ಬೆಂಗಳೂರು, ನ.14 www.bengaluruwire.com : ವಾಹನ ಮಾಲೀಕರಿಗೆ ಸಂತಸದ ಸುದ್ದಿ. ರಾಜ್ಯ ಸಾರಿಗೆ ಇಲಾಖೆಯು ಕರ್ನಾಟಕದ ಎಲ್ಲ ಹಳೆಯ ವಾಹನಗಳಿಗೆ (Old Vehicles) ಅತಿ ಸುರಕ್ಷಿತ ನೋಂದಣಿ ಫಲಕ (High Security Registration Number Plate- HSRP)ವನ್ನು ನ.17ರ ಒಳಗಾಗಿ ಖಡ್ಡಾಯವಾಗಿ ಅಳವಡಿಸಬೇಕು ಎಂದು ಈ ಹಿಂದೆ ಅಧಿಸೂಚನೆ ಹೊರಡಿಸಿತ್ತು. ಆದರೆ ಈ ಗಡುವನ್ನು ಫೆಬ್ರವರಿ 17ರ ತನಕ ವಿಸ್ತರಿಸಿದೆ.
ಒಂದೊಮ್ಮೆ ನ.17ರ ಒಳಗಾಗಿ ಎಚ್ಎಸ್ ಆರ್ ಪಿ ನಂಬರ್ ಪ್ಲೇಟ್ ಅನ್ನು ವಾಹನಗಳಿಗೆ ಅಳವಡಿಸದಿದ್ದಲ್ಲಿ, ಪ್ರತಿ ಬಾರಿ ಪೊಲೀಸರು ಹಿಡಿದಾಗಲೂ 500 ರೂಪಾಯಿಂದ 1 ಸಾವಿರ ರೂಪಾಯಿ ವರೆಗೆ ದಂಡ ಕಟ್ಟಬೇಕಿತ್ತು. ಆದರೆ, ಈಗ ಆ ತಲೆನೋವು ತಾತ್ಕಾಲಿಕವಾಗಿ ಪರಿಹಾರವಾದಂತಾಗಿದೆ. ಈ ಬಗ್ಗೆ ಮಂಗಳವಾರ ಮಾಧ್ಯದಮವರೊಂದಿಗೆ ಮಾತನಾಡಿದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ರಾಜ್ಯದಲ್ಲಿನ ಹಳೇ ವಾಹನಗಳಿಗೆ ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಹಾಕಿಸಲು ಇದೇ ನವೆಂಬರ್ 17 ಕೊನೆಯ ದಿನವಾಗಿತ್ತು. ಆದರೆ, ನಾವು ಈ ಅವಧಿಯನ್ನು ವಿಸ್ತರಣೆ ಮಾಡುವ ಅಧಿಸೂಚನೆಗೆ ಒಪ್ಪಿಗೆ ಸೂಚಿಸಿ ಸೋಮವಾರ ಸಹಿ ಮಾಡಿದ್ದೇನೆ. ಬುಧವಾರ ಈ ಬಗ್ಗೆ ಕರ್ನಾಟಕ ಗೆಜೆಟ್ ನಲ್ಲಿ ಅಧಿಸೂಚನೆ ಪ್ರಕಟವಾಗಲಿದೆ ಎಂದು ಅವರು ಹೇಳಿದ್ದಾರೆ.
2019ರ ಏಪ್ರಿಲ್ 1ಕ್ಕಿಂತ ಮೊದಲು ನೋಂದಾಯಿಸಲ್ಪಟ್ಟ ಎಲ್ಲ ವಾಹನಗಳಿಗೆ ಅತಿ ಸುರಕ್ಷಿತ ನೋಂದಣಿ ಫಲಕವನ್ನು ಕಡ್ಡಾಯವಾಗಿ ಅಳವಡಿಸಬೇಕು ಎಂದು ಆಗಸ್ಟ್ 17ರಂದು ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿತ್ತು. ಅದೇ ರೀತಿ ಆ.18ರಂದು ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತರು ಈ ಕುರಿತಂತೆ ಸುತ್ತೋಲೆ ಹೊರಡಿಸಿದ್ದರು. ಆದ್ದರಿಂದ ಎಲ್ಲಾ ರೀತಿಯ ವಾಹನಗಳಿಗೆ ಅತಿ ಸುರಕ್ಷಿತ ನೋಂದಣಿ ಫಲಕವನ್ನು ಕಡ್ಡಾಯವಾಗಿ ಅಳವಡಿಸಬೇಕಾಗಿರುವುದು ಅಗತ್ಯವಾಗಿತ್ತು.
ರಾಜ್ಯದಲ್ಲಿ 2019ರ ಏಪ್ರಿಲ್ 1ಕ್ಕಿಂತ ಮೊದಲು ನೋಂದಾಯಿಸಲ್ಪಟ್ಟ (ಹಳೆಯ ಅಥವಾ ಅಸ್ತಿತ್ವದಲ್ಲಿರುವ ವಾಹನಗಳು) ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳು, ಲಘು ಮೋಟಾರು ವಾಹನ, ಪ್ರಯಾಣಿಕ ಕಾರು, ಮಧ್ಯಮ ಮತ್ತು ಭಾರೀ ವಾಣಿಜ್ಯ ವಾಹನ, ಟ್ರೈಲರ್, ಟ್ರ್ಯಾಕ್ಟರ್ ಇತ್ಯಾದಿ ವಾಹನಗಳಿಗೆ ಅತಿ ಸುರಕ್ಷಿತ ನೋಂದಣಿ ಫಲಕಗಳನ್ನು ನ. 17ರೊಳಗೆ ಅಳವಡಿಸುವುದು ಕಡ್ಡಾಯ ಮಾಡಿ ರಾಜ್ಯ ಸರ್ಕಾರ ಆದೇಶಿಸಿತ್ತು. ಈ ಬಗ್ಗೆ ಈಚೆಗೆ ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತ ಎ.ಎಂ ಯೋಗೇಶ್ ಮಾಹಿತಿ ನೀಡಿದ್ದರು. ಆದರೆ, ಈಗ ಸ್ವತಃ ಸಾರಿಗೆ ಸಚಿವರೇ ಈ ಹಿಂದೆ ನೀಡಲಾಗಿದ್ದ ಗಡುವನ್ನು ವಿಸ್ತರಣೆ ಮಾಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ. ಈ ಮೂಲಕ ಇನ್ನೂ ಇಂತಹ ನಾಮಫಲಕ ಮಾಡಿಸಿಕೊಳ್ಳದ ವಾಹನ ಸವಾರರು ಸ್ವಲ್ಪ ಮಟ್ಟಿಗೆ ನಿಟ್ಟುಸಿರು ಬಿಡುವಂತೆ ಆಗಿದೆ.
ಹೆಚ್ಚುವರಿ ಹಣವಸೂಲಿ ಮಾಡಿದರೆ ಕಠಿಣ ಕ್ರಮದ ಎಚ್ಚರಿಕೆ :
ಎಚ್ಎಸ್ ಆರ್ ಪಿ ನೋಂದಣಿಫಲಕ ಅಳವಡಿಸಲು ಹೆಚ್ಚುವರಿ ಹಣ ವಸೂಲಿ ವಿಚಾರ ಸರ್ಕಾರದ ಗಮನಕ್ಕೆ ಬರುತ್ತಿದೆ. ಈ ಬಗ್ಗೆ ದೂರುಗಳು ಸಹ ಕೇಳಿ ಬಂದಿವೆ. ಅಲ್ಲದೆ, ಸರಿಯಾಗಿ ನಂಬರ್ ಪ್ಲೇಟ್ ಅಳವಡಿಸದೇ ಇದ್ದರೆ ಕಠಿಣ ಕ್ರಮವನ್ನು ತೆಗೆದುಕೊಳ್ಳಲಾಗುವುದು. ನಾಗರಿಕರು ಹೆಚ್ಚುವರಿ ಹಣ ವಸೂಲಿ ಮಾಡುವಂತಹ ಡೀಲರ್ಗಳ ಮೇಲೆ ದೂರು ನೀಡಬೇಕು. ಸಾರಿಗೆ ಇಲಾಖೆಯ ಆಯುಕ್ತರಿಗೆ ದೂರು ನೀಡಿದರೆ ಕ್ರಮವನ್ನು ತೆಗೆದುಕೊಳ್ಳುತ್ತಾರೆ. ಪದೇ ಪದೆ ಗ್ರಾಹಕರಿಗೆ ಕಿರಿಕಿರಿ ಮಾಡಿದರೆ ಅಂತಹ ಡೀಲರ್ಗಳನ್ನು ಬ್ಲಾಕ್ ಲಿಸ್ಟ್ಗೆ ಸೇರಿಸಲಾಗುತ್ತದೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಹೇಳಿದ್ದಾರೆ.
ಎಚ್ಎಸ್ ಆರ್ ಪಿ ಅಂದರೇನು? ಇದರ ಅನುಕೂಲವೇನು? :
ಎಚ್ಎಸ್ಆರ್ಪಿ ಎಂದರೆ ಅತಿ ಸುರಕ್ಷಿತ ನೋಂದಣಿ ಫಲಕವಾಗಿದೆ. ಇವುಗಳನ್ನು ಅಲ್ಯೂಮಿನಿಯಂ ಲೋಹದಿಂದ ಮಾಡಿರುತ್ತಾರೆ. ಈ ಪ್ಲೇಟ್ನ ಮೇಲ್ಭಾಗದ ಎಡಬದಿಯಲ್ಲಿ ಅಶೋಕ ಚಕ್ರ ಮುದ್ರೆಯ 20X20 ಮಿ.ಮೀ ಅಳತೆಯ ಕ್ರೋಮಿಯಂ ಹಾಲೋಗ್ರಾಮ್ ಇರುತ್ತದೆ. ಇಂಗ್ಲಿಷ್ ಅಕ್ಷರಗಳು ಹಾಗೂ ನಂಬರ್ಗಳು ಉಬ್ಬಿಕೊಂಡಿರುವ ರೀತಿ ಅಚ್ಚಾಗಿರುತ್ತವೆ. ಈ ನಂಬರ್ ಪ್ಲೇಟ್ಗಳನ್ನು ಎರಡು ಲಾಕ್ ಪಿನ್ಗಳನ್ನು ಬಳಸಿ ಅಳವಡಿಸುತ್ತಾರೆ. ಇದರಿಂದ ಅಸಲಿ ಯಾವುದು, ನಕಲಿ ಯಾವುದು? ಎಂದು ಸುಲಭವಾಗಿ ಗುರುತಿಸಬಹುದು