ನವದೆಹಲಿ, ನ.23 www.bengaluruwire.com : ದಕ್ಷಿಣ ಧ್ರುವದ ಅಂಟಾರ್ಟಿಕಾ ಮೇಲಿನ ಓಝೋನ್ (Ozone) ರಂಧ್ರವು ಕಳೆದ ಮೂರು ವರ್ಷಗಳಲ್ಲಿ ಅತಿ ದೊಡ್ಡದಾಗಿದೆ ಎಂದು ಅಧ್ಯಯನ ವರದಿಯನ್ನು ಉಲ್ಲೇಖಿಸಿ ವೈಜ್ಞಾನಿಕ ನಿಯತಕಾಲಿಕ “ನೇಚರ್ ಕಮ್ಯುನಿಕೇಷನ್ಸ್” ಪ್ರಕಟಿಸಿದೆ.
ಭೂಮಿಯ ಮೇಲಿನ ರಕ್ಷಣಾತ್ಮಕ ಹೊದಿಕೆ ಕುರಿತಂತೆ ಇತ್ತೀಚಿನ ಅಧ್ಯಯನದಲ್ಲಿ ಸಂಶೋಧಕರು ಕಳೆದ ನಾಲ್ಕು ವರ್ಷಗಳಲ್ಲಿ ಓಝೋನ್ ರಂಧ್ರವು ಗಮನಾರ್ಹವಾಗಿ ಬೃಹತ್ ಪ್ರಮಾಣದಲ್ಲಿರುತ್ತದೆ ಮತ್ತು ನಿರಂತರವಾಗಿದೆ ಎಂದು ಹೇಳಿದ್ದಾರೆ.
ಈ ಬೃಹತ್ ರಂಧ್ರ ಏರ್ಪಡಲು ಕೇವಲ ಸಾಮಾನ್ಯ ಕ್ಲೋರೊಫ್ಲೋರೋಕಾರ್ಬನ್‌ಗಳು (CFC ಗಳು) ಮಾತ್ರವಲ್ಲ, ಅಂಟಾರ್ಟಿಕಾ ಮೇಲಿನ ಧ್ರುವೀಯ ಸುಳಿಯೊಳಗೆ ಬರುವ ಗಾಳಿಯಲ್ಲಿನ ಬದಲಾವಣೆಗಳು ಕೂಡ ಈ ರೀತಿ ಬೃಹತ್ ರಂಧ್ರ ಏರ್ಪಡಲು ಕಾರಣವಿರಬಹುದು ಎಂದು ತಿಳಿಸಲಾಗಿದೆ.
ಕಾರ್ಬನ್, ಹೈಡ್ರೋಜನ್, ಕ್ಲೋರಿನ್ ಮತ್ತು ಫ್ಲೋರಿನ್ ಅನ್ನು ಒಳಗೊಂಡಿರುವ ಸಿಎಫ್ ಸಿ ಹಸಿರುಮನೆ ಅನಿಲಗಳಾಗಿದೆ. ಇವು ಓಝೋನ್ ಪದರವನ್ನು ಸವಕಳಿ ಮಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಭೂಮಿಯ ವಾತಾವರಣದಲ್ಲಿರುವ ಓಝೋನ್ ಪದರವು ಚರ್ಮದ ಕ್ಯಾನ್ಸರ್ ಸೇರಿದಂತೆ ಹಾನಿಕಾರಕ ನೇರಳಾತೀತ (UV) ವಿಕಿರಣದಿಂದ ಜನರನ್ನು ರಕ್ಷಿಸುವ ತಡೆಗೋಡೆಯಾಗಿ ಕಾರ್ಯನಿರ್ವಹಿಸುತ್ತದೆ. ಚರ್ಮದ ಕಾಯಿಲೆಗಳನ್ನು ತಡೆಯುತ್ತದೆ.
ನ್ಯೂಜಿಲೆಂಡ್‌ನ ಒಟಾಗೋ ವಿಶ್ವವಿದ್ಯಾನಿಲಯದಲ್ಲಿ ಡಾಕ್ಟರೇಟ್ ಸಂಶೋಧಕ ಹನ್ನಾ ಕೆಸೆನಿಕ್ ಅಧ್ಯಯನದ ಪ್ರಮುಖ ಸಂಶೋಧಕರಾಗಿದ್ದು ಅವರ ಪ್ರಕಾರ, ತಂಡವು 19 ವರ್ಷಗಳ ಹಿಂದೆ ಅಂಟಾರ್ಟಿಕಾದಲ್ಲಿನ ಸ್ಥಿತಿಗೆ ಹೋಲಿಸಿದರೆ ರಂಧ್ರದ ಮಧ್ಯಭಾಗದಲ್ಲಿ ಓಝೋನ್ ಮಟ್ಟ ಗಮನಾರ್ಹವಾಗಿ ಕಡಿಮೆಯಾಗಿದೆ ಎಂಬುದನ್ನು ಗಮನಿಸಿದ್ದಾರೆ.
“ಇದರರ್ಥ ರಂಧ್ರವು ವಿಸ್ತೀರ್ಣದಲ್ಲಿ ದೊಡ್ಡದಾಗಿದೆ ಆದರೆ ವಸಂತಕಾಲದಾದ್ಯಂತ ಆಳವಾಗಿರುತ್ತದೆ” ಎಂದು ಕೆಸೆನಿಕ್ ಹೇಳಿದ್ದಾರೆ.
2004 ರಿಂದ 2022 ರವರೆಗಿನ ಅವಧಿಯಲ್ಲಿ ಅಂಟಾರ್ಕ್ಟಿಕ್ ಓಝೋನ್ ರಂಧ್ರದೊಳಗೆ ವಿವಿಧ ಎತ್ತರಗಳು ಮತ್ತು ಅಕ್ಷಾಂಶಗಳಲ್ಲಿ ಮಾಸಿಕ ಮತ್ತು ದೈನಂದಿನ ಓಝೋನ್ ಮಟ್ಟಗಳಲ್ಲಿನ ವ್ಯತ್ಯಾಸಗಳನ್ನು ಗುಂಪು ಪರಿಶೀಲಿಸಿದೆ.
“ನಮ್ಮ ವಿಶ್ಲೇಷಣೆಯು 2022 ರ ಡೇಟಾದೊಂದಿಗೆ ಕೊನೆಗೊಂಡಿದೆ. ಆದರೆ ಇಂದಿನಂತೆ 2023 ರ ಓಝೋನ್ ರಂಧ್ರವು ಈಗಾಗಲೇ ಮೂರು ವರ್ಷಗಳ ಹಿಂದಿನ ಗಾತ್ರವನ್ನು ಮೀರಿಸಿದೆ. ಕಳೆದ ತಿಂಗಳ ಕೊನೆಯಲ್ಲಿ ಇದು 26 ಮಿಲಿಯನ್ ಚದರ ಕಿಲೋಮೀಟರ್‌ಗಳಷ್ಟು, ಅಂದರೆ ಅಂಟಾರ್ಟಿಕಾದ ಸುಮಾರು ಎರಡು ಪಟ್ಟು ಹೆಚ್ಚು ಪ್ರದೇಶವನ್ನು ಹೊಂದಿದೆ” ಎಂದು ಕೆಸೆನಿಕ್ ತಮ್ಮ ಅಧ್ಯಯನ ವರದಿಯಲ್ಲಿ ತಿಳಿಸಿದ್ದಾರೆ.