ಬೆಂಗಳೂರು, ನ.15 www.bengaluruwire.com : ಆಹಾರ, ವಾಣಿಜ್ಯೋದ್ಯಮ ಬೆಳೆ ಮತ್ತಿತರ ವಿಷಯಗಳಲ್ಲಿ ವಿನೂತನ ಅವಿಷ್ಕಾರ, ಮಾಹಿತಿಗಳನ್ನು, ಕೃಷಿ ಯಂತ್ರೋಪಕರಣಗಳನ್ನು ರೈತರಿಗೆ ಪರಿಚಯಿಸುವ 2023ರ ಕೃಷಿಮೇಳ ಇದೇ 17 ರಿಂದ ನಾಲ್ಕು ದಿನಗಳ ಕಾಲ ನಗರದಲ್ಲಿ ನಡೆಯಲಿದೆ.
ಈ ಕುರಿತಂತೆ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೃಷಿ ವಿವಿ ಕುಲಪತಿ ಎಸ್.ವಿ.ಸುರೇಶ್, ಆಹಾರ-ಆರೋಗ್ಯ- ಆದಾಯಕ್ಕಾಗಿ ಸಿರಿಧಾನ್ಯಗಳು ಎಂಬ ಘೋಷವಾಕ್ಯದೊಂದಿಗೆ ಇದೇ 17ರಿಂದ 20ರ ವರೆಗೆ ಜಿಕೆವಿಕೆ ಆವರಣದಲ್ಲಿ ಕೃಷಿ ಮೇಳ ಆಯೋಜಿಸಲಾಗಿದೆ ಎಂದು ಅವರು ಹೇಳಿದರು.
ಕೃಷಿ, ಜಲಾನಯನ ಅಭಿವೃದ್ಧಿ, ತೋಟಗಾರಿಕೆ, ಪಶುಸಂಗೋಪನೆ, ರೇಷ್ಮೆ, ಅರಣ್ಯ, ಮೀನುಗಾರಿಕೆ, ಕೃಷಿ ಮಾರುಕಟ್ಟೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳು ಹಾಗೂ ಸೆಕೆಂಡರಿ ಕೃಷಿ ನಿರ್ದೇಶನಾಲಯದ ಸಂಯುಕ್ತಾಶ್ರಯದಲ್ಲಿ ನ.17 ರಿಂದ 20ರ ವರೆಗೆ ನಾಲ್ಕು ದಿನಗಳ ಕಾಲ ಕೃಷಿ ಮೇಳ ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ರಾಜ್ಯದಲ್ಲಿ ಬರಗಾಲ ಎದುರಾಗಿದೆ. ರೈತರು ಬೆಳೆಯುತ್ತಿರುವ ಬೆಳೆಗಳ ಇಳುವರಿ ಕಡಿಮೆಯಾಗುತ್ತದೆ. ಈ ನಿಟ್ಟಿನಲ್ಲಿ ರೈತರು ಬರಗಾಲದಲ್ಲೂ ಬೆಳೆಗಳನ್ನು ಬೆಳೆದು ಹೇಗೆ ಹೆಚ್ಚು ಉತ್ಪಾದಿಸಬಹುದು ಎಂಬುದನ್ನು ಮನಗಂಡ ಕೃಷಿ ವಿಶ್ವವಿದ್ಯಾಲಯ ಈ ಬಾರಿಯ ಕೃಷಿಮೇಳದಲ್ಲಿ ಸಿರಿಧಾನ್ಯಗಳ ಕೃಷಿಯ ಬಗ್ಗೆ ಹೆಚ್ಚು ಒತ್ತು ಕೊಟ್ಟು ಅದರ ಉತ್ಪಾದನೆ, ಸಂಸ್ಕರಣೆ, ಮಾರಾಟ ವಿಧಾನದ ಬಗ್ಗೆ ರೈತರಿಗೆ ಮಾಹಿತಿ ನೀಡಲಾಗುವುದು ಹಾಗೂ ವಿಶೇಷ ಸಿರಿಧಾನ್ಯಗಳ ಆಹಾರ ಮೇಳ ಹಮ್ಮಿಕೊಂಡಿದ್ದು, ಇದರ ಮೂಲಕ ಸಿರಿಧಾನ್ಯಗಳ ಆಹಾರ ಪದಾರ್ಥಗಳನ್ನು ತಯಾರಿಸಲಾಗುವುದು. ಇದನ್ನೆಲ್ಲ ಮೇಳದಲ್ಲಿ ಭಾಗವಹಿಸುವವರು ಸವಿಯಬಹುದು. ಈ ಬಾರಿ ಕೃಷಿ ವಿವಿ ಇತಿಹಾಸದಲ್ಲಿ ಪ್ರಥಮ ಬಾರಿಗೆ ‘ಬೀಜ ಸಂತೆ’ ಆಯೋಜಿಸುತ್ತಿದೆ. ಇದರಲ್ಲಿ ಹಲವು ಸಿರಿಧಾನ್ಯ, ದ್ವಿದಳ ಧಾನ್ಯ, ಮೇವಿನ ಬೆಳೆ, ಹಣ್ಣು ಮತ್ತು ತರಕಾರಿ ಬೀಜಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಎಸ್.ವಿ.ಸುರೇಶ್ ಹೇಳಿದರು.
ವಿವಿಯಿಂದ ಹೊಸ ಐದು ತಳಿಗಳ ಅಭಿವೃದ್ಧಿ :
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೃಷಿ ಮೇಳವನ್ನು ಉದ್ಘಾಟಿಸಲಿದ್ದು, ಸಚಿವರಾದ ಚೆಲುವರಾಯಸ್ವಾಮಿ, ಕೃಷ್ಣಭೈರೇಗೌಡ ಸೇರಿದಂತೆ ಅನೇಕ ರಾಜಕೀಯ ನಾಯಕರು ಮೇಳದಲ್ಲಿ ಭಾಗವಹಿಸಲಿದ್ದಾರೆ. ಪ್ರತೀ ವರ್ಷದಂತೆ ಈ ವರ್ಷ ಕೂಡ ಕೃಷಿ ವಿಶ್ವವಿದ್ಯಾಲಯ ರಾಗಿ, ಸಾಮೆ, ಬರಗು, ಸೂರ್ಯಕಾಂತಿ, ಹಲಸಿನ ಐದು ತಳಿಗಳನ್ನು ಅಭಿವೃದ್ಧಿಪಡಿಸಿದ್ದು, ಮೇಳದಲ್ಲಿ ಇವುಗಳನ್ನು ಬಿಡುಗಡೆಗೊಳಿಸಲಾಗುವುದು. ಸಾವಯುವ ನೈಸರ್ಗಿಕ ಕೃಷಿಗೆ ಒತ್ತುಕೊಟ್ಟು ಅದರ ಸಂಸ್ಕರಣೆ, ಬೆಳೆಯುವ ವಿಧಾನ, ಅಭಿವೃದ್ಧಿ ಬಗ್ಗೆ ರೈತರಿಗೆ ತಿಳಿಸಲಾಗುವುದು.
ಈ ಬಾರಿಯ ಕೃಷಿಮೇಳದಲ್ಲಿ 620 ಮಳಿಗೆಗಳಲ್ಲಿ ಸುಮಾರು 60 ಮಳಿಗೆಗಳನ್ನು ಇವುಗಳಿಗೇ ಮೀಸಲಿಡುತ್ತಿದ್ದೇವೆ ಎಂದು ಅವರು ಹೇಳಿದರು.
ರೈತೋಪಯೋಗಿ ಯಂತ್ರೋಪಕರಣಗಳ ಪ್ರದರ್ಶನ ಮತ್ತು ಮಾರಾಟ :
ಕೃಷಿಯಲ್ಲಿ ನೀರನ್ನು ಸಮರ್ಪಕವಾಗಿ ಬಳಸಿಕೊಂಡು ಅದು ಪೋಲಾಗದಂತೆ ನೀರಿನ ನಿರ್ವಹಣೆ, ಉತ್ತಮ, ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಉಪಯೋಗವಾಗುವ ಯಂತ್ರೋಪಕರಣಗಳನ್ನು ಪ್ರದರ್ಶನ ಮತ್ತು ಮಾರಾಟಕ್ಕೂ ವ್ಯವಸ್ಥೆ ಮಾಡಲಾಗಿದೆ. ಪಶು ಸಂಗೋಪನೆ, ಹೈನುಗಾರಿಕೆ ಮತ್ಸೋದ್ಯಮಗಳ ಬಗ್ಗೆ ಹೆಚ್ಚು ಮಾಹಿತಿ ನೀಡಲಾಗುವುದು. ಹಾಗೆಯೇ ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳಲ್ಲಿ ಒಬ್ಬ ರೈತ ಮತ್ತು ರೈತ ಮಹಿಳೆಯನ್ನು ಗುರುತಿಸಿ ಸನ್ಮಾನಿಸಿ ಪ್ರಶಸ್ತಿಯನ್ನು ನೀಡಲಾಗುವುದು.
ವಿವಿಧ ರೀತಿಯ ರೈತ ಪ್ರಶಸ್ತಿ ಪುರಸ್ಕಾರ :
ಎಚ್.ಡಿ.ದೇವೇಗೌಡ, ಮಂಜುನಾಥ್ ಬಿ.ಆರ್ ರಾಜ್ಯಮಟ್ಟದ ಅತ್ಯುತ್ತಮ ರೈತ ಪ್ರಶಸ್ತಿ, ಹೆಚ್.ಒ.ರಾಜೇಂದ್ರ ರಾಜ್ಯಮಟ್ಟದ ಅತ್ಯುತ್ತಮ ತೋಟಗಾರಿಕಾ ರೈತ ಪ್ರಶಸ್ತಿ, ಬಿ.ಸಿ.ವಾಸು ಕ್ಯಾನ್ ಬ್ಯಾಂಕ್ ರಾಜ್ಯಮಟ್ಟದ ಅತ್ಯುತ್ತಮ ರೈತ ಪ್ರಶಸ್ತಿ, ರತ್ನಮ್ಮ ಎ. ವಿ. ಕ್ಯಾನ್ ಬ್ಯಾಂಕ್ ರಾಜ್ಯ ಮಟ್ಟದ ಅತ್ಯುತ್ತಮ ರೈತ ಮಹಿಳೆ ಪ್ರಶಸ್ತಿ, ಮಂಜೇಗೌಡ ಬಿಜಿ ಡಾ.ಆರ್.ದ್ವಾರಕನಾಥ್ ಗಳಲ್ಲಿ ಅತ್ಯುತ್ತಮ ರೈತ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ ಎಂದು ಅವರು ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಶೋಧನಾ ನಿರ್ದೇಶಕ ಡಾ. ವೆಂಕಟೇಶ್, ಶಿಕ್ಷಣ ನಿರ್ದೇಶಕ ಕೆ.ಸಿ.ನಾರಾಯಣಸ್ವಾಮಿ, ಡಾ.ಶಿವರಾಮ್ ಮತ್ತಿತರರು ಪಾಲ್ಗೊಂಡಿದ್ದರು.