ತಂತ್ರಾಂಶದೊಂದಿಗೆ, ಕಾವೇರಿ ತಂತ್ರಾಂಶ (Kaveri-2 Software)ವನ್ನು ಅಂತರ್ಗತಗೊಳಿಸಲಾಗಿದೆ. ಹೀಗಾಗಿ ಕಾವೇರಿ ತಂತ್ರಾಂಶದಲ್ಲಿ ಯಾವುದೇ ಆಸ್ತಿಗಳ ನೋಂದಣಿಯಾಗುತ್ತಿದ್ದಂತೆ ಆ ನೋಂದಣಿಯಾದವರ ಮಾಹಿತಿಯು ಇ-ಸ್ವತ್ತಿಗೆ ತನ್ನಿಂದ ತಾನೆ ಹಂಚಿಕೆಯಾಗಿ ಸ್ವಯಂಚಾಲಿತವಾಗಿ ಆಸ್ತಿಯ ಖಾತಾ ವರ್ಗಾವಣೆ ಆಗುತ್ತದೆ.
ಅಂತಹ ಪ್ರಕರಣಗಳಲ್ಲಿ ಸಂಬಂಧಿಸಿದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (PDO) ನಿಗದಿತ ಶುಲ್ಕವನ್ನು ಆಸ್ತಿ ಮಾಲೀಕರಿಂದ ಪಡೆದು ತನ್ನ ಬೆರಳಚ್ಚು (Thumb) ಕಂಪ್ಯೂಟರ್ ನಲ್ಲಿ ದಾಖಲಿಸಿ ಖಾತಾಪತ್ರವನ್ನು ವಿತರಿಸಲಾಗುತ್ತಿದೆ. ಇದೇ ವ್ಯವಸ್ಥೆಯನ್ನು ಬಿಬಿಎಂಪಿಯಲ್ಲೂ ಜಾರಿಗೆ ತರುವ ಮೊದಲ ಹಂತವಾಗಿ ಆಸ್ತಿಗಳ ಖಾತಾ ರಿಜಿಸ್ಟರ್ ಸ್ಕ್ಯಾನಿಂಗ್, ಡಿಜಿಟಲೀಕರಣ ಮಾಡಲಾಗುತ್ತಿದೆ.
ಒಂದು ಕಡೆ ಶಾಶ್ವತವಾಗಿ ಬೋಗಸ್ ಖಾತಾಗೆ ಎಳ್ಳುನೀರು, ಇದೀಗ ಖಾತಾ ಅರ್ಜಿ ವಿಳಂಬ ಧೋರಣೆ ತಪ್ಪಿಸಲು ಕ್ರಮ ಕೈಗೊಂಡು ಪಾಲಿಕೆ ಕಂದಾಯ ವಿಭಾಗದಲ್ಲಿ ಸುಧಾರಣೆ ತರಲಾಗುತ್ತಿರುವುದಕ್ಕೆ ನಾಗರೀಕರು ಹರ್ಷ ವ್ಯಕ್ತಪಡಿಸಿದ್ದಾರೆ.