ನವದೆಹಲಿ, ಅ.31 www.bengaluruwire.com : ಕೇಂದ್ರ ಸರ್ಕಾರ, 2023 ರ ಇಸವಿಯ “ಕೇಂದ್ರ ಗೃಹ ಸಚಿವರ ವಿಶೇಷ ಕಾರ್ಯಾಚರಣೆ ಪದಕ”ವನ್ನು ಘೋಷಿಸಿದೆ. ಈ ಪ್ರಶಸ್ತಿಯನ್ನು ನಾಲ್ಕು ವಿಶೇಷ ಕಾರ್ಯಾಚರಣೆಗಳಿಗಾಗಿ ನೀಡಲಾಗಿದೆ.
ಭಯೋತ್ಪಾದನೆ ನಿಗ್ರಹ, ಗಡಿಯಲ್ಲಿ ಕಾರ್ಯಾಚರಣೆ, ಶಸ್ತ್ರಾಸ್ತ್ರ ನಿಯಂತ್ರಣ, ಮಾದಕ ದ್ರವ್ಯ ಕಳ್ಳಸಾಗಣೆ ತಡೆ ಮತ್ತು ರಕ್ಷಣಾ ಕಾರ್ಯಾಚರಣೆಗಳಂತಹ ಕ್ಷೇತ್ರಗಳಲ್ಲಿ ವಿಶೇಷ ಕಾರ್ಯಾಚರಣೆಗಾಗಿ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ.
ಆಂಧ್ರಪ್ರದೇಶದಲ್ಲಿ ಈ ವರ್ಷದ ಫೆ.21 ರಂದು ವಿನೀತ್ ಬ್ರಿಜ್ ಲಾಲ್ 12 ಮಂದಿಯ ತಂಡ ನಡೆಸಿದ ಕಾರ್ಯಾಚರಣೆ, ಜಾರ್ಖಂಡ್ ನಲ್ಲಿ 2022ರ ಆಗಸ್ಟ್ 18ರಿಂದ 2023ರ ಫೆ.1ರ ತನಕ ಎಡಿಜಿಪಿ ಸಂಜಯ್ ಆನಂದರಾವ್ ಲಟ್ ಕರ್ ನೇತೃತ್ವದ 16 ಮಂದಿಯ ತಂಡ ನಡೆಸಿದ ಆಪರೇಷನ್, ತಮಿಳುನಾಡಿನಲ್ಲಿ 2022ರ ಡಿಸೆಂಬರ್ 19 ಹಾಗೂ 21 ಹಾಗೂ ಜನವರಿ 22 ಹಾಗೂ 23ರಂದು ಸೂಪರಿಟೆಂಡೆಂಟ್ ಅರುಳರಸು ಮೇಲುಸ್ತುವಾರಿಯಲ್ಲಿ 19 ಮಂದಿ ಟೀಮ್ ನಡೆಸಿದ ಕಾರ್ಯಾಚರಣೆ ಮತ್ತು ತೆಲಂಗಾಣದಲ್ಲಿ 2022ರ ಮಾರ್ಚ್ 13, ಆಗಸ್ಟ್ 7, 2023ರಲ್ಲಿ ಫೆಬ್ರವರಿ 11ರಂದು ಎಸ್ ಪಿ ಎಸ್.ಚೈತನ್ಯಕುಮಾರ್ ನೇತೃತ್ವದ 8 ಮಂದಿಯ ತಂಡವನ್ನು ಈ ಪ್ರಶಸ್ತಿಗಾಗಿ ಆಯ್ಕೆ ಮಾಡಲಾಗಿದೆ.
ಉನ್ನತ ಮಟ್ಟದ ಯೋಜನೆ, ದೇಶ, ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶಗಳ ಭದ್ರತೆಗೆ ಹೆಚ್ಚಿನ ಪ್ರಾಮುಖ್ಯತೆ ಮತ್ತು ಸಮಾಜದ ದೊಡ್ಡ ವರ್ಗಗಳ ಭದ್ರತೆಯ ಮೇಲೆ ಮಹತ್ವದ ಪ್ರಭಾವ ಬೀರುವ ಕಾರ್ಯಾಚರಣೆಗಳನ್ನು ಗುರುತಿಸುವ ಉದ್ದೇಶದಿಂದ 2018ರಲ್ಲಿ ಈ ಪದಕವನ್ನು ಸ್ಥಾಪಿಸಲಾಗಿದೆ. ಇದನ್ನು ಪ್ರತಿ ವರ್ಷ ಅಕ್ಟೋಬರ್ 31 ರಂದು ಘೋಷಿಸಲಾಗುತ್ತದೆ.
ಒಂದು ವರ್ಷದಲ್ಲಿ, ಸಾಮಾನ್ಯವಾಗಿ 3 ವಿಶೇಷ ಕಾರ್ಯಾಚರಣೆಗಳನ್ನು ಪ್ರಶಸ್ತಿಗಾಗಿ ಪರಿಗಣಿಸಲಾಗುತ್ತದೆ. ಕೆಲವೊಂದು ಅಸಾಮಾನ್ಯ ಸಂದರ್ಭಗಳಲ್ಲಿ, ಹೆಚ್ಚುವರಿ ರಾಜ್ಯ, ಕೇಂದ್ರಾಡಳಿತ ಪ್ರದೇಶದ ಪೊಲೀಸರನ್ನು ಪ್ರೋತ್ಸಾಹಿಸಲು 5 ಪ್ರಶಸ್ತಿಯನ್ನು ವಿಶೇಷ ಕಾರ್ಯಾಚರಣೆಗಳವರೆಗೆ ನೀಡಬಹುದು.