ಬೆಂಗಳೂರು, ಅ.21 www.bengaluruwire.com : ರಾಜಧಾನಿಯಲ್ಲಿ ಇತ್ತೀಚೆಗೆ ನಡೆದ ಸರಣಿ ಅಗ್ನಿ ದುರಂತಗಳ ಹಿನ್ನೆಲೆಯಲ್ಲಿ ರಾಜಧಾನಿ ವ್ಯಾಪ್ತಿಯಲ್ಲಿ ಹೋಟೆಲ್, ರೆಸ್ಟೋರೆಂಟ್, ಪಬ್ ಹಾಗೂ ಕಲ್ಯಾಣ ಮಂಟಪ ಸೇರಿದಂತೆ ವಾಣಿಜ್ಯ ಕೇಂದ್ರಗಳಲ್ಲಿನ ಅಗ್ನಿ ಸುರಕ್ಷತೆ ಬಗ್ಗೆ ರಾಜ್ಯ ಅಗ್ನಿಶಾಮಕ ದಳ ಮತ್ತು ತುರ್ತು ಸೇವೆ ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು (BBMP) ವಿಶೇಷ ತಪಾಸಣೆ ಆರಂಭಿಸಿದೆ.
ಬಿಬಿಎಂಪಿಯ ವ್ಯಾಪ್ತಿಯಲ್ಲಿರುವ ವಲಯವಾರು ಪಬ್, ಬಾರ್ & ರೆಸ್ಟೋರೆಂಟ್ ಗಳಿಗೆ ಸಂಬಂಧಿಸಿದಂತೆ ಪಾಲಿಕೆಯ 8 ವಲಯಗಳಲ್ಲಿ ಆರೋಗ್ಯಾಧಿಕಾರಿಗಳ ನೇತೃತ್ವದಲ್ಲಿ ಶುಕ್ರವಾರ ತಪಾಸಣೆ ನಡೆಸಿತು. ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 1,118 ವಾಣಿಜ್ಯ ಪರವಾನಗಿಗಳನ್ನು ನೀಡಲಾಗಿದೆ.
ಈ ಸಂದರ್ಭದಲ್ಲಿ ನ್ಯೂನ್ಯತೆಗಳು ಕಂಡುಬಂದಿರುವಂತಹ 86 ಉದ್ದಿಮೆಗಳಿಗೆ ನೋಟಿಸ್ ಜಾರಿಮಾಡಲಾಗಿದೆ. ಜೊತೆಗೆ ಪರವಾನಿಗೆ ನಿಯಮಾವಳಿ ಪಾಲಿಸದ 12 ಉದ್ದಿಮೆಗಳನ್ನು ಸ್ಥಳದಲ್ಲೇ ಮುಚ್ಚಿಸಲಾಗಿದೆ ಎಂದು ಬಿಬಿಎಂಪಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಇತ್ತೀಚೆಗೆ ಅತ್ತಿಬೆಲೆಯಲ್ಲಿ ನಡೆದ ಪಟಾಕಿ ಗೋದಾಮಿನ ಅಗ್ನಿ ಅವಘಡದಲ್ಲಿ 17 ಮಂದಿ ಸಾವನ್ನಪ್ಪಿದ್ದರೆ, ಕೋರಮಂಗಲದ ಮಡ್ ಪೈಪ್ ಕೆಫೆಯಲ್ಲಿ ಬುಧವಾರ ಅಗ್ನಿ ದುರಂತ ಸಂಬವಿಸಿತ್ತು. ಈ ಹಿನ್ನಲೆಯಲ್ಲಿ ನಗರದಲ್ಲಿನ ವಾಣಿಜ್ಯ ಕಟ್ಟಡಗಳಲ್ಲಿ ಪಾಲಿಕೆ ಆರೋಗ್ಯಾಧಿಕಾರಿಗಳು ತಪಾಸಣೆ ಕೈಗೊಂಡಿದ್ದಾರೆ. ಪಾಲಿಕೆ ಆರೋಗ್ಯಾಧಿಕಾರಿಗಳು ಹಾಗೂ ಅವರ ತಂಡ ನಗರ ವ್ಯಾಪ್ತಿಯಲ್ಲಿ ಪರವಾನಗಿ ಪಡೆದ ಉದ್ದಿಮೆಗಳಲ್ಲಿ ನಿಯಮಿತವಾಗಿ ಅಗ್ನಿ ಸುರಕ್ಷತೆ, ಸಾರ್ವಜನಿಕರ ಆರೋಗ್ಯಕ್ಕೆ ಸಂಬಂಧಿಸಿದಂತೆ ತಪಾಸಣೆ ನಡೆಸುವಲ್ಲಿ ನಿರ್ಲಕ್ಷ್ಯ ತೋರುತ್ತಾರೆಂಬ ಬಗ್ಗೆ ಸಾಕಷ್ಟು ದೂರುಗಳಿವೆ. ಈ ರೀತಿ ಅಗ್ನಿ ಅವಘಡಗಳಾದಾಗ ಎಚ್ಚೆತ್ತುಕೊಳ್ಳುವ ಪಾಲಿಕೆ ಅಧಿಕಾರಿಗಳು ಮತ್ತೆ ಗಾಢ ನಿದ್ರೆಗೆ ಜಾರುತ್ತಾರೆ.
ಕ್ರಮ ಸಂಖ್ಯೆ–ವಲಯ—ಪರವಾನಗಿ ನೀಡಿಕೆ—-ತಪಾಸಣೆ ನಡೆಸಿರುವುದು—-ನೋಟಿಸ್ ಜಾರಿಯಾಗಿದ್ದು—-ಮುಚ್ಚಿರುವ ಸಂಖ್ಯೆಯ ವಿವರ :
1. ದಕ್ಷಿಣ – 248 – 30 – 10 – 0
2. ಪಶ್ಚಿಮ – 167 – 78 – 20 – 0
3. ಪೂರ್ವ – 222 – 25 – 18 – 07
4. ರಾಜರಾಜೇಶ್ವರಿನಗರ – 75 – 08 – 06 – 0
5. ದಾಸರಹಳ್ಳಿ – 34 – 29 – 08 – 0
6. ಯಲಹಂಕ – 110 – 18 – 0 – 0
7. ಮಹದೇವಪುರ – 161 – 36 – 16 – 03
8. ಬೊಮ್ಮನಹಳ್ಳಿ – 101 – 08 – 08 – 02
ಒಟ್ಟು : 1118 – 232 – 86 – 12