ದೇಶದ ಭದ್ರತೆ ವಿಚಾರದಲ್ಲಿ ರಕ್ಷಣಾ ಪಡೆಗಳಲ್ಲಿ ವಿಶೇಷ ಕಾರ್ಯಾಚರಣೆ ನಡೆಸಲೆಂದೇ ಅತ್ಯಾಧುನಿಕ ಉಪಕರಣ, ಸಮರ ಕಲೆ, ಆಯಾ ಉದ್ದೇಶ ಸಾಫಲ್ಯಕ್ಕೆ ನಿಖರವಾಗಿ ಕಾರ್ಯಾಚರಣೆ ನಡೆಸುವ ಪಡೆಗಳಿವೆ. ಪ್ರತಿಯೊಂದು ವಿಶೇಷ ಪಡೆಗಳಿಗೂ ಮಿಲಿಟರಿ ಕಾರ್ಯಾಚರಣೆ ನಡೆಸಲು ಅದರದ್ದೇ ರೀತಿಯಲ್ಲಿ ವಿಶೇಷ ತರಬೇತಿ ನೀಡಿ ಸಜ್ಜುಗೊಳಿಸಲಾಗಿರುತ್ತದೆ.
20 ನೇ ಶತಮಾನದ ಆರಂಭದಲ್ಲಿ ವಿಶೇಷ ಪಡೆಗಳು ಹೊರಹೊಮ್ಮಿದವು. ಅದರಲ್ಲೂ ಎರಡನೆಯ ಮಹಾಯುದ್ಧದ ಸಮಯದಲ್ಲಿನ ಗಮನಾರ್ಹ ಬೆಳವಣಿಗೆಯೊಂದಿಗೆ, ಹೋರಾಟದಲ್ಲಿ ತೊಡಗಿರುವ ಪ್ರತಿಯೊಂದು ಪ್ರಮುಖ ಸೈನ್ಯವು ಶತ್ರುಗಳ ನೆಲೆಯ ಹಿಂದೆ ವಿಶೇಷ ಕಾರ್ಯಾಚರಣೆಗಳಿಗೆ ಮೀಸಲಾಗಿ ರಚನೆಯಾದವು. ಯುದ್ಧಗಳು ನಡೆದ ಇತಿಹಾಸದುದ್ದಕ್ಕೂ ವಿಶೇಷ ಪಡೆಗಳು ಪ್ರಮುಖ ಪಾತ್ರವನ್ನು ವಹಿಸಿವೆ. “ಹಿಟ್ ಅಂಡ್ ರನ್” ಮತ್ತು ವಿಧ್ವಂಸಕತೆಯ ಮೂಲಕ ಶತ್ರು ಪಾಳೇಯ, ಭಯೋತ್ಪಾದಕ ಗುರಿಯನ್ನು ಅಡ್ಡಿಪಡಿಸುವ ಕಾರ್ಯಾಚರಣೆಯು, ಸಾಂಪ್ರದಾಯಿಕ ಯುದ್ಧಗಳಿಗಿಂತ ಹೆಚ್ಚಾಗಿತ್ತು.
ಯಾವುದೇ ಭಯೋತ್ಪಾದಕ ಬೆದರಿಕೆಗಳಿಗೆ ಪ್ರತಿಕ್ರಿಯಿಸಲು ಮತ್ತು ಕಾರ್ಯಾಚರಣೆಯನ್ನು ಪೂರ್ಣಗೊಳಿಸಲು ಅಗತ್ಯವಾದ ಕ್ರಮಗಳನ್ನು ತೆಗೆದುಕೊಳ್ಳಲು ವಿಶೇಷ ಪಡೆಗಳು ಪರಿಣತಿಯನ್ನು ಹೊಂದಿವೆ. ನಮ್ಮ ದೇಶದಲ್ಲಿ ಪ್ರಮುಖವಾಗಿರುವ ಟಾಪ್-7 ವಿಶೇಷ ಪಡೆಗಳೆಂದರೆ
01. ಮೆರೈನ್ ಕಮಾಂಡೋಸ್ (Marine Commandos) :
ಮಾರ್ಕೋಸ್ (MARCOS), ಭಾರತೀಯ ನೌಕಾಪಡೆಯು 1987 ರಲ್ಲಿ ನೇರ ಕ್ರಮಗಳು, ವಿಶೇಷ ವಿಚಕ್ಷಣೆ, ಉಭಯ ಸ್ಥಳಗಳಿಂದ ಯುದ್ಧ (ಜಲ, ವಾಯು, ಭೂ ಸ್ಥಳಗಳಿಂದ ಕಾರ್ಯಾಚರಣೆ) ಮತ್ತು ಭಯೋತ್ಪಾದನೆ ನಿಗ್ರಹಕ್ಕಾಗಿ ಬೆಳೆಸಿದ ವಿಶೇಷ ಪಡೆಗಳ ಘಟಕವಾಗಿದೆ.
ಮಾರ್ಕೋಸ್ ನ ಮಿಲಿಟರಿ ತರಬೇತಿಯು ಪ್ರಾಯಶಃ ಪ್ರಪಂಚದಲ್ಲಿ ಅತ್ಯಂತ ಕಠಿಣ ಎನ್ನಲಾಗುತ್ತೆ. ಇಲ್ಲಿ ಕಮಾಂಡೋಗಳನ್ನು ದೈಹಿಕ ಮತ್ತು ಮಾನಸಿಕ ದೃಢತೆಗಾಗಿ ಪರೀಕ್ಷಿಸಲಾಗುತ್ತದೆ. ಮಾರ್ಕೋಸ್ ಅನ್ನು “ದಾಡಿವಾಲಾ ಫೌಜ್” ಎಂದು ಕರೆಯಲಾಗುತ್ತದೆ. ಅಂದರೆ ನಾಗರಿಕ ಪ್ರದೇಶಗಳಲ್ಲಿ ಗಡ್ಡಧಾರಿ ವೇಷ ಹಾಕಿ ಕಾರ್ಯಾಚರಣೆ ನಡೆಸುವುದರಿಂದ ಭಯೋತ್ಪಾದಕರು “ಗಡ್ಡಧಾರಿ ಸೈನ್ಯ” ಎಂದು ಹೇಳುತ್ತಾರೆ.
2. ರಾಷ್ಟ್ರೀಯ ಭದ್ರತಾ ಸಿಬ್ಬಂದಿ (National Security Guard) :
ರಾಷ್ಟ್ರೀಯ ಭದ್ರತಾ ಸಿಬ್ಬಂದಿ ಭಾರತದ ಪ್ರಧಾನ ಭಯೋತ್ಪಾದನಾ ನಿಗ್ರಹ ಪಡೆ. ಎನ್ಎಸ್ ಜಿ ವಿಐಪಿಗಳಿಗೆ ಭದ್ರತೆಯನ್ನು ಒದಗಿಸುತ್ತದೆ. ವಿಧ್ವಂಸಕ ವಿರೋಧಿ ತಪಾಸಣೆಗಳನ್ನು ನಡೆಸುತ್ತದೆ ಮತ್ತು ದೇಶದ ಪ್ರಮುಖ ಸ್ಥಳಗಳಲ್ಲಿ ಭಯೋತ್ಪಾದಕ ಬೆದರಿಕೆಗಳನ್ನು ತಟಸ್ಥಗೊಳಿಸುವ ಜವಾಬ್ದಾರಿಯನ್ನು ಹೊಂದಿದೆ. ಈ ವಿಶೇಷ ಪಡೆಯ ಆಯ್ಕೆ ಪ್ರಕ್ರಿಯೆಯು ಸುಮಾರು ಶೇ.70-80 ರಷ್ಟು ಡ್ರಾಪ್ ಔಟ್ ದರವನ್ನು ಹೊಂದಿದೆ. ಎನ್ ಎಸ್ ಜಿ ಯ 7500 ಸಿಬ್ಬಂದಿಯನ್ನು ವಿಶೇಷ ಕ್ರಿಯಾ ಗುಂಪು (SAG) ಮತ್ತು ವಿಶೇಷ ರೇಂಜರ್ಸ್ ಗುಂಪು (SRG) ಎಂಬುದಾಗಿ ಸಮಾನವಾಗಿ ವಿಂಗಡಿಸಲಾಗಿದೆ.
3. ಪ್ಯಾರಾಚ್ಯೂಟ್ ರೆಜಿಮೆಂಟ್ ವಿಶೇಷ ಪಡೆ :
ಪ್ಯಾರಾ SF (ವಿಶೇಷ ಪಡೆಗಳು) ಅನ್ನು 1966 ರಲ್ಲಿ ಭಾರತೀಯ ಸೇನೆಯು ಹುಟ್ಟುಹಾಕಿತು. ಪ್ಯಾರಾ ಕಮಾಂಡೋಗಳು ಭಾರತೀಯ ಸೇನೆಯ ಉನ್ನತ ತರಬೇತಿ ಪಡೆದ ಪ್ಯಾರಾಚೂಟ್ ರೆಜಿಮೆಂಟ್‌ನ ಭಾಗವಾಗಿರುತ್ತಾರೆ ಮತ್ತು ಭಾರತದ ವಿಶೇಷ ಪಡೆಯ ಘಟಕಗಳಲ್ಲಿನ ದೊಡ್ಡ ಭಾಗವಾಗಿದೆ. ಪ್ಯಾರಾಚ್ಯೂಟ್ ರೆಜಿಮೆಂಟ್ ನ ಮುಖ್ಯ ಗುರಿಯು ಶತ್ರುಗಳ ರೇಖೆಗಳ ಹಿಂದೆ ಸೈನಿಕರನ್ನು ಹಿಂದಿನಿಂದ ಆಕ್ರಮಣ ಮಾಡಲು ಮತ್ತು ಅವರ ಮೊದಲ ಸಾಲಿನ ರಕ್ಷಣೆಯನ್ನು ನಾಶಮಾಡಲು ಶೀಘ್ರವಾಗಿ ನಿಯೋಜಿಸಲಾಗುತ್ತದೆ.
4. ಗರುಡಾ ಕಮಾಂಡೋ ಫೋರ್ಸ್ (Garuda Commando Force) :
ಗರುಡಾ ಕಮಾಂಡೋ ಫೋರ್ಸ್ ಭಾರತೀಯ ವಾಯುಪಡೆಯ ವಿಶೇಷ ಪಡೆಗಳ ಘಟಕವಾಗಿದ್ದು 2004 ರಲ್ಲಿ ಸ್ಥಾಪಿಸಲಾಯಿತು. ಗರುಡಾ ಕಮಾಂಡೋ ತರಬೇತಿಯು ಎಲ್ಲಾ ಭಾರತೀಯ ವಿಶೇಷ ಪಡೆಗಳಲ್ಲಿ ಅತಿ ಧೀರ್ಘಾವಧಿ ತರಬೇತಿ ನೀಡುವ ಪಡೆಯಾಗಿದೆ. ಗರುಡಾ ಕಮಾಂಡೋ ಆಗಿ ಸಂಪೂರ್ಣ ಕಾರ್ಯಾಚರಣೆ ಅರ್ಹತೆ ಪಡೆಯುವ ಮೊದಲು ಆ ಸೈನಿಕನು ಒಟ್ಟು 3 ವರ್ಷಗಳ ಅವಧಿಯನ್ನು ಪೂರ್ಣಗೊಳಿಸಬೇಕಿದೆ. ಗರುಡಾ ಕಮಾಂಡೋ ಫೋರ್ಸ್ ಪ್ರಸ್ತುತ ವಿಶೇಷ ಕಾರ್ಯಾಚರಣೆ ನಡೆಸುವ ಪಡೆಗಳಲ್ಲಿ ಅತ್ಯಂತ ಕಿರಿಯರನ್ನು ಹೊಂದಿದ ವಿಶೇಷ ಪಡೆಯಾಗಿದೆ
ನಿರ್ಣಾಯಕವಾದ ವಾಯುಪಡೆಯ ನೆಲೆಗಳನ್ನು ರಕ್ಷಿಸುವ ಕರ್ತವ್ಯವನ್ನು ಈ ಗರುಡಾ ಪಡೆಗೆ ವಹಿಸಲಾಗಿದೆ. ಇದಲ್ಲದೆ ವಿಪತ್ತುಗಳ ಸಮಯದಲ್ಲಿ ರಕ್ಷಣಾ ಕಾರ್ಯಾಚರಣೆಯನ್ನು ನಡೆಸುವುದು ಮತ್ತು ವಾಯು ಕಾರ್ಯಾಚರಣೆಗಳಿಗೆ ಬೆಂಬಲವಾಗಿ ಕಾರ್ಯ ನಿರ್ವಹಿಸುವ ಜವಾಬ್ದಾರಿಯನ್ನು ಹೊಂದಿದೆ.
5. ಘಾತಕ್ ಪಡೆ (Ghathak Force) :
ಘಾತಕ್ ಫೋರ್ಸ್ ಒಂದು ಪದಾತಿದಳದ ತುಕಡಿಯಾಗಿದ್ದು, ಕೊಲ್ಲಲು ಹೋಗುತ್ತದೆ ಮತ್ತು ಬೆಟಾಲಿಯನ್‌ನ ಮುಂದೆ ಮುನ್ನುಗ್ಗುತ್ತದೆ. ಘಾತಕ್ ಅದೆಷ್ಟು ಸಮರ್ಥ ಕಮಾಂಡೊಗಳನ್ನು ಒಳಗೊಂಡ ಪಡೆ ಎಂದರೆ, ಚೀನಾದ ಮಾರ್ಷಲ್ ಆರ್ಟ್ಸ್ ತರಬೇತಿ ಪಡೆದ ಸೈನಿಕರು ಈ ಕಮಾಂಡೊಗಳ ಮುಂದೆ ಮಂಕಾಗುತ್ತಾರೆ.
ಭಾರತೀಯ ಸೇನೆಯಲ್ಲಿನ ಈ ಪದಾತಿ ದಳವು ಒಂದು ತುಕಡಿಯನ್ನು ಹೊಂದಿದ್ದು, ಇದರಲ್ಲಿನ ಸೈನಿಕರು ದೈಹಿಕವಾಗಿ ಹೆಚ್ಚು ಸದೃಢವಾಗಿರುತ್ತಾರೆ. ಮಾರ್ಷಲ್ ಆರ್ಟ್ಸ್ ತರಬೇತಿ ಪಡೆದಿರುವ ಕಮಾಂಡೊಗಳು, ಮಲ್ಲ ಯುದ್ಧದಲ್ಲೂ ಪ್ರವೀಣರು. 35 ಕೆ.ಜಿ ಭಾರ ಹೊತ್ತು 40 ಕಿ.ಮೀ ದೂರದವರೆಗೆ ಓಡುವ ಸಾಮರ್ಥ್ಯ ಈ ಕಮಾಂಡೊಗಳಿಗಿರುತ್ತದೆ. ವಿಶೇಷ ಕಾರ್ಯಾಚರಣೆ, ಯುದ್ಧದ ವೇಳೆ ಭಾರೀ ತೂಕದ ಶಸ್ತ್ರಾಸ್ತ್ರಗಳನ್ನು ಹೊತ್ತು ಮುನ್ನೆಲೆಯಲ್ಲಿ ನಿಂತು ಹೋರಾಡುವುದು ಇದರ ಕೆಲಸ.
ಇಂತಹ ಸೈನಿಕರು ಮಾತ್ರ ಘಾತಕ್ ಪ್ಲಟೂನ್‌ಗೆ ಬರುತ್ತಾರೆ. ಅಲ್ಲದೆ, ಘಾತಕ್ ಸೈನಿಕರು ಉತ್ತಮ ತರಬೇತಿ ಪಡೆದಿರುತ್ತಾರೆ. ಶಸ್ತ್ರಸಜ್ಜಿತರಾಗಿರುತ್ತಾರೆ ಮತ್ತು ಭಯೋತ್ಪಾದಕ ದಾಳಿಗಳು, ಒತ್ತೆಯಾಳು ಸನ್ನಿವೇಶಗಳು, ಭಯೋತ್ಪಾದನೆ ನಿಗ್ರಹ ಮತ್ತು ಬಂಡಾಯ ಕಾರ್ಯಾಚರಣೆಗಳಂತಹ ಸಂದರ್ಭಗಳನ್ನು ನಿಭಾಯಿಸಲು ನಿಪುಣತೆ ಹೊಂದಿದವರಾಗಿದ್ದಾರೆ.
6. ಕೋಬ್ರಾ ಪಡೆ (COBRA) :
ಭಾರತದಲ್ಲಿ ನಕ್ಸಲಿಸಂ ಅನ್ನು ಎದುರಿಸಲು ಅಭಿವೃದ್ಧಿಪಡಿಸಿದ ಕೇಂದ್ರೀಯ ಮೀಸಲಯ ಪೊಲೀಸ್ ಪಡೆ (CRPF) ನ ವಿಶೇಷ ಘಟಕವಾಗಿ ಕೋಬ್ರಾ (ಕಮಾಂಡೋ ಬೆಟಾಲಿಯನ್ ಫಾರ್ ರೆಸಲ್ಯೂಟ್ ಆಕ್ಷನ್) ಪಡೆಯನ್ನು ರಚನೆ ಮಾಡಲಾಯಿತು. ಗೆರಿಲ್ಲಾ ಯುದ್ಧ ಮಾದರಿಯಲ್ಲಿ ಪ್ರತ್ಯೇಕವಾಗಿ ತರಬೇತಿ ಪಡೆದ ಕೆಲವು ಭಾರತೀಯ ವಿಶೇಷ ಪಡೆಗಳಲ್ಲಿ ಇದು ಒಂದಾಗಿದೆ. ಕೋಬ್ರಾ ಪಡೆಯು ವಿಶೇಷ ಕಾರ್ಯಾಚರಣೆ ನಡೆಸಿ, ಭಾರತದಿಂದ ಹಲವಾರು ನಕ್ಸಲೈಟ್ ಗುಂಪುಗಳನ್ನು ಯಶಸ್ವಿಯಾಗಿ ಹೊರಹಾಕಿದೆ.
7. ವಿಶೇಷ ಗಡಿ ಪಡೆ (Special Frontier Force -SFF) :
ವಿಶೇಷ ಗಡಿನಾಡು ಪಡೆಯನ್ನು ಭಾರತೀಯ ಸೇನೆಯು 1962 ರಲ್ಲಿ ವಿಶೇಷ ಪಡೆಯಾಗಿ ಬೆಳೆಸಿತು. ಚೀನಾದೊಂದಿಗಿನ ಮತ್ತೊಂದು ಯುದ್ಧದ ಸಂದರ್ಭದಲ್ಲಿ ಚೀನಾದ ಗಡಿರೇಖೆಗಳ ಹಿಂದೆ ರಹಸ್ಯ ಕಾರ್ಯಾಚರಣೆ ನಡೆಸುವುದು ಇದರ ಉದ್ದೇಶವಾಗಿತ್ತು. ಇದಲ್ಲದೆ, ಎಸ್ ಎಫ್ ಎಫ್ ದೇಶದ ಬಾಹ್ಯ ಗುಪ್ತಚರ ಸಂಸ್ಥೆ ರಾ (RAW -ಸಂಶೋಧನೆ ಮತ್ತು ವಿಶ್ಲೇಷಣೆ ವಿಭಾಗ) ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಮೇಲಾಗಿ, ಇದು ಸಂಸದೀಯ ಕಾರ್ಯದರ್ಶಿಯಡಿಯಲ್ಲಿನ ರಕ್ಷಣಾ ಮಹಾ ನಿರ್ದೇಶಕರ ಮೂಲಕ ನೇರವಾಗಿ ಪ್ರಧಾನ ಮಂತ್ರಿಗೆ ವರದಿ ಮಾಡುತ್ತದೆ.