ನವದೆಹಲಿ, ಅ.26 www.bengaluruwire.com : ರಾಜ್ಯದಲ್ಲಿ ಕೊರತೆಯಾಗಿರುವ ವಿದ್ಯುತ್ ಪರಿಸ್ಥಿತಿಯನ್ನು ನಿಭಾಯಿಸಲು ಹಿಮಾಚಲಪ್ರದೇಶ ಹಾಗೂ ಇತರ ರಾಜ್ಯಗಳಿಂದ ವಿದ್ಯುತ್ ಖರೀದಿಸಲಾಗುತ್ತಿದ್ದು, ಜೊತೆಯಲ್ಲಿ ಹೆಚ್ಚುವರಿ ವಿದ್ಯುತ್ ಉತ್ಪಾದನೆಗೂ ಆದ್ಯತೆ ನೀಡಲಾಗುತ್ತಿದೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ತಿಳಿಸಿದ್ದಾರೆ.
ದೆಹಲಿಯಲ್ಲಿಂದು ಸುದ್ದಿಗೋಷ್ಟಿಯಲ್ಲಿಂದು ಮಾತನಾಡಿದ ಅವರು, ವಿದ್ಯುತ್ ಕೊರತೆಗೆ ಗೃಹಜ್ಯೋತಿ ಯೋಜನೆ ಕಾರಣವಲ್ಲ. ಈ ಯೋಜನೆ ಸೌಲಭ್ಯ ಪಡೆಯಲು ಗರಿಷ್ಠ 200 ಯೂನಿಟ್ ಅಥವಾ ಬಳಕೆಯ ಮಿತಿಯಲ್ಲೇ ಇರಬೇಕಿರುವುದರಿಂದ ಜನ ಬಳಕೆಯಲ್ಲೇ ಉಳಿತಾಯ ನೀತಿಯನ್ನು ಪಾಲನೆ ಮಾಡುತ್ತಿದ್ದಾರೆ. ಮಳೆ ಕೊರತೆಯಿಂದ ಈ ಬಾರಿ ಕೃಷಿ ಪಂಪ್‌ಸೆಟ್ ಹಾಗೂ ಕೈಗಾರಿಕೆಗಳಿಂದ ಬೇಡಿಕೆ ಹೆಚ್ಚಾಗಿದೆ ಎಂದು ವಿವರಿಸಿದರು.
ಇಂಧನ ಇಲಾಖೆ ಅಧಿಕಾರಿಗಳು ಪರಿಸ್ಥಿತಿ ನಿಭಾಯಿಸಲು ಹಗಲು ರಾತ್ರಿ ಶ್ರಮಿಸುತ್ತಿದ್ದಾರೆ. ಕೇಂದ್ರ ಸರ್ಕಾರದ ಆದೇಶದ ಪ್ರಕಾರ ಶೇ.10ರಷ್ಟು ವಿದೇಶಿ ಕಲ್ಲಿದ್ದಲನ್ನು ದೇಶಿಯ ಕಲ್ಲಿದ್ದಲಿಗೆ ಮಿಶ್ರಣ ಮಾಡಿದರೆ ವಿದ್ಯುತ್ ಉತ್ಪಾದನೆ ಹೆಚ್ಚಾಗಲಿದೆ. ಕೇಂದ್ರ ಸರ್ಕಾರ ಹೆಚ್ಚುವರಿಯಾಗಿ 2 ಮೆಗಾಟನ್ ಕಲ್ಲಿದ್ದಲ್ಲನ್ನು ಮಂಜೂರು ಮಾಡಿದೆ. ದೇಶಿಯ ಕಲ್ಲಿದ್ದಲಿನಲ್ಲಿ ಬೂದಿ ಹೆಚ್ಚಿದ್ದು, ಅದನ್ನು ತೊಳೆಯಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು. ಕೃತಕ ಅಭಾವ ಸೃಷ್ಟಿಸಿ ವಿದ್ಯುತ್ ಖರೀದಿಯಲ್ಲಿ ಹಣ ಮಾಡಲು ಯತ್ನಿಸಲಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿ ಆಧಾರ ರಹಿತ ಆರೋಪ ಮಾಡಿದ್ದಾರೆ.
ಆತ್ಮಸಾಕ್ಷಿ ಇರುವ ಯಾವ ರಾಜಕಾರಣಿಯೂ ಕೃತಕ ಅಭಾವ ಸೃಷ್ಟಿಸಲ್ಲ, ಆ ರೀತಿ ಮಾಡಲು ಸಾಧ್ಯವಿಲ್ಲ. ಮುಖ್ಯಮಂತ್ರಿಯಾದಿಯಾಗಿ ನಾವು ಪ್ರತಿದಿನ ವಿದ್ಯುತ್ ಪರಿಸ್ಥಿತಿ ಪರಿಶೀಲನೆ ಮಾಡುತ್ತಿದ್ದೇವೆ. ರಾಜ್ಯ ಸರ್ಕಾರ ವಿದ್ಯುತ್ ಖರೀದಿಸುವುದು ಕೇಂದ್ರ ಗ್ರಿಡ್‌ನಿಂದ, ನಮ್ಮ ಅಧಿಕಾರಿಗಳು ಮುನ್ನಾ ದಿನ ಗ್ರಿಡ್ ಗೆ ಹೋಗಿ ಬಿಡ್‌ನಲ್ಲಿ ಭಾಗವಹಿಸುತ್ತಾರೆ. ಆ ದಿನದ ದರಕ್ಕೆ ತಕ್ಕಂತೆ ಹರಾಜಿನಲ್ಲಿ ಭಾಗಿಯಾಗಿ ವಿದ್ಯುತ್ ಖರೀದಿಸುತ್ತೇವೆ. ಕುಮಾರಸ್ವಾಮಿ ಬಯಸಿದರೆ ಗ್ರಿಡ್‌ನಲ್ಲಿ ನಡೆಯುವ ಖರೀದಿ ಪ್ರಕ್ರಿಯೆಯನ್ನು ತೋರಿಸಲು ಕರೆದುಕೊಂಡು ಹೋಗಲು ಸಿದ್ದರಿದ್ದೇವೆ. ಸುಳ್ಳು ಆರೋಪ ಮಾಡಿ ಜನರಲ್ಲಿ ಬರುವಂತೆ ಮಾಡುವುದು ಸರಿಯಲ್ಲ ಎಂದು ಸಚಿವ ಜಾರ್ಜ್ ಕಿಡಿಕಾರಿದರು.
ಕೂಡಗಿ ಸ್ಥಾವರದ ಐದು ಸ್ಥಾವರದಲ್ಲಿ ಮೂರಲ್ಲಿ ಮಾತ್ರ ಉತ್ಪಾದನೆಯಾಗುತ್ತಿದೆ ಎಂದಿದ್ದಾರೆ. ಅವು ಕೇಂದ್ರ ಸರ್ಕಾರ ನಿಯಂತ್ರಣದಲ್ಲಿವೆ. ರಾಜ್ಯ ಸರ್ಕಾರಕ್ಕೆ ಸಂಬಂಧಿಸಿಲ್ಲ. ಅಲ್ಲಿ ಉತ್ಪಾದನೆಯಾಗುವ 2400 ಮೆಗಾವ್ಯಾಟ್‌ನಲ್ಲಿ ರಾಜ್ಯಕ್ಕೆ 1250 ಮೇಗಾವ್ಯಾಟ್ ಮಂಜೂರಾಗಿದೆಯಷ್ಟೆ. ಕಳೆದ ವರ್ಷ ಕೇಂದ್ರ ಸರ್ಕಾರ 150 ಮಗಾವ್ಯಾಟ್ ವಿದ್ಯುತ್ ನೀಡಲು ಮುಂದಾಗಿತ್ತು. ಅದನ್ನು ಆಗಿನ ಸರ್ಕಾರ ಖರೀದಿಸದೆ, ದೆಹಲಿಗೆ ಬಿಟ್ಟುಕೊಟ್ಟಿದೆ. ಆ ಒಪ್ಪಂದ ಅಕ್ಟೋಬರ್ 31 ವರೆಗೂ ಚಾಲ್ತಿಯಲ್ಲಿದೆ. ಅನಂತರ 150 ಮೆಗಾವ್ಯಾಟ್ ರಾಜ್ಯಕ್ಕೆ ದೊರೆಯಲಿದೆ ಎಂದು ವಾಸ್ತವವನ್ನು ತೆರೆದಿಟ್ಟರು.
ಕೇಂದ್ರ ಗಣಿ ಸಚಿವ ಪ್ರಹ್ಲಾದ್ ಜೋಶಿ ವಸ್ತು ಸ್ಥಿತಿ ಅರಿವಿಲ್ಲದೆ ಆರೋಪ ಮಾಡಿದ್ದಾರೆ. ನಾನು ಯಾರ ಮೇಲೂ ದೋಷಾರೋಪಣೆ ಮಾಡುವುದಿಲ್ಲ, ಎಲ್ಲರಿಗೂ ಮನವರಿಕೆ ಮಾಡಿಕೊಡುತ್ತೇನೆ. ನಮ್ಮಲ್ಲಿ ಲೋಡ್ ಶೆಡ್ಡಿಂಗ್ ಇಲ್ಲ. ಈ ಮೊದಲು ಕೃಷಿಗೆ ಏಳು ಗಂಟೆ ವಿದ್ಯುತ್ ನೀಡಲಾಗುತ್ತಿತ್ತು. ಕೊರತೆ ಹೆಚ್ಚಾಗಿದ್ದರಿಂದ ಐದು ಗಂಟೆಗೆ ಇಳಿಸಿದ್ದೇವೆ. ಜಿಲ್ಲಾ ಮಟ್ಟದ ಸಮಿತಿಗಳು ಬೇಡಿಕೆ, ಪೂರೈಕೆಯನ್ನು ನಿಭಾಯಿಸುತ್ತವೆ. ಸಕ್ಕರೆ ಕಾರ್ಖಾನೆಗಳ ಉಪ ಉತ್ಪನ್ನದಿಂದ 600 ಮೇಗಾವ್ಯಾಟ್ ವಿದ್ಯುತ್ ದೊರೆಯುವ ನಿರೀಕ್ಷೆ ಇದೆ. ಹಿಮಾಚಲ ಪ್ರದೇಶದ ಸರ್ಕಾರದಿಂದ ವಿದ್ಯುತ್ ಖರೀದಿಸಲಾಗುತ್ತಿದೆ.
ಅಲ್ಲಿ ಜಲವಿದ್ಯುತ್ ಉತ್ಪಾದನೆ ಹೆಚ್ಚಿದೆ. ನಮಗೆ 200 ಮೆಗಾವ್ಯಾಟ್ ಅನ್ನು ಪಿಕ್ ಅವರ್‌ನಲ್ಲಿ ಈಗಾಗಲೇ ಪೂರೈಕೆಯಾಗುತ್ತಿದೆ. ಖಾಸಗಿ ಅಥವಾ ಮಧ್ಯವರ್ತಿಗಳಿಂದ ನಾವು ವಿದ್ಯುತ್ ಖರೀದಿ ಮಾಡುತ್ತಿಲ್ಲ. ಇತ್ತೀಚೆಗೆ ಪವನ ಹಾಗೂ ಸೌರ ಶಕ್ತಿ ಹೆಚ್ಚಾಗುತ್ತಿದೆ. ಬೇಸಿಗೆಯಲ್ಲಿ ಮತ್ತಷ್ಟು ಸೌರ ಶಕ್ತಿ ವೃದ್ಧಿಸುವ ನಿರೀಕ್ಷೆಗಳಿವೆ. ಮುಂದಿನ ವರ್ಷ ಎಲ್ಲಾ ಉಪಸ್ಥಾವರಗಳಿಗೆ ಸೌರ ಶಕ್ತಿ ಅಳವಡಿಕೆಗೆ ಕ್ರಮ ಕೈಗೊಳ್ಳಲಾಗುತ್ತದೆ.
ಕಳೆದ ನಾಲ್ಕು ವರ್ಷದಿಂದ ವಿದ್ಯುತ್ ಉತ್ಪಾದನೆ ಹಾಗೇ ಇದೆ :
ರಾಜ್ಯದಲ್ಲಿ ಪ್ರಸ್ತುತ ವಿದ್ಯುತ್ ಅಭಾವಕ್ಕೆ ಕಾಂಗ್ರೆಸ್ ಸರ್ಕಾರ ಹಿಂದಿನ ಬಿಜೆಪಿ ಸರ್ಕಾರವನ್ನು ದೂರಿದೆ. ಕಳೆದ ನಾಲ್ಕು ವರ್ಷಗಳಲ್ಲಿ ವಿದ್ಯುತ್ ಉತ್ಪಾದನೆ ಹಾಗೆಯೇ ಇದೆ. ಹಿಂದಿನ ಬಿಜೆಪಿ ಕರ್ನಾಟಕ ಸರ್ಕಾರದ ಅವಧಿಯಲ್ಲಿ ವಿದ್ಯುತ್ ಉತ್ಪಾದನೆ ಮಟ್ಟ ಉತ್ತಮವಾಗಿದ್ದರೆ, ರಾಜ್ಯವು ಇಂದು ಇಂತಹ ಪರಿಸ್ಥಿತಿಯನ್ನು ಎದುರಿಸುತ್ತಿರಲಿಲ್ಲ ಎಂದು ಕಿಡಿಕಾರಿದೆ.
ಗುರುವಾರ ಇಲ್ಲಿ ರಾಜ್ಯದ ಇಂಧನ ಸಚಿವ ಕೆ.ಜೆ.ಜಾರ್ಜ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ, ರಾಜ್ಯದಲ್ಲಿ ಈಗಿನ ವಿದ್ಯುತ್ ಅಭಾವದ ಪರಿಸ್ಥಿತಿಗೆ ಬಿಜೆಪಿಯೇ ಕಾರಣ ಎಂದು ಟೀಕಿಸಿದ್ದಾರೆ. ಅಲ್ಲದೆ, ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಹಂಚಿಕೆಯಾಗುವ ಕಲ್ಲಿದ್ದಲಿನ ಗುಣಮಟ್ಟವೂ ಉತ್ತಮವಾಗಿಲ್ಲ. ಇದರೊಂದಿಗೆ ಮಳೆ ಕೊರತೆಯಿಂದ ವಿದ್ಯುತ್ ಉತ್ಪಾದನೆಯ ಮೇಲೆ ದುಷ್ಪರಿಣಾಮ ಬೀರಿದೆ. ನಮ್ಮ ಮೊದಲ ಸರ್ಕಾರದ ಅವಧಿಯಲ್ಲಿ ವಿದ್ಯುತ್ ಉತ್ಪಾದನೆಯನ್ನು ದ್ವಿಗುಣಗೊಳಿಸಲಾಗಿದೆ. 2013-14ರಲ್ಲಿ ವಿದ್ಯುತ್ ಉತ್ಪಾದನೆ 14,048 ಮೆಗಾವ್ಯಾಟ್ ಆಗಿತ್ತು. 2017-18ರ ವೇಳೆಗೆ 27,780 ಮೆಗಾವ್ಯಾಟ್‌ಗೆ ಏರಿಕೆಯಾಗಿದೆ. ಅದೇ ರೀತಿ ವಿದ್ಯುತ್ ಉತ್ಪಾದನೆ ಹೆಚ್ಚಿದ್ದರೆ ರಾಜ್ಯಕ್ಕೆ ಇಂತಹ ಪರಿಸ್ಥಿತಿ ಎದುರಾಗುತ್ತಿರಲಿಲ್ಲ ಎಂದಿದ್ದಾರೆ.
ಉಚಿತ, ಬೆಳಕು, ಸುಸ್ಥಿರ ಬದುಕಿನ ಧ್ಯೇಯದೊಂದಿಗೆ ‘ಗೃಹ ಜ್ಯೋತಿ’ ಯೋಜನೆಯನ್ನು ಜಾರಿಗೆ ತಂದಿದ್ದೇವೆ. ಆಗಸ್ಟ್‌ನಲ್ಲಿ 1.26 ಕೋಟಿ ಗ್ರಾಹಕರು ಮತ್ತು ಸೆಪ್ಟೆಂಬರ್‌ನಲ್ಲಿ 1.35 ಕೋಟಿ ಗ್ರಾಹಕರಿಗೆ ಶೂನ್ಯ ವಿದ್ಯುತ್ ಬಿಲ್ ನೀಡಲಾಗಿದೆ. ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ಜನ ನಿರಾಳರಾದರು. ಏನೇ ಸಮಸ್ಯೆ ಇದ್ದರೂ ಜನಸಾಮಾನ್ಯರಿಗೆ ಯಾವುದೇ ತೊಂದರೆಯಾಗದಂತೆ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ.
ಗೃಹ ಜ್ಯೋತಿ ಯೋಜನೆಯ ಅನುಷ್ಠಾನದ ಮೊದಲ ತಿಂಗಳಾದ ಆಗಸ್ಟ್‌ನಲ್ಲಿ 1.42 ಕೋಟಿಗೂ ಹೆಚ್ಚು ಕುಟುಂಬಗಳು ಪ್ರಯೋಜನ ಪಡೆದಿವೆ. ಅಂತೆಯೇ, ಅವರು ಯಾವುದೇ ಸಮಯದಲ್ಲಿ ಅರ್ಜಿ ಸಲ್ಲಿಸಬಹುದು ಮತ್ತು ಅದರ ನಂತರದ ತಿಂಗಳಿನಿಂದ ಪ್ರಯೋಜನಗಳನ್ನು ಪಡೆಯಬಹುದು. 1.42 ಕೋಟಿ ಅರ್ಜಿದಾರರ ಪೈಕಿ ಭಾಗ್ಯಜ್ಯೋತಿ, ಕುಟೀರ ಜ್ಯೋತಿ ಮತ್ತು ಅಮೃತ್ ಜ್ಯೋತಿಯಂತಹ ವಿವಿಧ ಯೋಜನೆಗಳ ಫಲಾನುಭವಿಗಳಿಂದ ಸುಮಾರು 18 ಲಕ್ಷಗಳನ್ನು ಸ್ವೀಕರಿಸಲಾಗಿದೆ ಎಂದು ಇಂಧನ ಸಚಿವರು ಹೇಳಿದ್ದಾರೆ.
ಆಗಸ್ಟ್ 1, 2023 ರಿಂದ, ಇಂಧನ ಇಲಾಖೆಯು ಸರಿಸುಮಾರು 24 ಲಕ್ಷ ವಿದ್ಯುತ್ ಬಿಲ್‌ಗಳನ್ನು ನೀಡಿದೆ. ಅದರಲ್ಲಿ ಒಟ್ಟು ಶೂನ್ಯ ಬಿಲ್‌ಗಳು 14.5 ಲಕ್ಷಗಳಾಗಿವೆ. ಇದು ಒಟ್ಟು ಬಿಲ್‌ಗಳ ಶೇ.60 ರಷ್ಟಾಗುತ್ತದೆ. ಉಳಿದ ಶೇ.40 ಜನರು ತಮ್ಮ ಮಾಸಿಕ ವಿದ್ಯುತ್ ಬಿಲ್‌ಗಳಿಗೆ ಅಲ್ಪ ಮೊತ್ತವನ್ನು ಪಾವತಿಸುವ ಮೂಲಕ ಗೃಹ ಜ್ಯೋತಿ ಯೋಜನೆಯ ಫಲಾನುಭವಿಗಳಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಇಂಧನ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ ಉಪಸ್ಥಿತರಿದ್ದರು.