ಬೆಂಗಳೂರು, ನ.19 www.bengaluruwire.com : “ದೇಶದಲ್ಲಿ ಮೊದಲ ಪ್ರಜಾತಂತ್ರ ವ್ಯವಸ್ಥೆ 1950 ಜನವರಿ 26ರಂದು ಬರುವ ಮುಂಚೆಯೇ 1881ರಲ್ಲೇ ಜಾರಿಯಾಗಿದ್ದು ಮೈಸೂರು ಸಂಸ್ಥಾನದಲ್ಲಿ. ಹೌದು ಇದು ಸತ್ಯ. ಇಡೀ ದೇಶಕ್ಕೆ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅನುಷ್ಠಾನಗೊಳಿಸಿದ ಕೀರ್ತಿ ಕನ್ನಡ ನಾಡಿಗೆ ಸೇರುತ್ತದೆ” ಎಂದು “ಮೈಸೂರಿನ ಕಥೆಗಳು” ಖ್ಯಾತಿಯ ಇತಿಹಾಸ ಅಧ್ಯಯನಕಾರ ಧರ್ಮೇಂದ್ರ ಕುಮಾರ್ ಅರೇನಹಳ್ಳಿ ತಿಳಿಸಿದ್ದಾರೆ.
ಉಲ್ಲಾಳ ವಾರ್ಡಿನ ಸರ್.ಎಂ.ವಿಶ್ವೇಶ್ವರಯ್ಯ 5ನೇ ಬಡಾವಣೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಭಾನುವಾರ ಆಯೋಜಿಸಲಾಗಿದ್ದ 68ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, “ಇಡೀ ರಾಷ್ಟ್ರದಲ್ಲಿ ಆಯಾ ರಾಜ್ಯಗಳ ಜನತೆ ತಮ್ಮ ನಾಡಿನ ರಾಜ್ಯೋತ್ಸವವನ್ನು ಕನ್ನಡ ನಾಡಿನಲ್ಲಿರುವಂತೆ ವಿಜೃಂಭಣೆಯಿಂದ ಮೂರ್ನಾಲ್ಕು ತಿಂಗಳುಗಳ ಕಾಲ ಆಚರಿಸುವುದಿಲ್ಲ. ಆದರೆ ಆ ಕೆಲಸ ನಮ್ಮ ನಾಡಿನಲ್ಲಾಗುತ್ತದೆ. ಇಂತಹ ಕನ್ನಡಾಭಿಮಾನ ನಮ್ಮ ಜನರಲ್ಲಿ ಕಂಡುಬರುವುದಕ್ಕೆ ನಮಗೆಲ್ಲರಿಗೆ ಹೆಮ್ಮೆಯಿದೆ” ಎಂದರು.
“ಭಾರತಕ್ಕೆ 1947ರಲ್ಲಿ ಸ್ವಾತಂತ್ರ್ಯ ಬಂತು. ಇದು ಎಲ್ಲರಿಗೂ ಗೊತ್ತಿರುವ ವಿಚಾರ. ಬಳಿಕ 1950ರ ಜನವರಿ 26ಕ್ಕೆ ಗಣರಾಜ್ಯೋತ್ಸವವನ್ನು ಆಚರಿಸಲಾಗುತ್ತದೆ. ಆದರೆ ಅದಕ್ಕೆ ಪೂರ್ವದಲ್ಲೇ 1881 ಇಸವಿಯಲ್ಲಿ ಮೈಸೂರಿನ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ 165 ಸ್ಥಾನಗಳ ಕೌನ್ಸಿಲ್ ಚುನಾವಣೆಯನ್ನು ಆ ಕಾಲಕ್ಕೆ ನಡೆಸಿ ನಮ್ಮ ರಾಷ್ಟ್ರಕ್ಕೆ ಪ್ರಜಾತಂತ್ರ ವ್ಯವಸ್ಥೆಯ ಪರಿಚಯ ಮಾಡಿಕೊಟ್ಟಿದ್ದರು. ಅಂದರೆ ಕನ್ನಡ ನಾಡು 1950 ಇಸವಿಯ ಪೂರ್ವದಲ್ಲೇ ಪ್ರಜಾಪ್ರಭುತ್ವ ಆಡಳಿತದ ಸವಿಯನ್ನು ಕಂಡಿತ್ತು” ಎಂದು ಧರ್ಮೇಂದ್ರ ಕುಮಾರ್, ಆ ಕಾಲದ ಮೈಸೂರಿನ ಆಡಳಿತದ ವೈಭವವನ್ನು ಮೆಲುಕು ಹಾಕಿದರು. ಇವರ ಪ್ರತಿಯೊಂದು ಮಾತಿಗೂ ನೆರೆದಿದ್ದ ಸರ್.ಎಂ.ವಿ.ಬಡಾವಣೆಯ ನಿವಾಸಿಗಳು ತಮ್ಮ ಚಪ್ಪಾಳೆಗಳ ಮೂಲಕ ಹರ್ಷ ಮತ್ತು ಅಭಿಮಾನ ವ್ಯಕ್ತಪಡಿಸಿದರು.
ಬೆಂಗಳೂರಿನಲ್ಲಿ ದೇಶದ ವಿವಿಧ ರಾಜ್ಯಗಳಿಂದ ಪ್ರತಿನಿತ್ಯ 13ಕ್ಕೂ ಹೆಚ್ಚು ರೈಲುಗಳಲ್ಲಿ ಜನರು ವಲಸೆ ಬರುವುದಕ್ಕೆ ಹಿಂದಿನ ಐತಿಹಾಸಿಕ ಕಾರಣಗಳನ್ನು ವಿವರಿಸುತ್ತಾ, 1940ನೇ ಇಸವಿಯಲ್ಲಿ ಬ್ರಿಟೀಷರು ಭಾರತಕ್ಕೆ ಸ್ವಾತಂತ್ರ್ಯ ನೀಡುವ ಮನಸ್ಥಿತಿಯಲ್ಲಿದ್ದರು. ಆದರೆ ಆಗ ದೇಶದಲ್ಲಿ 500ಕ್ಕೂ ಹೆಚ್ಚು ರಾಜರ ಸಂಸ್ಥಾನಗಳಿದ್ದವು. ಯಾವ ಸಂಸ್ಥಾನಕ್ಕೆ ಆಳ್ವಿಕೆಯನ್ನು ಒಪ್ಪಿಸಿ ಸ್ವಾತಂತ್ರ್ಯ ನೀಡುವುದು ಎಂಬ ಜಿಜ್ಞಾಸೆಯಲ್ಲಿ ಬ್ರಿಟೀಷರು ಮುಳುಗಿದ್ದರು. ಆಗ ಎಲ್ಲಾ ಸಂಸ್ಥಾನಗಳ ಮಹಾರಾಜರು ತಮ್ಮ ತಮ್ಮ ಸಂಸ್ಥಾನಗಳನ್ನು ಸರ್ಕಾರಕ್ಕೆ ಒಪ್ಪಿಸಿ, ಬಳಿಕ ಬ್ರಿಟೀಷರಿಂದ ಸ್ವಾತಂತ್ರ್ಯವನ್ನು ಪಡೆಯುವ ಒಪ್ಪಿಗೆ ಪತ್ರಕ್ಕೆ ಸಹಿ ಹಾಕಬೇಕಿತ್ತು.
ಆದರೆ ಬ್ರಿಟೀಷರ ಲಂಡನ್ ನಲ್ಲಿ ಗಾಲ್ಫ್ ಆಟ ಹಾಗೂ ವೈನ್ ಮದ್ಯ, ಐಷಾರಾಮಿ ಜೀವನಕ್ಕೆ ಮಾರು ಹೋಗಿದ್ದ ಸಂಸ್ಥಾನದ ರಾಜರು, ಸರ್ಕಾರಕ್ಕೆ ತಮ್ಮ ಸಕಲ ಆಸ್ತಿ, ಅರಮನೆಯನ್ನು ನೀಡಿದರೆ ತಮ್ಮ ಅಧಿಕಾರ, ಅಂತಸ್ತು ಕಡಿಮೆಯಾಗುತ್ತೆಂಬ ಭೀತಿಯಲ್ಲಿ ಈ ಒಪ್ಪಿಗೆ ಪತ್ರಕ್ಕೆ ಸಹಿ ಹಾಕಿರಲಿಲ್ಲ. ಆದರೆ ಮೈಸೂರಿನ ಸಂಸ್ಥಾನದ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ದೇಶದಲ್ಲೇ ಮೊದಲಿಗೆ ಈ ಒಪ್ಪಿಗೆ ಪತ್ರಕ್ಕೆ ಸಹಿ ಹಾಕಿ ತಮ್ಮ ಸಂಸ್ಥಾನವನ್ನು ದೇಶದ ಸ್ವಾಯಕ್ತ ಸರ್ಕಾರಕ್ಕೆ ಹಸ್ತಾಂತರಿಸಲು ಒಪ್ಪಿಗೆ ಪತ್ರಕ್ಕೆ ಸಹಿ ಹಾಕಿ ಎಲ್ಲಾ ರಾಜರುಗಳಿಗೆ ಮಾದರಿಯಾದರು.
ಸಾಲದೆಂಬಂತೆ ದೇಶಕ್ಕೆ ಸ್ವಾತಂತ್ರ್ಯ ಬಂದ ಬಳಿಕ ಆಡಳಿತ ನಡೆಸಲು ಮೂಲ ಸೌಕರ್ಯದ ಕೊರತೆಯಾಗದಂತೆ ತಮ್ಮಲ್ಲಿದ್ದ ಬೆಂಗಳೂರು ಮತ್ತು ಮೈಸೂರಿನಲ್ಲಿದ್ದ 55 ಅರಮನೆಗಳನ್ನು ಈ ಕಾರ್ಯಕ್ಕಾಗಿ ದಾನ ಮಾಡಿದರು. ಹೀಗಾಗಿ ಬಿಎಚ್ ಇಎಲ್, ಎಚ್ ಎಎಲ್, ಡಿಆರ್ ಡಿಒ ಸೇರಿದಂತೆ ಕೇಂದ್ರ ಸರ್ಕಾರದ ಸಂಸ್ಥೆಗಳು ಬೆಂಗಳೂರಿನಲ್ಲಿ ನೆಲೆಯೂರಲು ಸಾಧ್ಯವಾಯಿತು. ಇದರಿಂದ ದೇಶದ ವಿವಿಧ ರಾಜ್ಯಗಳಿಂದ ಜನರು ಕೆಲಸಕ್ಕಾಗಿ ಬೆಂಗಳೂರಿಗೆ ವಲಸೆ ಬರುವುದು ಶುರುವಾಯಿತು. ಅದು ಈಗಲೂ ಮುಂದುವರೆದಿದೆ ಎಂದು ಮೈಸೂರ ಅರಸರ ಕಾಲದ ತ್ಯಾಗ, ಕನ್ನಡಿಗರ ಔದಾರ್ಯತೆಗಳನ್ನು ಚುಟುಕಾಗಿ ವಿವರಿಸಿದರು.
ಬಡಾವಣೆಯಲ್ಲಿ ಕರ್ನಾಟಕ ರಾಜ್ಯೋತ್ಸವ ಆಚರಣೆ ಸಂಭ್ರಮ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಾ, ಕಾರ್ಯಕ್ರಮದಲ್ಲಿ ಭಾಗವಹಿಸುವ ನಿವಾಸಿಗಳ ಸಂಖ್ಯೆ ಹೆಚ್ಚಾಗುತ್ತಿರುವುದಕ್ಕೆ ಸಂತಸ ವ್ಯಕ್ತೊಡಿಸಿದರು. ಧರ್ಮೇಂದ್ರ ಕುಮಾರ್ ಅವರ ಭಾಷಣದ ನಂತರ ಬಡಾವಣೆಯ ನಾಗರೀಕರು, ಮಹಿಳೆಯರು, ಮಕ್ಕಳಿಂದ ಸಾಂಸ್ಕೃತಿಕ ಚಟುವಟಿಕೆಗಳು ನಡೆಯಿತು.
ಕಾರ್ಯಕ್ರಮದಲ್ಲಿ ಸರ್.ಎಂ.ವಿಶ್ವೇಶ್ವರಯ್ಯ 5ನೇ ಬಡಾವಣೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ವಿ.ಎಂ.ವಿಶ್ವನಾಥ್, ಗೌರವಾಧ್ಯಕ್ಷರಾದ ವೆಂಕಟರಮಣ ಪಡ್ಪು, ಕಾರ್ಯದರ್ಶಿ ಎನ್.ಪಿ.ವೆಂಕಟೇಶ್, ಖಜಾಂಚಿ ವಿ.ಸುರೇಶ್ ಕುಮಾರ್, ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ಬಡಾವಣೆಯ ನಾಗರೀಕರು ಪಾಲ್ಗೊಂಡಿದ್ದರು.