ಬೆಂಗಳೂರು, ನ.17 www.bengaluruwire.com : ರಾಜಧಾನಿ ಬೆಂಗಳೂರಿನಲ್ಲಿ ‘ಎ’ ಖಾತಾ ಮತ್ತು ‘ಬಿ’ ಖಾತಾ ಅಕ್ರಮ ತಪ್ಪಿಸಲು ಹಾಗೂ ಸ್ವತ್ತಿನ ದಾಖಲೆಗಳನ್ನು ತ್ವರಿತವಾಗಿ ನಾಗರೀಕರಿಗೆ ನೀಡಲು ಅನುಕೂಲವಾಗುವಂತೆ ಬಿಬಿಎಂಪಿಯಲ್ಲಿ ಆಸ್ತಿ ದಾಖಲೆಗಳನ್ನು ಡಿಜಿಟಲೀಕರಣಗೊಳಿಸಿ ಆನ್ ಲೈನ್ ವ್ಯವಸ್ಥೆಗೆ ತರುವ ಕಾರ್ಯ ಆರಂಭವಾಗಿದ್ದು ಮುಂದಿನ ವರ್ಷದ ಫೆಬ್ರವರಿ 2024ರ ಒಳಗೆ ಪೂರ್ಣವಾಗಲಿದೆ.
ಈ ನಿಟ್ಟಿನಲ್ಲಿ ನ.10 ರಿಂದ ಡಿಜಿಟಲ್ ದಾಖಲೆ ಸ್ಕ್ಯಾನಿಂಗ್ ಮಾಡುವ ಕಾರ್ಯ ಆರಂಭವಾಗಿದೆ. ಹಂತ ಹಂತವಾಗಿ ಡಿಸೆಂಬರ್ 18 ರ ತನಕ ನಗರದ ವಿವಿಧ 64 ಎಆರ್ ಒ ಕಚೇರಿಗಳಲ್ಲಿನ 5,120 ‘ಎ’ ಖಾತಾ ಮತ್ತು ‘ಬಿ’ ಖಾತಾ ರಿಜಿಸ್ಟರ್ ಪುಸ್ತಕಗಳಲ್ಲಿನ ಸ್ವತ್ತಿನ ಮಾಹಿತಿಗಳನ್ನು ಸ್ಕ್ಯಾನಿಂಗ್ ಮಾಡುವ ಕಾರ್ಯ ಆರಂಭವಾಗಲಿದೆ. ಪ್ರತಿ ಎಆರ್ ಒ ಕಚೇರಿಗಳಿಗೂ ಸ್ಕ್ಯಾನಿಂಗ್ ಆರಂಭ ದಿನಾಂಕ, ಅವುಗಳ ದತ್ತಾಂಶವನ್ನು ಸರ್ಕಾರಿ ಸ್ವಾಮ್ಯದ ಎನ್ ಐಸಿ (National Informatic Science – NIC) ನಿರ್ಮಿತ ಬಿಬಿಎಂಪಿ ಸ್ವತ್ತಿನ ತಂತ್ರಾಂಶಕ್ಕೆ ದಾಖಲಿಸುವ ಹಾಗೂ ಸ್ಕ್ಯಾನಿಂಗ್ ಕೆಲಸ ಪೂರ್ಣಗೊಳಿಸಲು ಗಡುವನ್ನು ಪಾಲಿಕೆ ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನೀಷ್ ಮೌದ್ಗಿಲ್ ನೀಡಿದ್ದಾರೆ.
ಪ್ರಾಪರ್ಟಿ ರಿಜಿಸ್ಟರ್ ಸ್ಕ್ಯಾನಿಂಗ್ (Property Register Scanning) ಕಾರ್ಯವು ನ.18 ರಿಂದ ಡಿ.23 ರ ಒಳಗೆ ಎಲ್ಲಾ 64 ಸಹಾಯಕ ಕಂದಾಯ ಅಧಿಕಾರಿಗಳ ಕಚೇರಿಗಳಲ್ಲಿ ವಿವಿಧ ದಿನಾಂಕಗಳಂದು ಪೂರ್ಣಗೊಳಿಸಲು ಗಡುವನ್ನು ನಿಗದಿಪಡಿಸಲಾಗಿದೆ.
ಯಲಹಂಕ ವಲಯದಲ್ಲಿ 430, ರಾಜರಾಜೇಶ್ವರಿ ನಗರ ವಲಯದಲ್ಲಿ 640, ಪಶ್ಚಿಮ ವಲಯದಲ್ಲಿ 780 ಸ್ವತ್ತಿನ ರಿಜಿಸ್ಟರ್, ದಕ್ಷಿಣ ವಲಯದಲ್ಲಿ 947, ಪೂರ್ವ ವಲಯದಲ್ಲಿ 1116, ಮಹದೇವಪುರದಲ್ಲಿ 408, ದಾಸರಹಳ್ಳಿಯಲ್ಲಿ 108 ಹಾಗೂ ಬೊಮ್ಮನಹಳ್ಳಿ ವಲಯದಲ್ಲಿ 689 ‘ಎ’ ಖಾತಾ ಮತ್ತು ‘ಬಿ’ ಖಾತಾ ರಿಜಿಸ್ಟರ್ ಪುಸ್ತಕಗಳನ್ನು ಸ್ಕ್ಯಾನಿಂಗ್ ಹಾಗೂ ಅದನ್ನು ಬಿಬಿಎಂಪಿ ಆಸ್ತಿ ತಂತ್ರಾಂಶಕ್ಕೆ ದಾಖಲಿಸುವ ಕೆಲಸ ನಡೆಯಲಿದೆ. ಇದಾದ ಬಳಿಕ ಪಾಲಿಕೆಯೂ ರಾಜ್ಯದ ಇತರ ಜಿಲ್ಲೆಗಳಲ್ಲಿರುವಂತೆ ಇ-ಸ್ವತ್ತು ತಂತ್ರಾಂಶದ ಮೂಲಕ ಆಸ್ತಿದಾಖಲೆಗಳನ್ನು ವಿತರಿಸಲು, ಆಸ್ತಿ ತೆರಿಗೆ ಮೌಲ್ಯಮಾಪನ, ಆಸ್ತಿ ತೆರಿಗೆ (Properry Tax) ಪಾವತಿ ಮತ್ತಿತರ ಸೇವೆಗಳನ್ನು ಪಾಲಿಕೆಯ ಇ-ಆಸ್ತಿಯ ಮೂಲಕ ನಿರ್ವಹಿಸಬಹುದು.
ಪಾಲಿಕೆಯಲ್ಲಿ ಈ ಹಿಂದೆ ಪೂರ್ವ ವಲಯದಲ್ಲಿ ಪ್ರಾಯೋಗಿಕವಾಗಿ ಇ-ಆಸ್ತಿ ತಂತ್ರಾಂಶವನ್ನು ಜಾರಿಗೆ ತರಲಾಗಿತ್ತು. ಆದ್ರೆ ಪೂರ್ಣ ಪ್ರಮಾಣದಲ್ಲಿ ದಾಖಲೆಗಳನ್ನು ಡಿಜಿಟಲೀಕರಣ ಮಾಡಲು ಸಾಧ್ಯವಾಗಿರಲಿಲ್ಲ. ಹಾಗೂ ಇತರ ವಲಯಗಳಿಗೂ ಈ ವ್ಯವಸ್ಥೆಯನ್ನು ಜಾರಿಗೆ ತರಲು ಸಾಧ್ಯವಾಗದ ಕಾರಣ ಕೈಬರಹದ ಆಸ್ತಿ ದಾಖಲೆಗಳನ್ನು ನೀಡುವ ಪರಿಪಾಠವಿತ್ತು. ಹಾಗೂ ಆಸ್ತಿ ವಹಿಗಳು ಡಿಜಿಟಲೀಕರಣ ಮಾಡದ ಕಾರಣ ಸಾಕಷ್ಟು ಅಕ್ರಮ ‘ಎ’ ಖಾತೆ ಮಾಡಲಾಗುತ್ತಿತ್ತು. ಈ ಅಕ್ರಮಗಳ ಪರಿಶೀಲನೆ ನಡೆಸುವ ಬಗ್ಗೆ ಕೆಲವು ತಿಂಗಳ ಹಿಂದೆ ಪಾಲಿಕೆ ಹಣಕಾಸು ವಿಶೇಷ ಆಯುಕ್ತರ ಅಧ್ಯಕ್ಷತೆಯ ಪರಿಶೀಲನಾ ಸಮಿತಿಯನ್ನು ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ನೇಮಕ ಮಾಡಿದ್ದರು.
ಸಮಿತಿಯ ಸೂಚನೆ ಮೇರೆಗೆ ವಿವಿಧ ವಲಯಗಳಲ್ಲಿ ಪ್ರಾಥಮಿಕ ಹಂತದಲ್ಲಿ ಎಆರ್ ಒ ಕಚೇರಿಗಳು ಬಿ ವಹಿಯಿಂದ ಎ ವಹಿಗೆ ಆಸ್ತಿಗಳನ್ನು ಅಕ್ರಮವಾಗಿ ದಾಖಲಿಸಿದ 9700ಕ್ಕೂ ಹೆಚ್ಚು ಸಂಶಯಾಸ್ಪದ ಪ್ರಕರಣಗಳನ್ನು ಪಟ್ಟಿ ಮಾಡಿದ್ದವು. ಇದನ್ನು ಸಮಿತಿಗೆ ಆ ಮೂಲಕ ಮುಖ್ಯ ಆಯುಕ್ತರಿಗೆ ಮಾಹಿತಿ ನೀಡಲಾಗಿತ್ತು. ಇಂತಹ ಪ್ರಕರಣಗಳಲ್ಲಿ ಅಕ್ರಮವಾಗಿ ‘ಎ’ ಖಾತೆಗಳಿಗೆ ಸೇರಿಸಿದ ಪ್ರಕರಣಗಳನ್ನು ಮರುಪರಿಶೀಲಿಸಿ ಪುನಃ ‘ಬಿ’ ರಿಜಿಸ್ಟರ್ ಗೆ ದಾಖಲಿಸುವಂತೆ ಮುಖ್ಯ ಆಯುಕ್ತರು ಸೂಚನೆ ನೀಡಿದ್ದರೂ, ಆ ಕೆಲಸ ಸಮರ್ಪಕವಾಗಿ ನಡೆದಿರಲಿಲ್ಲ.
ಬೆಂಗಳೂರು ವೈರ್ ತನಿಖಾ ವರದಿ ಪರಿಣಾಮ :
ಸಮಿತಿಯು ಅಕ್ರಮ ‘ಎ’ ಖಾತೆಗಳನ್ನು ಪತ್ತೆ ಹಚ್ಚುವ ಕಾರ್ಯ ನಡೆಯುತ್ತಿರುವ ಸಂದರ್ಭದಲ್ಲೇ ಮತ್ತೆ ಮತ್ತೆ ಇದೇ ರೀತಿ ‘ಎ’ ಖಾತೆ ಮಾಡುತ್ತಿರುವ ಬಗ್ಗೆ “ಬೆಂಗಳೂರು ವೈರ್” ತನಿಖಾ ವರದಿಯಲ್ಲಿ ದಾಖಲೆ ಹಾಗೂ ಸಾಕ್ಷಿ ಸಮೇತ ನ.3ರಂದು ವರದಿ ಮಾಡಿತ್ತು. ಇದರಿಂದ ಕೂಡಲೇ ಎಚ್ಚೆತ್ತುಕೊಂಡ ಪಾಲಿಕೆ ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನೀಷ್ ಮೌದ್ಗಿಲ್ ನ.4ರ ಮಧ್ಯಾಹ್ನ 12.30ರ ಒಳಗಾಗಿ ಖಾತಾ ಸ್ವತ್ತಿನ ರಿಜಿಸ್ಟರ್‌ಗಳನ್ನು ಎಲ್ಲಾ 64 ಎಆರ್ ಒ ಕಚೇರಿಗಳಿಂದ ಆಯಾ ವಲಯ ಕಚೇರಿಗಳಿಗೆ ತಲುಪಿಸುವಂತೆ ಫರ್ಮಾನು ಹೊರಡಿಸಿದ್ದರು.
ಅದಾದ ಬಳಿಕ ಹಲವು ತಿಂಗಳಿನಿಂದ ಬಾಕಿ ಉಳಿದಿದ್ದ ಬೆಂಗಳೂರಿನಲ್ಲಿನ ಸಾರ್ವಜನಿಕರ ಸ್ವತ್ತಿನ ವಿವರಗಳನ್ನು ಡಿಜಿಟಲೀಕರಣಗೊಳಿಸುವ ಕಾರ್ಯ ಚುರುಕಾಗಿದೆ.
ಬೆಸ್ಕಾಂ ಪಟ್ಟಿಯಂತೆ ವಾಣಿಜ್ಯ ಸ್ವತ್ತುಗಳ ಸ್ಥಳ ಪರಿಶೀಲನೆ ಪುನರಾರಂಭ :
ಈ ನಡುವೆ ವಿಶೇಷ ಆಯುಕ್ತ ಮುನೀಷ್ ಮೌದ್ಗಿಲ್, ವಲಯ ಆಯುಕ್ತರು ಹಾಗೂ ಜಂಟಿ ಆಯುಕ್ತರು, ಆಸ್ತಿ ತೆರಿಗೆ ಕುರಿತಂತೆ ಸಂಶಯಾಸ್ಪದವಾಗಿ ಕಂಡುಬರುವ ವಾಣಿಜ್ಯ ಆಸ್ತಿಗಳನ್ನು ಪರಿಶೀಲಿಸುವ ಕಾರ್ಯವನ್ನು ಕಳೆದ ಒಂದು ವಾರದಿಂದ ಆರಂಭಿಸಿದ್ದಾರೆ. ಜಂಟಿ ಆಯುಕ್ತರು, ಕಂದಾಯ ಅಧಿಕಾರಿಗಳು ಹಾಗೂ ಸಹಾಯಕ ಕಂದಾಯ ಅಧಿಕಾರಿಗಳು ಪ್ರತಿದಿನ ತಲಾ 5 ವಾಣಿಜ್ಯ ಸ್ವತ್ತುಗಳಿಗೆ ಭೇಟಿ ನೀಡಿ ಪರಿಶೀಲಿಸುವ ಗುರಿಯನ್ನು ಕಂದಾಯ ವಿಶೇಷ ಆಯುಕ್ತರು ವರ್ಚುವಲ್ ಮೀಟಿಂಗ್ ನಲ್ಲಿ ನೀಡಿದ್ದಾರೆ.
ಇನ್ನು ಮೌಲ್ಯಮಾಪಕರು ಹಾಗೂ ರೆವೆನ್ಯೂ ಇನ್ಸ್ ಪೆಕ್ಟರ್‌ಗಳಿಗೆ ಪ್ರತಿದಿನ ತಲಾ 25 ವಾಣಿಜ್ಯ ಆಸ್ತಿಗಳನ್ನು ಹಾಗೂ ಆ ಆಸ್ತಿಮಾಲೀಕರು ಬಿಬಿಎಂಪಿಗೆ ಕಟ್ಟುತ್ತಿರುವ ಆಸ್ತಿ ತೆರಿಗೆಗಳನ್ನು ಮರು ಪರಿಶೀಲಿಸುವ ಜವಾಬ್ದಾರಿಯನ್ನು ನೀಡಿದ್ದಾರೆ.
ವಾಣಿಜ್ಯ ಚಟುವಟಿಕೆಗಳನ್ನು ನಡೆಸಿ ಸ್ವತ್ತುಗಳಿಗೆ ವಸತಿ ಆಸ್ತಿಗಳ ಹೆಸರಿನಲ್ಲಿ ಪ್ರಾಪರ್ಟಿ ಟ್ಯಾಕ್ಸ್ ಕಟ್ಟಿ ಪಾಲಿಕೆ ತೆರಿಗೆ ವಂಚನೆಯಾಗುತ್ತಿರುವುದನ್ನು ಪತ್ತೆ ಹಚ್ಚಲು, ಈ ಹಿಂದೆ ಪಾಲಿಕೆಯು ಬೆಸ್ಕಾಂ ನಿಂದ ವಿದ್ಯುತ್ ಪಡೆಯಲು ಕಮರ್ಷಿಯಲ್ ಮೀಟರ್ ಹಾಕಿಸಿಕೊಂಡ ಸ್ವತ್ತುಗಳ ಪಟ್ಟಿಯನ್ನು ಪಡೆದುಕೊಂಡಿತ್ತು. ಅದರ ಆಧಾರದ ಮೇಲೆ ಸ್ವತ್ತುಗಳ ಪರಿಶೀಲನಾ ಕಾರ್ಯವನ್ನು ಆರಂಭಿಸಿದ್ದರೂ ಆಮೆಗತಿಯಲ್ಲಿ ಸಾಗುತ್ತಿತ್ತು. ಇದಕ್ಕೂ ನೂತನ ಕಂದಾಯ ವಿಶೇಷ ಆಯುಕ್ತರು ಟಾರ್ಗೆಟ್ ನಿಗದಿ ಮಾಡಿ ಆ ಕಾರ್ಯವು ವೇಗವಾಗಿ ನಡೆಯುವಂತೆ ಕ್ರಮ ಕೈಗೊಂಡಿದ್ದಾರೆ.
ಫೆಬ್ರವರಿಯೊಳಗೆ ಪಾಲಿಕೆ ವ್ಯಾಪ್ತಿಯ ಆಸ್ತಿಗಳ ಡಿಜಿಟಲೀಕರಣ ಕಾರ್ಯ ಪೂರ್ಣ :
“ಬಿಬಿಎಂಪಿ ವ್ಯಾಪ್ತಿಯಲ್ಲಿ ‘ಎ’ ಮತ್ತು ‘ಬಿ’ ಖಾತಾ ರಿಜಿಸ್ಟರ್ ಪುಸ್ತಕಗಳನ್ನು ಡಿಜಿಟಲ್ ವ್ಯವಸ್ಥೆಯಡಿ ತರಲು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಸೂಚನೆಯ ಮೇರೆಗೆ ಈ ಆಸ್ತಿ ವಹಿಗಳನ್ನು ಸ್ಕ್ಯಾನಿಂಗ್ ಮಾಡುವ ಕಾರ್ಯ ಆರಂಭವಾಗಿದೆ. ಮುಂದಿನ ವರ್ಷ ಫೆಬ್ರವರಿಯಲ್ಲಿ ಸಂಪೂರ್ಣವಾಗಿ ನಗರದ ಆಸ್ತಿಗಳ ದಾಖಲೆಗಳನ್ನು ಡಿಜಿಟಲ್ ವ್ಯವಸ್ಥೆಗೆ ತರಲಾಗುತ್ತದೆ. ಡಿಜಿಟಲ್ ವ್ಯವಸ್ಥೆ ಅಳವಡಿಕೆಯಿಂದ ಪಾರದರ್ಶಕತೆ ತರಲು, ಭ್ರಷ್ಟಾಚಾರ ಹಾಗೂ ಮೋಸದ ಪ್ರಕರಣಗಳು ಕಡಿಮೆಯಾಗಲಿದೆ. ನಿಯಮಬದ್ಧವಾಗಿರುವ ಆಸ್ತಿಗಳಿಗೆ ಖಾತೆ ಮಾಡುವುದು ಎಂದಿನಂತೆ ಮುಂದುವರೆದಿದೆ” ಎಂದು ಕಂದಾಯ ವಿಭಾಗದ ಹಿರಿಯ ಅಧಿಕಾರಿಯೊಬ್ಬರು ಬೆಂಗಳೂರು ವೈರ್ ಗೆ ತಿಳಿಸಿದ್ದಾರೆ.