ಬೆಂಗಳೂರು, ನ.30 www.bengaluruwire.com : ಬಿಬಿಎಂಪಿಯಲ್ಲಿ ಎರವಲು ಸೇವೆಯ ಮೇಲೆ ಬಂದವರು ನಿಗದಿತ ಕಾಲಾವಧಿ ಪೂರೈಸಿ ಮುಂದುವರೆದಿದ್ದವರನ್ನು ವಾಪಸ್ ಕಳುಹಿಸಲು ಕ್ರಮ ಕೈಗೊಳ್ಳಬೇಕು. ಹಾಗೂ 11 ವರ್ಷಕ್ಕೂ ಹೆಚ್ಚು ಕಾಲದಿಂದ ನಿಯಮಬಾಹಿರವಾಗಿ ಮುಂದುವರೆದಿದ್ದ ಸೌಮ್ಯ ಎಂಬ ಲೆಕ್ಕಾಧೀಕ್ಷಕರ ಪ್ರಕರಣದಲ್ಲೂ ಅವರನ್ನು ಪ್ರಸ್ತುತ ಅವಧಿ ಬಳಿಕ ಅವರನ್ನು ಮುಂದುವರೆಸದಂತೆ ಚೀಫ್ ಕಮೀಷನರ್ ಕ್ರಮವಾಗಿ ಪಾಲಿಕೆ ಆಡಳಿತ ವಿಭಾಗದ ಸಹಾಯಕ ಆಯುಕ್ತರು ಹಾಗೂ ನಗರಾಭಿವೃದ್ಧಿ ಇಲಾಖೆಗೆ ಪ್ರತ್ಯೇಕ ಪತ್ರ ಬರೆದಿದ್ದಾರೆ. ಇದು ಬೆಂಗಳೂರು ವೈರ್ ವರದಿ ಪರಿಣಾಮ.
ಅ.19ರಂದು ಬೆಂಗಳೂರು ವೈರ್ ಪಾಲಿಕೆಯಲ್ಲಿ ಅನ್ಯಇಲಾಖೆಗಳಿಂದ ನಿಯೋಜನೆ ಬಂದಿರುವವರು ನಿಯಮಬಾಹಿರವಾಗಿ ಹಲವು ವರ್ಷಗಳಿಂದ ಇಲ್ಲೇ ಖಾಯಂ ಠಿಕಾಣಿ ಹೂಡಿದ್ದಾರೆ ಎಂದು ಮಹದೇವಪುರ ವಲಯದಲ್ಲಿ ಲೆಕ್ಕಾಧೀಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿರುವ ವಿ.ಸೌಮ್ಯ ಎಂಬುವರು ಕಳೆದ 11 ವರ್ಷಗಳಿಂದ ನಿಯಮ ಉಲ್ಲಂಘಿಸಿ ಕೆಲಸ ಮಾಡುತ್ತಿರುವ ಪ್ರಕರಣವನ್ನು ಉಲ್ಲೇಖಿಸಿ ದಾಖಲೆ ಸಹಿತ ವರದಿ ಮಾಡಿತ್ತು. “BW EXCLUSIVE | ಬಿಎಂಪಿಯಲ್ಲಿ 11 ವರ್ಷಕ್ಕೂ ಹೆಚ್ಚು ಕಾಲಾವಧಿಯಿಂದ ನಿಯಮಬಾಹಿರ ಠಿಕಾಣಿ : ಈ ಲೆಕ್ಕಾಧೀಕ್ಷಕ ಅಧಿಕಾರಿಗೆ ಯಾಕೆ ನಗರಾಭಿವೃದ್ಧಿ ಇಲಾಖೆ ಶ್ರೀರಕ್ಷೆ” ಎಂಬ ಶೀರ್ಷಿಕೆಯಡಿ ವಿಸ್ತ್ರತವಾಗಿ ವರದಿ ಪ್ರಕಟಿಸಿತ್ತು. ಪಾಲಿಕೆಯಲ್ಲಿ ಸರ್ಕಾರದ ಆದೇಶಗಳಿಗೆ ಕಿಮ್ಮತ್ತು ನೀಡುತ್ತಿಲ್ಲ. ಎರವಲು ಸೇವೆ ಮತ್ತು ನಿಯೋಜನಾ ನೀತಿಯ ಉಲ್ಲಂಘನೆಯಾಗುತ್ತಿದೆ ಎಂದು ಬೆಂಗಳೂರು ವೈರ್ ಲೆಕ್ಕಾಧೀಕ್ಷಕಿ ವಿ.ಸೌಮ್ಯ ಅವರ ಪ್ರಕರಣವನ್ನು ಉಲ್ಲೇಖಿಸಿ ವಿಸ್ತ್ರತವಾಗಿ ವಿಶೇಷ ಸುದ್ದಿ ಪ್ರಕಟಿಸಿತ್ತು.
ಈ ವರದಿಯಿಂದ ಕೊನೆಗೂ ಎಚ್ಚೆತ್ತುಕೊಂಡ ಬಿಬಿಎಂಪಿ ಆಡಳಿತದ ಚುಕ್ಕಾಣಿ ಹಿಡಿದಿರುವ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರ ಸೂಚನೆಯ ಮೇರೆಗೆ ನವೆಂಬರ್ 11ರಂದು, ಪಾಲಿಕೆಗೆ ಎರವಲು ಸೇವೆ ಮೇಲೆ ಅಧಿಕಾರಿ ಮತ್ತು ನೌಕರರ ನಿಯೋಜನೆ ಅವಧಿ ಪೂರ್ಣಗೊಂಡಿದ್ದರೂ, ಪುನಃ ಸರ್ಕಾರವು ಪಾಲಿಕೆಗೆ ಮುಂದುವರೆಸಿ ಆದೇಶಿಸಿದ್ದರೆ, ಅಂತಹ ಅಧಿಕಾರಿ ಮತ್ತು ನೌಕರರನ್ನು ಪಾಲಿಕೆ ಕರ್ತವ್ಯಕ್ಕೆ ತೆಗೆದುಕೊಳ್ಳಬಾರದು. ಈ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಆಡಳಿತ ವಿಭಾಗದ ಉಪ ಆಯುಕ್ತರು ಆಂತರಿಕ ಕಚೇರಿ ಟಿಪ್ಪಣಿಯನ್ನು ಹೊರಡಿಸಿದ್ದಾರೆ.
ಲೆಕ್ಕಾಧೀಕ್ಷಕಿ ಸೌಮ್ಯ 08-09-2012ರಂದು ಪಾಲಿಕೆಗೆ ಎರವಲು ಸೇವೆಯ ಮೇಲೆ ಬಂದಿದ್ದು, ಅವರು ಗರಿಷ್ಠ ನಿಯೋಜನಾ ಅವಧಿ 5 ವರ್ಷವಾಗಿದ್ದರೂ ಕಳೆದ 11 ವರ್ಷಕ್ಕಿಂತ ಹೆಚ್ಚಿನ ಕಾಲಾವಧಿ ಪೂರೈಸಿದ್ದರು. ಇದನ್ನು ದಾಖಲೆ ಸಮೇತ ಬೆಂಗಳೂರು ವೈರ್ ಅ.19ರಂದು ಸುದ್ದಿ ಪ್ರಸಾರ ಮಾಡಿತ್ತು. ಹೀಗಾಗಿ ಸರ್ಕಾರ ಆದೇಶದಂತೆ ನಿಯೋಜನಾ ಅವಧಿ 17-02-2024ರಂದು ಪೂರ್ಣವಾಗಲಿದೆ. ಆ ಬಳಿಕ ಪೌರಾಡಳಿತ ಇಲಾಖೆಯ ಅಧಿಕಾರಿಯಾದ ಅವರನ್ನು ಪಾಲಿಕೆಯಲ್ಲಿ ಮುಂದುವರೆಸದಂತೆ ನಗರಾಭಿವೃದ್ಧಿ ಇಲಾಖೆಗೆ ಪತ್ರ ಬರೆದಿದ್ದಾರೆ. ಅಂದರೆ ಒಂದೇ ದಿನ ಬಿಬಿಎಂಪಿ ಆಡಳಿತ ವಿಭಾಗ ವಿವಿಧ ವೃಂದ ಹುದ್ದೆಗಳ ಎರವಲು ಸೇವೆ ಕುರಿತಂತೆ ಆಂತರಿಕ ಕಚೇರಿ ಟಿಪ್ಪಣಿ ಹಾಗೂ ನಗರಾಭಿವೃದ್ಧಿ ಇಲಾಖೆಗೆ ಪತ್ರವನ್ನು ಬರೆದಿದೆ.
ಎಷ್ಟೇ ಪ್ರಭಾವಿಯಾದರೂ ಸುದ್ದಿ ಪ್ರಕಟ ಮಾಡಲು ಕೇರ್ ಮಾಡಲ್ಲ :
11 ವರ್ಷ 10 ತಿಂಗಳಿನಿಂದ ಬಿಬಿಎಂಪಿಯಲ್ಲಿ ಲೆಕ್ಕಾಧೀಕ್ಷಕಿಯಾಗಿರುವ ಪೌರಾಡಳಿತ ಇಲಾಖೆಯ ಈ ಅಧಿಕಾರಿ ಅಷ್ಟು ಪ್ರಭಾವಿಯೇ? | ಬಿಬಿಎಂಪಿಯ ಆಡಳಿತ ವಿಭಾಗದ ವಿಶೇಷ ಆಯುಕ್ತರು – ಮುಖ್ಯ ಆಯುಕ್ತರಿಗೆ ನಿಯಮಬಾಹಿರವಾಗಿ ಮುಂದುವರೆದಿರುವ ಅಧಿಕಾರಿಯನ್ನು ಮಾತೃ ಇಲಾಖೆಗೆ ಕಳುಹಿಸಲು ಈತನಕ ಸಾಧ್ಯವಾಗಿಲ್ಲ ಯಾಕೆ? ಎಂದು ಪ್ರಶ್ನಿಸಿ ಯಾವೆಲ್ಲಾ ಕಾನೂನು- ನಿಯಮಾವಳಿಗಳ ಉಲ್ಲಂಘನೆಯಾಗಿದೆ? ಎಂಬುದರ ಬಗ್ಗೆ ನಿಮ್ಮ ಬೆಂಗಳೂರು ವೈರ್ ಸಮಗ್ರವಾಗಿ ಸರ್ಕಾರದ ಕಾನೂನುಗಳು, ಬಿಬಿಎಂಪಿ ಕಾಯ್ದೆ 2020ರನ್ನು ಉಲ್ಲೇಖಿಸಿ ವರದಿ ಪ್ರಕಟ ಮಾಡಿತ್ತು. ಇದರಿಂದ ಅನ್ಯ ಮಾರ್ಗವಿಲ್ಲದೆ ಬಿಬಿಎಂಪಿ ಆಡಳಿತ ಎರವಲು ಸೇವೆ ಮತ್ತು ನಿಯೋಜನಾ ನೀತಿಯನ್ನು ಕಟ್ಟು ನಿಟ್ಟಿನ ಜಾರಿಗೆ ಕ್ರಮ ಕೈಗೊಳ್ಳುವ ಅನಿವಾರ್ಯತೆಗೆ ಸಿಲುಕಿದೆ.
ಇದು ಬೆಂಗಳೂರು ವೈರ್ ಮಾಧ್ಯಮಕ್ಕೆ ಸಮಾಜದ ಬಗ್ಗೆ ಇರುವ ಕಳಕಳಿ, ಆಡಳಿತ ವ್ಯವಸ್ಥೆಯನ್ನು ಸರಿದಾರಿಯಿಂದ ಪಕ್ಕಕ್ಕೆ ಸರಿದಾಗ ಎಚ್ಚರಿಸುವ ಕಾರ್ಯದ ಭಾಗದಲ್ಲಿ ಎಷ್ಟರ ಮಟ್ಟಿಗೆ ಪರಿಣಾಮಕಾರಿ ಸುದ್ದಿಯನ್ನು ಪ್ರಸಾರ ಮಾಡುತ್ತಿದೆ ಎಂಬುದಕ್ಕೆ ಇದೇ ಸಾಕ್ಷಿಯಾಗಿದೆ. ನಿಯೋಜನಾ ಅವಧಿ ಕುರಿತಂತೆ ಪಾಲಿಕೆಯ ಆಡಳಿತ ನಿರ್ಲಕ್ಷ್ಯವಹಿಸಿದ್ದು ಕಂಡು ಬಂದರೆ ಪುನಃ ಇಂತಹುದೇ ವರದಿಯನ್ನು ದಾಖಲೆ ಸಹಿತ ಬಯಲು ಮಾಡಲು ಹಿಂದೆಮುಂದೆ ನೋಡುವುದಿಲ್ಲ.