ಬೆಂಗಳೂರು, ನ.22 www.bengaluruwire.com : ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ನಡೆಸಿದ ಸಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ವರದಿಯ ಮೂಲಪ್ರತಿಯೇ ಕಾಣೆಯಾಗಿದೆ ಎಂಬ ಆಘಾತಕಾರಿ ಅಂಶವೊಂದು ಶಾಸಕ ಬಸವನಗೌಡ ಪಾಟೀಲ ಯತ್ನಾಳ್ ಅವರು ಪ್ರಸ್ತುತ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಲಪ್ರಕಾಶ್ ಹೆಗ್ಡೆಯವರಿಗೆ ನ.22ರಂದು ಬರೆದ ಪತ್ರದಿಂದ ಸ್ಪೋಟಕ ಮಾಹಿತಿ ಬಹಿರಂಗವಾಗಿದೆ.
ಮಂಗಳವಾರವಷ್ಟೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ‘ನನ್ನ ಸರ್ಕಾರದ ಅವಧಿಯಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ವರದಿ ಸ್ವೀಕರಿಸುವ ನನ್ನ ನಿರ್ಧಾರ ಅಚಲ’ ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಜಾತಿಗಣತಿ ವರದಿ ಬಗೆಗಿನ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದರು. ಇದರ ಬೆನ್ನ ಹಿಂದೆಯೇ ಶಾಸಕ ಬಸವನ ಗೌಡ ಪಾಟೀಲ್ ಯತ್ನಾಳ್ ಅವರು ಬರೆದ ಪತ್ರವು ರಾಜ್ಯ ರಾಜಕೀಯದಲ್ಲಿ ದೊಡ್ಡ ಮಟ್ಟದ ಚರ್ಚೆ, ವಿವಾದಗಳಿಗೆ ಕಾರಣವಾಗುವ ಸಾಧ್ಯತೆಯನ್ನು ಹೊರಹಾಕಿದೆ.
ಆಯೋಗದ ಅಧ್ಯಕ್ಷಕರಿಗೆ ಬರೆದ ಪತ್ರದಲ್ಲಿ, “2015ರಲ್ಲಿ ಆಯೋಗದ ವತಿಯಿಂದ ಕೈಗೊಳ್ಳಲಾದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಮುಖ್ಯ ವರದಿಯ ಮೂಲಪ್ರತಿಯು ಕಳೆದು ಹೋಗಿರುವುದನ್ನು ತಾವು ಸರ್ಕಾರದ ಪ್ರಧಾನ ಕಾರ್ಯದರ್ಶಿಯವರಿಗೆ 2023ರ ನವೆಂಬರ್ 10ರಂದು ಬರೆದ ಪತ್ರದಲ್ಲಿ ತಿಳಿಸಿರುತ್ತೀರಿ. ಲಭ್ಯವಿರುವ ಪತ್ರದಲ್ಲಿ ಸದಸ್ಯ ಕಾರ್ಯದರ್ಶಿಯವರ ಸಹಿ ಇಲ್ಲದೇ ಇರುವುದು ಅಧಿಕಾರಿಗಳ ನಿರ್ಲಕ್ಷ್ಯವನ್ನು ತೋರುತ್ತದೆ” ಎಂದು ತಮ್ಮ ಪತ್ರದಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
“ಕರ್ನಾಟಕ ಸರ್ಕಾರ ಸುಮಾರು 180 ಕೋಟಿ ರೂ. ಖರ್ಚು ಮಾಡಿ ನಡೆಸಿದ ಸಮೀಕ್ಷೆಯ ವರದಿಯೇ ಕಳೆದು ಹೋಗಿರುವುದು ಪೂರ್ವ ನಿಯೋಜಿತ ಷಡ್ಯಂತ್ರವೆಂದು ಮೇಲ್ನೋಟಕ್ಕೆ ಕಾಣಿಸುತ್ತದೆ. ಮೂಲಪ್ರತಿಯು ಕಳೆದು ಹೋಗಿದ್ದರು ತಾವು ಅಥವಾ ತಮ್ಮ ಆಯೋಗದ ಅಧಿಕಾರಿಗಳು ಈವರೆಗೂ ಯಾವುದೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸದೆ ಇರುವುದು ಆಶ್ಚರ್ಯಕರ ಸಂಗತಿ. ಈ ಮೂಲಪ್ರತಿ ಕಳೆದು ಹೋಗಿರುವುದರ ಕುರಿತು ನಿಮ್ಮ ಆಯೋಗ ಹಿಂದಿನ ಅಧ್ಯಕ್ಷರ ಆಪ್ತ ಕಾರ್ಯದರ್ಶಿಯವರಿಗೆ ನೋಟಿಸ್ ನೀಡಿ ನಂತರ ತನಿಖೆಯನ್ನೇ ಮುಂದುವರೆಸಿರಲಿಲ್ಲ. ಹಿಂದಿನ ಅಧ್ಯಕ್ಷರನ್ನು ಪ್ರಶ್ನೆ ಮಾಡುವ ಕೆಲಸವೂ ಮಾಡಲಿಲ್ಲ. ರಾಜಕೀಯ ಒತ್ತಡಗಳಿಗೆ ಮಣಿದು ಸದಸ್ಯ ಕಾರ್ಯದರ್ಶಿಯವರ ಸಹಿ ಇಲ್ಲದೆ ಇರುವ ವರದಿಯನ್ನು ಸರ್ಕಾರಕ್ಕೆ ಒಪ್ಪಿಸಲು ಮುಂದಾಗಿರುವುದು ಈ ವರದಿಯ ನೈಜತೆಯನ್ನೇ ಪ್ರಶ್ನೆ ಮಾಡುವಂತದ್ದು” ಎಂದು ಶಾಸಕ ಬಸವನಗೌಡ ಪಾಟೀಲ್ ಯಾತ್ನಾಳ್ ಆಯೋಗ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆಯವರಿಗೆ ಬರೆದ ಪತ್ರದಲ್ಲಿ ಗಂಭೀರವಾದ ಅಂಶಗಳನ್ನು ತೆರೆದಿಟ್ಟಿದ್ದಾರೆ.
“ಸದಸ್ಯ ಕಾರ್ಯದರ್ಶಿಯವರ ಸಹಿ ಇಲ್ಲದ, ಮೂಲ ಪ್ರತಿಯಿಲ್ಲದ ಈ ಸಮೀಕ್ಷೆಯ ವರದಿ ನೈಜವೆಂದು ಒಪ್ಪಲು ಅಸಾಧ್ಯ. ಮೂಲಪ್ರತಿಯು ಕಳೆದು ಹೋಗಿರುವ ಕುರಿತು ಸರ್ಕಾರದ ಜೊತೆ ತಾವು ನಡೆಸಿರುವ ಪತ್ರ ವ್ಯವಹಾರದ ಸಂಪೂರ್ಣ ಮಾಹಿತಿ ನೀಡಬೇಕಾಗಿ ಕೋರುತ್ತಾ, ಈ ನಿರ್ಲಕ್ಷ್ಯಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕಾಗಿ ಕೋರುತ್ತೇನೆ” ಎಂದು ತಿಳಿಸಿದ್ದಾರೆ.
ಎಚ್.ಕಾಂತರಾಜ ನೇತೃತ್ವದ ಹಿಂದುಳಿದ ವರ್ಗಗಳ ಆಯೋಗ ನಡೆಸಿದ ಸಮೀಕ್ಷೆ ಅವೈಜ್ಞಾನಿಕವಾಗಿದ್ದು ಅದನ್ನು ಸ್ವೀಕರಿಸಬಾರದು ಎಂದು ಲಿಂಗಾಯಿತ ಮತ್ತು ಒಕ್ಕಲಿಗ ಸಮುದಾಯಗಳನ್ನು ಪ್ರತಿನಿಧಿಸುವ ಸಂಘಟನೆಗಳು ಆಗ್ರಹಪಡಿಸುತ್ತಿದೆ. ಇನ್ನೊಂದೆಡೆ ಈ ಜಾತಿಗಣತಿ ವರದಿಯನ್ನು ಅನುಷ್ಠಾನಗೊಳಿಸುವಂತೆ ಇನ್ನಿತರ ಸಮುದಾಯಗಳು ರಾಜ್ಯ ಸರ್ಕಾರವನ್ನು ಒತ್ತಾಯಿಸುತ್ತಿವೆ. ಈ ಮಧ್ಯೆ ಮಂಗಳವಾರ ಜಾತಿಗಣತಿ ವರಿದಯನ್ನು ಸ್ವೀಕರಿಸುವ ನಿರ್ಧಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಪುನರುಚ್ಚರಿಸಿದ್ದಾರೆ. ಆದರೆ ಈ ಮಧ್ಯೆ ಹಿಂದಿನ ಸರ್ಕಾರ 2015ರಲ್ಲಿ ನಡೆಸಿದ ಸಾಮಾಜಿಕ ಮತ್ತು ಶೈಕ್ಷಣಿಕ ವರದಿಯ ಮೂಲಪ್ರತಿಯೇ ಕಳೆದು ಹೋಗಿರುವುದನ್ನು ಬಿಜೆಪಿಯ ಹಿರಿಯ ಶಾಸಕ ಬಸನಗೌಡ ಪಾಟೀಲ್ ತಮ್ಮ ಪತ್ರದಲ್ಲಿ ತಿಳಿಸಿರುವುದು ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ವಾಕ್ಸಮರಕ್ಕೆ ಕಾರಣವಾಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.
ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರು ಬರೆದ ಪತ್ರದ ಕುರಿತಂತೆ ಅವರ ಪ್ರತಿಕ್ರಿಯೆ ಪಡೆಯಲು ಬೆಂಗಳೂರು ವೈರ್ ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ.