ಜಗತ್ತಿನಲ್ಲಿ ಅತಿಹೆಚ್ಚು ಮಮ್ಮಿ ಕಂಡು ಬರೋದು ಈಜಿಫ್ಟ್ ನಲ್ಲಿ. ಸಾವಿರಾರು ವರ್ಷಗಳ ಹಿಂದೆ ರಾಜರು, ಅವರ ಮನೆತನದವರು, ಪ್ರಮುಖರನ್ನು ವಿಶಿಷ್ಠ ರೀತಿಯಲ್ಲಿ ಸಮಾಧಿ ಮಾಡಿರುವುದನ್ನು ಪುರಾತತ್ವ ಶಾಸ್ತ್ರಜ್ಞರು ಪತ್ತೆಹಚ್ಚುತ್ತಿರುವುದನ್ನು ಸಾಮಾನ್ಯವಾಗಿ ಮಾಧ್ಯಮಗಳಲ್ಲಿ ನೋಡಿರುತ್ತೇವೆ. ಓದಿರುತ್ತೇವೆ.
ಪೆರು ರಾಷ್ಟ್ರದ ರಾಜಧಾನಿ ಲಿಮಾದಲ್ಲಿ ನಿಗೂಢ ಮಮ್ಮಿಯೊಂದು ಭೂಮಿಯ ಆಳದಲ್ಲಿ ಪತ್ತೆಯಾಗಿದೆ. ಈ ಮಮ್ಮಿಯನ್ನು ಸಂಪೂರ್ಣವಾಗಿ ದಾರದಲ್ಲಿ ಸುತ್ತಲಾಗಿದ್ದು, ಈ ಮೃತದೇಹವು ಕೈಯಿಂದ ತನ್ನ ಮುಖವನ್ನು ಮುಚ್ಚಿಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಸ್ಯಾನ್ ಮಾರ್ಕೋಸ್ ನ್ಯಾಷನಲ್ ಯೂನಿವರ್ಸಿಟಿಯ ಪುರಾತತ್ವ ಶಾಸ್ತ್ರಜ್ಞರು ಈ ಮಮ್ಮಿಯನ್ನು ಪತ್ತೆಹಚ್ಚಿದ್ದಾರೆ. ಲಿಮಾದಿಂದ 15.5 ಮೈಲಿ ದೂರದಲ್ಲಿನ ಕಾಜಾಮಾರ್ಕ್ಯಲ್ಲಾ ಎಂಬ ಪುರಾತನ ಪ್ರದೇಶದಲ್ಲಿ ಕಂಡುಬಂದಿದ್ದು, ಈ ಮಮ್ಮಿಯು ಸುಸ್ಥಿತಿಲ್ಲಿದೆ. ಸುಮಾರು 800 ರಿಂದ 1200 ವರ್ಷಗಳ ಹಿಂದಿನ ಮಮ್ಮಿಯು ಹೊಡೆಯುವ ಭಂಗಿಯಲ್ಲಿದ್ದು, ದಾರಗಳಿಂದಬ ಇಡೀ ಶರೀರವನ್ನು ಕಟ್ಟಿಡಲಾಗಿದೆ. ಅಚಾನಕ್ಕಾಗಿ ನೋಡಿದವರಿಗೆ ಒಂದು ಕ್ಷಣ ಭ್ರೂಣದಂತೆ ತೋರುವಂತಿದೆ.
ಪುರಾತನ ದಕ್ಷಿಣ ಪೆರುವಿಲಿಯನ್ನರು, ತಮ್ಮವರ ಅಂತ್ಯಸಂಸ್ಕಾರವನ್ನು ಇದೇ ವಿಧದಲ್ಲಿ ಮಾಡುತ್ತಿದ್ದರು ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ. ಮಮ್ಮಿ ಪತ್ತೆಯಾದ ಸಮಾಧಿ ಸ್ಥಳದಲ್ಲಿ ಪಿಂಗಾಣಿ ವಸ್ತುಗಳು ಮತ್ತು ಕಲ್ಲಿನ ಉಪಕರಣ ಹಾಗೂ ತರಕಾರಿಗಳನ್ನಿಟ್ಟಿರುವುದು ಕಂಡುಬಂದಿದೆ.
ಮಮ್ಮಿ ಎಂದರೇನು? :
ಮಮ್ಮಿ ಎಂದರೆ ಒಬ್ಬ ಸತ್ತ ಮನುಷ್ಯ ಅಥವಾ ಪ್ರಾಣಿಯ ಮೃದು ಅಂಗಾಂಶಗಳು ಮತ್ತು ಅಂಗಾಂಗಗಳನ್ನು ಉದ್ದೇಶ ಪೂರ್ವಕವಾಗಿ ಅಥವಾ ಆಕಸ್ಮಿಕವಾಗಿ ರಾಸಾಯನಿಕಗಳಿಗೆ ಒಡ್ಡಿಕೊಳ್ಳುವುದರಿಂದ, ವಿಪರೀತ ಶೀತ, ಅತಿ ಕಡಿಮೆ ಆರ್ದ್ರತೆ, ಅಥವಾ ಗಾಳಿಯ ಕೊರತೆಯಿಂದ ಸಂರಕ್ಷಿಸಲಾಗುತ್ತದೆ. ಇದರಿಂದ ಮೃತದೇಹವು ಮತ್ತಷ್ಟು ಕೊಳೆಯುವುದಿಲ್ಲ. ಇದನ್ನು ತಂಪಾದ ಮತ್ತು ಶುಷ್ಕ ಪರಿಸ್ಥಿತಿಗಳಲ್ಲಿ ಸಂರಕ್ಷಿಸಿಡಲಾಗುತ್ತದೆ.