ಬೆಂಗಳೂರು, ನ.30 www.bengaluruwire.com : ಮೆಟ್ರೋ ರೈಲು, ಕ್ಯಾಬ್, ಬಸ್ ಗಳು ಸೇರಿದಂತೆ ವಿವಿಧ ಮಾದರಿಯ ಸಂಚಾರ ವ್ಯವಸ್ಥೆಗಳಿಗೆ ದೇಶಾದ್ಯಂತ ಒಬ್ಬ ಪ್ರಯಾಣಿಕರಿಗೆ ಒಂದು ಸ್ಮಾರ್ಟ್ ಕಾರ್ಡ್ ಸೌಲಭ್ಯವು ಕೇಂದ್ರದಿಂದ ಶೀಘ್ರವೇ ಜಾರಿಯಾಗಲಿದೆ ಎಂದು ಬೆಂಗಳೂರು ಮೆಟ್ರೊ ರೈಲು ನಿಗಮದ ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಪರ್ವೇಜ್ ಗುರುವಾರ ಹೇಳಿದರು.
ʼಬೆಂಗಳೂರು ತಂತ್ರಜ್ಞಾನ ಶೃಂಗಸಭೆʼ (Bangalore Tech Summit) ನ ಎರಡನೇ ದಿನ ʼಭವಿಷ್ಯದ ಸಂಚಾರಕ್ಕಾಗಿ ಸಮನ್ವಯದ, ಸ್ವಾಯತ್ತ, ಹಂಚಿಕೆ ಮತ್ತು ಎಲೆಕ್ಟ್ರಿಕ್ ವ್ಯವಸ್ಥೆʼ ಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ಯೋಜನೆ ಇದಾಗಿದ್ದು, ಇನ್ನು 6 ತಿಂಗಳಲ್ಲಿ ವಿವಿಧ ಮಹಾನಗರಗಳಲ್ಲಿ ಜಾರಿಗೊಳ್ಳಲಿದೆ. ಪರಿಸರಸ್ನೇಹಿ ಸಂಚಾರ ವ್ಯವಸ್ಥೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಬೆಂಗಳೂರಿನ ಮೆಟ್ರೊ ರೈಲು ನಿಲ್ದಾಣಗಳಲ್ಲಿ ದ್ವಿಚಕ್ರ ಮತ್ತು ತ್ರಿಚಕ್ರ ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ ಸೌಲಭ್ಯ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ʼಊಬರ್ ಇಂಡಿಯಾʼ ಸಂಸ್ಥೆಯ ನಿರ್ದೇಶಕ ಸಂಜಯ್ ಛಡ್ಡಾ, ಸಂಚಾರ ದಟ್ಟಣೆ ಕಡಿಮೆ ಮಾಡುವ ನಿಟ್ಟಿನಲ್ಲಿ ಪ್ರಯಾಣವು ಕ್ಯಾಬ್ ನಿಂದ ಬಸ್ ಗಳಿಗೆ ಬದಲಾಗಬೇಕು. ಈ ನಿಟ್ಟಿನಲ್ಲಿ ಊಬರ್ ಸಂಸ್ಥೆಯಿಂದ ಈಗಾಗಲೇ ದೆಹಲಿ ಮತ್ತು ಮುಂಬೈ ನಗರಗಳಲ್ಲಿ ಎಲೆಕ್ಟ್ರಿಕ್ ಬಸ್ ಸಂಚಾರ ವ್ಯವಸ್ಥೆ ಆರಂಭಿಸಲಾಗಿದೆ. ಬೆಂಗಳೂರಿನಲ್ಲೂ ಶೀಘ್ರವೇ ಈ ಸೌಲಭ್ಯ ದೊರಕಿಸಲಾಗುವುದು. 2030ರ ವೇಳೆಗೆ ಊಬರ್ ಬುಕಿಂಗ್ ವ್ಯವಸ್ಥೆಯಲ್ಲಿ ಶೇಕಡ 100ರಷ್ಟು ಎಲೆಕ್ಟ್ರಿಕ್ ವಾಹನಗಳನ್ನೇ ಅಳವಡಿಸುವ ಗುರಿ ಹಾಕಿಕೊಳ್ಳಲಾಗಿದೆ ಎಂದು ಅವರು ವಿವರಿಸಿದರು.
ʼಪರ್ಪಲ್ ಮೊಬೈಲಿಟಿʼ ಸಂಸ್ಥೆಯ ಮುಖ್ಯ ವ್ಯವಸ್ಥಾಪಕ ನಿರ್ದೇಶಕ ಪ್ರಸನ್ನ ಪಟವರ್ಧನ್, ಕಳೆದ ಕೆಲವು ವರ್ಷಗಳಲ್ಲಿ ಪ್ರಯಾಣ ಮತ್ತು ಸಂಚಾರ ವ್ಯವಸ್ಥೆ ಪರಿಸರ ಸ್ನೇಹಿಯಾಗುವತ್ತ ಬದಲಾಗುತ್ತಿರುವುದು ಉತ್ತಮ ಬೆಳವಣಿಗೆ. ಗ್ರಾಹಕರ ಕ್ಯಾಬ್ ಬುಕಿಂಗ್ ವಿಧಾನ, ಸಂಚಾರ ಆಡಳಿತ, ಕಾರ್ಯಾಚರಣೆ, ಸಿಗ್ನಲಿಂಗ್ ವ್ಯವಸ್ಥೆ ಇವೆಲ್ಲವೂ ತಂತ್ರಜ್ಞಾನದ ಬಲದೊಂದಿಗೆ ಸ್ಮಾರ್ಟ್ ಆಗುತ್ತಿವೆ ಎಂದರು.
ʼಬೀಟಾ ಟೆಕ್ನಾಲಜೀಸ್ʼ ಸಂಸ್ಥೆಯ ನಿರ್ದೇಶಕ ಬ್ಲೇಕ್ ಒಪ್ಸಾಹಿ, ಎಲೆಕ್ಟ್ರಿಕ್ ವಿಮಾನಗಳ ಸಂಚಾರಕ್ಕೆ ಭಾರತದಲ್ಲಿ ಹೆಚ್ಚಿನ ಅವಕಾಶವಿದೆ. ಸುಮಾರು 200 ವಿಮಾನ ನಿಲ್ದಾಣಗಳನ್ನು ಹೊಂದಿರುವ ಭಾರತ ಅತ್ಯುತ್ತಮ ವೈಮಾನಿಕ ಮೂಲಸೌಕರ್ಯ ಹೊಂದಿದ್ದು, ಭವಿಷ್ಯದಲ್ಲಿ ಖಾಸಗಿ ವಿಮಾನಗಳು ಹಾಗೂ ವಿಮಾನ ಟ್ಯಾಕ್ಸಿಗಳ ಸಂಖ್ಯೆ ಹೆಚ್ಚಲಿವೆ ಎಂದು ತಿಳಿಸಿದರು.
ಐಒಟಿ, ಎಐ ತಂತ್ರಜ್ಞಾನ ಬಳಕೆಯಿಂದ ಕೃಷಿ ಇಳುವರಿ ಹೆಚ್ಚಳ :
ಕೃಷಿಯಲ್ಲೂ ಆಧುನಿಕತೆ ಮೈಗೂಡಿಸಿಕೊಂಡು, ಐಒಟಿ, ಎಐ ಬಳಸಿದರೆ ನಿಖರ ಗೊಬ್ಬರ ಬಳಕೆ, ನೀರಿನ ಪ್ರಶಸ್ತ ಬಳಕೆ ಹಾಗೂ ಅತಿಹೆಚ್ಚಿನ ಗುಣಮಟ್ಟದ ಇಳುವರಿ ಪಡೆಯಲು ಸಾಧ್ಯ ಎಂದು ಫಾರ್ಮ್ ಆಂಡ್ ಫೀಲ್ಡ್, ಕ್ರಾಪ್ ಆಂಡ್ ಡಿಜಿಟಲ್ ಸಲ್ಯುಷನ್ಸ್ ಮುಖ್ಯಸ್ಥ ಸಾಗರ್ ಎನ್. ಗುರುವಾರ ಪ್ರತಿಪಾದಿಸಿದರು.
ಇಲ್ಲಿನ ಅರಮನೆ ಆವರಣದಲ್ಲಿ ನಡೆಯುತ್ತಿರುವ “ಬೆಂಗಳೂರು ಟೆಕ್ ಮೇಳ- 2023″ದಲ್ಲಿ “ಸುಸ್ಥಿರ ಭವಿಷ್ಯಕ್ಕಾಗಿ ಟೆಕ್ ಬೆಂಬಲ” ಕುರಿತ ಸಂವಾದದಲ್ಲಿ ಅವರು ಮಾತನಾಡಿದ ಅವರು, ಕೃಷಿಯಲ್ಲಿ ತಂತ್ರಜ್ಞಾನ ಬಳಕೆ ಎಂದಾಕ್ಷಣ ಕಾರ್ಪೊರೇಟ್ ಕಪಿಮುಷ್ಟಿಯೊಳಗೆ ರೈತರು ಸಿಲುಕಿದಂತಾಗುವುದಿಲ್ಲ. ಸಣ್ಣ ರೈತರಿಗೂ ಇದರ ಅಳವಡಿಕೆ ಸಾಧ್ಯ. ತಂತ್ರಜ್ಞಾನ ಎಲ್ಲರನ್ನೂ ಸಬಲೀಕರಣಗೊಳಿಸುತ್ತದೆ. ಬೀಜ ಬಿತ್ತನೆಗೆ ಮುನ್ನ ಅದರ ಗುಣಮಟ್ಟ ನಿರ್ಣಯಿಸಬೇಕು. ಬೀಜ ಹಾಗೂ ಮಣ್ಣಿನ ಹೊಂದಾಣಿಕೆಯ ಪರೀಕ್ಷೆಯಾಗಬೇಕು. ಬೆಳೆಗೆ ಅಗತ್ಯವಾಗಿರುವ ನಿಖರ ಪೋಷಕಾಂಶ ಹಾಗೂ ನೀರಿನ ಪ್ರಮಾಣದ ಲೆಕ್ಕಾಚಾರ ನಡೆಯಬೇಕು. ಕೊನೆಗೆ ಇಳುವರಿಯ ಗುಣಮಟ್ಟವನ್ನೂ ಅಳೆಯುವಂತಾಗಬೇಕು. ಇವೆಲ್ಲವೂ ಭಾರತದಲ್ಲಿ ಸಾಧ್ಯವಾಗಿ ಕೃಷಿಯ ಗುಣಮಟ್ಟ ಹೆಚ್ಚುವ ದಿನ ದೂರವಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.