ಗಿಳಿಯಾರು, ಅ.23 www.bengaluruwire.com : ರಾಜ್ಯದೆಲ್ಲಡೆ ದಸರಾ ನವರಾತ್ರಿ ಮಹೋತ್ಸವ ಸಂಭ್ರಮ ಸಡಗರದಿಂದ ನಡೆಯುತ್ತಿದೆ. ಇಂದು ನವರಾತ್ರಿಯ ಒಂಭತ್ತೇ ದಿನ ಗಿಳಿಯಾರಿನ ಹೇರಳೆಬೆಟ್ಟಿನಲ್ಲಿನ ಶ್ರೀ ಚಾಮುಂಡೇಶ್ವರಿ ಸನ್ನಿಧಾನದಲ್ಲಿ ಹಲವು ಧಾರ್ಮಿಕ ಕಾರ್ಯಕ್ರಮಗಳು ಸಾಂಗವಾಗಿ ನೆರವೇರಿತು.
ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಐರೋಡಿಯಲ್ಲಿನ ಹೆಬ್ಬಾರರ ಮನೆತನದ ಮನೆ ದೇವರಾದ ಶ್ರೀ ಚಾಮುಂಡೇಶ್ವರಿ ಅಮ್ಮನವರ ಶಿಲಾಮಯ ದೇವಿ ಒಂದೂವರೆ ಶತಮಾನದ ಹಿಂದೆ ಅದೇ ಗ್ರಾಮದಲ್ಲಿ ಪೂಜಿಸಲಾಗುತ್ತಿತ್ತು. ಆ ಬಳಿಕ ಕಾರಣಾಂತರಗಳಿಂದ ಈ ಶ್ರೀದೇವಿಯ ಶಿಲೆಯನ್ನು ಗಿಳಿಯಾರಿನ ಹೇರಳೆ ಬೆಟ್ಟಿನಲ್ಲಿರುವ ನರಸಿಂಹ ಹೆಬ್ಬಾರ್ ಅವರ ಮನೆಯಲ್ಲಿ ಮರದ ದಿಮ್ಮಿಗೆ ಶಕ್ತಿಯನ್ನು ಆಹವಾನೆ ಮಾಡಿ ನಾಗಪ್ಪಯ್ಯ ಹೆಬ್ಬಾರ್ ಕುಟುಂಬದವರು 1949 ರ ಹಿಂದೆ ತಂದು ಶಿಲೆಯಲ್ಲಿ ಶ್ರೀದೇವಿಯನ್ನು ಪ್ರತಿಷ್ಠಾಪಿಸಲಾಯಿತು.
ಮೈಸೂರು ಚಾಮುಂಡೇಶ್ವರಿ ತಾಯಿಯ ಒಂದು ಅಂಶ :
ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನದ ಶ್ರೀದೇವರ ಒಂದು ಅಂಶದಿಂದ ಶ್ರೀದೇವಿಯನ್ನು ಐರೋಡಿ ಗ್ರಾಮಕ್ಕೆ ಕಳೆದ ಒಂದೂವರೆ ಶತಮಾನದ ಹಿಂದೆ ತಂದು ಪ್ರತಿಷ್ಠಾಪಿಸಿದರು ಎಂಬ ಪ್ರತೀತಿಯಿದೆ. ಅದನ್ನೇ ಐರೋಡಿ ಹೆಬ್ಬಾರರ ಕುಟುಂಬ ತಮ್ಮ ಮನೆದೇವರೆಂದು ಪೂಜಿಸಿಕೊಂಡು ಬಂದಿರುತ್ತಾರೆ.
ಹೇರಳೆಬೆಟ್ಟಿನಲ್ಲಿರುವ ದಿವಂಗತ ನಾಗಪ್ಪಯ್ಯನ ಹೆಬ್ಬಾರರ ಮಗ ದಿವಂಗತ ನರಸಿಂಹ ಹೆಬ್ಬಾರರು ಶ್ರೀ ಚಾಮುಂಡೇಶ್ವರಿ ದೇವಿಯ ದೈವಪಾತ್ರಿಗಳಾಗಿದ್ದರು. ಪ್ರಸ್ತುತ ಈ ದೇವಸ್ಥಾನ ಸಮಸ್ತ ಧಾರ್ಮಿಕ ಸೇವೆ, ಪೂಜಾ ವಿಧಿಗಳನ್ನು ದಿವಂಗತ ನರಸಿಂಹ ಹೆಬ್ಬಾರರ ಮೊಮ್ಮಗ ಮಹಾಬಲ ಹೇರಳೆಯವರ ನೇತೃತ್ವದಲ್ಲಿ ಯಶಸ್ವಿಯಾಗಿ ನಡೆಸಿಕೊಂಡು ಹೋಗುತ್ತಿದ್ದಾರೆ.
“ಹಲವು ದಶಕಗಳಿಂದ ನವರಾತ್ರಿ ಉತ್ಸವವನ್ನು ಗಿಳಿಯಾರಿನ ಹೇರಳೆಬೆಟ್ಟಿನಲ್ಲಿ ಸಾಂಗವಾಗಿ ನಡೆಸಿಕೊಂಡು ಹೋಗಲಾಗುತ್ತಿದೆ. ಈ ಸಂದರ್ಭದಲ್ಲಿ ನವರಾತ್ರಿಯ ಒಂಭತ್ತು ದಿನವೂ ಶ್ರೀ ಚಾಮುಂಡೇಶ್ವರಿ ದೇವಿಗೆ ಹೂವಿನ ಅಲಂಕಾರ ಮಾಡಿ ಚಂಡಿಕಾ ಪಾರಾಯಣ, ಹರಕೆಯಿದ್ದಲ್ಲಿ ಚಂಡಿಕಾಹೋಮ ಸಹಿತ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಾ ಬಂದಿದೆ. ” ಎಂದು ಹೇಳುತ್ತಾರೆ ಮಹಾಬಲ ಹೇರಳೆಯವರು “ಬೆಂಗಳೂರು ವೈರ್” ತಿಳಿಸಿದ್ದಾರೆ.
ಮಹಾಬಲ ಹೇರಳೆಯವರು ಕೂಟ ಮಹಾಜಗತ್ತು ಅಂಗಸಂಸ್ಥೆಯ ಕಾರ್ಯದರ್ಶಿಯೂ ಆಗಿದ್ದಾರೆ.
ಸಂಕಲ್ಪ ಮಾತ್ರದಿಂದಲೇ ಶ್ರೀ ಚಾಮುಂಡೇಶ್ವರಿ ಐರೋಡಿ ಹೆಬ್ಬಾರರ ಕುಟುಂಬದ ಮನೆತನದವರ ಮನದ ಅಭೀಷ್ಠೆಯನ್ನು ಪೂರೈಸುತ್ತಾರೆಂಬ ನಂಬಿಕೆಯಿದೆ. ಈ ದೇವಸ್ಥಾನದಲ್ಲಿ ನಿತ್ಯವೂ ಪೂಜಾ ಕೈಂಕರ್ಯಗಳು ನಡೆಯುತ್ತಿರುತ್ತದೆ. ಈ ದೇವಸ್ಥಾನವನ್ನು ಮತ್ತಷ್ಟು ಅಭಿವೃದ್ಧಿಪಡಿಸುವಲ್ಲಿ ಕುಟುಂಬದ ಸದಸ್ಯರ ಸಹಕಾರ ಅಗತ್ಯವಾಗಿದೆ ಎನ್ನುತ್ತಾರೆ ಹೆಬ್ಬಾರರ ಕುಟುಂಬದ ಹಿರಿಯರು.
ಐರೋಡಿ ಹೆಬ್ಬಾರರ ಕುಟುಂಬಿಕರು ದೈನಂದಿನ ಜೀವನಕ್ಕಾಗಿ ಬೆಂಗಳೂರು, ಸೇರಿದಂತೆ ದೇಶ ವಿದೇಶಗಳಲ್ಲಿ ಹಂಚಿಹೋಗಿದ್ದಾರೆ. ಐರೋಡಿ ಹೆಬ್ಬಾರರ ಕುಟುಂಬದ ಬಹಳಷ್ಟು ಜನರಿಗೆ ಗಿಳಿಯಾರಿನಲ್ಲಿ ಶ್ರೀ ಚಾಮುಂಡೇಶ್ವರಿ ದೇವಿ ಮನೆದೇವರೆಂದು ಇತ್ತೀಚೆಗಷ್ಟೆ ತಿಳಿದುಬಂದಿದ್ದು, ದಿನೇ ದಿನೇ ಈ ದೇವಸ್ಥಾನಕ್ಕೆ ಬಂದು ಹೋಗುವವರ ಸಂಖ್ಯೆ ಹೆಚ್ಚಾಗುತ್ತಿದೆ.
“ಐರೋಡಿ ಹೆಬ್ಬಾರರ ಕುಟುಂಬದವರ ಒಟ್ಟಾರೆ ಸಂಖ್ಯೆ 500ಕ್ಕಿಂತಲೂ ಹೆಚ್ಚಿರಬಹುದು. ಹೆಬ್ಬಾರರ ಕುಟುಂಬದ ವಂಶಜರ ವಂಶವೃಕ್ಷ ರಚಿಸುವ ಕೆಲಸ ನಡೆಯುತ್ತಿದೆ” ಎನ್ನುತ್ತಾರೆ ಈ ಮನೆತನದ ಹಿರಿಯರು ಹಾಗೂ ಖ್ಯಾತ ವಕೀಲರಾದ ಎ.ಎಸ್.ಎನ್ ಹೆಬ್ಬಾರ್.