ಬೆಂಗಳೂರು, ಅ.28 www.bengaluruwire.com : ರಾಜಧಾನಿಯಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) 2000 ಇಸವಿಯಿಂದೀಚೆಗೆ ಭೂಸ್ವಾಧೀನಪಡಿಸಿಕೊಂಡು ನಿರ್ಮಿಸಿದ ಬಡಾವಣೆಗಳಲ್ಲಿ ಬಹುತೇಕ ಬಡಾವಣೆಗಳಲ್ಲಿ ಭೂಸ್ವಾಧೀನ ತೊಂದರೆಗಳೇ ಜಾಸ್ತಿ. ಇದಕ್ಕೆ ಕೇವಲ ಅರ್ಕಾವತಿ, ಕೆಂಪೇಗೌಡ ಲೇಔಟ್ ಗಳಷ್ಟೇ ಅಲ್ಲ. ವಿಶ್ವೇಶ್ವರಯ್ಯ ಲೇಔಟ್ ಕೂಡ ಹೊರತಾಗಿಲ್ಲ.
2002-04ರ ಅವಧಿಯಲ್ಲಿ ಒಂದನೇ ಬ್ಲಾಕ್ ನಿಂದ 9ನೇ ಬ್ಲಾಕ್ ವರೆಗೆ ಸರ್.ಎಂ.ವಿಶ್ವೇಶ್ವರಯ್ಯ ಬಡಾವಣೆಯನ್ನು ನಿರ್ಮಿ ಹಂಚಿಕೆ ಮಾಡಿದೆ. ಆದರೆ ಲೇಔಟ್ ನಿರ್ಮಿಸಿ 20 ವರ್ಷಗಳಾದರೂ, ಈಗಲೂ ಮುಂದುವರೆದ ಬಡಾವಣೆಗೆ 159.05 ಎಕರೆ ಭೂಮಿಯನ್ನು ಕಂದಾಯ ಇಲಾಖೆಯಿಂದ ಸ್ವಾಧೀನಪಡಿಸಿಕೊಂಡಿಲ್ಲ. ಇದು ಸರ್ಕಾರಿ ನೆಲಗಳ್ಳರಿಗೆ ಹಾಸಿಗೆ ಹಾಕಿ ಕೊಟ್ಟಂತಾಗಿದೆ.
2002-04ರಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ಅಭಿವೃದ್ಧಿಪಡಿಸಿದ ಒಂದರಿಂದ 9ನೇ ಬ್ಲಾಕ್ ವರೆಗಿನ ಬಡಾವಣೆಯ ಸರ್.ಎಂ.ವಿಶ್ವೇಶ್ವರಯ್ಯ ನಗರದಲ್ಲಿ ಒಟ್ಟು 21,513 ನಿವೇಶನಗಳನ್ನು ಬಿಡಿಎ ಅಭಿವೃದ್ಧಿಪಡಿಸಿ ಹಂಚಿಕೆ ಮಾಡಿದೆ. ಈ ಪೈಕಿ ಎರಡು ವರ್ಷಗಳ ಹಿಂದೆಯೇ ಶೇ.25ರಷ್ಟಕ್ಕಿಂತ ಹೆಚ್ಚು ನಿವೇಶನಗಳಲ್ಲಿ ನಾಗರೀಕರು ಮನೆಗಳನ್ನು ಕಟ್ಟಿಕೊಂಡಿದ್ದಾರೆ. ಬೆಸ್ಕಾಂ ಮೂಲಗಳ ಪ್ರಕಾರ ಈ 9 ಬ್ಲಾಕ್ ಗಳಲ್ಲಿ ಒಟ್ಟು 25 ಸಾವಿರದಷ್ಟು ವಿದ್ಯುತ್ ಮೀಟರ್ ಗಳಿದೆ. ಇನ್ನು 9 ಬ್ಲಾಕ್ ಗಳಲ್ಲಿ ಮುಂದುವರೆದ ಬಡಾವಣೆ ನಿರ್ಮಾಣಕ್ಕಾಗಿ ಬಿಡಿಎ 2003ರ ಇಸವಿಯ ಏಪ್ರಿಲ್ 8ರಂದು ಪ್ರಾಥಮಿಕ ಅಧಿಸೂಚನೆ ಹೊರಡಿಸಿತ್ತು. ಆನಂತರ 2003ರ ಸೆಪ್ಟೆಂಬರ್ 9ರಂದು ಅಂತಿಮ ಅಧಿಸೂಚನೆ ಹೊರಡಿಸಿತ್ತು. ಆ ಅಧಿಸೂಚನೆಯಲ್ಲಿ ಹೇರೊಹಳ್ಳಿ ಗ್ರಾಮದ 33.39 ಎಕರೆ, ಗಿಡದಕೋನೇನಹಳ್ಳಿಯ 8 ಸರ್ವೆ ನಂಬರುಗಳಲ್ಲಿ 67.36 ಎಕರೆ ಹಾಗೂ ಮಲ್ಲತ್ತಹಳ್ಳಿ ಗ್ರಾಮದ 5 ಸರ್ವೆ ನಂಬರ್ ಗಳಲ್ಲಿ 57.10 ಎಕರೆ ಸರ್ಕಾರಿ ಭೂಮಿಯನ್ನು ಸಹ ಭೂಸ್ವಾಧೀನ ಪಡಿಸಿಕೊಳ್ಳಲು ಅಧಿಸೂಚನೆ ಹೊರಡಿಸಿತ್ತು.
ಬಿಡಿಎ ಮತ್ತು ಬೆಂಗಳೂರು ಜಿಲ್ಲಾಡಳಿತದ ನಿರ್ಲಕ್ಷ್ಯ :
ಅದಾಗಿ 20 ವರ್ಷಗಳು ಕಳೆಯುತ್ತಾ ಬಂದರೂ ಸರ್.ಎಂ.ವಿಶ್ವೇಶ್ವರಯ್ಯ ಲೇಔಟ್ ಬಡಾವಣೆಯ 1 ರಿಂದ 9 ಬ್ಲಾಕ್ ಗಳು ಅಭಿವೃದ್ಧಿ ಹೊಂದಿ ಸಾಕಷ್ಟು ಮನೆಗಳು ಬಂದಿದ್ದರೂ, ಸರ್.ಎಂ.ವಿ ಮುಂದುವರೆದ ಬಡಾವಣೆ (7ರಿಂದ 9ನೇ ಬ್ಲಾಕ್)ಗೆ ಭೂಸ್ವಾಧೀನ ಅಧಿಸೂಚನೆ ಹೊರಡಿಸಿದ್ದರೂ, ನೂರಾರು ಕೋಟಿ ರೂ. ಮೌಲ್ಯದ 159.05 ಎಕರೆ ಜಮೀನಿನ್ನು ತನ್ನ ಸುಪರ್ದಿಗೆ ಪಡೆದುಕೊಳ್ಳಲು ಸಾಧ್ಯವಾಗಿಲ್ಲ. ಈ ಸರ್ಕಾರಿ ಜಮೀನುಗಳು ಬಡಾವಣೆ ನಿರ್ಮಾಣಕ್ಕೆ ಅತ್ಯಗತ್ಯವಾಗಿ ಬೇಕಿದ್ದು, ಕೂಡಲೇ ಈ ಜಮೀನುಗಳನ್ನು ಹಸ್ತಾಂತರಿಸುವಂತೆ ಬಿಡಿಎ, ಬೆಂಗಳೂರು ಜಿಲ್ಲಾಧಿಕಾರಿಗಳಿಗೆ 2019ರ ಸೆಪ್ಟೆಂಬರ್ 7ರಂದು ಬರೆದ ಪತ್ರದಲ್ಲಿ ತಿಳಿಸಿದೆ. ಈ ಹಿಂದೆಯೂ ಹಲವು ಬಾರಿ ಕಂದಾಯ ಇಲಾಖೆಗೆ ಪತ್ರ ಬರೆದರೂ ಕಂದಾಯ ಭೂಮಿ ಮಾಲೀಕತ್ವ ಹೊಂದಿದ ಬೆಂಗಳೂರಿ ಜಿಲ್ಲಾಧಿಕಾರಿ ಕಚೇರಿ ಬಿಡಿಎಗೆ ಇಂತಿಷ್ಟು ಹಣ ನಿಗದಿಪಡಿಸಿ, ಹಣ ಕಟ್ಟುವುದೂ ಸೇರಿದಂತೆ ಭೂಮಿ ನೀಡಿಕೆ ಸಂಬಂಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಬಿಡಿಎ ಭೂಸ್ವಾಧೀನ ವಿಭಾಗದ ಮೂಲಗಳು ಬೆಂಗಳೂರು ವೈರ್ ಗೆ ಖಚಿತಪಡಿಸಿದೆ.
ಸರ್ಕಾರಿ ಜಮೀನು ಒತ್ತುವರಿಯಾಗುತ್ತದೆ ಎಂದು ಎಚ್ಚರಿಸಿದರೂ ಕ್ಯಾರೆ ಅನ್ನಲ್ಲ :
ಸರ್ಕಾರವು ನಿಗದಿಪಡಿಸುವ ಭೂಪರಿಹಾರ ಮೊತ್ತವನ್ನು ಪಾವತಿಸಲು ಪ್ರಾಧಿಕಾರವು ಬದ್ಧವಾಗಿರುತ್ತದೆ. ಈ ಜಮೀನುಗಳು ಸಾರ್ವಜನಿಕರು ಅನಧಿಕೃತವಾಗಿ ಜಮೀನನ್ನು ಒತ್ತುವರಿ ಮಾಡುವುದನ್ನು ತಡೆಯುವ ಉದ್ದೇಶದಿಂದ ಕಂದಾಯ ಇಲಾಖೆಯಿಂದ ಸರ್ಕಾರಿ ಜಮೀನುಗಳನ್ನು ಪ್ರಾಧಿಕಾರಕ್ಕೆ ಹಸ್ತಾಂತರಿಸುವಂತೆ ಪತ್ರದಲ್ಲಿ ತಿಳಿಸಿತ್ತು. ಅಲ್ಲದೆ ಕೆಲವು ಸರ್ಕಾರಿ ಜಮೀನುಗಳನ್ನು ಬಿಡಿಎ ವತಿಯಿಂದ ಈಗಾಗಲೇ ನಿವೇಶನಗಳನ್ನು ರಚನೆ ಮಾಡಿ ಸಾರ್ವಜನಿಕರಿಗೆ ಹಂಚಿಕೆ ಮಾಡಲಾಗಿದೆ ಎಂದು ವಿವರಿಸಿದೆ. ಹೀಗಿದ್ದರೂ ತನ್ನ ಭೂಮಿಯನ್ನು ಬಿಡಿಎ ಬಳಸಿಕೊಳ್ಳುತ್ತಿದ್ದರೂ ಬೆಂಗಳೂರು ಜಿಲ್ಲಾಡಳಿತ ತುಟಿಕ್ ಪಿಟಿಕ್ ಅಂದಿಲ್ಲ. ಅಧಿಸೂಚಿತ ಈ ಸರ್ಕಾರಿ ಜಮೀನಿನ ಕೆಲವು ಭಾಗಗಳಲ್ಲಿ ಖಾಸಗಿಯವರಿಂದ ಒತ್ತುವರಿ ನಡೆದಿದೆ ಎಂಬ ದೂರುಗಳಿವೆ.
ಈ ಭಾಗದಲ್ಲಿ ಭೂಮಿಗೆ ಕೋಟ್ಯಾಂತರ ರೂ. ಮೌಲ್ಯವಿದೆ :
ಈ ಹಿನ್ನಲೆಯಲ್ಲಿ ಬಿಡಿಎಗೆ ಕಂದಾಯ ಇಲಾಖೆ ಭೂಮಿ ಹಸ್ತಾಂತರಿಸುವ ಮುನ್ನ ತನ್ನ ಜಮೀನನ್ನು ಸರ್ವೆ ನಡೆಸಿ, ಅನಧಿಕೃತ ಒತ್ತುವರಿಗಳನ್ನು ತೆರವುಗೊಳಿಸಿ, ಜಮೀನಿನ ಭೂಪರಿಹಾರ ಮೊತ್ತವನ್ನು ನಿಗದಿಪಡಿಸಿ ಬಿಡಿಎ ಹಸ್ತಾಂತರಿಸುವುದು ಹಿಂದೆಂದಿಗಿಂತ ಈಗ ಮುಖ್ಯವಾಗಿದೆ. ಯಾಕೆಂದರೆ 1 ರಿಂದ 9ನೇ ಬ್ಲಾಕ್ ಬಡಾವಣೆಗಳಲ್ಲಿ ಬೆಸ್ಕಾಂ, ಬಿಡಬ್ಲ್ಯುಎಸ್ಎಸ್ ಬಿ ಸೇರಿದಂತೆ ಸಾರ್ವಜನಿಕರ ಅನುಕೂಲಕ್ಕಾಗಿ ಭೂಮಿ ಅವಶ್ಯಕತೆ ಹೆಚ್ಚಿದೆ. ಈಗಾಗಲೇ ಹಲವು ಬಾರಿ ಬೆಸ್ಕಾಂ ಯಶವಂತಪುರ ವಿಭಾಗದ ಎಂಜಿನಿಯರ್ ಗಳು ಬಿಡಿಎ ಕೇಂದ್ರ ಕಚೇರಿಗೆ, ಸರ್.ಎಂ.ವಿಶ್ವೇಶ್ವರಯ್ಯ ಬಡಾವಣೆಯಲ್ಲಿ ಬೆಸ್ಕಾಂ ಕಚೇರಿಗಾಗಿ ಭೂಮಿ ನೀಡುವಂತೆ ಪ್ರಸ್ತಾವನೆ ಸಲ್ಲಿಸಿದೆ. ಆದರೆ ಸರ್ಕಾರಿ ಭೂಸ್ವಾಧೀನ, ತನ್ನ ಬಳಿಯಲ್ಲಿರುವ ಭೂಮಿಗಳ ಬಗ್ಗೆ ಅಸಮರ್ಪಕ ದಾಖಲೆ ನಿರ್ವಹಣೆ ಕಾರಣದಿಂದ ಈತನಕ ಬೆಸ್ಕಾಂಗೆ ಭೂಮಿ ನೀಡಲು ಸಾಧ್ಯವಾಗಿಲ್ಲ.
ಈ ಮೊದಲು ಸರ್.ಎಂ.ವಿಶ್ವೇಶರಯ್ಯ ಒಂದರಿಂದ 6ನೇ ಬ್ಲಾಕ್ ವರೆಗೆ ನಿವೇಶನ ರಚನೆಗೆ ಬಿಡಿಎಂ ಭೂಸ್ವಾಧೀನಪಡಿಸಿಕೊಂಡಿತ್ತು. ಆ ಬಳಿಕ 7ರಿಂದ 9ನೇ ಬ್ಲಾಕ್ ವರೆಗಿನ ಮುಂದುವರೆದ ಬಡಾವಣೆ ನಿರ್ಮಾಣಕ್ಕಾಗಿ ಒಟ್ಟು 510 ಎಕರೆ ಭೂಮಿಯನ್ನು ಹೇರೊಹಳ್ಳಿ (90.04 ಎಕರೆ), ಗಿಡದಕೋನೇನಹಳ್ಳಿ (240.37 ಎಕರೆ) ಹಾಗೂ ಮಲ್ಲತ್ತಹಳ್ಳಿ (178.39 ಎಕರೆ) ಗ್ರಾಮಗಳಿಂದ ಭೂಸ್ವಾಧೀನಪಡಿಸಿಕೊಳ್ಳಲು ಅಧಿಸೂಚನೆ ಹೊರಡಿಸಿತ್ತು. ಆ ಪೈಕಿ ಈ ಮೂರು ಗ್ರಾಮಗಳಲ್ಲಿ 159.05 ಎಕರೆ ಭೂಮಿಯು ಕಂದಾಯ ಇಲಾಖೆಯ ಸರ್ಕಾರಿ ಭೂಮಿಯಾಗಿತ್ತು. ಇದನ್ನು ಹಸ್ತಾಂತರಿಸಲು ಕಂದಾಯ ಇಲಾಖೆಗೆ ಇನ್ನು ಕಾಲ ಕೂಡಿಬಂದಿಲ್ಲವೆನೋ? ಈ ನಿಟ್ಟಿನಲ್ಲಿ ಬಿಡಿಎ ಹಾಗೂ ಬೆಂಗಳೂರು ಜಿಲ್ಲಾಡಳಿತ ಕೂಡಲೇ ಅಗತ್ಯ ಕ್ರಮ ವಹಿಸಿ ಸರ್ಕಾರಿ ಜಾಗವನ್ನು ಹಸ್ತಾಂತರಿಸಬೇಕಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಕೆಂಪೇಗೌಡ ಲೇಔಟ್ ನಲ್ಲಿ 193 ಎಕೆರೆ ಸರ್ಕಾರಿ ಭೂಮಿ ಸ್ವಾಧೀನ ಬಾಕಿ :
ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಕಾಮಗಾರಿ ಆರಂಭವಾಗಿ 13 ವರ್ಷ ಕಳೆದರೂ ಈತನಕ 193 ಎಕರೆ ಸರ್ಕಾರಿ ಜಮೀನಿನ್ನು ಭೂಸ್ವಾಧೀನ ಮಾಡಿಕೊಳ್ಳುವ ಸದ್ಯ ಮುನ್ನೆಲೆಗೆ ಬಂದಿದೆ. ಬಡಾವಣೆಯಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಲು ಈ ಸರ್ಕಾರಿ ಭೂಸ್ವಾಧೀನವಾಗದೇ ಸಮಗ್ರ ಬಡಾವಣೆ ನಿರ್ಮಾಣ ಕಾರ್ಯ ಕೆಲಸವೇ ಅಪೂರ್ಣವಾಗಿತ್ತು. ಹೀಗಾಗಿ ನಿವೇಶನ ಹಂಚಿಕೆದಾರರು ಮನೆ ಕಟ್ಟಿಕೊಳ್ಳಲು, ವಾಸಿಸಲೂ ಸಮಸ್ಯೆಯಾಗಿತ್ತು. ಆದರೀಗ ಬಿಡಿಎ ಭೂಸ್ವಾಧೀನ ವಿಭಾಗ, ಕಂದಾಯ ಇಲಾಖೆ ಸಮನ್ವಯತೆ ಸಾಧಿಸಿ 13 ವರ್ಷದ ನಂತರ ಸರ್ಕಾರಿ ಜಮೀನಿನ ಸರ್ವೆ ಕಾರ್ಯ ನಡೆಸಲು ನಿರ್ಧರಿಸಿದೆ.
ಈ ಜಮೀನಿನ ಮಾರುಕಟ್ಟೆ ದರ ನಿರ್ಧಾರದ ನಂತರ ಬಿಡಿಎ ಕಂದಾಯ ಇಲಾಖೆಗೆ ಹಣ ಕಟ್ಟಲಿದೆ. ಇದು ಬಡಾವಣೆ ನಿವೇಶನದಾರರಿಗೂ ಮೂಲ ಸೌಕರ್ಯ ಕಲ್ಪಿಸಲು ಅಗತ್ಯವಾದ ಭೂಮಿಯಾಗಿದೆ.
ಏಕೆಂದರೆ ಕೆಂಪೇಗೌಡ ಬಡಾವಣೆಗೆ ನಿರ್ಮಾಣಕ್ಕಾಗಿ ಬೆಂಗಳೂರು ಉತ್ತರ ಮತ್ತು ದಕ್ಷಿಣ ತಾಲೂಕಿನ 12 ಗ್ರಾಮಗಳಲ್ಲಿ 4,043 ಎಕರೆ ಭೂಸ್ವಾಧೀನಪಡಿಸಿಕೊಳ್ಳಲು ಬಿಡಿಎ ಅಧಿಸೂಚನೆ ಹೊರಡಿಸಿತ್ತು. ಆ ಪೈಕಿ ಭೀಮನಕುಪ್ಪೆ, ಚಲ್ಲಘಟ್ಟ, ರಾಮಸಂದ್ರದಲ್ಲಿ 193 ಎಕರೆ ಸರ್ಕಾರಿ ಭೂಮಿ ವಶಪಡಿಸಿಕೊಳ್ಳುವಲ್ಲಿ ಪ್ರಾಧಿಕಾರಕ್ಕೆ ಹಿನ್ನಡೆಯಾದ ಕಾರಣ 13 ವರ್ಷವಾದರೂ ಆ ಭಾಗದಲ್ಲಿ ಮೂಲಸೌಕರ್ಯ ಕಲ್ಪಿಸಲು ಸಾಧ್ಯವಾಗಿರಲಿಲ್ಲ.